Monday, December 16, 2013

ರಾಜ ಕಾಳಿಂಗ

ಮಿತ್ರ ರಾಘು .. ಬ್ಲಾಗ್ ನಲ್ಲಿ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ..

 ನಾನು ದಿನೇಶ್ ಜಮ್ಮಟಿಗೆ.. ಕಾಡು ಗುಡ್ಡ  ಸುತ್ತೋದು.. ಹುಳು ಹಪ್ಪಟ್ಟೆ ಚಿತ್ರ ತೆಗೆಯೋದು ನನ್ನ ಇಷ್ಟ...

ಮೊನ್ನೆ ನಮ್ಮ ಊರಿನ ಫಾರೆಸ್ಟರ್ ಕರೆ ಮಾಡಿ ತುರ್ತಾಗಿ ಬರಲು ಹೇಳಿದ್ರು
ಹೋಗಿ ನೋಡಿದಾಗ ಕಾಳಿಂಗ ಊರಿನ ಕುಡಿಯುವ ನೀರಿನ ಪಂಪ್ ಹೌಸ್ ಕೆಳಗಿನ ಬಾವಿಯೊಳಗೆ ಬಿದ್ದಿತ್ತು.

ಮುಂದಿನದ್ದು ಅವನನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ. ಆಗುಂಬೆಯಿಂದ ಹಾವು ರಕ್ಷಕ ಅಜಯ್ ಗಿರಿಯ ಆಗಮನ.


ಕತ್ತಲೆಯ ಬಾವಿಯೊಳಗೆ ಕಾರ್ಯಾಚರಣೆ.

ಆಳದ ಬಾವಿಯಲ್ಲಿನ ರಾಜ ಕಾಳಿಂಗನನ್ನು ಕೈ ಮತ್ತು ಸ್ಟಿಕ್  ಬಳಸಿ, ಹಗ್ಗದೊಂದಿಗೆ ಇಳಿಸಲಾದ ಮರದ ಮೇಲೆ ಸಾಹಸದಿಂದ ಕೂರಿಸಲಾಯಿತು.

ಗಾಬರಿ ಮತ್ತು ಥ೦ಡಿಯಾದ ರಾಜ ಕುತೂಹಲದಿಂದ ಮರದ ರೆಂಬೆಯ ಮೇಲೆ ಆಸೀನನಾಗಿದ್ದ.ಬಾವಿಯ ಮೇಲ್ಬಾಗಕ್ಕೆ ಬಂದಾಗ ಅಜಯ್ ರವರ ಸಹಾಯ ಹಸ್ತದೊಂದಿಗೆ ಹೊರ ಲೋಕಕ್ಕೆ ಆಗಮನ.

ಜೊತೆಗೆ ಸುತ್ತ ಕುತೂಹಲದಿಂದ ನೆರೆದ ಜನಕ್ಕೆ ಕಾಳಿಂಗ ರಾಜನ ಸ್ವಭಾವ ಮತ್ತು ವಾಸ್ತವ್ಯದ ಪ್ರದೇಶದ ಮಾಹಿತಿಯೊಂದಿಗೆ, ರಕ್ಷಣೆಯ ಬಗ್ಗೆ ಮಾಹಿತಿ.


ಹಿಡಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಕಾಳಿಂಗನಿಗೆ ಸ್ವಾತಂತ್ರ್ಯ.ಸ್ವತಂತ್ರನಾದ ಕೂಡಲೇ ಸ್ವಚಂಧವಾಗಿ ತುಂಗಾ ನದಿಯಲ್ಲಿ ವಿಹಾರ.


ನನಗೆ ಕೆಲವು ಚಿತ್ರಗಳೊಂದಿಗೆ, ಊರಿಗೆ ಬಂದ ರಾಜನನ್ನು ಮರಳಿ ಅವನ ಸಾಮ್ರಾಜ್ಯಕ್ಕೆ ಕಳುಹಿಸಿದ ಸಂತೃಪ್ತಿ.


ಜೀವದ ಹಂಗು ತೊರೆದು, ಜೀವವ ರಕ್ಷಿಸುವ ಉರಗಗಳ ರಕ್ಷಕ ನಿನಗೆ ನಮ್ಮ ವಂದನೆಗಿಂತ ಹೆಚ್ಚೇನು ಹೇಳಲು ಸಾಧ್ಯ...?


ಹಾವುಗಳನ್ನು ರಕ್ಷಿಸಿ. ಪ್ರಕೃತಿಯನ್ನು ಪೂಜಿಸಿ...

Wednesday, December 4, 2013

ಬಂಡೀಪುರದ ನರಭಕ್ಷಕ..!!!

.ಪ್ರಿಯ ಪ್ರಕೃತಿ ಪ್ರಿಯ ಮಿತ್ರರೇ ಮೊದಲನೆಯದಾಗಿ ಹಲವು ತಿಂಗಳುಗಳಿಂದ ಬ್ಲಾಗ್ ಪೋಸ್ಟ್ ಬರೆಯದೆ ಇರುವುದಕ್ಕಾಗಿ ಕ್ಷಮೆ ಇರಲಿ

(ಚಿತ್ರ ಕೃಪೆ-ವಿಜಯವಾಣಿ)

(ಈ ಹುಲಿಗೆ ಸಂಭಂದಪಟ್ಟ updates ಗಳನ್ನು ಪೋಸ್ಟ್ ನ ಕೊನೆಯಲ್ಲಿ ಮಾಡಲಾಗಿದೆ )

ಬಂಡೀಪುರದ ನರಭಕ್ಷಕ...!! ಕಳೆದ ಒಂದು ವಾರದಿಂದ ದಿನಪತ್ರಿಕೆಗಳಲ್ಲಿ ನೀವು ಈ ವಿಷಯವನ್ನು ಗಮನಿಸಿರಬಹುದು. ನವೆಂಬರ್ 27 ರ ಬುಧವಾರದಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೊರ ಪ್ರದೇಶದಲ್ಲಿ ಬಸವರಾಜು ಎಂಬುವವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಹುಲಿಯೊಂದರ ಬಗ್ಗೆ ಸುದ್ದಿಯನ್ನು ನೀವು ಕೇಳಿರಬಹುದು 

.ಇದಾದ ಕೇವಲ 2 ದಿನಗಳ ನಂತರ ಉದ್ಯಾನವನದ 100 ಮೀಟರ್ ಹೊರ ಪ್ರದೇಶದಲ್ಲಿ ಜೇನು ಕುರುಬ ಜನಾಂಗದ ಚೆಲುವ ಎಂಬುವವರ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ

.ಈ ಮೇಲಿನ ಎರಡೂ ಘಟನೆಗಳಲ್ಲೂ ಕೂಡ ಹುಲಿ ಕೊಂದ ದೇಹವನ್ನು ತಿನ್ನದೇ ಬಿಟ್ಟು ಹೋಗಿದೆ.ಮೊದಲೇ ಘಟನೆಯಲ್ಲಿ ಹುಲಿ ಬಸವರಾಜುರವರ ತಲೆಗೆ ಗಾಯ ಮಾಡಿದ್ದು ದೇಹದ ಯಾವುದೇ ಭಾಗವನ್ನು ತಿನ್ನದೇ ಬಿಟ್ಟು ಹೋಗಿದೆ.ಎರಡನೇ ಘಟನೆಯಲ್ಲಿ ಹುಲಿ ಚೆಲುವರ ಮೇಲೆ ದಾಳಿ ನಡೆಸಿದಾಗ ಅವರ ಜೊತೆಯಲ್ಲಿ ಇದ್ದ ಅವರ ಸ್ನೇಹಿತ ಚಿಕ್ಕ ತಮ್ಮ ಬಳಿ ಇದ್ದ ಕತ್ತಿಯೊಂದಿಗೆ ಹುಲಿಯನ್ನು ಹಿಂಬಾಲಿಸಿದ್ದಾರೆ

 .ಆಗ ಹುಲಿ ಚೆಲುವವ ದೇಹವನ್ನು ಬಿಟ್ಟು ಇವರ ಮೇಲೆ ದಾಳಿಗೆ ಮುಂದಾಗಿದ್ದು ಅವರು ಅದರಿಂದ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯಲ್ಲೂ ಕೊಡ ಚೆಲುವನ ದೇಹವನ್ನು ಅದು ಬಿಟ್ಟು ಹೋಗಿದೆ.ಇಲ್ಲೂ ತಲೆಯ ಮೇಲೆ ಬಲವಾದ ಹೊಡೆತ ಬಿದ್ದ ಕಾರಣ ಚೆಲುವ ಅಸುನೀಗಿದ್ದಾರೆ .ಸಹಜವಾಗಿ ಈ ಘಟನೆಯಿಂದ ಅಲ್ಲಿನ ಸುತ್ತ ಮುತ್ತಲಿನ ಹಾಡಿಯ ಜನರು ಗಾಬರಿಗೊಂಡಿದ್ದಾರೆ 

.ಅರಣ್ಯ ಇಲಾಖೆಯವರ ಪ್ರಕಾರ  ವಯಸ್ಸಾದ ಹುಲಿ ಇದಾಗಿದ್ದು ಸಹಜವಾಗಿ ಕಾಡಿನಲ್ಲಿ ಬೇರೆ ಹುಲಿಗಳೊಂದಿಗೆ Territory ಜಗಳದಿಂದಾಗಿಯೂ ಅಥವಾ ಬೇರೆ ಕಾರಣಗಳಿಂದ ಕಾಡಿನ ಪ್ರಾಣಿಗಳನ್ನು ಹಿಡಿಯಲಾಗದೆ ಇಲ್ಲಿನ ಹಳ್ಳಿಯ ಜನರ ದನ ಕರು ಗಳ ಮೇಲೆ ದಾಳಿ ನಡೆಸಲು ಬಂದಾಗ ಆಕಸ್ಮಿಕವಾಗಿ ಮನುಷ್ಯನ ಮೇಲೆ ದಾಳಿ ನಡೆಸಿದೆ ಎಂದು 

.ಅರಣ್ಯ ಇಲಾಖೆಯವರ ಈ ಊಹೆ ಸರಿ ಕೂಡ ಹೌದು. ಏಕೆಂದರೆ ಕೇವಲ ಒಂದಿಬ್ಬರು ಮನುಷ್ಯರ ಮೇಲೆ ದಾಳಿ ನಡೆಸಿದ ಮಾತ್ರಕ್ಕೆ ದಾಳಿ ಮಾಡಿದ ಹುಲಿಯನ್ನು ನರಭಕ್ಷಕ ಎಂದು ಕರೆಯಲು ಆಗುವುದಿಲ್ಲ. ಇಲ್ಲಿ ನಡೆದ ಘಟನೆಗಳನ್ನು ಆಧರಿಸಿ ಹೇಳುವುದೇ ಆದರೆ ಮೊದಲನೇ ಘಟನೆಯಲ್ಲಿ ಬಂಡೀಪುರ ಉದ್ಯಾನವನದ ಒಂದು ವಯಸ್ಸಾದ ಹುಲಿ ಕಾಡಿನಲ್ಲಿ ತನ್ನ ಸಹಜ ಭೇಟೆಯನ್ನು ಹಿಡಿಯಲು ಅಸಮರ್ಥವಾಗಿ ಹಳ್ಳಿಯ ಜನಗಳ ದನ ಕರುಗಳ ಮೇಲೆ ಅದರ ಕಣ್ಣು ಬಿದ್ದಿರುತ್ತದೆ. ಈ ಸಂದರ್ಭದಲ್ಲಿ ಅದು ದನ ಕರುಗಳಿಗೆ ಹೊಂಚು ಹಾಕಿ ಮರೆಯಲ್ಲಿ ಕಾದು ಕುಳಿತಿರುತ್ತದೆ. ಹೀಗೆ ದನ ಕರುಗಳ ಹಿಂಡಿನ ಮೇಲೆ ಕಣ್ಣಿಟ್ಟ ಹುಲಿಯ ಕಣ್ಣಿಗೆ ಅಚಾನಕ್ಕಾಗಿ ಬಸವರಾಜು ಕಣ್ಣಿಗೆ ಬಿದ್ದಿರಬಹುದು. ಹುಲಿಗಳು ಪೊದೆಯ ಹಿಂಬದಿಯಲ್ಲೋ ಅಥವಾ ಬೇರೆ ಕಲ್ಲು ಬಂಡೆಗಳ ಹಿಂದೆಯೂ ಅಡಗಿ ಕುಳಿತಾಗ ಅದಕ್ಕೆ ಬೆನ್ನು ಮಾಡಿ ನಿಂತಿರುವ ಅಥವಾ ಕುಳಿತಿರುವ ವ್ಯಕ್ತಿಗೆ ಇದು ತಿಳಿಯುವುದಿಲ್ಲ. ಹುಲಿ ದನ ಕರುಗಳ ಮೇಲೆ ದಾಳಿ ಮಾಡಿದಾಗ ಬಸವರಾಜು ಪ್ರತಿರೋಧ ತೋರಿದಾಗ ಹುಲಿ ಅವರ ಮೇಲೆ ದಾಳಿ ಮಾಡಿತ್ತೋ ಅಥವಾ ಅವರ ಮೇಲೆಯೇ ನೇರವಾಗಿ ದಾಳಿ ಮಾಡಿತ್ತೋ ನಮಗೆ ಮಾಹಿತಿ ಇಲ್ಲ. ಅವರ ಮೇಲೆ ನೇರವಾಗಿ ದಾಳಿ ಮಾಡಿದ್ದೇ ಆಗಿದಲ್ಲಿ ಅದಕ್ಕೋ ಒಂದು ಕಾರಣ ನೀಡಬಹುದು. ಮರೆಯಲ್ಲಿ ಕುಳಿತ ಹುಲಿ ಸಹಜ ಕುತೂಹಲದಿಂದ ನಿಂತಿದ್ದ ಅಥವಾ ಕುಳಿತಿದ್ದ ಬಸವರಾಜುರವರ ಮೇಲೆ ಬೇರೆ ಪ್ರಾಣಿ ಎಂದುಕೊಂಡು ಅಥವಾ ತನಗೆ ತೊಂದರೆ ಮಾಡಬಹುದು ಎಂಬ ಭಯದಿಂದಲೋ ದಾಳಿ ನಡೆಸಿದೆ.ಹಾಗೆ ದಾಳಿ ನಡೆಸಿ ತಲೆಗೆ ಗಾಯ ಮಾಡಿ ಅಲ್ಲಿಂದ ದೇಹವನ್ನು ತಿನ್ನದೇ ತೆರಳಿದೆ.ಈ ಘಟನೆಯಿಂದ ಒಂದನ್ನಂತೂ ಸ್ಪಷ್ಟ ಪಡಿಸಬಹುದು. ಹುಲಿ ಉದ್ದೇಶಪೂರ್ವಕವಾಗಿ ಇಲ್ಲಿ ಅವರ ಮೇಲೆ ದಾಳಿ ನಡೆಸಿಲ್ಲ.ಹಾಗೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದೆ ಆದರೆ ಅದು ಆ ದೇಹವನ್ನು ಸ್ವಲ್ಪವೂ ತಿನ್ನದೇ ಹಾಗೆ ಅಲ್ಲಿ ಬಿಟ್ಟು ಹೋಗುತ್ತಿರಲಿಲ್ಲ . ಇಲ್ಲವೆಂದರೆ ಹಿಂದೆ ಅದು ದನ ಕರುಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಸಮಯದಲ್ಲಿ ಅದಕ್ಕೆ ಅಲ್ಲಿನ ದನಗಾಹಿಗಳಿಂದ ಅಡಚಣೆಯಾಗಿರಬಹುದು ಹಾಗು ಈ ದನಗಾಹಿಗಳ ಮೇಲೆ ಅದು  ತೀರ್ವವಾದ ಸಿಟ್ಟು ಹಾಗು ಅಸಹನೆಯನ್ನು ಬೆಳೆಸಿಕೊಂಡಿರಬಹುದು 

.ಈ ಘಟನೆಯ ಆಗಿ ಎರಡು ದಿನ ಕಳೆದಿದೆ ಹುಲಿಯು ಬಹುಷಃ ತೀವ್ರವಾಗಿ ಹಸಿದಿರಬೇಕು ಅದು ಅಲ್ಲೇ ಸುತ್ತ ಮುತ್ತಲೇ ಅಡ್ಡಾಡುತ್ತಾ ದನ ಕರುಗಳಿಗೆ ಮತ್ತೊಮ್ಮೆ ಹೊಂಚು ಹಾಕಿ ತಿರುಗಾಡುತ್ತಿದ್ದಿರಬೇಕು.ಸರಿಯಾಗಿ ಶುಕ್ರವಾರ ಬೆಳೆಗ್ಗೆ ಮತ್ತೊಮ್ಮೆ ಅದಕ್ಕೆ ಇನ್ನೊಂದು ಸಮಯ ಒದಗಿ ಬಂದಿರಬೇಕು.ಆದರೆ ಈ ಬಾರಿ ಅಲ್ಲಿ ಇದ್ದದು ಇಬ್ಬರು ದನಗಾಹಿಗಳು. ಹುಲಿಗೆ ಮತ್ತೊಮ್ಮೆ ಸಿಟ್ಟು ತಾರಕ್ಕಕ್ಕೆ ಏರಿತೆಂದು ಕಾಣುತ್ತದೆ. ಈ ಬಾರಿಯೂ ಕೂಡ ಹಿಂಬದಿಯಿಂದಲೇ ಚೆಲುವನ ಮೇಲೆ ದಾಳಿ ನಡೆಸಿ ತಲೆಗೆ ಬಲವಾದ ಏಟು ನೀಡಿದೆ. ಹಸಿದಿದ್ದ ಹುಲಿ ಈ ಬಾರಿ ಚೆಲುವನನ್ನು ತಿಂದು ಮುಗಿಸುವ ಯೋಚನೆ ಮಾಡಿತ್ತೋ ಏನೋ ಆದರೆ ಚೆಲುವನ ಸ್ನೇಹಿತ ಚಿಕ್ಕ ಅದನ್ನು ಹಿಂಬಾಲಿಸಿ ಪ್ರತಿರೋಧ ನೀಡಲು ಶುರು ಮಾಡಿದ್ದಾರೆ.ಮೊದಲೇ ಹಸಿವಿನಿಂದ ಕಂಗೆಟ್ಟ ಚೆಲುವನ ದೇಹವನ್ನು ಹಿಡಿದಿದ್ದ ಹುಲಿಗೆ ಈ ಪ್ರತಿರೋಧವನ್ನು ಸಹಿಸಲಾಗದೆ ಚೆಲುವನ ದೇಹವನ್ನು ಬಿಟ್ಟು ಚಿಕ್ಕನ ಮೇಲೆ ಎಗರಲು ಬಂದಿದೆ.ಆಗ ಚಿಕ್ಕ ತಪ್ಪಿಸಿಕೊಂಡು ಊರಿನವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹುಲಿ ಚೆಲುವನ ದೇಹವನ್ನು ತಿನದೇ ಅಲ್ಲೇ ಬಿಟ್ಟು ತೆರಳಿತ್ತಾದರೂ ಕೂಡ ದೇಹದ ಒಂದು ಕಣ್ಣಿನ ಗುಡ್ಡೆ ಇರಲಿಲ್ಲ. ಹುಲಿ ಇಲ್ಲೂ ಕೂಡ ದೇಹವನ್ನು ತಿನ್ನದೇ ಹಾಗೆ ಬಿಟ್ಟು ಹೋಗಿರಲು ಕಾರಣ ಬಹುಷಃ ಅದು ಚಿಕ್ಕನ ಪ್ರತಿರೋಧವನ್ನು ನೋಡಿ ಮತ್ತು ತದ ನಂತರದಲ್ಲಿ ಊರಿನವರು ಬಂದಿದ್ದರಿಂದ ಅದು ಹೆದರಿ ತಾನು ಕೊಂದ ದೇಹವನ್ನು ಅಲ್ಲೇ ಬಿಟ್ಟು ಹೋಗಿದೆ. ದನಗಾಹಿಗಳ ಮೇಲಿನ ಅಸಹನೆ ಹಸಿವು ಅದನ್ನು ಚೆಲುವನ ಮೇಲಿನ ದಾಳಿಗೆ ಪ್ರೇರಣೆ ನೀಡಿದೆ ಅಥವಾ ಹುಲಿ ಮತ್ತೊಮ್ಮೆ ಚೆಲುವನ ಹಿಂಬದಿಯಲ್ಲಿದ್ದು ಚೆಲುವನನ್ನು ಯಾವುದೋ ಪ್ರಾಣಿ ಎಂದು ತಿಳಿದೇ ದಾಳಿ ಮಾಡಿದೆ . ಒಟ್ಟಿನಲ್ಲಿ ಹುಲಿ ನರಭಕ್ಷಕನಾಗುವ ಲಕ್ಷಣಗಳನ್ನು ತೋರಿಸಿದೆಯೇ ಹೊರತು ನರಭಾಕ್ಷಕನಾಗಿಲ್ಲ 

.ಸಾಧಾರಣವಾಗಿ ನರಭಕ್ಷಕನಾಗಿ ಪರಿವರ್ತನೆಗೊಳ್ಳುವ ಹಲವು ಹುಲಿಗಳು ಮೊದಲು ದನ ಕರು ಗಳ ಹಿಂಡಿನ ಮೇಲೆಯೇ ದಾಳಿ ನಡೆಸುವುದು.ಯಾವಾಗ ಅಲ್ಲಿನ ದನಗಾಹಿಗಳಿಂದ ಪ್ರತಿರೋಧ ಎದುರಿಸಲ್ಪಡುತ್ತದೋ ಆಗ ಅಸಹನೆಯಿಂದ ಅದು ಅವರ ಮೇಲೆ ದಾಳಿ ನಡೆಸುತ್ತದೆ.ಒಮ್ಮೆ ಮಾನವನ ರಕ್ತದ ರುಚಿ ನೋಡಿದ ಹುಲಿಗೆ ದನ ಕರುಗಳಿಗಿಂತ ಸುಲಭವಾಗಿ ಸಿಗುವ ಮನುಷ್ಯನ ಮೇಲೆ ಆಸೆ ಹೆಚ್ಚಾಗಿ ಮುಂದಿನ ಅದರ ದಾಳಿಗಳಲ್ಲಿ ಅದು ಮನುಷ್ಯನನ್ನೇ ಗುರಿಯಾಗಿಸಿ ದಾಳಿ ನಡೆಸುತ್ತದೆ.ಈ ಪ್ರಕಾರವೇ ನೋಡುವುದಾದರೆ ಬಂಡೀಪುರದ ಹುಲಿ ಮುಂದೆ ತನ್ನ ದಾಳಿಯನ್ನು ಮನುಷ್ಯನ ಮೇಲೆ ನಡೆಸಿದ್ದೇ  ಅದಲ್ಲಿ ಅದು ಖಂಡಿತಾ ತನ್ನ ಬಲಿಯನ್ನು ದೂರದ ಕಾಡಿಗೆ ತೆಗೆದುಕೊಂಡು ಹೋಗಿ ಅಥವಾ ಅಲ್ಲಿಯೇ ಅದರ ರುಚಿ ನೋಡಬಹುದು ಹಾಗು ಎರಡು ಬಾರಿ ಮನುಷ್ಯನ ಮೇಲೆ ದಾಳಿ ನಡೆಸಿದ್ದರಿಂದ ಅದರ ಆತ್ಮವಿಶ್ವಾಸ ಕೂಡಾ ಹೆಚ್ಚಾಗಿ ನಡವಳಿಕೆಯಲ್ಲಿ ಬದಲಾವಣೆಯನ್ನು ತಂದಿರುತ್ತದೆ.ಹಾಗಾಗಿಯೇ ಒಮ್ಮೆ ನರಭಕ್ಷಕನಾಗಿ ಪರಿವರ್ತನೆಗೊಂಡ ಹುಲಿಯನ್ನು ಹಿಡಿಯುವುದು ಅಷ್ಟು ಸುಲಭದ ಮಾತಲ್ಲ 

.ಈ ನರಭಕ್ಷಕನಾಗಿ ಪರಿವರ್ತನೆ ಹೊಂದುತ್ತಿರುವ ಹುಲಿಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆ 90 ಜನರ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿದಿದೆ.ಈ ಕಾರ್ಯಾಚರಣೆಗೆ ಪಳಗಿದ ಆನೆಗಳನ್ನು ಬಳಸಿಕೊಳ್ಳಲಾಗಿದೆ. ಹುಲಿಯನ್ನು ಬೇರೆ ಬಲಿ ಪ್ರಾಣಿ ಕಟ್ಟಿ ಆಕರ್ಷಿಸಿ ಹೊಡೆಯುವಷ್ಟು ಸಮಯವಿಲ್ಲ ಇಲ್ಲ.ಏಕೆಂದರೆ ಅದು ಬೇರೆ ಪ್ರಾಣಿಗಳಿಗೆ ಆಕರ್ಷಿತವಾಗದೆ ಇರಬಹುದು ಹಾಗು ಅದು ಹಿಂದಿನ ಎರಡು ಘಟನೆಗಳಿಂದ ಹೆಚ್ಚಿನ ಜಾಗ್ರತೆ ವಹಿಸಿರಬಹುದು.ಎಲ್ಲಕ್ಕಿಂತ ಹೆಚ್ಚಾಗಿ ಆ ಹುಲಿ ಮುಂದಿನ ತನ್ನ ದಾಳಿಯನ್ನು ಮನುಷ್ಯರ ಮೇಲೆ ಅಥವಾ ದನ ಕರುಗಳ ಮೇಲೆ ನಡೆಸುವುದಕ್ಕಿಂತ ಮೊದಲು ಅರಣ್ಯ ಇಲಾಖೆಯವರು ಅದನ್ನು ಹಿಡಿಯಲೇ ಬೇಕಾದ ಒತ್ತಡದಲ್ಲಿದ್ದಾರೆ .ಅರವಳಿಕೆ ತಜ್ಞರೊಂದಿಗೆ ಈಗಾಗಲೇ ಅದು ಇರಬಹುದು ಎಂದು ಊಹಿಸಿದ ಜಾಗಗಳಲ್ಲಿ ಕಾರ್ಯಾಚರಣೆ ನಡೆದಿದೆ.ನಿನ್ನೆ (ಡಿಸೆಂಬರ್ ೧) ಭಾನುವಾರದ ಸಂಜೆಯವರೆಗೂ ಹುಲಿಯ ಸುಳಿವು ಸಿಕ್ಕಿರಲಿಲ್ಲ 

.ಇಲ್ಲಿ ಗಮಸಿಸಬೇಕಾದ ಇನ್ನೊಂದು ಅಂಶವೆಂದರೆ ಇದೆ ಡಿಸೆಂಬರ್ 16 ರಿಂದ ದೇಶಾದ್ಯಂತ ಹುಲಿ ಗಣತಿ ಆರಂಭವಾಗಲಿದೆ. ಬಂಡೀಪುರದಲ್ಲೂ ಹುಲಿ ಗಣತಿ ಇರುವುದರಿಂದ ಆ ವೇಳೆಯ ಒಳಗೆ ಹುಲಿ ಸಿಗದಿದ್ದರೆ ಹುಲಿ ಗಣತಿಗೆ ಬರುವವರು ಇದರಿಂದ ಭೀತಿಗೆ ಒಳಗಾಗುವ ಸಾಧ್ಯತೆ ಇದೆ

.ಮೊದಲೇ ದೇಶದಲ್ಲಿ ಹುಲಿಗಳ ಸಂಖ್ಯೆ ಇಳಿಯುತ್ತಿರುವ ಈ ಸಂಧರ್ಭದಲ್ಲಿ ಇಂತಹ ಘಟನೆಗಳು ಕಾಡಿನಲ್ಲಿ ವಾಸವಿರುವ ಜನರ ಮನಸ್ಸಿನಲ್ಲಿ ಹುಲಿಯನ್ನು ಮತ್ತಷ್ಟು ವಿಲನ್ ಆಗಿ ಮೂಡಿಸಿ ಅವುಗಳ ಜೀವಕ್ಕೆ ಕುತ್ತು ತಂದುಕೊಳ್ಳುವ ಸಂಧರ್ಭವೇ ಹೆಚ್ಚು

.ಹುಲಿ ಕಾಡು ಹಾಗು ಸುತ್ತ ಮುತ್ತಲಿನ ಜಾಗದಲ್ಲಿ ಯಾವುದೇ ಜನವಸತಿ ಇರಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ದೇಶದಲ್ಲೇ ಹುಲಿ ಸಂತತಿ ಅತ್ಯಂತ ಚೆನ್ನಾಗಿ ಅಭಿರುದ್ದಿಯಾಗುತ್ತಿರುವ ಬಂಡೀಪುರ ಹಾಗು ನಾಗರಹೊಳೆಯಲ್ಲಿ ಮುಂದೆ ಈ ಸಮಸ್ಯೆ ಬರಲಾಗದು ಎಂದು ಹೇಳಲಾಗುವುದಿಲ್ಲ. ಹುಲಿ ಸಂತತಿ ಹೆಚ್ಚುತ್ತಿದೆ ಎಂದರೆ ಅಲ್ಲಿನ ಕಾಡು ಕೂಡಾ ಬೆಳೆಯುತ್ತಿರಬೇಕು ಇಲ್ಲವಾದಲ್ಲಿ ಅವುಗಳ ನಡುವೆ ಜಾಗಕ್ಕಾಗಿ ಪೈಪೋಟಿ ನಡೆದು ಗಾಯಗೊಂಡು ಅಥವಾ ತನ್ನ ಪ್ರದೇಶವನ್ನು ಸ್ಥಾಪಿಸಿಕೊಳ್ಳಲಾಗದೆ ಮತ್ತು ವಯೋ ಸಹಜ ಕಾರಣಗಳಿಂದ ಹುಲಿಗಳು ತಾಳ್ಮೆ ಕಳೆದುಕೊಂಡಾಗ ಕಾಡಿನಲ್ಲಿರುವ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತವೆ ಮತ್ತು ಇದೇ ಮುಂದೆ ಅವುಗಳನ್ನು ನರಭಕ್ಷಕನನ್ನಾಗಿ ಮಾಡಲೂಬಹುದು 

.ಅದ್ದರಿಂದ ಹುಲಿ ಅಭಿರುದ್ದಿಯಾಗುತ್ತಿರುವ ಕಾಡುಗಳಲ್ಲಿನ ಜನವಸತಿಯನ್ನು ಆದಷ್ಟು ಕಡಿಮೆ ಮಾಡುವುದೇ ಇದಕ್ಕೆ ಇರುವ ಏಕೈಕ ಪರಿಹಾರ ಎಂದು ನಾನು ಭಾವಿಸುತ್ತೇನೆ 

.ಹಾ ಅಂದ ಹಾಗೆ ಶನಿವಾರ ನಾಗರಹೊಳೆಯ ಕಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಅರಣ್ಯ ರಕ್ಷಕ ಸುರೇಶ್ ಎಂಬುವವರು ಮೃತರಾಗಿದ್ದಾರೆ .ಈ ದಾಳಿಯಲ್ಲಿ ಸುರೇಶ್ ಸಂಜೆ ಬಹಿರ್ದೆಸೆಗೆಂದು ತೆರಳಿದಾಗ ಹಿಂದಿನಿಂದ ಹುಲಿ (ಬಂಡೀಪುರದ ಹುಲಿ ಹಾಗು ಈ ಹುಲಿ ಬೇರೆ ಬೇರೆ )  ಅವರ ಮೇಲೆ ದಾಳಿ ಮಾಡಿ ದೇಹದ ಬಹುತೇಕ ಭಾಗವನ್ನು ತಿಂದು ಹಾಕಿದೆ.ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಹುಲಿ ಇಲ್ಲಿ ದನ ಕರುಗಳನ್ನು ಹಿಡಿಯಲು ಬಂದದ್ದಲ್ಲ. ಕುಳಿತ ಸುರೇಶ್ ರನ್ನು ಹುಲಿ ಯಾವುದೊ ಪ್ರಾಣಿ ಎಂದು ತಿಳಿದು ಆಕ್ರಮಣ ಮಾಡಿದ ಸಾಧ್ಯತೆಯೇ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಅಥವಾ ಈ ಹುಲಿ ತನ್ನ ಮರಿಗಳೊಂದಿಗೆ ಇದ್ದಾಗ ಸುರೇಶ್ ಆ ಜಾಗಕ್ಕೆ ತೆರಳಿದಾಗ ಆಕ್ರಮಣವಾಗಿರಬಹುದು. ತಾಯಿ ಹುಲಿ ತನ್ನ ಮರಿಗಳ ರಕ್ಷಣೆಗೆ ಎಂತಹ ಸನ್ನಿವೇಶಕ್ಕೂ ಕೂಡ ತಯಾರಿರುತ್ತದೆ. ಹಾಗೆಂದು ಮನುಷ್ಯನ ರಕ್ತ ನೋಡಿದ ಈ ಹುಲಿ ನರಭಕ್ಷಕವಾಗುತ್ತದೆಂದು ಅಲ್ಲ.ಇದು ಕೇವಲ ಅಕಸ್ಮಿಕವಾಗಿದ್ದು ಹುಲಿ ಮತ್ತೆ ದಾಳಿ ಮಾಡದ ಸಾಧ್ಯತೆಯೇ ಹೆಚ್ಚು. ಹಲವು ಮಧ್ಯ ವಯಸ್ಸಿನ ಆರೋಗ್ಯವಂತ ಹುಲಿಗಳು ಕೆಲವೊಮ್ಮೆ ಹೀಗೆ ನಡೆಯುವ ಆಕಸ್ಮಿಕ ಘಟನೆಗಳಿಂದ ಹಾಗು ಮರಿಗಳು ನರಭಕ್ಷಕ ತಾಯಿಯಿಂದ ನರಭಕ್ಷಕಗಳಾಗಿ ಪರಿವರ್ತನೆ ಹೊಂದುತ್ತವೆ.ಆದರೆ ಅವು ತಮ್ಮ ನರಭಕ್ಷಕ ಗುಣವನ್ನು ಬಿಟ್ಟು ಕಾಡಿನ ತಮ್ಮ ಸಹಜವಾದ ಭೇಟೆಯ ಮೇಲೆ ಅವಲಂಭಿತವಾಗುವ ಸಾಮರ್ಥ್ಯವನ್ನು ಹೊಂದಿರುತ್ತವೆ ಹಾಗು ಹಲವು ಬಾರಿ ಹಾಗೆ ಆಗಿದೆ ಕೂಡ  

.ಈ ತರಹದ ಸಮಸ್ಯೆಗಳಿಗೆ ಮೂಲವಾದ ಕಾರಣವೇ  ಹುಲಿಗಳಿಗೆ ಬೇಕಾದ ನಿರ್ಭಯ ಹಾಗು ಮಾನವನ ತೊಂದರೆಗಳಿಂದ ಮುಕ್ತವಾದ ಕಾಡಿನ ಅವಾಸ ಸ್ಥಾನ ಸಿಗದೇ ಇರುವುದು.ಹೆಚ್ಚು ಹೆಚ್ಚು ಕಾಡು ಬೆಳದಂತೆ ಹುಲಿಯ ಬಲಿ ಪ್ರಾಣಿಗಳೂ ಕೂಡ ಅಲ್ಲಿ ಬೆಳೆಯುತ್ತವೆ.ಹುಲಿಗಳೂ ಕೂಡಾ ಅವುಗಳ ಮೇಲೆ ಅವಲಂಭಿತವಾಗಿ ಹೆಚ್ಚು ಹೆಚ್ಚು ಬೆಳೆಯುತ್ತವೆ.ಯಾವಾಗ ಅಲ್ಲಿ ಮಾನವನ ಪ್ರವೇಶವಾಗಿ ತೊಂದರೆಗಳು ಹುಟ್ಟುತ್ತವೆಯೋ ಆಗ ಅಲ್ಲಿ ಇಂತಹ ಸಮಸ್ಯೆಗಳು ಬಂದೇ ಬರುತ್ತವೆ 

.Anyway ನಾನು ಈ ಪೋಸ್ಟ್ ಬರೆಯುವ ಹೊತ್ತಿಗೆ ಬಂಡೀಪುರದಲ್ಲಿ ನಮ್ಮ ಕತೆಯ ಹುಲಿಯ ಹುಡುಕಾಟ ನಡೆದಿರಬಹುದು..ಅದಕ್ಕೆ ತೊಂದರೆಯಾಗದಂತೆ ಅದು ಸೆರೆ ಸಿಗಲಿ ಹಾಗು ಸಿಗದೇ ಇದ್ದ ಪಕ್ಷದಲ್ಲಿ ಅದು ತನ್ನ ನರಭಕ್ಷಕ ಪ್ರವೃತ್ತಿಯನ್ನು ತೊರೆದು ಕಾಡಿನ ಬಲಿ ಪ್ರಾಣಿಗಳ ಮೇಲೆ ಮನಸ್ಸು ಮಾಡಲಿ ಎಂದು ಆಶಿಸೋಣ.ಆದರೆ ಅದು ತುಂಬಾ ವಯಸ್ಸಾದ ಹಾಗು ಗಾಯಗೊಂಡ ಹುಲಿಯಾದರೆ ಅದು ಸೆರೆ ಸಿಕ್ಕುವುದೇ ಉತ್ತಮ..... ಈ ಹುಲಿಯ ಬಗ್ಗೆ ಮಾಹಿತಿ ಸಿಕ್ಕಾಗ update ಮಾಡುತ್ತೇನೆ

update (03-12-2013) - ಹುಲಿಯ ಪತ್ತೆಗೆ ಕಾಡಿನ ಅಂಚಿನಲ್ಲಿ 10 ಕ್ಕೂ ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ನು ಅಳವಡಿಸಲಾಗಿದೆ.ಆದರೆ ನಿನ್ನೆ ಸಂಜೆಯವರೆಗೂ ಯಾವುದೇ ಹುಲಿಯ ಸುಳಿವು ಸಿಕ್ಕಿಲ್ಲ.ಈ ಮಧ್ಯೆ ಕಾರ್ಯಾಚರಣೆಯನ್ನು ಇನ್ನೂ ಒಂದು ವಾರದವರೆಗೆ  ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹುಲಿ ಸೆರೆ ಸಿಗದಿದ್ದ ನಂತರದಲ್ಲಿ ಮುಂದಿನ ಹಂತದ ಕಾರ್ಯಾಚರಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ  

update (03-12-2013 9.30 PM) - ಬಂಡೀಪುರದ ನರಭಕ್ಷಕ ತಾನು ನರಭಕ್ಷಕನಾಗಿದ್ದೇನೆ ಎಂಬುವುದನ್ನು ಸಾಬೀತು ಪಡಿಸಿದೆ. ಇಂದು ಸಂಜೆ ಹೆಚ್ ಡಿ ಕೋಟೆ ತಾಲೋಕಿನ ಚಿಕ್ಕಬರಗಿ ಎಂಬಲ್ಲಿ ಬಸಪ್ಪ ಎಂಬ 55 ವರ್ಷದ ವ್ಯಕ್ತಿಯ ಮೇಲೆ  ಹುಲಿ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ .ದನ ಮೇಯಿಸಿಕೊಂಡು ಬರಲು ತೆರಳಿದ್ದ ಬಸಪ್ಪ ಕತ್ತಲಾಗುತ್ತಾ ಬಂದರೂ ಮನೆಯ ಕಡೆ ಬಾರದಿದ್ದನ್ನು ಗಮನಿಸಿ ಜನರು ಬಸಪ್ಪನಿಗಾಗಿ ಜಮೀನಿನ ಬಳಿ ಹುಡುಕಾಡಿದಾಗ ಜಮೀನಿಗೆ ಹೊಂದಿಕೊಂಡಂತೆಯೇ ಇರುವ ಕಾಡಿನ (Baladkuppe forest area) ಸರಹದ್ದಿನಲ್ಲಿ ಮೃತರ ಅರ್ಧ ದೇಹ ಪತ್ತೆಯಾಗಿದೆ. ಹತ್ತಿರದಲ್ಲೇ ಹುಲಿಯ ಘರ್ಜನೆ ಕೆಳುತ್ತಿತ್ತಾದರೂ ಕತ್ತಲು ಹಾಗು ನರಭಕ್ಷಕನ ಭಯದಿಂದ ಜನರು ಹುಲಿಯನ್ನು ಹಿಂಬಾಲಿಸದೆ ತೆರಳಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಯ ಪ್ರವಾಸಿ ಮಂದಿರದ ಮೇಲೆ ದಾಳಿ ನಡೆಸಿ ಇಲಾಖೆಯ ಜೀಪ್ ಅನ್ನು ಧ್ವಂಸಗೊಳಿಸಿದ್ದಾರೆ. ನಾವು ಈ ಪೋಸ್ಟ್ ನಲ್ಲಿ ತಿಳಿಸಿದಂತೆಯೇ ಹುಲಿ ತನ್ನೆರಡು ಬಲಿ ತೆಗೆದುಕೊಂಡ ನಂತರ ಹೆಚ್ಚಿನ ಜಾಗರೂಕತೆಯನ್ನು ವಹಿಸಿದೆ. 90 ಜನರ ತಂಡ ಹಿಂದೆ ಬಿದ್ದರೂ ಕೂಡ ಅವರಿಗೆ ಸಣ್ಣ ಸುಳಿವನ್ನೂ ನೀಡದೇ ತನ್ನ 3 ನೇ ಬಲಿಯನ್ನು ತೆಗೆದುಕೊಂಡು ತಾನು ನರಭಕ್ಷಕ ನಾಗಿದ್ದೇನೆ ಎಂಬ  ಸಂದೇಶವನ್ನು ಇಡೀ ಬಂಡೀಪುರಕ್ಕೆ ಕೇಳುವಂತೆ ಘರ್ಜಿಸಿದೆ

.update (04-12-2013 11.00 AM)   - ಬಂಡೀಪುರದ ನರಭಕ್ಷಕನನ್ನು ಗುಂಡಿಕ್ಕಿ ಕೊಲ್ಲುವಂತೆ ಮೈಸೂರು ಎಸ್ ಪಿ ಆದೇಶ ನೀಡಿದ್ದಾರೆ.ಗ್ರಾಮಸ್ಥರಿಂದ ಅರಣ್ಯ ಇಲಾಖೆಯ ವಿರುದ್ದ ತೀರ್ವವಾದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 303 ರೈಫೆಲ್ ನಿಂದ ಹುಲಿಯನ್ನು ಕೊಲ್ಲಲು ಎಸ್ ಪಿ ಆದೇಶ ನೀಡಿದ್ದಾರೆ 

updtae (05-12-2013 1.00 PM) - ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶವಿದ್ದರೂ ಛಲ ಬಿಡದೆ ಅರಣ್ಯ ಇಲಾಖೆಯವರು ಇಂದು ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯನ್ನು ಜೀವಂತವಾಗಿ ಸೆರೆಹಿಡಿದ್ದಿದ್ದಾರೆ. ಇಂದು ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸುಮಾರು 12.15 ರ ಸಮಯಕ್ಕೆ ಕಾಂತಿ ಎಂಬ ಆನೆ ಹುಲಿ ಇರುವ ಜಾಗದ ಕಡೆಗೆ ತೆರಳಿದಾಗ ಹುಲಿಯ ದರ್ಶನವಾಗಿದೆ .ತಕ್ಷಣ ವೈದ್ಯರು ಅರವಳಿಕೆ ನೀಡಿ ಹುಲಿಯನ್ನು ಪ್ರಜ್ಞೆ ತಪ್ಪಿಸಿದ್ದಾರೆ.ನಂತರದಲ್ಲಿ ಅದನ್ನು ಸೆರೆಹಿಡಿಯಲಾಗಿದೆ.ಹುಲಿಯನ್ನು ನೋಡಲು ಜನ ಜಾತ್ರೆಯೇ ಸೇರಿದೆ  .ಹುಲಿಯನ್ನು ನೋಡಿದ ಗ್ರಾಮಗಳ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಈ ಹುಲಿಯ ಆರೋಗ್ಯ ತಪಾಸಣೆಯ ನಂತರ ಅದನ್ನು ಮೈಸೂರು ಮೃಗಾಲಯ ಅಥವಾ  ಬನ್ನೇರ್ ಘಟ್ಟ ದ ಉದ್ಯಾನವನಕ್ಕೆ ಸಾಗಿಸುವ ಸಾಧ್ಯತೆ ಇದೆ.ಈ ಹುಲಿ ನರಭಕ್ಷಕವಾಗಿದ್ದರಿಂದ ಇದನ್ನು ಮತ್ತೆ ಕಾಡಿಗೆ ಬಿಡುವುದಿಲ್ಲ.ಹುಲಿಯು ತನ್ನ ಜೀವಿತಾವದಿಯನ್ನು ಬಂದನದ ಒಳಗೆಯೇ ಕಳೆಯಬೇಕಿದೆ. ಹುಲಿಯನ್ನು ಕೊಲ್ಲದೆ ಕಷ್ಟ ಪಟ್ಟು  ಜೀವಂತವಾಗಿ ಸೆರೆ ಹಿಡಿದ ಅರಣ್ಯ ಇಲಾಖೆಯ ಪ್ರತಿಯೊಬ್ಬರಿಗೂ ಹಾಗು ಅವರಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮದೊಂದು ಸಲಾಂ.ಹುಲಿ ಸಂತಿತಿ ನಶಿಸುತ್ತಿರುವ ಈ ಸಮಯದಲ್ಲಿ ಒಂದು ಹುಲಿಯ ಜೀವವೂ ತುಂಬಾ ಮಹತ್ವದ್ದಾಗಿದೆ....

(updtae-06-12-2013) ಹುಲಿಯನ್ನು ಪರೀಕ್ಷೆಗೊಳಪಡಿಸಿದಾಗ ಅದರ ಬಾಯಿಯಲ್ಲಿ ಮುಳ್ಳುಹಂದಿಯ ಮುಳ್ಳುಗಳು ಚುಚ್ಚಿರುವುದು ತಿಳಿದುಬಂದಿದೆ.ಸುಮಾರು 12 ವರ್ಷ ಪ್ರಾಯದ ಈ ಹುಲಿ ಕಾಡಿನ ತನ್ನ ಸಹಜ ಪ್ರಾಣಿಗಳನ್ನು ಭೇಟೆಯಾಡುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು  ಮುಳ್ಳುಹಂದಿ ಮಾಡಿದ ಗಾಯಗಳಿಂದ ನರಳುತ್ತಿತ್ತು .ದುರ್ಬಲವಾಗಿದ್ದ ಇದ್ದು ಕಾಡಿನಂಚಿಗೆ ತಳ್ಳಲ್ಪಟ್ಟಾಗ ಈ ಘಟನೆಗಳು ಸಂಭವಿಸಿವೆ
courtesy-net

ಇನ್ನಾದರೂ ಇಂತಹ ಘಟನೆಗಳು ನಡೆಯದೇ ಇರಲಿ. ಕಾಡನ್ನು ಹೆಚ್ಚು ಬೆಳಿಸಿ ಹುಲಿಗಳೂ ಬೆಳೆಯಲು ಅವಕಾಶ ನೀಡಬೇಕಿದೆ.ಕಾಡಿನಲ್ಲಿ ಹಾಗು ಕಾಡಿನಂಚಿನ ಜನಗಳಿಗೆ ಈ ಬಗ್ಗೆ ತಿಳುವಳಿಕೆಯನ್ನು ನೀಡಿ ಇಂತಹ ಸಂಧರ್ಭಗಳನ್ನು ನಿಭಾಯಿಸುವ ಬಗ್ಗೆ ಅರಿವು ಮೂಡಿಸಬೇಕಿದೆ.ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರ ಜವಾಬ್ಧಾರಿಯೂ ಬಹು ದೊಡ್ಡದಿದೆ. ಇಲ್ಲಿಗೆ ಈ ಪೋಸ್ಟ್ ಅನ್ನು ಕೊನೆಗೊಳಿಸುತ್ತಿದ್ದೇನೆ

ಈ ವರ್ಷ ದೇಶದಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ-71 (ಕೃಪೆ-ಭಾರತೀಯ ವನ್ಯಜೀವಿ ಪ್ರಾಧಿಕಾರ)

-ಪ್ರಕೃತಿಯನ್ನು ರಕ್ಷಿಸಿ-

Sunday, December 1, 2013

-YELLOW STONE ನ್ಯಾಷನಲ್ ಪಾರ್ಕ್-
.YELLOW STONE ನ್ಯಾಷನಲ್ ಪಾರ್ಕ್ -ಇದು ಪ್ರಪಂಚದ ಪ್ರಥಮ ನ್ಯಾಷನಲ್ ಪಾರ್ಕ್
.ಇರುವ ಸ್ಥಳ-ಅಮೆರಿಕಾದ Wyoming ಎಂಭಲ್ಲಿ
.ಪರಿಸರ ಪ್ರೇಮಿಗಳಿಗಂತೂ ಈ ಪಾರ್ಕ್ ಸ್ವರ್ಗ
.ಇಲ್ಲಿನ ಒಟ್ಟು ವಿಸ್ತೀರ್ಣ-3,468 square miles
.lakes, canyons, rivers and mountain ranges ಎಲ್ಲವನ್ನು ಈ ನ್ಯಾಷನಲ್ ಪಾರ್ಕ್ ಒಳಗೊಂಡಿದೆ
.ಇಲ್ಲಿನ ಪ್ರಸಿದ್ದವಾದ LAKE -Yellowstone Lake
.ಪ್ರಪಂಚಕ್ಕೆ ಮಾರಕವಾಗಬಲ್ಲ supervolcano ಗಳು ಇಲ್ಲಿವೆ
.ಪ್ರಪಂಚದ ಅರ್ದದಷ್ಟು geothermal features ಗಳ ತಾಣ ಈ ನ್ಯಾಷನಲ್ ಪಾರ್ಕ್
.ನೂರಾರು ಪ್ರಭೇದದ ಸಸ್ತನಿಗಳು,ಪಕ್ಷಿಗಳು,fish and reptiles ಗಳ ಆವಾಸ ಸ್ಥಾನ ಈ ಪಾರ್ಕ್
.ವಿನಾಶದಂಚಿನಲ್ಲಿರುವ ಹಲವಾರು ಜೀವಿಗಳು ಇಲ್ಲಿ ಕಂಡುಬರುತ್ತವೆ
.ಪ್ರಾಣಿಗಳೇ ಅಲ್ಲದೆ ಸಾವಿರಾರು ಬಗೆಯ ಗಿಡ ಮರಗಳು ಇಲ್ಲಿವೆ
.ಇಲ್ಲಿನ ಎತ್ತರದ ಪಾಯಿಂಟ್ 11,358 ft / 3,462 m (Eagle Peak)
.ವಾರ್ಷಿಕ ಮಳೆಯ ಪ್ರಮಾಣ 26 cm ನಿಂದ 205 cm
.ಈ ಪಾರ್ಕ್ 5% ಜಾಗ ನೀರಿನಿಂದ,15% ಹುಲ್ಲುಗಾವಲಿನಿಂದ,80% ಕಾಡಿನಿಂದ ಆವೃತವಾಗಿದೆ
.ಇಲ್ಲಿ ದಾಖಲಾದ ಅತಿ ಅತಿ ಹೆಚ್ಚು ಉಷ್ಣಾಂಶ 37 C,ಅತೀ ಕಡಿಮೆ -54 C
.1,700 species of native vascular plants,More than 170 species of exotic (non-native) plants,186 species of lichens ಗಳು ಇಲ್ಲಿವೆ
.ಇಲ್ಲಿ ವರ್ಷಕ್ಕೆ 2000 ಭೂಕಂಪಗಳು ಸಂಭವಿಸುತ್ತವೆ
.ಈ ಪಾರ್ಕ್ ಒಂದರಲ್ಲೇ 290 ಜಲಪಾತಗಳಿವೆ
.ಈ ಪಾರ್ಕ್ ಗೆ 5 ಕಡೆಯಿಂದ ಪ್ರವೇಶವಿದೆ
.ಇಲ್ಲಿಗೆ ವರ್ಷಕ್ಕೆ 2000 ದಿಂದ - 2,838,233 ರಷ್ಟು ಪ್ರವಾಸಿಗರು ಭೇಟಿ ಕೊಡುತ್ತಾರೆ
.ಕಾಡ್ಗಿಚ್ಚು ಇಲ್ಲಿ ಪ್ರತಿ ವರ್ಷವೂ ಸಂಭವಿಸುತ್ತದೆ
.The Absaroka Range ಇದು ಈ ಪಾರ್ಕಿನ ಅತಿ ಎತ್ತರದ ಮೌಂಟೈನ್
.ಇದು YELLOW STONE ನ್ಯಾಷನಲ್ ಪಾರ್ಕಿನ ಕಿರು ಪರಿಚಯ..ನನ್ನ ಹತ್ತಿರ ಇಲ್ಲಿ ಬರೆಯಲು ಸಹಿತ ಆಗದ ಸಾವಿರಾರು ಪ್ರಕೃತಿ ವ್ಯವಿದ್ಯತೆಗಳಿಂದ ಕೂಡಿದ ಅದ್ಭುತ ಸ್ವರ್ಗ ಈ YELLOW STONE ನ್ಯಾಷನಲ್ ಪಾರ್ಕ್ ....
Bookmark and Share


-ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ-
.ಪ್ರಿಯ ಓದುಗ ಮಿತ್ರರೇ ಇದೇ ಪ್ರಥಮ ಬಾರಿಗೆ ನಾನು ಇಲ್ಲಿ ನನ್ನ ಪ್ರಾವಾಸದ ಅನುಭವ ಒಂದನ್ನು ವಿವರವಾಗಿ ಪೋಸ್ಟ್ ಮಾಡಿದ್ದೇನೆ

.ಇದು ಬಹಳ ಧೀರ್ಘವಾದ ಪೋಸ್ಟ್ ,ಪುರ್ಸೊತ್ ಮಾಡ್ಕೊಂಡು ಓದಿ

.ಈ ಪೋಸ್ಟ್ ನ TITLE ಸ್ವಲ್ಪ ವಿಚಿತ್ರ ಅಂತ ನಿಮಗನಿಸಬಹುದು.ನಮ್ಮ ಪ್ರವಾಸದ ಕತೆ ಕೇಳಿದ ಜನಗಳು ನಿಮಗೆ ಹುಚ್ಚು ಅಂತ ಹೇಳಿದ್ದರು so ನಾನು ಈ ಪೋಸ್ಟ್ title ಅನ್ನು ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ ಎಂದು ಬರೆದದ್ದು

.ನಾನು ಇಲ್ಲಿಯವರೆಗೆ ಪ್ರಕೃತಿಯ ಹಲವಾರು ಜಾಗಗಳಲ್ಲಿ ಸ್ನೇಹಿತರ ಜೊತೆ ಅಲೆದಾಡಿದ್ದೇನೆ.ಪ್ರತಿಯೊಂದು ಅಲೆದಾಟದಲ್ಲೂ ಒಂದು ಹೊಸ ಅನುಭವ.ಹಾಗಾಗಿಯೇ ಕಾಡು ಮೇಡು ಅಲೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ

.ಹೀಗೆ ಪ್ರಕೃತಿಯ ಸೌಂದರ್ಯ ಸವಿಯಲು ಹೋದ ಒಂದು ಪ್ರವಾಸದ ಅನುಭವ ನನ್ನ ಜೀವನದಲ್ಲಿ ಮರೆಯಲಾಗುವುದಿಲ್ಲ.ಅದನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.ಅದೂ ಪ್ರವಾಸ ಹೋದ ಬರೋಬ್ಬರಿ 1 ವರ್ಷದ ನಂತರ

.ಅದು 2009 ನವೆಂಬರ್ ನಾನಾಗ ಸಿಲಿಕಾನ್ ಸಿಟಿ ಯಲ್ಲಿದ್ದೆ.ಆ ನಗರದ ಜಂಜಾಟ ನೋಡಿ ನೋಡಿ ಮನಸ್ಸು ಬೇಸತ್ತಿತ್ತು.ಮನಸ್ಸು ಪ್ರಕೃತಿಯನ್ನು ಹಂಬಲಿಸುತ್ತಿತ್ತು .ಅದೇ ಸಮಯಕ್ಕೆ ಸರಿಯಾಗಿ ನನ್ನ ಆತ್ಮೀಯ ಸ್ನೇಹಿತ ರಾಜೇಶ್ ಕೂಡ ಎಲ್ಲಾದರು ಪ್ರವಾಸ ಹೋಗುವ ಬಗ್ಗೆ ವಿಷಯ ಎತ್ತಿದನು

.ಸರಿ ನನಗೂ ಬೇಕಾಗಿದ್ದು ಅದೇ.ಅವನು ಹಾಗೆ ಹೇಳಿದ ತಕ್ಷಣ ಅಂತರ್ಜಾಲದಲ್ಲಿ ಪ್ರಕೃತಿಯ ತಾಣಕ್ಕೆ ಹುಡುಕಾಟ ಆರಂಭಿಸಿದೆ but ನಮ್ಮ 2 ದಿನದ ಪ್ರವಾಸಕ್ಕೆ ತುಂಬಾ wild ಪ್ರದೇಶ ಯಾವುದೂ ಸಿಗಲಿಲ್ಲ

.ಇದರ ಮದ್ಯೆ ನನ್ನ ಗಮನ ಸೇಳದಿದ್ದು 'ಸಕಲೇಶಪುರ ಟು ಸುಬ್ರಮಣ್ಯ ಹಸಿರು ಹಾದಿ' ಇದನ್ನು ರಾಜೇಶ್ ಗೆ ಹೇಳಿದೆ .ಅವನೂ ಅದರ ಬಗ್ಗೆ ವಿಚಾರಿಸಿದ.ಆದರೆ ಈ place ಗೆ ಪ್ಯಾಕೇಜ್ trip ಗಳಿದ್ದು ಪ್ರದೇಶದ ಬಗ್ಗೆ ಹೆಚ್ಚಿನ ಹೊಸ ವಿವರಗಳು ಸಿಕ್ಕಲಿಲ್ಲ

.ಈ ಪ್ರದೇಶದ ಬಗ್ಗೆ ಒಂದು ಕಿರು ಪರಿಚಯ ನಿಮಗೆ ಮಾಡಿಕೊಡುತ್ತೇನೆ . ಸಕಲೇಶಪುರ ಟು ಸುಬ್ರಮಣ್ಯ ರೈಲ್ವೆ ಹಳಿಗಳ ನಡುವೆ ಇರುವ ಹಾದಿಯನ್ನೇ ಹಸಿರು ಹಾದಿ ಎಂದು ಕರೆಯುತ್ತಾರೆ .ಪ್ರಕೃತಿ ಇಲ್ಲಿ ಎಷ್ಟು ರುದ್ರ ರಮಣೀಯವಾಗಿ ಇದೆ ಅಂದರೆ ಅದನ್ನು ವರ್ಣಿಸಲಸಾದ್ಯ.ಹೀಗಾಗಿಯೇ ಇಲ್ಲಿ ವಾರಕ್ಕೆ 3 ದಿನ ಬೆಂಗಳೂರು ಟು ಮಂಗಳೂರು ರೈಲು ಹಗಲು ಸಂಚರಿಸುತ್ತದೆ .ಇಲ್ಲಿನ ಪ್ರಕೃತಿ ಆನಂದ ಸವಿಯಲ್ಲೆಂದೇ ಹಲವಾರು ಜನ ಈ ಹಗಲು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ .ಒಟ್ಟು 50 km ಗೂ ಹೆಚ್ಚು ಉದ್ದವಿರುವ ಈ ದಾರಿಯಲ್ಲಿ 50 ಕ್ಕೂ ಹೆಚ್ಚು ಸುರಂಗಗಳು 90 ಕ್ಕೂ ಹೆಚ್ಚು ಸೇತುವೆಗಳು ಕಂಡುಬರುತ್ತದೆ .ಅಷ್ಟೂ ಹಾದಿ ದಟ್ಟವಾದ ಕಾಡಿನಿಂದ ಕೂಡಿದೆ.ಒಟ್ಟಿನಲ್ಲಿ ಹೇಳಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಮಾಡಬೇಕಾದ journey ಇದು

.ಇಷ್ಟು ವಿವರಗಳನ್ನು ತಿಳಿದ ನಮಗೆ ಆ ಪ್ಲೇಸ್ ಬಗ್ಗೆ ಕೂತೂಹಲ ಹೆಚ್ಚಿತು.ಆದರೆ ನಾವು ಅಲ್ಲಿಗೆ ಹೋಗಬೇಕೋ ಅಥವಾ ಬಿಡಬೇಕೋ ಎಂಬ ನಿರ್ಧಾರಕ್ಕೆ ಬರಲಾಗಲಿಲ್ಲ

.ನಾವು 24 ನೇ ತಾರೀಖು ಎಲ್ಲಿಗಾದರೂ ಹೊರಡಲೇ ಬೇಕೆಂದು ನಿರ್ಧರಿಸಿದ್ದೆವು.ಆದರೆ 23 ರ ರಾತ್ರಿಯವರೆಗೂ ಎಲ್ಲಿಗೆ ಅಂತ ಗೊತ್ತಿರಲಿಲ್ಲ

.23 ರ ರಾತ್ರಿ 12 .30 (24 ) ಗೆ ರಾಜೇಶ್ ಕಾಲ್ ಮಾಡಿ journey ಪ್ಲೇಸ್ ಬಗ್ಗೆ ಕೇಳಿದ .ನಾನು ಗೊತ್ತಿಲ್ಲ ಅಂದೆ.ಕೊನೆಗೂ ಅದೇ 'ಹಸಿರು ಹಾದಿಗೆ' ಹೋಗುವುದೆಂದು ಡಿಸೈಡ್ ಮಾಡಿದೆವು .ನೋಡಿ ನಮ್ಮ ಹುಚ್ಚಾಟ ಹೇಗಿದೆ ಎಂದು place ಡಿಸೈಡ್ ಮಾಡಿದ್ದು ಮಧ್ಯ ರಾತ್ರಿ,ಹೋಗಬೇಕಗಿದ್ದು ಬೆಳಗ್ಗೆ 6 ಘಂಟೆಗೆ

.24 ರ ಬೆಳಿಗ್ಗೆ 5 .30 ಎದ್ದ ನಾನು ಕೇವಲ 2 ಜೊತೆ ಬಟ್ಟೆಯೊಂದಿಗೆ 7 ಘಂಟೆಗೆ ಕೆಂಪೇಗೌಡ ಬಸ್ ಸ್ಟಾಪ್ ನಲ್ಲಿದ್ದೆ .ರಾಜೇಶ್ ಕೂಡ ಬಂದಿದ್ದ .ಅವನು ಕೂಡ ಒಂದು ಚಿಕ್ಕ ಬ್ಯಾಗ್ ತಂದಿದ್ದ .ಅಲ್ಲಿ ತಿಂಡಿ ಮುಗಿಸಿ ಸಕಲೇಶಪುರ ಹೋಗುವ ರಾಜ್ಯ ರಸ್ತೆ ಸಾರಿಗೆ ರಥವೇರಿ ಕುಳಿತೆವು

.ಮಧ್ಯಾನ್ಹ ಸರಿಸುಮಾರು 3 ಘಂಟೆಗೆ ನಾವು ಸಕ್ಲೇಶ್ ಪುರದಲ್ಲಿ ಇದ್ದೆವು.ಅಲ್ಲಿ ಊಟ ಮುಗಿಸಿ ನಂತರದ ನಮ್ಮ ಧೀರ್ಘ ಪ್ರಯಾಣಕ್ಕೆ ಒಂದಿಷ್ಟು ಹಣ್ಣು ಹಂಪಲು,ಬ್ರೆಡ್ ಖರೀದಿ ಮಾಡಿದೆವು .ಈಗ ನಮ್ಮ ಸರಕು ಸಾಮಗ್ರಿಗಳ ತೂಕ ಇನ್ನೂ ಹೆಚ್ಚಾಯಿತು

.ಒಂದು ಅದ್ಭುತ ಅನುಭವದ ನಿರೀಕ್ಷೆಯಲ್ಲಿ ಆಟೋ ಹತ್ತಿ ಸಕಲೇಶಪುರದ ರೈಲ್ವೆ ನಿಲ್ದಾಣಕ್ಕೆ ಬಂದೆವು


.ಒಂದು ದೊಡ್ಡ ಪೆಟ್ರೋಲ್ ಸರಕು ರೈಲು ಗಾಡಿ ಆ ನಿಲ್ದಾಣದಲ್ಲಿತ್ತು .ಸಂಜೆ 4 .30 ರ ಸಮಯ ಸಕಲೇಶಪುರದ ರೈಲ್ವೆ ನಿಲ್ದಾಣದಿಂದ ನಮ್ಮ ಮಹಾಯಾನ ಆರಂಭಿಸಿದೆವು .ನಮ್ಮ ಇವತ್ತಿನ ಗುರಿ 10 ನಡೆದು ಮುಂದಿನ ಧೋಣಿಗಾಲ್ ಎಂಬ ರೈಲ್ವೆ ಸ್ಟೇಷನ್ ತಲುಪುವುದು
.ರೈಲ್ವೆ track ಮೇಲೆ ನಡೆಯುವುದು ಒಂದು ತರ ಹಿಂಸೆಯ ಕೆಲಸ,ಜಲ್ಲಿ ಕಲ್ಲುಗಳು ಕಾಲನ್ನು ಮುಂದಕ್ಕೆ ಇಡಲು ಬಿಡುವುದೇ ಇಲ್ಲ
.ಇಲ್ಲಿ ಸಂಜೆಯ ಸಮಯ ಮನಸ್ಸಿಗೆ ಮುದ ನೀಡುತಿತ್ತು .ನಾಳೆಯ ಪ್ರಯಾಣ ನಮಗೆ ಇಂದು ನಡೆಯುವ ಉತ್ಸಾಹ ತಂದು ಕೊಟ್ಟಿತ್ತು

.ಸುಮಾರು ಧೂರ ನಡೆದಿದ್ದೆವು .ಆಗ ನಮಗೆ ಪ್ರಥಮವಾಗಿ ಈ ದಾರಿಯಲ್ಲಿ ಒಂದು ರೈಲಿನ ಕೂಗು ಕೇಳಿತು.ತಕ್ಷಣ ಪಕ್ಕದ ಸಣ್ಣ ಹೊಂಡಕ್ಕೆ jump ಮಾಡಿ ರೈಲನ್ನು ನೋಡಲು ಕಾತುರರಾಗಿ ನಿಂತೆವು .ನಾನು ಆಗಲೇ ಹೇಳಿದ ಸಕಲೇಶಪುರದ ನಿಲ್ದಾಣದಲ್ಲಿ ನಿಂತಿದ್ದ ಪೆಟ್ರೋಲ್ ಸರಕು ರೈಲು ಇದು .ಈ ರೈಲನ್ನು ನೋಡಿದ ನಾವು ಒಂದು ಕ್ಷಣ ಮುಖ ಮುಖ ನೋಡಿಕೊಂಡೆವು
.ಸಾಧಾರಣವಾಗಿ passanger ರೈಲು ನೋಡಿದ ನಮಗೆ ಈ ಗೂಡ್ಸ್ ರೈಲು ಆಶ್ಚರ್ಯ ಉಂಟು ಮಾಡಿತು .ಸುಮಾರು 3 ನಿಮಿಷಗಳ ಕಾಲ ಈ ರೈಲು ನಮ್ಮ ಮುಂದೆ ಚಲಿಸುತ್ತಲೇ ಇತ್ತು.ಅಷ್ಟು ದೊಡ್ಡ ರೈಲು ಗಾಡಿ ಇದು .ಇದನ್ನು ನೋಡಿಯೇ ನಮಗೆ ದಿಗಿಲು ಶುರುವಾಯಿತು.ವಾರಕ್ಕೆ 3 ರೈಲು ಹಗಲಿನಲ್ಲಿ ಇಲ್ಲಿ ಸಂಚರಿಸುತ್ತದೆ ಎಂಬ ನಡುವೆ ಗೂಡ್ಸ್ ರೈಲುಗಳ ಬಗ್ಗೆ ನಾವು ಮರೆತಿದ್ದೆವು

.ನಾನು ಏಕೆ ಹೇಳುತ್ತಿದ್ದೇನೆ ಅಂದರೆ ಇಲ್ಲಿ ಗೂಡ್ಸ್ ರೈಲುಗಳಿಗೆ ಸಮಯವಿರುವುದಿಲ್ಲ .ಹೆಚ್ಚಿನ ಗೂಡ್ಸ್ ರೈಲುಗಳು ಈ ಭಾಗದಲ್ಲಿ ಸಂಚರಿಸುತ್ತವೆ .ಸೇತುವೆಗಳು ಸುರಂಗಗಳು ಇಲೆಲ್ಲಾ ನಾವು ಅತ್ಯಂತ ಹುಷಾರಾಗಿ ನಡೆಯಬೇಕಿತ್ತು .ಅಕಸ್ಮಾತ್ ಸೇತುವೆಯ ಮದ್ಯದಲ್ಲೋ,ಸುರಂಗದ ಒಳಗೊ ನಾವು ನಡೆಯಬೇಕಾದರೆ ಈ ಗೂಡ್ಸ್ ರೈಲುಗಳು ಬಂದರೆ ನಮ್ಮ ಕತೆ ಮುಗಿಯಿತು

.ಇದನ್ನೇ ನೆನೆಸಿಕೊಂಡು ನಡೆಯುತ್ತಿದ್ದ ನಮ್ಮ ಗಮನ ಸೂರ್ಯನ ಕಡೆ ಹೋಯಿತು.ಸೂರ್ಯ ದಿಗಂತದಲ್ಲಿ duty ಮುಗಿಸಿ ಮನೆಗೆ ಹೊರಟಿದ್ದ .ಕತ್ತಲು ಆವರಿಸಲಾರಂಭಿಸಿತು .ನಾವಿನ್ನೂ 4 ,5 km ನಡೆಯಬೇಕಿತ್ತು.ಮನಸ್ಸಿನ ಒಂದು ಮೂಲೆಯಲ್ಲಿ ದಿಗಿಲು ಶುರುವಾಯಿತು

.ಇಲ್ಲಿ ಒಂದು ವಿಷಯವನ್ನು ನಾನು ನಿಮಗೆ ಹೇಳಲೇ ಬೇಕು .ನಾವು ಎಷ್ಟು ಬೇಜವಾಬ್ಧಾರಿಯ ಮನುಷ್ಯರು ಅಂದರೆ ನಮ್ಮಿಬ್ಬರ ಬಳಿಯಲ್ಲೂ (ನನ್ನ ಹತ್ತಿರ ಮಾತ್ರ ) ಮೊಬೈಲ್ ಬೆಳಕು ಬಿಟ್ಟರೆ ಬೇರೆ ಟಾರ್ಚ್ ಇರಲಿಲ್ಲ

.ನನ್ನ ಮೊಬೈಲ್ ಬೆಳಕಿನಲ್ಲಿ ಎಡವುತ್ತಾ ಬೀಳುತ್ತಾ ಬೇಗ ಬೇಗ ಹೆಜ್ಜೆ ಹಾಕಿದೆವು .ಸುತ್ತ ಮುತ್ತಲೂ ಮನುಷ್ಯರ ಸುಳಿವಿಲ್ಲ ,ದಟ್ಟವಾದ ಕಾಡು ಅದರ ಮಧ್ಯ ಎಲ್ಲಿ ಶಬ್ದ ಕೇಳಿದರೂ ರೈಲು ಬಂದಂತೆ ಅನ್ನಿಸುವುದು.ಒಟ್ಟಿನಲ್ಲಿ ಹೊಸ ಹೊಸ ಅನುಭವಗಳನ್ನು ಅನುಭವಿಸುತ್ತಾ ನಮ್ಮ destination ಪಾಯಿಂಟ್ ಬೇಗ ಸಿಗಲೆಂದು ಆಶಿಸುತ್ತಾ ಹೆಜ್ಜೆ ಹಾಕಿದೆವು

.ಅಂತು ಇನ್ನೇನು ದೋಣಿಗಾಲ್ ನಿಲ್ದಾಣ ಹತ್ತಿರ ಇದೆ ಅನ್ನುವಷ್ಟರಲ್ಲಿ ಒಂದು ಸಣ್ಣ ಸೇತುವೆ ಇದಿರಾಯ್ತು .ಆ ಸೇತುವೆಯ ಮೇಲೆ ನಡೆಯುವಾಗಲೇ ನಮಗೆ ಮುಂದೆ ಇರುವ ಕಷ್ಟಗಳ ಅರಿವಾಗಿದ್ದು .ಕೆಳೆಗೆ ಪ್ರಪಾತ ಅಕ್ಕ ಪಕ್ಕದಲ್ಲಿ ನಿಲ್ಲಲು ಸರಿಯಾದ ಸ್ಥಳವಿಲ್ಲ .ಕಾಲು ಸ್ಲಿಪ್ ಆದರೆ ನಮ್ಮ ಜೀವ ಗೋವಿಂದ.ಅದರ ಮದ್ಯೆ ರೈಲು ಭೀತಿ .ಒಟ್ಟಿನಲ್ಲಿ ಆದದ್ದಾಗಲಿ ಎಂದು ನಡೆದು ಮುಂದೆ ಸಾಗಿದೆವು

.ಅಂತೂ ಇಂತೂ ದೋಣಿಗಾಲ್ ನಿಲ್ದಾಣ ತಲುಪಿದೆವು .ಸಮಯ ರಾತ್ರಿ 7 .30 ಆಗಿತ್ತು

.ಅದು ಒಂದು ಪುಟ್ಟ ರೈಲ್ವೆ ನಿಲ್ದಾಣ.ಅಲ್ಲಿ ಇಬ್ಬರು ಅಧಿಕಾರಿಗಳು ಬಿಟ್ಟರೆ ಭೇರಾರು ಇರಲಿಲ್ಲ.ಅವರೊಂದಿಗೆ ಮಾತನಾಡಿ ನಾವು ಅಲ್ಲೇ ಸ್ವಲ್ಪ ತಗ್ಗಿನಲ್ಲಿ ಇದ್ದ ಒಂದು ರಸ್ತೆಯ ಮೂಲಕ ಕೆಳಗೆ ಇದ್ದ main ರೋಡ್ ಗೆ ಇಳಿದು ಅಲ್ಲಿದ್ದ ಒಂದು ಚಿಕ್ಕ ಅಂಗಡಿಯಲ್ಲಿ ಚಹಾ ಕೊಡಿದು ಪುನಃ ನಿಲ್ದಾಣಕ್ಕೆ ಬಂದು ಅಲ್ಲಿದ್ದ ಒಬ್ಬ ಹೊರ ರಾಜ್ಯದ ಅಧಿಕಾರಿಯ ಹತ್ತಿರ ಹರಟುತ್ತಾ ಕುಳಿತೆವು

.ಹೊಟ್ಟೆ ಚುರುಗುಡಲು ಆರಂಭಿಸಿದ ನಂತರ ನಾವು ಅಲ್ಲೇ ಇದ್ದ ಒಂದು ಚಿಕ್ಕ ಫಾಲ್ಸ್ ಹತ್ತಿರ ಹೋಗಿ ಮಧ್ಯಾನ್ಹ ಸಕಲೇಶಪುರದಿಂದ ತಂದ ಪಲಾವ್ ತಿಂದೆವು .ಅಲ್ಲೇ ಬಾಲ ಅಲ್ಲಾಡಿಸುತ್ತ ನಿಂತಿದ್ದ ಎರಡು ನಾಯಿಗಳಿಗೂ ಸ್ವಲ್ಪ ಕೊಟ್ಟು ಊಟದ ಕಾರ್ಯ ಮುಗಿಸಿದೆವು


.ಆ ನಿಲ್ದಾಣದಲ್ಲಿದ್ದ ಕಲ್ಲು ಬೆಂಚುಗಳ ಮೇಲೆ ನಾವು ಈ ರಾತ್ರಿ ಕಳೆಯಬೇಕಿತ್ತು .ಊಟದ ನಂತರ ಅಲೆಲ್ಲಾ ಸ್ವಲ್ಪ ಅಲೆದಾಡಿ ಮಲಗಲು ಹೊರಟೆವು.ಆಗ ಸಮಯ ರಾತ್ರಿ 9 .30

.ಚಳಿ ತನ್ನ ಉಗ್ರ ಸ್ವರೂಪವನ್ನು ನಿಧಾನವಾಗಿ ಪ್ರಾರಂಭಿಸಿತು.ರಾಜೇಶ್ ಒಂದು ಬೆಡ್ ಶೀಟ್ ತಂದಿದ್ದ ,ಅದನ್ನು ಹೊದ್ದು ನಿದ್ರೆಗೆ ಜಾರಿದ .ನಾನು ಬೆಡ್ ಶೀಟ್ ತಂದಿರಲಿಲ್ಲ .ನನ್ನ ಹತ್ತಿರ ಇದ್ದ towel ಹೊದ್ದು ಮಲಗಿದೆ

.ಆದರೆ ಚಳಿ ನನ್ನನ್ನು ಮಲಗಲು ಬಿಡಲಿಲ್ಲ .ಕಪ್ಪು ಕತ್ತಲು ,ಅಲ್ಲೇ ಬೀಳುತ್ತಿದ್ದ ಚಿಕ್ಕಜಲಪಾತದ ಸದ್ದು,pin drop silence ,ಪ್ರಾಣ ಹಿಂಡುವ ಚಳಿ.ನಾನು ಎಷ್ಟೇ ಪ್ರಯತ್ನ ಪಟ್ಟರೂ ನಿದ್ರಾ ದೇವಿ ಒಲಿಯಲಿಲ್ಲ .ಸರಿ ಎಂದು ಚಳಿಯಲ್ಲೇ ನಡುಗುತ್ತ ಮೊಬೈಲಿನಲ್ಲಿ ಹಾಡು ಕೇಳುತ್ತ ಕುಳಿತೆ

.ನನಗೆ ಮ್ಯೂಸಿಕ್ ಅಂದ್ರೆ ಪ್ರಾಣ.ನಾನು ಈಗಾಗಲೇ 18 headset ಹಾಳು ಮಾಡಿಕೊಂಡಿದ್ದೇನೆ.19 ನೆಯದನ್ನು ಹೊಸದಾಗಿ ಕೊಂಡು ತಂದಿದ್ದೆ ಇಲ್ಲಿಗೆ .ರಾತ್ರಿ 12 ರ ವರೆಗೆ ಹಾಡು ಕೇಳಿದ ನಾನು ಎದ್ದು ಅಲೆಲ್ಲಾ ಒಂದು ಸುತ್ತು ತಿರುಗಾಡಿದೆ

.ಮತ್ತೆ 12 .30 ಕ್ಕೆ ಮಲಗಿದಾಗ ನಿದ್ರೆ ಹತ್ತಿತು.ಮಲಗಿದ ಅರ್ಧ ಘಂಟೆಯಲ್ಲೇ ಮತ್ತೆ ಎಚ್ಚರವಾಯಿತು.ಮತ್ತೆ ನಿದ್ರೆ ಬರಲೇ ಇಲ್ಲ ಸರಿ ಹಾಡು ಕೇಳೋಣ ಎಂದು headset ಹುಡುಕುತ್ತೇನೆ ಅದೂ ಇಲ್ಲ.ಆಶ್ಚರ್ಯಗೊಂಡು ಅಲೆಲ್ಲಾ ಹುಡುಕಿ ನಿಲ್ದಾಣದ ಬಾಗಿಲಿಗೆ ಬರುತ್ತೇನೆ ಅಲ್ಲಿ ನಾನು ಆಗಲೇ ಹೇಳಿದ ಒಂದು ನಾಯಿ ನನ್ನ headset ಅನ್ನು ಸಂಪೂರ್ಣ ತಿಂದು ಹಾಕಿದೆ .ಎಲಾ ಕಂತ್ರಿ ನಾಯಿ ಅನ್ನ ಹಾಕಿದ ಮನೆಗೆ ಕನ್ನ ಎಂದುಕೊಂಡು 19 ನೇ headset ಹಾಳಾದ ಬೇಸರದಲ್ಲಿ ಮತ್ತೆ ಬಂದು ಕಲ್ಲು ಬೆಂಚಿನ ಮೇಲೆ ಕುಳಿತೆ


.ರಾತ್ರಿಯೆಲ್ಲ ಹೀಗೆ ಕುಳಿತೇ ಇರಬೇಕು ಎಂಬುದು ಅಲ್ಲಿನ ಭೀಕರ ಚಳಿ ನೋಡಿ ನನಗೆ ಗೊತ್ತಾಯಿತು .ರಾಜೇಶ್ ಒಳ್ಳೆ ನಿದ್ರೆ ಹೋಗಿದ್ದ .ಸುಮಾರು 1 .30 ರ ನಂತರ ಒಂದು passenger ರೈಲು ಅಲ್ಲಿ ಉಸಿರು ಎಳೆದುಕೊಳ್ಳುತ್ತಾ ಹೋಯಿತು

.ಹೀಗೆ ಪೂರ್ತಿ ರಾತ್ರಿ ನಾನು ಅಲ್ಲಿ ನಿದ್ದೆ ಇಲ್ಲದೆ ಕಳೆದೆ .ಒಂತಾರ ಗಮ್ಮತ್ ಅನುಭವ.ಬೆಳಿಗ್ಗೆ ಬೆಳಕು ಹರಿದ ಮೇಲೆ ರಾಜೇಶ್ ನನ್ನು ಎಬ್ಭಿಸಿ ಹೊರಡಲು ಹೇಳಿದೆ
.falls ಹತ್ತಿರ ಹೋಗಿ freash ಆಗಿ 6 .30 ಕ್ಕೆ ದೋಣಿಗಾಲ್ ನಿಲ್ದಾಣ ಬಿಟ್ಟೆವು
.ಇಲ್ಲಿನ ಮುಂದಿನ ದಾರಿ ನಿಜಕ್ಕೂ ಸ್ವರ್ಗ ಮಾಯವಾಗಿದೆ .ಈ ದಾರಿ ನನ್ನ ನಿದ್ರೆ ಇಲ್ಲದ ಆಯಾಸವನ್ನು ಸಂಪೂರ್ಣ ಮರೆಯಿಸಿತ್ತು

.ಕಣ್ಮನ ತಣಿಸುವ ಪ್ರಕೃತಿ ,ಬೆಳಗಿನ ಆ ರಮ್ಯ ಮನೋಹರ ವಾತಾವರಣ ,ಅಲ್ಲಲ್ಲಿ ಪ್ರತ್ಯಕ್ಷವಾಗುವ ಕೆಂಪು ಹೊಳೆ ಹಳ್ಳ ,ಅಬ್ಬ ನಿಜಕ್ಕೂ ಅದೊಂದೋ ವರ್ಣನಾತೀತ ಆನಂದ.ಈ ಮಧ್ಯೆ ನಾವು ಅಲ್ಲೊಂದು ಕಡೆ ಸ್ನಾನ ಮಾಡಲು ನಿರ್ಧರಿಸಿದೆವು ,ಆದರೆ ನಮ್ಮ ಮುಂದೆ ಇನ್ನೂ 18 km ಪ್ರಯಾಣ ಬಾಕಿ ಇತ್ತು .ಅದೂ ಅಲ್ಲದೆ ಅಂದು ಮಧ್ಯಾನ್ಹ ಬೆಂಗಳೂರಿನಿಂದ ಒಂದು passenger ಟ್ರೈನ್ ನಮ್ಮ ಮುಂದಿನ ಸ್ಟೇಷನ್ ಗೆ ಬಂದು ಮಂಗಳೂರಿಗೆ ಹೊರಡುತಿತ್ತು.ನಾವು ಮಧ್ಯಾನ್ಹ ದ ಒಳಗೆ ಆ ಸ್ಟೇಷನ್ ನಲ್ಲಿ ಇರಲೇ ಬೇಕಾಗಿತ್ತು .ರಾಜೇಶ್ ಅಂದು ರಾತ್ರಿಯೇ ಬೆಂಗಳೂರಿಗೆ ಹೊರಡಬೇಕಿತ್ತು ,ನಮಗೆ ಆ passenger ಟ್ರೈನ್ ಮಿಸ್ ಆದರೆ ಬಹಳ ಕಷ್ಟದಲ್ಲಿ ಬೀಳುತ್ತಿದೆವು .ಸೊ ಸ್ನಾನದ plan ಕೈಬಿಟ್ಟು ಮುಂದೆ ನಡೆಯಲು ಶುರು ಮಾಡಿದೆವು

.ನಮ್ಮ ಸವಾಲುಗಳು ಆಗ ಪ್ರಾರಂಭವಾದವು .ಸೇತುವೆಗಳು ಒಂದರ ಹಿಂದೆ ಒಂದು ಬರಲಾರಂಭಿಸಿದವು.ಕೆಳಗಿನ ಪ್ರಪಾತವನ್ನು ನೋಡುತ್ತಾ ,ರೈಲು ಬಾರದಿರಲೆಂದು ದೇವರಲ್ಲಿ ಬೇಡುತ್ತಾ ಒಂದೊಂದೇ ಸೇತುವೆಗಳನ್ನು ದಾಟಿದೆವು

.ಮದ್ಯ ಮದ್ಯ ಅಲಲ್ಲಿ ರೈಲು ಹಳಿ ರಿಪೇರಿ ಮಾಡುವ ಕೆಲಸಗಾರರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು.ಈ ಮಧ್ಯೆ ನಮಗೆ ಒಂದು ಗೂಡ್ಸ್ ರೈಲು ಎದಿರಾಯ್ತು.ಸದ್ಯ ಆಗ ನಾವು ಸೇತುವೆ ಅಥವಾ ಸುರಂಗದ ಸಮೀಪ ಇರಲಿಲ್ಲ
 .ಪ್ರಕೃತಿಯ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತಿರುವಾಗ ಇದಿರಾಯ್ತು ಒಂದು ಸುರಂಗ.ಇದು ಅಷ್ಟೇನೂ ದೊಡ್ಡದಾಗಿರಲಿಲ್ಲ .ಇದರ ಒಳಗೆ ಒಂದು ಕಡೆ ಬಲ ಭಾಗಕ್ಕೆ open ಇದೆ. ಇಲ್ಲಿ ಹೊರ ಬಂದಾಗ ನಮ್ಮ ಕಣ್ಣಿಗೆ ಕೆಂಪು ಹೊಳೆ ಒಂದು ಕಡೆ ರುದ್ರ ರಮಣೀಯವಾಗಿ ಜಲಪಾತವಾಗಿ ಬಿಳುತ್ತಿರುವುದು ಕಣ್ಣಿಗೆ ಕಂಡಿತು .ಇದನ್ನು ನೋಡಿ ಎಂಜಾಯ್ ಮಾಡಿ ಮುಂದೆ ಹೊರಟೆವು

.ಇದಾದ ನಂತರ ಒಂದರ ಮೇಲೊಂದು ಸುರಂಗಗಳು ನಮಗೆ ಎದುರಾದವು.ಕೆಲವೆಡೆ ಸೇತುವೆ ಮುಗಿದ ನಂತರವೇ ಸುರಂಗ

.ಈ ಸುರಂಗಗಳ ಬಗ್ಗೆ ನಿಮಗೆ ಹೇಳಲೇ ಬೇಕು .ಪ್ರತೀ ಸುರಂಗದ ಭಾಗಿಲಿನಲ್ಲಿ ಅದರ ಒಟ್ಟು ಉದ್ದವನ್ನು ಬರೆದಿರುತ್ತಾರೆ .ಇನ್ನು ಇದರ ಒಳಗೆ ಕಪ್ಪು ಕತ್ತಲು.ಒಳಗಿನ ಗೋಡೆ ಗಳು ನೋಡಲು ಭಯಾನಕವಾಗಿದ್ದು ಎಲ್ಲಿ ಹಾವುಗಳಿರುತ್ತವೆಯೂ ಎನ್ನುವ ಭಯ ಇನ್ನೂ ಅಕ್ಕ ಪಕ್ಕ ನಿಲ್ಲಲು ಕೆಲವು ಸುರಂಗಗಳಲ್ಲಿ ಜಾಗ ಇದ್ದರೆ ಇನ್ನೂ ಕೆಲವಲ್ಲಿ ಇಲ್ಲ .ಕೆಲವು ಅರ್ಧ ಕಿಲೂಮೀಟರ್ ನಿಂದ 1 ಕಿಲೂಮೀಟರ್ ನಷ್ಟು ಇರುತ್ತವೆ .ಇಲ್ಲಿ ಬೆಳಕಿಲ್ಲದೆ ನಡೆಯುವುದು ಬಹಳ ಕಷ್ಟ

.ನಾವು ಇಂತಹ ಸುರಂಗಗಳಲ್ಲಿ ಕೇವಲ ಮೊಬೈಲ್ ಬೆಳಕಿನಲ್ಲಿ ಜೀವ ಭಯದಿಂದ ನಡೆದಿದ್ದೇವೆ .ಆ ಕತ್ತಲಲ್ಲಿ ನಡೆಯುತ್ತಿರಬೇಕಾದರೆ ನಿಜವಾಗಿಯೂ ಅದೊಂದು ಭಯಂಕರ ಅನುಭವ .ಅದೂ ಅಲ್ಲದೇ ಅಲ್ಲಿ ಅಕಸ್ಮಾತ್ ರೈಲು ಬಂದರೆ ನಮ್ಮ ಗತಿ ಪಿಕ್ಚರ್ .ಕೆಲವೆಡೆ ಅಕ್ಕ ಪಕ್ಕ ನಿಲ್ಲಬಹುದಾದರು ಗೂಡ್ಸ್ ರೈಲುಗಳ ಧೂಳು ಹಾಗು ಶಬ್ದಕ್ಕೆ ಕತೆ ಏನಾಗುತ್ತದೋ ಹೇಳತೀರದು

.ಅಂತೂ ಹಲವು ಸುರಂಗಗಳಲ್ಲಿ ಕ್ರಮಿಸಿದ ನಂತರ ಒಂದು ಸುಂದರ ಸ್ಥಳದಲ್ಲಿ ಬ್ರೇಕ್ ತೆಗೆದುಕೊಂಡೆವು .ರಾಜೇಶ್ ಹಣ್ಣು ಹಂಪಲು ಕೊಟ್ಟನು .ನನಗೆ ರಾತ್ರಿ ನಿದ್ದೆ ಬಿಟ್ಟಿದ್ದರ ಪರಿಣಾಮ ಯಾಕೊ ಹಸಿವು ಆಗುತ್ತಿರಲಿಲ್ಲ

.ನಡೆಯುತ್ತಾ ಹಲವಾರು ಘಟನೆಗಳನ್ನು ನೋಡಿದೆವು .ಒಂದೆಡೆ ಆನೆ ಲದ್ದಿ ,ಆಗಷ್ಟೆ ಹಳಿ ದಾಟಲು ಹೋಗಿ ರೈಲಿನ ಚಕ್ರಕ್ಕೆ ಸಿಕ್ಕಿ ಸತ್ತ ಹಾವು,ಇನ್ನೊಂದೆರಡು ಚಿಕ್ಕ ಚಿಕ್ಕ ಹಾವಿನ ಜಾತಿಯ ಪ್ರಾಣಿಗಳು ಹೀಗೆ ನೋಡುತ್ತಾ ನಡೆದೂ ನಡೆದೂ ಅರ್ಧ ದಾರಿ ಕ್ರಮಿಸಿದೆವು


.ಬಿಸಿಲು ಹೆಚ್ಚಾಗ ತೊಡಗಿತು,ಪ್ರಯಾಣ ದುಸ್ತರವಾಗಲಾರಂಭಿಸಿತು.ನಡೆ ನಿಧಾನವಾಯ್ತು .ಘಂಟೆ ಸದ್ದಿಲದೆ ಸರಿಯುತ್ತಿತ್ತು.ಆಗಲೇ 11 ಘಂಟೆ ಆಗಿ ಹೋಗಿತ್ತು .ನಾವು ಬೇಗ ಬೇಗ ನಡೆಯಬೇಕಿತ್ತು ಉಳಿದ 2 ಘಂಟೆಯಲ್ಲಿ ನಾವು ಯಡಕುಮರಿ ಸ್ಟೇಷನ್ ತಲುಪಬೇಕಿತ್ತು

.ಹೀಗೆ ನಡೆಯುತ್ತಿರಬೇಕಾದರೆ ಸುಮಾರು 11 .40 ರ ಹೊತ್ತಿಗೆ ಒಂದು 410 ಮೀಟರ್ ಉದ್ದದ ಒಂದು ಸುರಂಗ ಎದುರಾಯ್ತು

.ಇದರ ಎದುರಲ್ಲಿ ಒಂದು ಸಿಗ್ನಲ್ ಲೈಟ್ ಇತ್ತು .ಇದು ಹಸಿರು ದೀಪ ತೋರಿಸುತಿತ್ತು .ಆದ್ದರಿಂದ ನಾವು ಇದನ್ನು ದಾಟಲು ಮುಂದಾದೆವು

.ಈ ಸುರಂಗದ ಒಳಗೆ ಅಕ್ಕ ಪಕ್ಕ ನಿಲ್ಲಲು ಜಾಗ ಇರಲಿಲ್ಲ .ಇದ್ದ ಒಂದು ಚಿಕ್ಕ ಜಾಗದಲ್ಲಿ ಪೂರ್ತಿ ನೀರು ತುಂಬಿಕೊಂಡು ಕೆಸರಾಗಿತ್ತು .ನಾವು ಇದರ ಒಳಗೆ ಸ್ವಲ್ಪ ದೂರ ನಡೆದಿದ್ದೆವು.ಇದ್ದಕ್ಕಿದಂತೆ ಎದುರಿನ ಕತ್ತಲ ಆಚೆಯಿಂದ ರೈಲು ಬರುವ ಸದ್ದಾಯಿತು .ನಮ್ಮ ಜೀವ ಬಾಯಿಗೆ ಬಂದಿತ್ತು .ತಕ್ಷಣ ಬಂದ ದಾರಿಯಲ್ಲೇ ಹಿಂತಿರುಗಿ ಓಡಲು ಶುರು ಮಾಡಿದೆವು.ಸದ್ದು ಹತ್ತಿರಾಗುತ್ತಲೇ ಇತ್ತು .ಮುಗ್ಗರಿಸಿ ಓಡಿ ಅಂತೂ ಇಂತೂ ಸುರಂಗದ ಬಾಯಿಗೆ ಬಂದು ನಾನು ಎಡ ಭಾಗದಲ್ಲಿದ್ದ ಚಿಕ್ಕ ಜಾಗಕ್ಕೆ ನೆಗೆದೆ .ಅಲ್ಲಿ ಕೆಸರಿದೆ ಎಂದು ನನಗೆ ಗೊತ್ತಿರಲಿಲ್ಲ .ನನ್ನ ಕಾಲು ಅರ್ಧ ಭಾಗ ಅಲ್ಲಿ ಹೂತು ಹೋಯಿತು .ರಾಜೇಶ್ ಬಲ ಭಾಗಕ್ಕೆ jump ಮಾಡಿ ಸೇಫ್ ಆದ.ನಾವು ಹೊರ ಬಂದ ಕೆಲವೇ ಸೆಕೆಂಡ್ ಗಳಲ್ಲಿ ಕಿವಿಗೆ ಕೇಳುತ್ತಿದ್ದ ಸದ್ದು ಮಾಡುತಿದ್ದ ವಸ್ತು ಕಣ್ಣಿಗೆ ಕಂಡಿತು .ಅದೊಂದು ಚಿಕ್ಕ traly 4 ,5 ಜನರನ್ನು ಕೂರಿಸಿಕೊಂಡು ಶರವೇಗದಲ್ಲಿ ಸಾಗುತಿತ್ತು

.ಮುಂದಿನ 10 ನಿಮಿಷಗಳು ಆ traly ಗೆ ಶಪಿಸುತ್ತಾ ನಾನು ಅಲ್ಲೇ ಇದ್ದ ಚಿಕ್ಕ ತೊರೆಯಲ್ಲಿ ಕಾಲು ತೊಳೆದುಕೊಂಡೆ .ಇನ್ನೇನು ಮತ್ತೆ ಸುರಂಗ ದಾಟಬೇಕು ಎನ್ನುವಷ್ಟರಲ್ಲಿ ಅಲ್ಲಿದ ಸಿಗ್ನಲ್ ದೀಪ ಕೆಂಪು ಬಣ್ಣಕ್ಕೆ ತಿರುಗಿತು

.ರೈಲು ಬರುತ್ತಿದೆ ಎಂದು ನಮಗೆ ಗೊತ್ತಾಯಿತು.ಅಲ್ಲೇ 10 ನಿಮಿಷ ಕೂತೆವು ಅಷ್ಟರಲ್ಲೇ ದೂರದಲ್ಲಿ ರೈಲು ಕೂಗುವ ಸದ್ದು ಕೇಳಿತು.ಅದೊಂದು ಬಾರಿ ದೊಡ್ಡದಾದ ಗೂಡ್ಸ್ ರೈಲು .ಸುತ್ತ ಮುತ್ತ ಧೂಳು ಹಾರಿಸುತ್ತ ಬರುತಿತ್ತು

.ಅದು ಹೋದ ನಂತರ ಸುರಂಗದ ಒಳಗೆ ಹೋದೆವು .ಅಲ್ಲಿ ಇನ್ನೂ ಧೂಳಿತ್ತು.ಅಂತೂ ಆ ಸುರಂಗವನ್ನು ದಾಟಿ ಹೊರ ಬಂದೆವು

.ಅಷ್ಟರಲ್ಲಿ ನನ್ನ ಬೆಳಕಿನ ಒಂದೇ ಮಾರ್ಗ ನನ್ನ ಮೊಬೈಲ್ ಬ್ಯಾಟರಿ ಲೋ ಆಗಿತ್ತು .ನಾವಿನ್ನು 1 ಘಂಟೆ ಪ್ರಯಾಣ ಮಾಡಬೇಕಿತ್ತು .ಸೊ ರಾಜೇಶ್ ಮೊಬೈಲ್ ಬ್ಯಾಟರಿ ತೆಗೆದು ನನಗೆ ಹಾಕಿಕೊಂಡು ಮುಂದೆ ಚಲಿಸಿದೆವು

.ಅಂತೂ 12 .30 ರ ಹೊತ್ತಿಗೆ ಕೊನೆಯ ಧೀರ್ಘವಾದ ಸುರಂಗವನ್ನು ಪ್ರವೇಶಿಸಿದೆವು .ಇಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಬಯವಿಲ್ಲದೆ ಇದನ್ನು ದಾಟಿದೆವು

.
ಸುರಂಗದ ಒಳಗೆ ಒಂದು ಕಡೆ ಗೋಡೆಯಿಂದ ಕೆಂಪನೆಯ ನೀರು ಬೀಳುತ್ತಿತ್ತು .ಇದು ನಮ್ಮಲ್ಲಿ ಆಶ್ಚರ್ಯವನ್ನುಂಟು ಮಾಡಿತು.ಬಹುಷಃ ಇದು ಕಾಡಿನ ಯಾವುದೂ ಅಂಶ ಮಿಕ್ಸ್ ಆಗಿ ಹಿಗಾಗಿದ್ದಿರಬಹುದು
.ಅಂತಿಮವಾಗಿ 1 .೦೦ ಘಂಟೆಯ ಸಮಯಕ್ಕೆ ನಮ್ಮ ಪ್ರಯಾಣದ ಕೊನೆಯ ಹಂತ ತಲುಪಿದೆವು .ಯಡಕುಮರಿ ನಿಲ್ದಾಣಕ್ಕೆ ಬಂದಾಗ ನಾವು ಸಾಕಷ್ಟು ಆಯಾಸಗೊಂಡ್ಡಿದ್ದೆವು .ಅಲ್ಲೇ ಇದ್ದ ನೀರಿನ ಸೆಲೆಯಲ್ಲಿ freash ಆಗಿ ದೂರದಲ್ಲಿ ಕಾಣುತ್ತಿದ್ದ ಬಿಸಿಲೆ ಗುಡ್ಡಗಳನ್ನು ನೋಡುತ್ತಾ ಆಯಾಸವನ್ನು ನೀಗಿಸಿಕೊಂಡೆವು
.ಯಡಕುಮರಿ ಕೂಡ ಒಂದು ಚಿಕ್ಕ ನಿಲ್ದಾಣ.ಅಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ passenger ರೈಲು ಬರುವುದಿತ್ತು .ಅದಕ್ಕೆ ಟಿಕೆಟ್ ಕೇಳಿದಾಗ ಅಲ್ಲಿ ಟಿಕೆಟ್ ಲಭ್ಯವಿಲ್ಲ ಎಂದರು

.ಆದದ್ದಾಗಲಿ ಎಂದು 2 .30 ಘಂಟೆಗೆ ಬಂದ passenger ರೈಲು ಹತ್ತಿದೆವು .ಈ ಯಡಕುಮರಿ ನಿಲ್ದಾಣದ ನಂತರದ ನಿಲ್ದಾಣವೇ ಶಿರಿಬಾಗಿಲು .ಈ ಎರಡು ನಿಲ್ದಾಣಗಳ ನಡುವಿನ ಆ 10 ,12 ಕಿಲೂಮೀಟರ್ ನಿಜವಾಗಿಯೂ ಬಹಳಾ ಕಷ್ಟಕರವಾಗಿರುವುದು ರೈಲಿನಲ್ಲಿ ಚಲಿಸುತಿದ್ದ ನಮ್ಮ ಗಮನಕ್ಕೆ ಬಂತು .ಕಿಲೂಮೀಟರ್ ಗಟ್ಟಲೆ ಸುರಂಗಗಳು,ಸೇತುವೆಗಳು ಈ ದಾರಿಯಲ್ಲಿ ಬಹಳಷ್ಟು ಇದ್ದವು .ಒಂದರ ಹಿಂದೆ ಒಂದು ಸರಣಿಯಲ್ಲಿ ಬರೀ ಸುರಂಗ ಸೇತುವೆಗಳೇ ಇಲ್ಲಿ ತುಂಬಿಕೊಂಡಿದ್ದವು ಅದರ ಮಧ್ಯೆ ಪ್ರಕೃತಿಯೂ ಅಷ್ಟೆ ರುದ್ರ ರಮಣೀಯವಾಗಿ ಹಬ್ಬಿತ್ತು

.ಶಿರಿಬಾಗಿಲಿನ ನಂತರ ಸುಬ್ರಮಣ್ಯ ದ ವರೆಗೆ ದಾರಿ ಅಷ್ಟೇನೂ ಕಷ್ಟಕರವಾಗಿಲ್ಲ

.
4 ಘಂಟೆಗೆ ಸುಬ್ರಮಣ್ಯ railway ನಿಲ್ದಾಣ ತಲುಪಿದೆವು .ನಮ್ಮ ಅದೃಷ್ಟಕ್ಕೆ ನಾವು ರೈಲು ಇಳಿದ ತಕ್ಷಣ tc ನಮ್ಮ ಭೋಗಿಗೆ ಹತ್ತಿದರು .ಅವರೆಲ್ಲಾದರೂ ಹಿಂದಿನ ನಿಲ್ದಾಣದಲ್ಲಿ ಹತ್ತಿದ್ದರೆ ನಮ್ಮ ಜೇಭಿಗೆ ಕತ್ತರಿ ಬೀಳುತ್ತಿತ್ತು

.ಈ ರೈಲ್ವೆ ನಿಲ್ದಾಣ ಸುಬ್ರಮಣ್ಯ ಸಿಟಿ ಇಂದ 8 ರಿಂದ 10 km ಧೂರದಲ್ಲಿದೆ .ಹಾಗಾಗಿ ಅಲ್ಲಿ ಒಂದು ಕಿಕ್ಕಿರಿದು ತುಂಬಿದ ಒಂದು ಜೀಪಿನ ಮುಖಾಂತರ ಸುಬ್ರಮಣ್ಯಕ್ಕೆ ಬಂದು ಅಲ್ಲಿ room ಬುಕ್ ಮಾಡಿ ಸಂಜೆ ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಊಟ ಮಾಡಿದೆವು

.ನಾವು ಸರಿಯಾಗಿ ಊಟ ಮಾಡದೆ ಒಂದು ದಿನಗಳೇ ಕಳೆದಿದ್ದವು ಹಾಗಾಗಿ ಸುಬ್ರಮಣ್ಯ ದೇವಸ್ಥಾನದಲ್ಲಿ ಭರ್ಜರಿ ಊಟ ಮಾಡಿದೆವು .ಆ ರುಚಿ ಭರಿತ ಊಟವನ್ನು ನಾನು ಇಂದಿಗೂ ಮರೆತಿಲ್ಲ

.ರಾತ್ರಿ 10 ಕ್ಕೆ ನಾವು ಸುಬ್ರಮಣ್ಯ ದ ksrtc ಬಸ್ stand ಗೆ ಬಂದೆವು .ರಾಜೇಶ್ ಬೆಂಗಳೂರು ಬಸ್ ಹತ್ತಿದನು ,ನಾನು ಹಾಸನ್ ಬಸ್ ಹತ್ತಿದೆ

.ನಾನು ಕಳೆದ 40 ಘಂಟೆಯಲ್ಲಿ ಕೇವಲ ಅರ್ಧ ಘಂಟೆ ನಿದ್ರೆ ಮಾಡಿದ್ದೆ .ಹಾಗಾಗಿ ಬಸ್ ಹತ್ತಿದ ಕೂಡಲೇ ಪ್ರಪಂಚ ಮರೆವ ಹಾಗೆ ನಿದ್ರೆ ಬಂತು .ಮಧ್ಯ ಮಧ್ಯ ಬಸ್ ಹೊಂಡ ಗುಂಡಿಯಲ್ಲಿ ಹೋದಾಗ ಅರೆ ಪ್ರಜ್ಞೆಯಲ್ಲಿ ಎಚ್ಚರವಾಗುತ್ತಿತ್ತು .ಆಗ ತಿರುವು ಮುರುವು ಚಾರ್ಮಾಡಿ ಘಾಟ್ ಚಂದ್ರನ ಬೆಳಕಿನಲ್ಲಿ ಮಂದವಾಗಿ ಕಾಣುತ್ತಿತ್ತು

.ರಾತ್ರಿ 1 .30 ಕ್ಕೆ ಹಾಸನ್ ಬಸ್ ಸ್ಟಾಪ್ ನಲ್ಲಿ ಇಳಿದ ನಾನು 2 .30 ಘಂಟೆಗೆ ಬಂದ ಶೃಂಗೇರಿ ಬಸ್ ಹತ್ತಿ ಮನೆ ಕಡೆ ಪ್ರಯಾಣ ಬೆಳೆಸಿದೆ

.ಹೀಗೆ ಮರೆಯಲಾಗದ ಒಂದು ಅದ್ಭುತ journey end ಆಗಿತ್ತು .ಇದಾದ ಹಲವು ದಿನಗಳ ನಂತರವೂ rajesha ನ ಕನಸಿನಲ್ಲಿ ಜಲ್ಲಿ ಕಲ್ಲು ಗಳು ಕಾಣುತ್ತಿದ್ದವಂತೆ

.ಹೀಗೆ ನಾನು,ರಾಜೇಶ್ ಮತ್ತೆ ಇತ್ತೀಚಿಗೆ ಇನ್ನೊಂದು ಸಣ್ಣ ಹುಚ್ಚು ಪ್ರಯಾಣ ಹೋಗಿದ್ದೆವು .ಅದರ ವಿವರಗಳನ್ನು ನಂತರದ ದಿನಗಳಲ್ಲಿ ತಿಳಿಸುತ್ತೇನೆ
.ಹಸಿರು ಹಾದಿ ನಿಜವಾಗಿಯೂ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗ ,ಅಲ್ಲಿ ಪ್ರವಾಸ ಮಾಡುವುದೇ ಒಂದು ಅದ್ಭುತ ಅನುಭವ .ನಾವು ಇನ್ನು ನಡೆಯದೆ ಬಿಟ್ಟ ಉಳಿದ ಸುಮಾರು 15 km ಅನ್ನು ಮತ್ತೆ ಸದ್ಯದಲ್ಲೇ ಕ್ರಮಿಸಬೇಕೆಂದು ಅಂದುಕೊಂಡಿದ್ದೇವೆ

.ಒಟ್ಟಿನಲ್ಲಿ ಸುಂದರ ಪ್ರಕೃತಿಯ ಭಯಾನಕ ಹಾದಿಯಲ್ಲಿ ಉಂಡಾಡಿ ಗುಂಡರಂತೆ ಪ್ರವಾಸ ಹೋದ ಈ ತರದ ಅನುಭವವನ್ನೇ ನಾನು
-ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ- ಎಂದದ್ದು

.ಹಸಿರು ಹಾದಿಯ ಕೆಲವು ಸುಂದರ ಇಮೇಜ್ ಗಳು


ಸೇತುವೆ ಮೇಲೆ ರೈಲು ಬಂದರೆ ನಿಲ್ಲಲು ಇರುವ ಜಾಗ

ರಾಜೇಶ್
ನಾನು
 .ಇದು ನನ್ನ ಬ್ಲಾಗಿನ ಮೊದಲ ಅತ್ಯಂತ ಧೀರ್ಘವಾದ ಪೋಸ್ಟ್ .ನಿಮಗೆ ಕಷ್ಟವಾದರೂ ಇಷ್ಟವಾಯಿತು ಎಂದುಕೊಂಡಿದ್ದೇನೆ.ನಿಮ್ಮ ಅಭಿಪ್ರಾಯ ತಿಳಿಸಿ......


-SAVE NATURE-