Tuesday, July 24, 2012

ಬನ್ನೇರುಘಟ್ಟದ ಆನೆಗಳ ಜಾಡಿನಲ್ಲಿ

.ನಿಮಗೆಲ್ಲಾ ಗೊತ್ತಿರಬಹುದು,ಇತ್ತೀಚೆಗಷ್ಟೇ ಬನ್ನೇರುಘಟ್ಟ ದಲ್ಲಿ ಪ್ರವಾಸ ಹೋಗಿ ಆನೆ ದಾಳಿಯಿಂದ  ಒಬ್ಬರು ಟೆಕ್ಕಿ ಪ್ರಾಣ ಕಳೆದುಕೊಂಡರು

.ಈ ಘಟನೆ ನೆನೆದಾಗ ಬನ್ನೇರುಘಟ್ಟದಲ್ಲಿ ಇರುವ ಆನೆಗಳು ಹಾಗು ಒಮ್ಮೆ ನಾವು ಈ ಆನೆಗಳ ಜಾಡಿನಲ್ಲಿ ಚಾರಣಕ್ಕೆ ತೆರಳಿದ ಘಟನೆಯನ್ನು ಬ್ಲಾಗ್ ನಲ್ಲಿ ಪೋಸ್ಟ್ ಮಾಡಬಹುದು ಎಂಬ ಯೋಚನೆ ಬಂದಿತು

.ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅಷ್ಟೇನೂ ದೊಡ್ದದಲ್ಲದ ಒಂದು ವನ್ಯ ಜೀವಿಗಳಿಂದ ಕೂಡಿದ ಪ್ರದೇಶ .ಸುಮಾರು 25,000 ಎಕರೆ (ಸರಿ ಸುಮಾರು 104.27 ಕಿಲೋಮೀಟರ್) ಯಷ್ಟು ವಿಸ್ತೀರ್ಣ ಹೊಂದಿರುವ ಇದು ನೆಗಳ ನೆಲೆಬೀಡು

.ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನ ಮಿತಿಯಲ್ಲಿ ಕೇವಲ ವನ್ಯ ಜೀವಿಗಳಲ್ಲದೆ ಹಲವು ಹಳ್ಳಿಗಳೂ ಹಾಗು ಅಲ್ಲಿ ವಾಸಿಸುವ ಜನಸಾಮಾನ್ಯರ ಹೊಲ ಗದ್ದೆಗಳೂ ಇವೆ.ಇದು ಮಾನವ ಹಾಗು ಆನೆಗಳ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣ

.ನಮಗೆಲ್ಲಾ ಗೊತ್ತಿರುವಂತೆ ಆನೆಗಳು ಕೇವಲ ಒಂದೇ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಲ್ಲ,ಬದಲಾಗಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ  ನಿರಂತರವಾಗಿ ಚಲನೆಯಲ್ಲಿರುತ್ತವೆ

.ಪ್ರಮುಖವಾಗಿ ಬನ್ನೇರುಘಟ್ಟದ ಈ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹೊಲಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯುತ್ತಾರೆ,ಈ ರಾಗಿಯ ಕುಡಿಯಲ್ಲಿ ಇರುವ ಪ್ರೋಟೀನ್ ಯುಕ್ತ ಅಂಶವು ಆನೆಗಳಿಗೆ ಬಹಳ ಪ್ರಿಯ.ಕಾಲ ಕಾಲದಿಂದ ಅವುಗಳ ವಂಶವಾಹಿನಿಯಲ್ಲೇ ಈ ಗುಣಗಳು ಸಾಗಿ ಪ್ರತಿಯೊಂದು ಆನೆಯೂ ಈ ರಾಗಿಯ ಚಿಗುರನ್ನು ತುಂಬಾ ಇಷ್ಟ ಪಡುತ್ತದೆ.ಅದು ಅವುಗಳ ಬೆಳವಣಿಗೆಗೆ ಕೂಡಾ ಸಹಕಾರಿ .ಹೀಗಾಗಿ ಇಲ್ಲಿನ ಹೊಲ ಗದ್ದೆಗಳಿಗೆ ಆನೆಗಳ ಭೇಟಿ ತೀರ ಸಾಮಾನ್ಯ

.ಹೀಗೆ ಆನೆಗಳು ಹೊಲ ಗದ್ದೆಗಳಿಗೆ ದಾಳಿ ಮಾಡಿದಾಗ ಸಾಮಾನ್ಯವಾಗಿ ಅಲ್ಲಿನ ಜನರು ಪಟಾಕಿ ಸಿಡಿಸಿ ಅಥವಾ ಅರಣ್ಯ ಇಲಾಖೆಗೆ ತಿಳಿಸಿ ಅವುಗಳನ್ನು  ಕಾಡಿಗೆ ಕಳುಹಿಸುತ್ತಾರೆ.ಇಂಥಹ ಹಲವು ಸಂಧರ್ಭಗಳನ್ನು ಎದುರಿಸಿ ಆನೆಗಳಿಗೂ ಇದು ಸಹಜವಾಗಿದೆ

.ಆನೆಗಳು ಬಹಳ ಸೂಕ್ಷ್ಮ ಜೀವಿಗಳು,ತಮ್ಮ ಮರಿಗಳ ಬಗ್ಗೆ ಅವು ಬಹಳ ಕಾಳಜಿವಹಿಸುತ್ತವೆ.ತಮ್ಮ ಮರಿಗಳಿಗೆ ತೊಂದರೆ ಎದುರಾದ ಸಂಧರ್ಭದಲ್ಲಿ ಅವು ಯಾವುದೇ ಸನ್ನಿವೇಶಕ್ಕೂ ತಯಾರಾಗುತ್ತವೆ.ಇದರ ಜೊತೆಗೆ ಯಾವುದೋ ಕಾರಣಕ್ಕೆ ಗುಂಪಿನಿಂದ ಬೇರ್ಪಟ್ಟ ಒಂಟಿ ಆನೆಗಳು ಸಾಮಾನ್ಯವಾಗಿಯೇ ತುಂಬಾ ಹೋರಾಟದ ಮನೋಭಾವನೆ ತೋರಿಸುತ್ತದೆ.ಅವುಗಳ ಮಾನಸಿಕ ಪರಿಸ್ಥಿತಿ ಅವುಗಳನ್ನು ಸಾಮಾನ್ಯ ಆನೆಗಳಿಗಿಂತ ಸ್ವಲ್ಪ ಭಿನ್ನವಾಗಿರುವಂತೆ  ಮಾಡುತ್ತದೆ.ಇಂತಹ ಸಂಧರ್ಭಗಳಲ್ಲಿ ಅವುಗಳ ಎದುರು ಮಾನವ ಎದುರಾದಾಗ ತನ್ನ ರಕ್ಷಣೆಗೋ ಅಥವಾ ಬೇರೆ ಕಾರಣಗಳಿಗೂ ಅವರ ಮೇಲೆ ದಾಳಿ  ನಡೆಸುವುದು ಸಾಮಾನ್ಯ

.ಮೊದಲೇ ಮಾನವನ ಸಾಮಿಪ್ಯದಿಂದ ರೋಸಿ ಹೋದ ಆನೆಗಳ ಬದುಕು ಇತ್ತೀಚಿಗೆ ಅಲ್ಲಿ ನಿರ್ಮಾಣವಾಗುತ್ತಿರುವ ರೆಸಾರ್ಟ್ ಗಳ ದೆಸೆಯಿಂದ ಮತ್ತಷ್ಟು ಹದಗೆಟ್ಟಿದೆ.ಇದನ್ನು ನಾನು ಈ ಹಿಂದಿನ ಪೋಸ್ಟ್ ಒಂದರಲ್ಲಿ ಸಚಿತ್ರವಾಗಿ ಬರೆದಿದ್ದೇನೆ

.ಇವಿಷ್ಟು ಬನ್ನೇರುಘಟ್ಟದಲ್ಲಿ ಆನೆಗಳು ನಡೆಸುತ್ತಿರುವ ಜೀವನದ ಬಗ್ಗೆ .ಇನ್ನು ಇಲ್ಲಿ ಪ್ರವಾಸ ಬರುವ ಜನರ ಬಗ್ಗೆ ಒಂದಷ್ಟು ಹೇಳಲೇಬೇಕು

.ಯಾವುದೇ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನೀವು ಚಾರಣ ಹೋರಾಡಬೇಕು ಎಂದುಕೊಂಡರೆ ಮೊದಲು ಮಾಡಬೇಕಾದ ಕೆಲಸ ಅಲ್ಲಿನ ಅರಣ್ಯ ಅಧಿಕಾರಿಗಳಿಂದ ಚಾರಣಕ್ಕೆ ಅನುಮತಿ ಪಡೆಯುವುದು.ಈ ಅನುಮತಿ ಇಲ್ಲದೆ ಅರಣ್ಯ ಪ್ರವೇಶ ಮಾಡಿದರೆ ಅದು ಕಾನೂನಿಗೆ ವಿರುದ್ದವಾಗುತ್ತದೆ

.ಬನ್ನೇರುಘಟ್ಟ ದಿಂದ ನೀವು ಅನೇಕಲ್ ಗೆ ಹೋಗುವ ರಸ್ತೆಯಲ್ಲಿ ಸ್ವಲ್ಪ ದೂರ ಬಂದರೆ ಅಲ್ಲಿ ಭಲಭಾಗದಲ್ಲಿ ಒಂದು ಬೋರ್ಡ್ ಕಾಣಸಿಗುತ್ತದೆ .ಅದರ ಮೇಲೆ ರಾಮಕೃಷ್ಣ ಮಿಶನ್ ಶಿವನಹಳ್ಳಿ ಗೆ 10 ಕಿಲೋಮೀಟರ್ ಎಂದು ಬರೆದಿದೆ .ಈ ರಸ್ತೆಯಲ್ಲೇ ಹೆಚ್ಚಾಗಿ ಪ್ರವಾಸಿಗರು ಬನ್ನೇರುಘಟ್ಟ ಉದ್ಯಾನವನವನ್ನು ಪ್ರವೇಶಿಸುವುದು.ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಕಲ್ಲುಬಂಡೆಗಳಿಂದ ಕೂಡಿದ ಒಂದು View Point ಸಿಗುತ್ತದೆ.ಬನ್ನೇರುಘಟ್ಟ ದ ಮನೋಹರ ನೋಟ ಇಲ್ಲಿಂದ ಕಾಣಸಿಗುತ್ತದೆ.ಇಲ್ಲಿಂದ ಮುಂದೆ ಸಾಗುವ ರಸ್ತೆ ನಮ್ಮನ್ನು ದಟ್ಟ ಅಡವಿ ಹಾಗು ಹೊಲ ಗದ್ದೆಗಳ ಮದ್ಯದಿಂದ ರಾಗಿ ಹಳ್ಳಿ ಎಂಬ ಊರಿನ ಮೂಲಖ ಶಿವನಹಳ್ಳಿ ಎಂಬ ಊರಿಗೆ ಕರೆದೊಯ್ಯುತ್ತದೆ.ಶಿವನಹಳ್ಳಿಯಲ್ಲಿ ರಾಮಕೃಷ್ಣ ಮಿಶನ್ ರವರ ಆಶ್ರಮ ಹಾಗು ಅವರಿಂದಲೇ ನಡೆಸಲ್ಪಡುವ ಶಾಲೆ ಹಾಗು ಆಸ್ಪತ್ರೆಗಳಿವೆ

.ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವಾರದ ಐದು ದಿನಗಳು ಒತ್ತಡದಲ್ಲಿ ಕೆಲಸ ಮಾಡುವ ಜನರು ವೀಕ್ ಎಂಡ್ ಗಳಲ್ಲಿ ಈ ರಸ್ತೆಯಲ್ಲಿರುವ View Point ಗೆ ಭೇಟಿ ನೀಡುತ್ತಾರೆ.ಹೀಗೆ ಕೆಲವೊಮ್ಮೆ ಅಲ್ಲೇ ಕಾಡಿನಲ್ಲಿ ಇಳಿದು ಹತ್ತಿರದಲ್ಲಿ ಕಂಡುಬರುವ ಕಲ್ಲುಬಂಡೆಗಳ ಗುಡ್ಡಗಳ ಮೇಲೆ ಚಾರಣಕ್ಕೆ ತೆರಳುತ್ತಾರೆ.ಹೀಗೆ ಚಾರಣಕ್ಕೆ ತೆರಳುವ ಹಲವಾರು ಮಂದಿಯ ಹತ್ತಿರ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪತ್ರ ಇರುವುದಿಲ್ಲ

.ನಾನು ಮೊದಲೇ ತಿಳಿಸಿದಂತೆ ಆನೆಗಳ ಸದಾ ಚಲಿಸುವ ಪ್ರಾಣಿಗಳು.ಈ ರಸ್ತೆ ಬನ್ನೇರುಘಟ್ಟ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವುದರಿಂದ ಇಲ್ಲಿ ಆನೆಗಳ ಓಡಾಟ ಮಾಮೂಲಿ.ಕೇವಲ ಕಾಡಿನಲ್ಲಲ್ಲದೆ ರಸ್ತೆಗಳಲ್ಲೇ ಆನೆಗಳು ಕಂಡುಬರುತ್ತವೆ .ಹಲವು ಬಾರಿ ಶಿವನಹಳ್ಳಿಗೆ ಹೋಗುವ ಬಸ್ ಗಳನ್ನೇ ಆನೆಗಳು ತಡೆದದ್ದುಂಟು.ರಾಮಕೃಷ್ಣ ಮಿಷನ್ ಗೆ ಹೋಗಿ ಬರುವ ಸ್ವಾಮಿಜಿ ಗಳು ಹಲವಾರು ಬಾರಿ ಈ ಆನೆಗಳ ಜೊತೆ ಮುಖಾಮುಖಿಯಾಗಿದ್ದಾರೆ

.ಹೀಗೆ ವೀಕ್ ಎಂಡ್ ಗೆ ಇಲ್ಲಿ ಬರುವ ಹಲವು ಪ್ರವಾಸಿಗರು ಮೋಜು ಮಸ್ತಿಯನ್ನೇ ತಮ್ಮ ಪ್ರಮುಖ ಉದ್ದೇಶವನ್ನಾಗಿಸಿ ಕೊಂಡಿರುವುದರಿಂದ ಇಲ್ಲಿ  ಬಂದು ಕುಡಿದು ಕುಪ್ಪಳಿಸಿ ತೆರಳುತ್ತಾರೆ.ಹಲವು ಬಾರಿ View Point ಗಳಲ್ಲಿ ಎಣ್ಣೆ ಬಾಟಲ್ ಗಳು ರಾಶಿ ರಾಶಿಯಾಗಿ ಬಿದ್ದಿರುತ್ತವೆ.ಆನೆಗಳ ನಾಡಿನಲ್ಲಿ ಹೀಗೆ ಮೈ ಮರೆತು ಮೋಜು ಮಸ್ತಿ ಮಾಡುವುದು ನಿಜವಾಗಿಯೂ ತೀರಾ ಅಪಾಯಕಾರಿ 

.ಆನೆಗಳು ಎಷ್ಟು ಸೂಕ್ಷ್ಮ ಪ್ರಾಣಿಗಳು ಎಂದರೆ ಕೆಲವೊಮ್ಮೆ ನಾವು ಮೈಮರೆತಾಗ ಅವು ನಮ್ಮ ಪಕ್ಕ ಬಂದು ನಿಂತರೂ ನಮಗೆ ಅದು ಗೊತ್ತಾಗುವುದಿಲ್ಲ .ಈ ಸಂಧರ್ಭಗಳಲ್ಲಿ ಅವುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟಕರ.ಆನೆಗಳು ನೋಡಲು ಅಷ್ಟು ದೊಡ್ಡ ಪ್ರಾಣಿಯಾದರೂ ಓಟದ ಪ್ರಥಮ 15 ನಿಮಿಷದಲ್ಲಿ ಅವುಗಳ ವೇಗ ಮಾನವನ ಓಟದ ವೇಗಕ್ಕಿಂತ ಜಾಸ್ತಿ ಇರುತ್ತದೆ

.ಹಾಗಾಗಿ ಇಂಥಹ ಆನೆ ನಾಡಿನಲ್ಲಿ  ಚಲಿಸಬೇಕಾದರೆ ಮೈ ಎಲ್ಲಾ ಕಾಣ್ಣಾಗಿರುವುದು ತೀರಾ ಅವಶ್ಯಕ .ಇದನ್ನು ಇಲ್ಲಿಗೆ ಬರುವ ಪ್ರವಾಸಿಗರು ಮೊದಲು ಅರ್ಥ ಮಾಡಿಕೊಳ್ಳಬೇಕು

.ನಮಗೆ ಎದುರಾಗುವ ಎಲ್ಲಾ ಆನೆಗಳು ದಾಳಿ ಮಾಡುತ್ತವೆ ಎಂದೇನಿಲ್ಲ.ಆದರೆ ಅವುಗಳ ಮನಸ್ಥಿತಿ ಎಲ್ಲಾ ಸಮಯದಲ್ಲೂ ಒಂದೇ ತರಹ ಇರಬೇಕೆಂದಿಲ್ಲ.ಆದ್ದರಿಂದ ನಮ್ಮ ನಮ್ಮ ಜಾಗರೂಕತೆಯಲ್ಲಿ ನಾವಿರುವುದು ಒಳಿತು .

.ಇವಿಷ್ಟು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಬಗ್ಗೆ.ಮುಂದೆ ನಾನು ಹೇಳ ಹೊರಟಿರುವುದು ನಾವು ಹಿಂದಿನ ವರ್ಷ ಶಿವನಹಳ್ಳಿ ಯಿಂದ ರಾಗಿ ಹಳ್ಳಿ ಭೆಟ್ಟ ಎಂಬ ಪ್ರದೇಶಕ್ಕೆ ಚಾರಣ ಹೋದ ಬಗ್ಗೆ

.ಶಿವನಹಳ್ಳಿ ಆಶ್ರಮದ ಮುಖ್ಯಸ್ಥರಾದ ಪೂಜ್ಯ ವಿಷ್ಣುಮಯಾನಂದ ಸ್ವಾಮೀಜಿಯವರು ನಮಗೆ ಅತ್ಯಂತ ಪರಿಚಿತರು.ಕಾಡು,ಹಾಗು ಕಾಡು ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಇವರ ಜೀವನ ನಿಜಕ್ಕೂ ಸಾಹಸಮಯ.ಇಲ್ಲಿನ ಆಶ್ರಮದ ತೋಟಕ್ಕೂ ಹಲವು ಬಾರಿ ಆನೆಗಳು ದಾಳಿ ಮಾಡುತ್ತವೆ.ಹಾಗಂತ ಇವರು ಅವುಗಳ ಮೇಲೆ ದ್ವೇಷವಿಟ್ಟುಕೊಂಡಿಲ್ಲ ಬದಲಾಗಿ ಅವುಗಳ ಸುಂದರ ಛಾಯಾಚಿತ್ರ ತೆಗೆದು ಅವುಗಳು ಕಾಡಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುತ್ತಾರೆ

                                  ಪೂಜ್ಯ ಸ್ವಾಮೀಜಿಯವರ ಜೊತೆ ನಮ್ಮ ರವಿ ಮಾಮ್
.ನಾವು ಹಿಂದಿನ ವರ್ಷ ಶಿವನಹಳ್ಳಿಗೆ ಗೆ ಬಂದು ಅಲ್ಲಿಂದ ಕೆಲವು ಮೈಲಿ ದೂರವಿರುವ ರಾಗಿ ಹಳ್ಳಿ ಭೆಟ್ಟಕ್ಕೆ  ಚಾರಣ ಹೋಗಬೇಕೆಂದು ನಿರ್ಧರಿಸಿ ಅರಣ್ಯ ಇಲಾಖೆಯವರ ಅನುಮತಿ ಪತ್ರದೊಂದಿಗೆ ಅಲ್ಲಿಗೆ ತೆರಳಿದೆವು

.ಒಂದು ಮಧ್ಯಾನ್ಹ ಶಿವನಹಳ್ಳಿಗೆ ತೆರಳಿದ ನಮಗೆ ಸ್ವಾಮೀಜಿ ನಾವು ಹೋಗುವ ದಾರಿಯಲ್ಲೇ ಎರಡು ದಿನದ ಹಿಂದೆ ಆನೆಗಳ ಗುಂಪು ಇದ್ದ ಬಗ್ಗೆ ಮಾಹಿತಿ ನೀಡಿದರು.ಶಿವನಹಳ್ಳಿಯ ಒಬ್ಬರನ್ನು ನಮ್ಮ ಜೊತೆ ಚಾರಣಕ್ಕೆ ಕಳುಹಿಸಿದರು

.ಸುಮಾರು 7 ಕಿಲೋಮೀಟರು ಇದ್ದ ಆ ದಾರಿಯನ್ನು ನಾವು ಮೈ ಎಲ್ಲಾ ಕಣ್ಣಾಗಿಸಿಕೊಂಡು ನಡೆದೆವು. ನಾವು ನಡೆಯುತ್ತಿದ್ದ ದಾರಿಯಲ್ಲಿ ಯಾವುದೇ ಅನುಮಾನಾಸ್ಪದ ಶಬ್ದ ಕೇಳಿದರೂ ಕೂಡ ಸ್ವಲ್ಪ ಹೊತ್ತು ನಿಂತು ಅದೇನೆಂದು ತಿಳಿದೇ ಮುಂದು ವರೆಯುತ್ತಿದ್ದೇವು .ನಾವು ಐದು ಜನರೂ ಕೂಡ ಮಾತನಾಡದೆ ನಿಶಬ್ದವಾಗಿ ನಡೆದು ರಾಗಿ ಹಳ್ಳಿ ಭೆಟ್ಟ ತಲುಪಿದೆವು.ರಾಗಿ ಹಳ್ಳಿ ಭೆಟ್ಟದ ಮೇಲೆನಿಂದ ಇಡೀ ಬನ್ನೇರುಘಟ್ಟದ ನೋಟ ಅತ್ಯಂತ ರಮಣೀಯವಾಗಿ ಕಾಣಸಿಗುತ್ತಿತ್ತು.ಅದಲ್ಲದೆ ಇಲ್ಲಿಗೆ ಬರುವ ಮುಖ್ಯ ಉದ್ದೇಶ ಇಲ್ಲಿನಿಂದ ಕೆಳಗಿನ ಪ್ರದೇಶಗಳಲ್ಲಿರುವ ಆನೆಗಳನ್ನು ನೋಡಲು.ರಾಗಿ ಹಳ್ಳಿ ಭೆಟ್ಟ ಎತ್ತರದ ಪ್ರದೇಶವಾಗಿರುವುದರಿಂದ ಇಲ್ಲಿ ನಿಂತರೆ ಕೆಳಗೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಆನೆಗಳು ಇದ್ದರೆ ಕಾಣುತ್ತವೆ.ಸುರಕ್ಷಿತ ಜಾಗದಲ್ಲಿ ನಿಂತು ಆನೆಗಳ ಚಲನವಲನಗಳನ್ನು ಗಮನಿಸಬಹುದು.ಅಲ್ಲದೆ ಕೆಳಗೆ ಕಾಣ ಸಿಗುವ ನೀರಿನ ಹೊಂಡಗಳ ಬಳಿ ನೀರು ಕುಡಿಯಲು ಬರುವ ಪ್ರಾಣಿಗಳನ್ನು ಕೂಡ ನೋಡಬಹುದು.ನಾವು ಇಲ್ಲಿ ಬಂದ ದಿವಸ ನಮಗೆ ಯಾವುದೇ ಕಾಡು ಪ್ರಾಣಿಗಳು ಕಾಣಸಿಗಲಿಲ್ಲ.ಆದರೆ ಅತ್ಯಂತ ದೂರದಲ್ಲಿ ಪರಸ್ಪರ ಮೈ ಮೇಲೆ ಮಣ್ಣೆರಚಿಕೊಳ್ಳುತ್ತಿದ್ದ 4 ಆನೆಗಳು ಕಾಣಸಿಕ್ಕವು.ಆದರೆ ನಮ್ಮಿಂದ ಹಲವಾರು ದೂರದಲ್ಲಿ ಇದ್ದ ಅವು ಸ್ಪಷ್ಟವಾಗಿ ಗೋಚರಿಸಲಿಲ್ಲ.ರಾಗಿ ಹಳ್ಳಿ ಭೆಟ್ಟದ ಮೇಲೆ ಒಂದು ತಾಸು ಕಳೆದ ನಾವು ಸೂರ್ಯ ಮುಳುಗುವ ಮೊದಲು ಶಿವನಹಳ್ಳಿಯ ಕಡೆ ನಡೆಯತೊಡಗಿದೆವು
                      ದಾರಿಯಲ್ಲಿ ಕಂಡು  ಬಂದ ಆನೆ ಲದ್ದಿ

                    
                                 ಆನೆಗಳ ಮಾಡಿ ಹೋದ ಗುರುತುಗಳು
.ಈಗಂತೂ ಮೊದಲಿಗಿಂತ ಜಾಗೃತವಾಗಿ ನಡೆದು ಹೋದ ನಾವು ಸೂರ್ಯ ಮುಳುಗುವ ಹೊತ್ತಿಗೆ ಶಿವನಹಳ್ಳಿ ತಲುಪಿದೆವು


.ಇಲ್ಲಿಂದ ಮುಂದೆ ನಾವು ಹತ್ತು ಕಿಲೋಮೀಟರು ಬೈಕ್ ನಲ್ಲಿ ತೆರಳಿ ಬನ್ನೇರುಘಟ್ಟಕ್ಕೆ ತೆರಳಬೇಕಿತ್ತು.ನಾನು ಮೊದಲೇ ಹೇಳಿದಂತೆ ಹಲವು ಬಾರಿ ಈ ರಸ್ತೆಯಲ್ಲಿಯೇ ಆನೆಗಳು ಕಾಣಸಿಗುತ್ತವೆ.ನಮಗೆ ದಾರಿಯಲ್ಲಿ ಕಾಡು ಮೊಲವೊಂದನ್ನು ಬಿಟ್ಟು ಬೇರೆ ಯಾವ ಪ್ರಾಣಿಗಳು ಕಾಣಸಿಗಲಿಲ್ಲ .ನಾವು ನಿಧಾನವಾಗಿ ಜಾಗರೂಕತೆಯಿಂದ ತೆರಳಿ ಬೆಂಗಳೂರು ಸೇರಿದೆವು


.ಮೊನ್ನೆಯ ಘಟನೆ ನೆನೆದು ಈ ಎಲ್ಲಾ ಸಂಗತಿಗಳು ಮನದೊಳಗೆ ಸುಳಿದಾಡಿದವು

.ಚಾರಣ ಹೋಗುವುದು ತಪ್ಪಲ್ಲ.ಏಕೆಂದರೆ ಅದರಿಂದ ನಮಗೆ ಕಾಡು ಹಾಗು ವನ್ಯಜೀವಿಗಳ ಬಗ್ಗೆ ತಿಳುವಳಿಕೆ ಮೂಡುತ್ತದೆ ಮತ್ತು ಪ್ರಕೃತಿಯ ಬಗ್ಗೆ ಒಂದು ಅವಿನಾಭಾವಾ ಸಂಭಂದ ಮೂಡುತ್ತದೆ

.ನೀವೂ ಕೂಡ ಚಾರಣ ಹೋಗುವ ಪ್ರವೃತಿಯವರಾಗಿದ್ದಾರೆ ಈ ಕೆಳಗಿನ ಅಂಶಗಳನ್ನು ಎಂದೂ ಮರೆಯದಿರಿ 

1) ಪ್ರಕೃತಿಯ ಸ್ಥಳಗಳಿಗೆ ನಾವು ಚಾರಣ ಹೋಗುವಾಗ ನಮ್ಮ ಮುಖ್ಯ ಉದ್ದೇಶ ಅಲ್ಲಿನ ಪರಿಸರದ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ನಮ್ಮ ಜ್ಯಾನ ಹೆಚ್ಚಿಸಿಕೊಳ್ಳಲು ಇರಬೇಕೇ ಹೊರತು ಕೇವಲ ಮೋಜು ಮಸ್ತಿಗಾಗಿರಬಾರದು 

2) ಬಹು ಮುಖ್ಯವಾಗಿ ನಾವು ಚಾರಣ ಮಾಡಬೇಕೆಂದಿರುವ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶವಾದರೆ ಅಲ್ಲಿನ ಅರಣ್ಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು 

3)ನೀವು ಚಾರಣ ಹೋಗಬೇಕೆಂದಿರುವ ಪ್ರದೇಶದ ಬಗ್ಗೆ ನಿಮಗೆ ಮಾಹಿತಿ ಇರಲಿ.ಇದನ್ನು ಗೂಗಲ್ ಅರ್ಥ ಅಥವಾ ಅಂತರ್ಜಾಲದ ಮಾಹಿತಿ ಮೂಲಖ ಪಡೆಯಬಹುದು 

4)ನೀವು ಚಾರಣ ಹೋಗುವ ಪ್ರದೇಶದಲ್ಲಿ ಜಲಪಾತಗಳು ಅಥವಾ ಇತರೆ ನೀರಿನ ಸೆಲೆಗಳು ಕಂಡುಬರಬಹುದು .ಇಂಥಹ ನೀರಿನ ಪ್ರದೇಶದ ಬಗ್ಗೆ ನಿಖರವಾದ ಮಾಹಿತಿ ಇಲ್ಲದೆ  ಯಾವುದೇ ಕಾರಣಕ್ಕೂ ಅಲ್ಲಿ  ಈಜಾಡಲು ಇಳಿಯಬೇಡಿ .ಅದಷ್ಟು ಜಲಪಾತಗಳು ಹಾಗು ನೀರಿನ ಸೆಲೆಗಳನ್ನು ದೂರದಿಂದಲೇ ನೋಡಿ ಆನಂದಿಸಿ 

5) ಚಾರಣಕ್ಕೆ ತೆರಳುವಾಗ ಕೇವಲ ಮೊಬೈಲ್ ,ತಿಂಡಿ ತಿನಿಸು ಹಾಗು ಕ್ಯಾಮರಾ ಅಲ್ಲದೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗು ಟಾರ್ಚ್ ಗಳಂಥ ಪ್ರಮುಖ ವಸ್ತುಗಳನ್ನು ಕೊಂಡೊಯ್ಯಿರಿ 

6)ನೀವು ಚಾರಣ ಮಾಡುವಾಗ ಪ್ರಮುಖವಾಗಿ ನೆನಪಿಡಬೇಕಾದ ಅಂಶವೆಂದರೆ  ''ನಾವು ಕಾಡುಪ್ರಾಣಿಗಳ ಮನೆಯಲ್ಲಿದ್ದೇವೆ.ಆದ್ದರಿಂದ ಆದಷ್ಟೂ ಅವುಗಳಿಗೆ ತೊಂದರೆಯಾಗದಂತೆ ನಿಶ್ಯಬ್ದವಾಗಿ,ಪರಿಸರ ಮಾಲಿನ್ಯ ಮಾಡದೆ ತೆರಳಿದರೆ ನಮಗೂ ತೊಂದರೆ ಇಲ್ಲ ಹಾಗು ಕಾಡು ಪ್ರಾಣಿಗಳೂ ಕೂಡ ತೊಂದರೆ ಅನುಭವಿಸುವ ಪ್ರಸಂಗ ಎದುರಾಗುವುದಿಲ್ಲ'' 

7)ಕೊನೆಯದಾಗಿ ನೀವು ಹಾಗು ನಿಮ್ಮ ಸ್ನೇಹಿತರಷ್ಟೇ ಚಾರಣಕ್ಕೆ ತೆರಳುವುದಕ್ಕಿಂತ ಚಾರಣಗಳನ್ನು ಸಂಘಟಿಸುವ ಹಲವು ನುರಿತ ಸಂಸ್ಥೆಗಳಿವೆ.ಈ ಸಂಸ್ಥೆಗಳು ಕೈಗೊಳ್ಳುವ ಚಾರಣಗಳಲ್ಲಿ ನೀವು ಭಾಗಿಯಾದರೆ ಸುರಕ್ಷತೆ ದೊರೆಯುತ್ತದೆ ಹಾಗು ಪರಿಸರ ಹಾಗು ಇತರೆ ವಿಷಯಗಳ ಬಗ್ಗೆ ಹೆಚ್ಚಿನ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು

.ಇಂತಹ ಹಲವು ಅಂಶಗಳನ್ನು ನೀವು ಗಮನದಲ್ಲಿರಿಸಿಕೊಂಡು ಚಾರಣ ಮಾಡಿದಾಗ ಅದು ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಹಾಗು ಸುರಕ್ಷಿತವಾಗಿ ಪ್ರಕೃತಿಯನ್ನು ಆನಂದಿಸಬಹುದು.ಆದರೆ ಇವೆಲ್ಲವನ್ನೂ ಬದಿಗಿಟ್ಟು ಕೇವಲ ಮೋಜು ಮಸ್ತಿ ಗಾಳಿ ಚಾರಣಕ್ಕೆ ತೆರಳಿ ಮೈ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ


-ಪ್ರಕೃತಿಯನ್ನು ರಕ್ಷಿಸಿ-

Monday, July 9, 2012

ಪ್ರಕೃತಿಯನ್ನು ರಕ್ಷಿಸಿ

.ಇತ್ತೀಚಿಗೆ ಒಂದು ಚಾರಣಕ್ಕೆ ತೆರಳಿದಾಗ ಅಲ್ಲಿ ಕೆಲವೆಡೆ ಅರಣ್ಯ ಇಲಾಖೆಯವರು ಬರೆಸಿದ್ದ ಪ್ರಕೃತಿಯ ಬಗೆಗಿನ ಸ್ಲೋಗನ್ ಗಳು ನನ್ನ ಗಮನವನ್ನು ಸೆಳೆದವು.ಆ ಸುಂದರ ಸ್ಲೋಗನ್ ಗಳ ಚಿತ್ರವನ್ನು ತೆಗೆದು ಇಂದಿನ ಪೋಸ್ಟ್ ನಲ್ಲಿ ಪ್ರಕಟಿಸಿದ್ದೇನೆ

-ಪ್ರಕೃತಿಯನ್ನು ರಕ್ಷಿಸಿ-

Sunday, July 1, 2012

ಚಿರಾಪುಂಜಿ,ಮಳೆ ನಾಡು

.ಚಿರಾಪುಂಜಿ-ಭಾರತದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ.ಪ್ರಪಂಚದಲ್ಲೇ ಎರಡನೆಯ ಅತ್ಯಂತ ತೆವ (ಒದ್ದೆ) ಪ್ರದೇಶ

.ಮೇಘಾಲಯದ ಈಸ್ಟ್ ಖಾಸಿ ಹಿಲ್ ಜಿಲ್ಲೆಯಲ್ಲಿದೆ ಈ ಮಳೆಯ ನಾಡು

.ಇದೇ ಜಿಲ್ಲೆಯಲ್ಲಿ ಬರುವ Mawsynram ಎಂಬುವ ಪ್ರದೇಶ ಸದ್ಯಕ್ಕೆ ಪ್ರಪಂಚದ ಮೊದಲ ಅತ್ಯಂತ ತೇವ ಪ್ರದೇಶ 

.ಚಿರಾಪುಂಜಿಯ ನೈಜ ಹೆಸರು ಸೊಹ್ರ.ಇದುಶಿಲಾಂಗ್ ನಿಂದ 65km ದೂರದಲ್ಲಿದೆ

.ಚಿರಾಪುಂಜಿ ಎಂದರೆ 'ಕಿತ್ತಳೆಗಳ ನಾಡು' ಎಂದು

.ಚಿರಾಪುಂಜಿ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ

.ಚಿರಾಪುಂಜಿಯ ಕಣಿವೆಗಳು ಹಲವು ಸ್ಥಳೀಯ ಪ್ರಭೇದದ ಗಿಡ ಮರಗಳ ಆಶ್ರಯ ಸ್ಥಾನವಾಗಿದೆ.ಮೇಘಾಲಯದ ಉಪ ಉಷ್ಣ ವಲಯದ ಕಾಡುಗಳು ಈ ಕಣಿವೆಗಳಲ್ಲಿ ಕಂಡುಬರುತ್ತದೆ


.ಇಲ್ಲಿ ಬೀಳುವ ವಾರ್ಷಿಕ ಮಳೆಯ ಸರಾಸರಿ ಪ್ರಮಾಣ -11,777 ಮಿಲಿಮೀಟರ್ , Mawsynram ನಲ್ಲಿ ಬೀಳುವ ಮಳೆಯ ಪ್ರಮಾಣ 11,873 ಮಿಲಿಮೀಟರ್

.ಚಿರಾಪುಂಜಿಯು  ನೈರುತ್ಯ ಹಾಗು ಈಶಾನ್ಯ ಮಾನ್ಸೂನ್  ಮಾರುತಗಳೆರಡರ ಪ್ರಭಾವಕ್ಕೆ ಒಳಗಾಗಿರುವುದರಿಂದ ಇಲ್ಲಿ ಒಂದೇ ಮಾನ್ಸೂನ್ ಋತುವಿರುತ್ತದೆ

.ಚಳಿಗಾಲದಲ್ಲಿ ಬ್ರಹ್ಮ ಪುತ್ರ ಕಣಿವೆಗಳಿಂದ ಬೀಸುವ ಈಶಾನ್ಯ ಮಾರುತಗಳು ಇಲ್ಲಿ ಮಳೆಯನ್ನು ಸುರಿಸುತ್ತವೆ

.ಸದಾ ಕೂಲ್ ಕೂಲ್ ಆಗಿ ಇರುವ ಇಲ್ಲಿನ ವಾರ್ಷಿಕ ಸರಾಸರಿ ಉಷ್ಣಾಂಶ 17.3 °C .ಜನವರಿ ತಿಂಗಳಲ್ಲಿ 11.5 °C ರಷ್ಟು ಉಷ್ಣಾಂಶವಿದ್ದರೆ ಜುಲೈನಲ್ಲಿ 20.6 °C ನಷ್ಟು ಉಷ್ಣಾಂಶವಿರುತ್ತದೆ

.ಚಿರಾಪುಂಜಿ ಸದ್ಯಕ್ಕೆ ಎರಡು ಗಿನ್ನಿಸ್ ರೆಕಾರ್ಡ್ ಗಳನ್ನು ಹೊಂದಿದೆ. ಮೊದಲನೆಯದಾಗಿ ಇಲ್ಲಿ ಆಗಸ್ಟ್ 1860 ಹಾಗು ಜುಲೈ 1861 ರ ನಡುವಿನಲ್ಲಿ ಬಿದ್ದ  22,987 ಮಿಲಿಮೀಟರ್ ನಷ್ಟು ಅತ್ಯದಿಕ ಮಳೆ  ಹಾಗು 1861 ನೇ ಇಸವಿಯ ಜುಲೈ ಒಂದೇ ತಿಂಗಳಲ್ಲಿ 9,300 ಮಿಲಿಮೀಟರ್ ನಷ್ಟು ಬಿದ್ದ ಮಳೆ.

.ಬಂಗಳಕೊಲ್ಲಿಯಿಂದ ಹೊರಡುವ ಮೋಡಗಳು ಬಾಂಗ್ಲಾದೇಶದ Plain ಗಳ ಮೇಲೆ ಸುಮಾರು 400 km ನಷ್ಟು ಹರಡಿಕೊಂಡಿರುತ್ತದೆ.ನಂತರದಲ್ಲಿ ಇದು ಸಮುದ್ರ ಮಟ್ಟದಿಂದ 1370 ಮೀಟರ್ ನಷ್ಟು ಎತ್ತರವಿರುವ ಖಾಸಿ ಪರ್ವತಗಳಿಗೆ ಅಪ್ಪಳಿಸುತ್ತದೆ.ಇಲ್ಲಿನ ಕಣಿವೆಗಳಿಂದ ಬೀಸುವ ರಭಸವಾದ ಗಾಳಿಯು ಈ ಮೋಡಗಳನ್ನು ಎತ್ತರದ ವಾತಾವರಣಕ್ಕೆ ಸೇರಿಸುತ್ತವೆ. ಈ ಮೋಡಗಳು ಎತ್ತರದ ವಾತಾವರಣದಲ್ಲಿ ತಂಪಾಗಿ ಮಳೆಯ ರೂಪದಲ್ಲಿ ಚಿರಾಪುಂಜಿಯ ಮೇಲೆ ಬೀಳುತ್ತದೆ

.ಚಿರಾಪುಂಜಿಯಲ್ಲಿ ಬೀಳುವ ಅತ್ಯಧಿಕ ಮಳೆಯ ವಿಧವು  ಓರೋಗ್ರಾಫಿಕ್ ಮಳೆಗೆ ಗುಂಪಿಗೆ ಸೇರಿದೆ.ಓರೋಗ್ರಾಫಿಕ್ ಮಳೆಯ ಬಗೆಯಲ್ಲಿ ಮೇಲೆ ತಿಳಿಸಿದಂತಹ ರೀತಿಯಲ್ಲಿ ಮಳೆ ಬೀಳುತ್ತದೆ

.ಚಿರಾಪುಂಜಿಯಲ್ಲಿ ಮಾನ್ಸೂನ್ ಅವದಿಯಲ್ಲಿ ವಾತಾವರಣದ ಆರ್ದ್ರತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ

.ಚಿರಾಪುಂಜಿಯಲ್ಲಿ ಮಾನ್ಸೂನ್ ನಲ್ಲಿ ಬೀಳುವ ಮಳೆಯ ಇನ್ನೊಂದು ವಿಶೇಷವೆಂದರೆ ಬೆಳಗಿನ ಹೊತ್ತಿನಲ್ಲಿ ಹೆಚ್ಚು ಮಳೆಯಾಗುವುದು.ಇದಕ್ಕೆ ಒಂದು ಕಾರಣ ಎರಡು ಬಗೆಯ ಮಾರುತಗಳು ಒಟ್ಟಿಗೆ ಸೇರುವುದು.ಬ್ರಹ್ಮಪುತ್ರ ಕಣಿವೆಯ ಪೂರ್ವದಿಂದ ಬೀಸುವ ಮಾರುತ ಹಾಗು ಮೇಘಾಲಯದ ದಕ್ಷಿಣದಿಂದ ಬೀಸುವ ಮಾರುತಗಳು ಖಾಸಿ ಪರ್ವತಗಳ ಮೇಲೆ ಒಟ್ಟುಗೂಡುವುವು.ಈ ಮಾರುತಗಳು ರಾತ್ರಿ ಹೊತ್ತಿನಲ್ಲಿ ಕಣಿವೆಯ ಕೆಳಗಿದ್ದು ಬೆಳಿಗಿನ ಹೊತ್ತಿನಲ್ಲಿ ಬೆಚ್ಚಗಾಗಿ ಮೇಲೇರುತ್ತವೆ.ಹೀಗಾಗಿ ಬೆಳಗಿನ ಸಮಯದಲ್ಲಿ ಹೆಚ್ಚಿನ ಮಳೆ ಬೀಳುತ್ತದೆ ಎಂದು ನಂಬಲಾಗಿದೆ 

.2001 ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 10,086 .49 ಪ್ರತಿಶತ ಪುರುಷರಿದ್ದರೆ,51 ಪ್ರತಿಶತ ಮಹಿಳೆಯರಿದ್ದಾರೆ

.ಚಿರಾಪುಂಜಿಯ ಇನ್ನೊಂದು ವಿಶೇಷತೆಯೆಂದರೆ living bridges.ಹಲವಾರು ವರ್ಷಗಳ ಅನುಭವ ಇಲ್ಲಿನ ಜನರಿಗೆ ಒಂದು ವಿಶೇಷ ಕಲೆಯನ್ನು ಕಲಿಸಿಕೊಟ್ಟಿದೆ,ಅದೇನೆಂದರೆ ಇಲ್ಲಿನ ಜನರು ಮರಗಳ ಬೇರನ್ನು ಉಪಯೋಗಿಸಿ ಸೇತುವೆಗಳನ್ನು ನಿರ್ಮಿಸುತ್ತಾರೆ .ಈ ಕಾರ್ಯಕ್ಕೆ ಸುಮಾರು 10 ರಿಂದ 15 ವರ್ಷಗಳು ತಗುಲುತ್ತವೆ.ಇಂತಹ ಸೇತುವೆಗಳು ಅತ್ಯಂತ ಧೀರ್ಘಾವದಿ ಬಳಕೆ ಬರುತ್ತವೆ,ಸುಮಾರು 500 ವರ್ಷ ಹಳೆಯದಾದ ಇಂತಹ ಸೇತುವೆ ಇಲ್ಲಿದೆ

 .ಚಿರಾಪುಂಜಿಯು ಹಲವು ಜಲಪಾತಗಳ ತವರೂರು.ಹೆಚ್ಚು ಮಳೆಯಾಗುವ ಇಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತವೆ


.ಇವುಗಳಲ್ಲಿ ಕೆಲವು DainThlen Falls,Mawsmai Fall ,Nohkalikai Falls,Kynrem Falls

.ಅಲ್ಲದೆ ಚಿರಾಪುಂಜಿಯಲ್ಲಿ ಭೇಟಿ ಕೊಡಬಹುದಾದ ಇತರ ಪ್ರೇಕ್ಷಣೀಯ ಸ್ಥಳಗಳು Mawkdok Dympep Valley,Eco Park , Khasi Monoliths ,KohRamhah Pillar Rock,Krem Mawmluh Cave,Mawsmai Cave,Living Root Bridge

.ಇಂತಹ ಮಳೆನಾಡಿನಲ್ಲೂ ಕೂಡ ಭೇಸಿಗೆಯ ಸಮಯದಲ್ಲಿ ಜನರು ನೀರಿಗಾಗಿ ಹಲವು ಮೈಲುಗಟ್ಟಲೆ ನಡೆಯಬೇಕು 

.ನಮ್ಮ ರಾಜ್ಯಧಾನಿ ಬೆಂಗಳೂರಿನಿಂದ ಚಿರಾಪುಂಜಿಗೆ 3085 ಕಿಲೋಮೀಟರ್ ಗಳು 

.ಸೊ ಭಾರತದ ಮಳೆ ನಾಡು ಚಿರಾಪುಂಜಿಯ ಪ್ರಕೃತಿ ಸವಿಯನ್ನು ಒಮ್ಮೆ ಸವಿಯಿರಿ.ಮಾನ್ಸೂನ್ ನಲ್ಲಿ ಚಿರಾಪುಂಜಿ ಪ್ರವಾಸ ಮಾಡಿದರೆ ಖಂಡಿತಾ ನೀವು ಒಂದು ಹೊಸ ಲೋಕಕ್ಕೆ ಹೋಗಿ ಬಂದ ಅನುಭವವನ್ನು ಹೊಂದುವುದರಲ್ಲಿ  ಸಂಶಯವಿಲ್ಲ 

-ಪ್ರಕೃತಿಯನ್ನು ರಕ್ಷಿಸಿ-