ಅಬ್ಬಬ್ಬಾ ಇದೆಂತಹಾ ಸೆಖೆ....

ಅಬ್ಬಬ್ಬಾ ಇದೆಂತಾ ಸೆಖೆ..ಹಿಂದೆಂದಿಗಿಂತಲೂ ಸಹಿಸಲಸಾಧ್ಯವಾದ ಸೆಖೆ..ಎಂತಾ ಬಿಸಿಲು..ಒಂದು ಮಳೆಯಾದರೂ ಬರಬಾರದೇ...! ಹೀಗೆ ಮಾತನಾಡುತ್ತಾ ಇದೇ ಸಮಯದಲ್ಲಿ ಕರೆಂಟ್ ತೆಗುವುವವರಿಗೆ ಒಂದಷ್ಟು ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ

.ಇಂತಹ ಮಾತುಗಳನ್ನು ಕೇಳಿದಾಗ ನನಗನ್ನಿಸುವುದು ಜನಗಳು ಸಮ್ಮನೆ ಸೆಖೆ ,ಮಳೆ ಎನ್ನುತ್ತಾರೆಯೇ ವಿನಃ ಇಂತಹ ಹವಾಮಾನ ವೈಪರೀತ್ಯದ ಮೂಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲವಲ್ಲವೆಂದು 

.ಹೌದು ಬೇಸಿಗೆ ಬಂತೆಂದರೆ ಇಂತಹ ಮಾತುಗಳನ್ನು ನಾವು ಕೇಳುವುದು ಸಹಜವೇ..ಅದರಲ್ಲಿ ವಿಶೇಷವೇನು ಇಲ್ಲ ಬಿಡಿ ಅನ್ನುತ್ತಿರಾ... ಇದೆ ಖಂಡಿತವಾಗಿಯೂ ವಿಶೇಷವಿದೆ

.ಇತ್ತೀಚಿನ ವರ್ಷಗಳ ಬೇಸಿಗೆಗಳು ಹಿಂದೆಂದಿಗಿಂತಲೂ ಹೆಚ್ಚು ಉಷ್ಣತೆಯನ್ನು ಹೊಂದುತ್ತಿರುವುದಲ್ಲದೇ ಸಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದಿರುವುದರಲ್ಲಿ ಸಂಶಯವಿಲ್ಲ

.ನೀವೀ ಲೇಖನವನ್ನು ಆಫೀಸ್ ನ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಓದುತ್ತಿರುವುದಾದರೆ ನಾನು ಹೇಳಿದ ಮಾತು 'ಹೌದಾ' ಎಂದೆನಿಸಬಹುದು .ಆದರೆ ಸ್ವಲ್ಪ ಹೊರ ಬಂದು ಬಿಸಿಲಿಗೆ ಮೈ ಒಡ್ಡಿ ನಿಂತುಕೊಳ್ಳಿ...ನಾನು ಹೇಳುತ್ತಿರುವ ಉರಿ ಭೇಸಿಗೆಯ ಅನುಭವ ಕೆಲವೇ ನಿಮಿಷಗಳಲ್ಲಿ ನಿಮಗೆ ಉಂಟಾಗುತ್ತದೆ

.ನಮ್ಮ ಶಿವಮೊಗ್ಗದಲ್ಲೇ ಒಂದು ವಾರದ ಹಿಂದೆ ದಾಖಲಾದ 40 ಡಿಗ್ರೀ ಉಷ್ಣಾಂಶ ಇಲ್ಲಿಯವರನ್ನು ಒಮ್ಮೆ ತಬ್ಬಿಬ್ಬು ಮಾಡಿದ್ದು ಸುಳ್ಳಲ್ಲ

.ನೀವು ಮಲೆನಾಡಿನವರು ಪುಣ್ಯವಂತರು (ಹವಾಮಾನದ ಆಧಾರದ ಮೇಲೆ)  ಅನ್ನುವ ಮಂದಿ ಈ ಸಮಯದಲ್ಲಿ ಮಲೆನಾಡಿನಲ್ಲೂ ಕೂಡ ಅಬ್ಬಬ್ಬಾ ಏನಿದು ಸೆಖೆ ಮಲೆನಾಡೂ ಕೂಡ ಬಯಲುಸೀಮೆಯಂತಾಗಿದೆ ಎನ್ನುವುದನ್ನು ನಾನು ಕೇಳಿಸಿಕೊಂಡಿದ್ದೇನೆ

.ಹೌದು ಉಷ್ಣಾಂಶದ ಮಟ್ಟ ದಿನೇ ದಿನೇ ಏರಿಕೆಯಲ್ಲಿ ಸಾಗಿದ್ದು ದಂಗು ಬೀಳಿಸುವ ಸೆಖೆ ಎಲ್ಲೆಡೆ ಶುರುವಾಗಿದೆ

.ನಾನು  ಎನನ್ನು ಹೇಳಲು ಹೊರಟಿದ್ದೀನಿ ಎಂದು ನೀವು ಕೇಳಬಹುದು...! ಸುಮ್ಮನೆ ಯೋಚನೆ ಮಾಡಿ ಇತ್ತೀಚಿನ ವರ್ಷಗಳಲ್ಲಿ ಈ ಬೇಸಿಗೆ ಚಳಿ ಮಳೆಗಾಲವೆನ್ನುವುದು ಹಿಂದೆಲ್ಲಾ ಇದ್ದಂತೆ ನಿಗದಿತ ತಿಂಗಳುಗಳಲ್ಲಿ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆಯೇ.... ನನ್ನ ಪ್ರಕಾರ ಇಲ್ಲ..ಎಲ್ಲೋ ಒಂದು ಕಡೆ ಸೂಕ್ಷವಾಗಿ ಗಮನಿಸಿದರೆ ಇವುಗಳ ಚಕ್ರದಲ್ಲಿ ಏನೋ ವ್ಯತ್ಯಾಸವಾದಂತೆ ಅನ್ನಿಸುತ್ತದೆ

.ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟರೆ ನಮಗೆ ಸಿಗುವ ಉತ್ತರ 'ಜಾಗತಿಕ ತಾಪಮಾನ ಹೆಚ್ಚಳ'

.ಜಾಗತಿಕ ತಾಪಮಾನ ಹೆಚ್ಚಳ ಸಮಸ್ಯೆಗೆ ಕಾರಣವಾದ ಪ್ರಮುಖ ಅನಿಲ ಇಂಗಾಲದ ಡೈ ಆಕ್ಸೈಡ್. ಹಾಗೆ ನೋಡಿದರೆ ಇಂಗಾಲದ ಡೈ ಆಕ್ಸೈಡ್ ಅನಿಲ ಭೂಮಿಯ ವಾತಾವರಣಕ್ಕೆ ಅಗತ್ಯವಿರುವ ಅನಿಲ. ಭೂಮಿಯಿಂದ ಪ್ರತಿಫಲಿಸಲ್ಪಟ್ಟ  ಕಿರಣಗಳಲ್ಲಿ ಕೆಲವನ್ನು ಭೂಮಿಗೆ ಪುನಃ ಕಳಿಸುವುದರ ಮುಖಾಂತರ ಭೂಮಿಯ ಉಷ್ಣತೆಯನ್ನು ನಿಯಂತ್ರಿಸುವುದರಲ್ಲಿ ಈ ಅನಿಲ ಪ್ರಮುಖ ಪಾತ್ರವನ್ನು  ವಹಿಸುತ್ತದೆ. ಈ ಅನಿಲದ ಪ್ರಮಾಣ ತೀರಾ ಕಡಿಮೆ ಇದ್ದಾಗ ಭೂಮಿಯ ಉಷ್ಣಾಂಶ ಕಡಿಮೆಯಾಗಿ ಹಿಮಯುಗಗಳು ಸಂಭವಿಸಿದ್ದು ನಮಗೆ ಗೊತ್ತಿರುವ ವಿಚಾರವೇ

.ಆದರೆ ಇಂದು ಆಗಿರುವ ಸಮಸ್ಯೆಯೆಂದರೆ ಮಾನವ ಇಂದು ಯಾವ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್  ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದಾನೆಂದರೆ ಭೂಮಿಯಿಂದ ಪ್ರತಿಫಲನಗೊಂಡ ಬಹುಭಾಗ ಕಿರಣಗಳನ್ನು ಈ ಅನಿಲ ಹಾಗು ಇತರ ಹಸಿರುಮನೆ ಅನಿಲಗಳು (ಮಿಥೇನ್ , ನೈಟ್ರಸ್ ಆಕ್ಸೈಡ್ ಇತ್ಯಾದಿ)  ಭೂಮಿಗೆ ವಾಪಸ್ ಕಳಿಹಿಸುತ್ತಿರುವುದರಿಂದ ಭೂಮಿಯ ತಾಪಮಾನ ಏರಿಕೆಯಾಗುತ್ತಲೇ ಸಾಗಿದೆ.ಇದನ್ನೇ ನಾವು ಜಾಗತಿಕ ತಾಪಮಾನ ಏರಿಕೆ ಎಂದು ಕರೆಯುತ್ತಿರುವುದು 

.ಜಾಗತಿಕ ತಾಪಮಾನ ಏರಿದರೆ ಎರಲಿ ಅದರಿಂದ ಹೆಚ್ಚೆಂದರೆ ಭೇಸಿಗೆಯ ಬಿಸಿ ಜಾಸ್ತಿಯಾಗಬಹುದು ಅಷ್ಟೇ ತಾನೇ ಎಂದುಕೊಂಡರೆ ತಪ್ಪಾದೀತು. ಜಾಗತಿಕ ತಾಪಮಾನದ ಪರಿಣಾಮಗಳು ಹಲವು 

.ತೀರಾ ಸರಳವಾಗಿ ಹೇಳುವುದಾದರೆ 2015  ರಲ್ಲಿ ನಮ್ಮ ದೇಶದಲ್ಲಿ ಮಾನ್ಸೂನ್ ಕೈ ಕೊಟ್ಟಿತ್ತು. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದಾಗ ನಮಗೆ ಸಿಗುವ ಉತ್ತರ ಎಲ್ ನಿನೋ ಎನ್ನುವ ಸಮುದ್ರದಲ್ಲಿ ನಡೆಯುವ ಕ್ರಿಯೆ. ಸಮುದ್ರದ ನೀರಿನ ಉಷ್ಣತೆಯಲ್ಲಿ ಏರಿಕೆಯಾಗುವ ಕ್ರಿಯೆಯೇ ಈ ಎಲ್ ನಿನೋ . ಭೂಮಿಯ ಹವಾಮಾನವನ್ನು ನಿಯಂತ್ರಿಸುವುದರಲ್ಲಿ ಸಮುದ್ರಗಳ ಪಾತ್ರ ತುಂಬಾ ಮಹತ್ವದ್ದು . ಸಾಗರಗಳ ಉಷ್ಣತೆ ಜಾಸ್ತಿಯಾಗುತ್ತಾ ಹೋದಂತೆ ಇದು ಹಲವು ಕಡೆ ಪ್ರವಾಹವನ್ನು ಸೃಷ್ಟಿಸಿದರೆ ಇನ್ನೂ ಹಲವೆಡೆ ಬರಗಾಲವನ್ನು ಸೃಷ್ಟಿಸಬಹುದು. ಇಂದು ಭೂಮಿಗೆ ಅಪ್ಪಳಿಸುತ್ತಿರುವ ಶಕ್ತಿಶಾಲಿ ಚಂಡಮಾರುತಗಳ ಸೃಷ್ಟಿಗೆ ಕಾರಣವೇ ಸಾಗರಗಳ ನೀರಿನ ಉಷ್ಣತೆಯಲ್ಲಿ ಏರಿಕೆ ಉಂಟಾಗುವುದು 

.ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅರ್ಕಟಿಕ್ ನಲ್ಲಿ ಕರಗುತ್ತಿರುವ ಹಿಮದ ಹಿಂದೆ  ಇರುವ ಅಪರಾಧಿ ಈ ತಾಪಮಾನ ಏರಿಕೆ . ಜಗತ್ತಿನ ಹಲವೆಡೆ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿರುವುದು ಈ ವೇಗವಾಗಿ ಹಿಮಕರಗುವ ಪ್ರಕ್ರಿಯೆಯಿಂದ 

.ನಾವು ಇಲ್ಲಿ ಮಾತನಾಡುತ್ತಿರುವ ಸೆಖೆಗೂ ನಾವು ವಾತಾವರಣಕ್ಕೆ ತುಂಬುತ್ತಿರುವ ಇಂಗಾಲದ ಡೈ ಆಕ್ಸೈಡ್ ಗೂ ಖಂಡಿತಾ ಸಂಭಂದವಿದೆ

.ಕಳೆದ ನೂರಾರು,ಸಾವಿರಾರು ವರ್ಷಗಳಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ನಾವು ಈ ಅನಿಲವನ್ನು ವಾತಾವರಣಕ್ಕೆ ಸೇರಿಸುತ್ತಿದ್ದೇವೆ

.ಕೆಲವೇ ದಿನಗಳ ಹಿಂದೆ ಪ್ರಕಟಣೆಗೊಂಡ ವರದಿಗಳ ಪ್ರಕಾರ 2015 ರಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಸೇರಿಸಲಾಗಿದೆ. ವರ್ಷಕ್ಕೆ 2 ppm ( parts per million) ನಷ್ಟು ವಾತಾವರಣಕ್ಕೆ ಸೇರುತ್ತಿದ್ದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಳೆದ 4 ವರ್ಷಗಳಲ್ಲಿ 2 ppm ಗಿಂತಲೂ ಅಧಿಕವಾಗಿ, ಮುಖ್ಯವಾಗಿ 2015 ರಲ್ಲಿ 3.5 ppm (ಕಳೆದ 56 ವರ್ಷದಲ್ಲೇ ವರ್ಷವೊಂದರಲ್ಲಿ ಇಷ್ಟು ಏರಿಕೆಯಾಗಿದೆ)  ನಷ್ಟು ತಲುಪುವ ಮೂಲಖ ವಾತಾವರಣದ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ 402.6 ppm ಕ್ಕೆ ತಲುಪಿದೆ (1880 ರ ಮೊದಲು 280 ppm ನಷ್ಟಿತ್ತು). ಹಲವು ಹವಾಮಾನ ವರದಿಗಳ ಪ್ರಕಾರ 2015 ದಾಖಲೆಯ ಉಷ್ಣಾಂಶ ಏರಿಕೆಯ ವರ್ಷ. ಇದಲ್ಲದೇ ದಾಖಲೆಯಲ್ಲೇ  ಅತ್ಯಂತ ಹೆಚ್ಚು ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಹೊಂದಿದ ವರ್ಷ 2015 ಎಂದು ವರದಿಯಲ್ಲಿ ತಿಳಿಸಲಾಗಿದೆ 

.ತೈಲ ಬೆಲೆಯಲ್ಲಿ ಬಾರಿ ಇಳಿಕೆ ಇದಕ್ಕೆ ಕಾರಣವಿರಬಹುದು ಹಾಗು ಸಧ್ಯಕ್ಕೆ ನಡೆಯುತ್ತಿರುವ ಎಲ್ ನಿನೋ ಅಂಶ ಕೂಡ ಇದಕ್ಕೆ ಕಾರಣವೆಂದು ನಂಬಲಾಗಿದೆ. ಎಲ್ ನಿನೋದಿಂದಾಗಿ ಹಲವೆಡೆ ಉಂಟಾದ ಬರಗಾಲ ಹಾಗು ಪ್ರವಾಹ ಪರಿಸ್ಥಿತಿಯಿಂದ ಇಂಗಾಲವು ಕಾಡುಗಳಲ್ಲಿ ಸಂಗ್ರಹವಾಗುವ ಪ್ರಮಾಣ ಕಡಿಮೆಯಾಗಿರಬಹುದು ಎಂದು ನಂಬಲಾಗಿದೆ 

.1998 ರಲ್ಲಿ ಹೀಗೆ 'ಎಲ್ ನಿನೋ ' ಉಂಟಾಗಿದ್ದಾಗಲೂ ಇದೇ ರೀತಿ  ಇಂಗಾಲದ ಡೈ ಆಕ್ಸೈಡ್ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಿತ್ತು 

.ಪಳೆಯುಳಿಕೆ ಇಂಧನಗಳ ( ಇಂಗಾಲದ ಡೈ ಆಕ್ಸೈಡ್ ಹೊರಹೊಮ್ಮುವುದರ ಒಂದು ಮುಖ್ಯ ಮೂಲ ) ಸುಡುವಿಕೆ  ಎಗ್ಗಿಲ್ಲದೆ ಸಾಗಿದ್ದು ವರ್ಷದ ಸರಾಸರಿಯಲ್ಲಿ ಸುಮಾರು 10 ಬಿಲಿಯನ್ ಮೆಟ್ರಿಕ್ ಟನ್ ನಷ್ಟು ಇಂಗಾಲದ ಡೈ ಆಕ್ಸೈಡ್ ಇದರಿಂದ ವಾತಾವರಣಕ್ಕೆ ಸೇರುತ್ತಿದೆ 

.ಹಿಂದಿನಂತೆಯೇ ಇತ್ತೀಚಿಗೆ ನಡೆದ Paris Climate Change Conference ನಲ್ಲಿ ವಿಶ್ವದ ಹಲವು ನಾಯಕರು ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುವ ಪ್ರತಿಜ್ಞೆಯನ್ನು ಮಾಡಿದ್ದರು.ಆದರೆ ಇದು ಎಷ್ಟು ಪ್ರಮಾಣದಲ್ಲಿ ಯಶಶ್ವಿಯಾಗುತ್ತದೋ ಕಾದು ನೋಡಬೇಕಿದೆ 

.ವಾತಾವರಣದಲ್ಲಿ   ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ನಿಜಕ್ಕೂ ಒಂದು ಆತಂಕಕಾರಿ ಸಂಗತಿ. ಇದರ ಬಗ್ಗೆ ಜಾಗೃತಿ ಮೂಡದೇ ಇದ್ದಲ್ಲಿ ದುರಂತದ ದಿನಗಳು ದೂರವಿಲ್ಲ 

.ಕುಳಿತುಕೊಂಡು ಸೆಖೆ ಎಂದು ಕರೆಂಟ್ ನವರಿಗೆ ಬಯ್ಯುವ ,ಮಳೆ ಬರಲಿಲ್ಲವೆಂದು ಕೊರಗುವ ನಾವು ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಇದರ ಬಗ್ಗೆ ಅರಿವು ಮೂಡಿಸಿದರೆ ಮಾತ್ರ ಮುಂಬರುವ ವರ್ಷಗಳಲ್ಲಿ ಇಂತಹ ಹವಾಮಾನ ವೈಪರೀತ್ಯದಿಂದ ಪರಾಗಬಹುದೇ ವಿನಃ , ಕಲಿಯುಗವೇ ಹೀಗೆ ಎಂದುಕೊಂಡು ಪರಿಸರ ರಕ್ಷಣೆಯಲ್ಲಿ  ಮತ್ತಷ್ಟು ಬೇಜಾವಾಬ್ದಾರಿತನವನ್ನು ತೋರಿಸಿದಲ್ಲಿ ಬೇಸಿಗೆ,ಚಳಿಗಾಲ,ಮಳೆಗಾಲ ಎನ್ನುವ ಬದಲು  ಬರಗಾಲ,ಪ್ರವಾಹ ಕಾಲ , ಉಷ್ಣಾಂಶ ಮಿತಿ ಮೀರಿದ ಕಾಲ ಎಂದು ಕರೆಯಬೇಕದಿತೇನೋ ...... 

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-