Sunday, January 18, 2015

ಹುಲಿ ಬಂತು ಹುಲಿ

. 'ಏನ್ರೀ ನಿಮ್ಮೂರಲ್ಲಿ ಹುಲಿ ಕಾಟ ಅಂತೆ.... ಯಾರು ತಂದು ಬಿಟ್ಟಿದ್ದು ಮಾರಾಯ್ರೆ ಈ ಹುಲಿಗಳನ್ನ...ಇದೊಂದು ಕಾಟ ಇರ್ಲಿಲ್ಲ ಈಗ ಇದೂ ಶುರುವಾಗಿದೆ'  ಹರಿಹರಪುರದ ಪೇಟೆಯಲ್ಲಿ ಮಿತ್ರ ದಿನೇಶ್ ರವರ ಅಂಗಡಿಯಲ್ಲಿ ಕುಳಿತು ಚಹಾ ಹೀರುತ್ತಿರುವಾಗ ಧಿಡೀರನೆ ಬಿದ್ದ ಈ ಪದಗಳು ಒಮ್ಮೆ ನಮ್ಮಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದವು

. ಹಾಗೆ ನೋಡಿದರೆ ಮಲೆನಾಡಿನ ಜನರಿಗೆ ಹಿಂದಿನಿಂದಲೂ ಬದುಕಿನ ಒಂದು ಭಾಗವೇ ಆಗಿರುವ 'ಕುರ್ಕ' ದ ಬಗ್ಗೆ ಜನರು ಮಾತನಾಡಿಕೊಳ್ಳುವುದು ಸಾಧಾರಣವಾಗಿ ನಾವು ಕೇಳಿರುತ್ತೇವೆ  (ಚಿರತೆಗೆ ಇಲ್ಲಿನ ಜನರು 'ಕುರ್ಕ' ಎಂದು ಕರೆಯುವುದು..ಆದರೆ ಕುರ್ಕ ಹಾಗು ಚಿರತೆ ಒಂದೇ ಎಂದು ಇಲ್ಲಿ ವಾದ ಮಾಡಿ ಗೆಲ್ಲಲ್ಲು ಸಾಧ್ಯವಿಲ್ಲ ). ಹಾಗೆಂದು ಹುಲಿಯು ಇಲ್ಲಿನ ಜನರಿಗೆ ಪರಿಚಿತ ಇಲ್ಲವೆಂದೇನಲ್ಲ. ಆಗೊಮ್ಮೆ ಈಗೊಮ್ಮೆ ನಮ್ಮ ದನವನ್ನು ಹುಲಿ ಹಿಡಿಯಿತು ಎಂದು ಹೇಳುವುದನ್ನು ಕೇಳಿದ್ದೇನೆ ಆದರೆ ಈ ಮಾತುಗಳು ಕೇಳಿ ಬರುತ್ತಿದ್ದುದು ತುಂಬಾ ದಟ್ಟ ಅರಣ್ಯಗಳ ಹೊರ ಅಂಚಿನಲ್ಲಿ ವಾಸ ಮಾಡುವ ಜನರ ಬಾಯಲ್ಲೇ ಹೊರತು ಮನುಷ್ಯ ತನ್ನ ಪ್ರಾಬಲ್ಯತೆ ಮೆರೆಯುತ್ತಿರುವ ನಗರ ಪ್ರದೇಶಗಳಲ್ಲಿ ಅಲ್ಲ

. 2014 ವರ್ಷದ ಕೊನೆಯ ತಿಂಗಳುಗಳು ಅಂದರೆ ನವೆಂಬರ್ ಹಾಗು ಡಿಸೆಂಬರ್ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಕೊಪ್ಪ, ಎನ್ ಆರ್ ಪುರ ಹಾಗು ಶೃಂಗೇರಿ ತಾಲೂಕಿನ ಕೆಲ ಊರುಗಳಲ್ಲಿ 'ಹುಲಿ' ತಟ್ಟೆoದು ಪ್ರತ್ಯಕ್ಷ ಆಗಿ ಬಿಟ್ಟಿತು. ಅದೆಲ್ಲಕ್ಕಿಂತಲೂ ನನಗೆ ಕುತೂಹಲ ಕೆರಳಿಸಿದ್ದು ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ 'ವಿಜಯ ವಾಣಿ ' ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ. ಚಳಿ ಕಾಯಿಸುತ್ತಾ ಪೇಪರ್ ಓದುತ್ತಿದ್ದ ನನ್ನ ಕಣ್ಣಿಗೆ ಬಿದ್ದ ಆ ಲೇಖನ ನನ್ನ ಎದೆ ಬಡಿತ ಜಾಸ್ತಿ ಮಾಡಿದ್ದರಲ್ಲಿ ಯಾವುದೇ ಸಂದೇಹವಿಲ್ಲ. 'ಹುಲಿ ಸುತ್ತಾಟ, ಜನರಿಗೆ ಸಂಕಟ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಆ ಲೇಖನದಲ್ಲಿ  ಹರಿಹರಿಹರಪುರದ ಸುತ್ತ ಮುತ್ತಲ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡ ಬಗ್ಗೆ ಬರೆಯಲಾಗಿತ್ತು
 (ಹುಲಿ ಕಂಡ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿ)

. ನನಗೀಗ 26 ವರ್ಷ.ಈ 26 ವರ್ಷಗಳಲ್ಲಿ ಹರಿಹರಪುರದ ಸುತ್ತ ಮುತ್ತ ಹುಲಿ ಓಡಾಟ ಎಂಬ ಪದ ಕೇಳಿದ್ದು ನಾನು ಇದೇ ಮೊದಲು. ಹರಿಹರಪುರದ ಸುತ್ತ ಮುತ್ತಲಿರುವ ಎರಡು ಗುಡ್ಡಗಳಲ್ಲಿ ಹುಲಿ ಇದೆ ಎಂದು ಜನರು ಆಗಾಗ ಹೇಳುತ್ತಿದ್ದರೂ ಆ ಗುಡ್ಡಗಳಲ್ಲಿ ಅಲೆದ ನನಗಂತೂ ಒಂದೇ ಒಂದು ಸಾರಿಯೂ ಹುಲಿಯ ಕುರುಹು ದೊರೆತಿರಲಿಲ್ಲ. ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಕಾಕತಾಳಿಯ ಎಂಬಂತೆ ಈ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ದಿನವೇ ನಾನು ಹುಲಿ ಹುಡುಕಿಕೊಂಡು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಡೆ ಹೊರಟಿದ್ದೆ. ಈ ಸುದ್ದಿ ಬಗ್ಗೆ ದಿನೇಶ್ ರವರಲ್ಲಿ ಕೇಳಿದಾಗ ಅವರೂ ಕೂಡ ಈ ಸುದ್ದಿ ನಿಜ ಹಾಗು ನಾನು ಕೂಡ ಹುಲಿಯ ಘರ್ಜನೆಯನ್ನು ನಮ್ಮ ಮನೆಯ ಎದುರಿನ ಕಾಡಿನಿಂದ ಕೇಳಿದ್ದೇನೆ ಎಂದರು. ಹುಲಿ ಹುಡುಕಿಕೊಂಡು 300 km ದೂರ ಹೊರಟಿದ್ದ ನನಗೆ ಹುಲಿಯೇ ನಮ್ಮ ಊರಿನ ಸಮೀಪವೆಲ್ಲೋ ಸುತ್ತಾಡುತ್ತಿದೆ ಎಂದು ಕೇಳಿ ಯಾವ ಭಾವ ಉಂಟಾಗಿರಬಹುದು ನೀವೇ ಯೋಚಿಸಿ...(ಊರಿಗೆ ಬಂದ ಹುಲಿಯ ಜಾಡು ಹಿಡಿಯದೇ ನಾನು ನಾಗರಹೊಳೆಯತ್ತ ಪ್ರಯಾಣ ಬೆಳೆಸಿದೆ )

.ನಾನು ಅಲ್ಲಿ ನಾಗರಹೊಳೆಯಲ್ಲಿ ಹುಲಿ ದರ್ಶನ ಸಿಗದೇ ಕಾಡಲೆಯುತ್ತಿದ್ದಾಗ ಹುಲಿ ಹರಿಹರಪುರದ ಮುಖ್ಯ ಪೇಟೆಯಿಂದ ಕೇವಲ ಒಂದು km ದೂರದಲ್ಲಿರುವ ಒಂದು ತೂಗು ಸೇತುವೆಯ ಬಳಿ ಕಂಡಿದೆ ಎಂಬ ಸುದ್ದಿ ಕೇಳಿದಾಗ ನನಗೆ ಹೇಗಾಗಿರಬೇಡ?
( ಇತ್ತೀಚಿಗೆ ಹುಲಿ ಕಾಣುತ್ತಿರುವ 3 ತಾಲೂಕುಗಳ ನಕ್ಷೆ. ಇದರಲ್ಲಿ ಬಲಭಾಗದ ನರಸಿಂಹರಾಜಪುರ ಹಾಗು ಚಿಕ್ಕಮಗಳೂರು ನಡುವಿನ ಭಾಗ ಭದ್ರಾ ವನ್ಯಜೀವಿ ಸಂರಕ್ಷಿತ ಪ್ರದೇಶಕ್ಕೆ ಸೇರುತ್ತದೆ. ಇದು ಭದ್ರಾ ಹುಲಿಯೋಜನೆಯ ತಾಣವೂ ಹೌದು)
( ಹರಿಹರಪುರದ ತೂಗು ಸೇತುವೆ ಒಂದರ ಬಳಿ ಹುಲಿ ಕಂಡಿತ್ತೆಂಬ ಮಾಹಿತಿ ಮೇರೆಗೆ ನಾವು ಹುಲಿಯ ಗುರುತುಗಳಿಗಾಗಿ ಶೋಧ ನಡೆಸುತ್ತಿರುವುದು )

. ಈ ಘಟನೆಯ ನಂತರ ಪದೇ ಪದೇ ಹುಲಿಯ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಲೇ ಹೋದವು. ಕೊಪ್ಪ ತಾಲೋಕಿನ ಹುಲುಗಾರು ಎಂಬ ಬಳಿ ಹುಲಿ ಜನರಲ್ಲಿ ಎಷ್ಟು ಭಯ ವನ್ನು ಉಂಟು ಮಾಡಿತ್ತು ಎಂದರೆ 2 ದಿನ ಶಾಲೆಗಳಿಗೂ ರಜೆ ನೀಡಿದ್ದರಂತೆ. ಹುಲಿ ಅಲ್ಲಿ ಹಲವು ಹಸುಗಳ ಮೇಲೆ ದಾಳಿ ಮಾಡಿ ಬಲಿ ತೆಗೆದುಕೊಂಡಿದ್ದು ಈ ಭಯಕ್ಕೆ ಕಾರಣವಿರಬಹುದು

.ಹೀಗೆ ಪದೇ ಪದೇ ಹುಲಿಯ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬರಲು ಪ್ರಾರಂಭವಾದ ಮೇಲೆಯೇ  ' ಏನ್ರೀ ನಿಮ್ಮೂರಲ್ಲಿ ಹುಲಿ ಕಾಟ ಅಂತೆ.... ಯಾರು ತಂದು ಬಿಟ್ಟಿದ್ದು ಮಾರಾಯ್ರೆ ಈ ಹುಲಿಗಳನ್ನ...ಇದೊಂದು ಕಾಟ ಇರ್ಲಿಲ್ಲ ಈಗ ಇದೂ ಶುರುವಾಗಿದೆ' ಎಂಬ ಪದಗಳು ಹರಿದಾಡಲು ಶುರುವಾಗಿದ್ದು

.ಪದೇ ಪದೇ ಹುಲಿ ಅಲ್ಲಿ ಕಂಡಿತು ಇಲ್ಲಿ ಕಂಡಿತು ಎಂಬ ಸುದ್ದಿ ಕಿವಿಗೆ ಬೀಳುತ್ತಲೇ ಇತ್ತು. ಈ ಸುದ್ದಿಗಳಲ್ಲಿ 10 ರಲ್ಲಿ ಒಂದು ಸುದ್ದಿ ನಿಜವಾಗಿದ್ದರೂ ಆ ನಿಜವಾದ ಸುದ್ದಿ ಇಂದಿಗೂ  ಮಲೆನಾಡಿನ ಕಾಡುಗಳಲ್ಲಿ ಹುಲಿರಾಯ ಇನ್ನು ತನ್ನ ಚಕ್ರಾಧಿಪತ್ಯ ಉಳಿಸಿಕೊಂಡಿದ್ದಾನೆ ಎಂಬುದನ್ನು ಸಾರಿ ಹೇಳುತ್ತಲಿತ್ತು
(ದಿನಾಂಕ 17-01-2015 ರಂದು ಫೇಸ್ ಬುಕ್ ಗೆಳೆಯರೊಬ್ಬರಿಗೆ ಹುಲಿ ಕಂಡ ಬಗ್ಗೆ ಅವರು ಮಾಡಿರುವ update)

.ಇದರ ಮಧ್ಯೆ ಹಲವು ಜನರ ಬಾಯಲ್ಲಿ ನಾನು ಕೇಳಿದ ಒಂದು ಪದ ಇಂದು ನಾನು ಈ ಬ್ಲಾಗ್ ಪೋಸ್ಟ್ ಬರೆಯುವಂತೆ ಪ್ರೇರೇಪಿಸಿತು ' ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಂದು ಬಿಟ್ಟಿದ್ದಾರೆ' ಎಂಬ ಪದ

. ಮಲೆನಾಡಿನ ಭಾಗಗಳಲ್ಲಿ ಇಂದು ಬಿಸಿಯಾಗಿ ಚರ್ಚೆಯಾಗುತ್ತಿರುವ 'ಹುಲಿ ಯೋಜನೆ' ಸಮಯದಲ್ಲಿ ನನ್ನ ಈ ಲೇಖನವನ್ನು ಓದಿ ನನ್ನ ಮೇಲೆ ಮುನಿಸಿಕೊಳ್ಳುವ ಜನರೇ ಜಾಸ್ತಿ ಇರಬಹುದು. ಆದರೆ ನಾನು ಈ ಲೇಖನ ಬರೆಯುತ್ತಿರುವುದು ಹುಲಿ ಯೋಜನೆ ಜಾರಿಯಾಗಬೇಕು ಅಥವಾ ಜಾರಿಯಾಗಬಾರದು ಎಂಬ ಬಗ್ಗೆ ಅಲ್ಲ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಪದೇ ಪದೇ ಹುಲಿ ಸದ್ದು ಮಾಡುತ್ತಿರುವ ಕಾರಣವಾದರೂ ಏನು ಎಂಬ ಬಗ್ಗೆ ಚಿಕ್ಕದಾದ ವೈಜ್ಞಾನಿಕ ಕಾರಣಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ ಅಷ್ಟೇ.. ಇದು ನನ್ನ ಅಭಿಪ್ರಾಯ ಆಗಿರುತ್ತದೆಯೇ ಹೊರತು ಯಾವ ಹುಲಿ ತಜ್ಞರೂ ಅಂಕಿತ ಹಾಕಿದ ಸರ್ಕಾರಕ್ಕೆ ಕಳಿಸುವ ಪ್ರಸ್ತಾವನೆ ಅಲ್ಲ...

. ನಿಮಗೆ ಗೊತ್ತಿರಬಹುದು ಒಂದು ಹುಲಿಯ ವ್ಯಾಪ್ತಿ ಪ್ರದೇಶ ಸುಮಾರು 40 ರಿಂದ 120 sqkm ಗಳಷ್ಟು ಇರುತ್ತದೆ ( ಗಂಡು ಹುಲಿಯ ವ್ಯಾಪ್ತಿ ಪ್ರದೇಶ ಹೆಣ್ಣು ಹುಲಿಯ ವ್ಯಾಪ್ತಿ ಪ್ರದೇಶಕ್ಕಿಂತಲೂ ಜಾಸ್ತಿ ) ಆದರೆ ಹುಲಿ ಸಾಂಧ್ರತೆ ಹೆಚ್ಚಿರುವ ಬಂಡೀಪುರ ಹಾಗು ನಾಗರಹೊಳೆಯಲ್ಲಿ ಆವುಗಳ ವ್ಯಾಪ್ತಿ ಪ್ರದೇಶ ತುಂಬಾ ಕಡಿಮೆ. ಅಲ್ಲಿ ಅವುಗಳಿಗೆ ಸಿಗುವ ಬಲಿ ಪ್ರಾಣಿಗಳ ಸಂಖ್ಯೆಯೂ ಇದಕ್ಕೆ ಕಾರಣ

.ಆದರೆ ನಮ್ಮ ಈ ಭಾಗವನ್ನು ತೆಗೆದುಕೊಂಡರೆ ಇಲ್ಲಿ ಹುಲಿ ಸಾಂಧ್ರತೆ ತೀರಾ ಕಡಿಮೆ ಹಾಗು ಅವುಗಳಿಗೆ ಬೇಕಾದ ಬಲಿ ಪ್ರಾಣಿಗಳ ಸಂಖ್ಯೆಯೂ ಕಡಿಮೆ.ಹಾಗಾಗಿ ಇಲ್ಲಿ ಅವುಗಳ ವ್ಯಾಪ್ತಿ ಪ್ರದೇಶ ಕಡಿಮೆಯಂತೂ ಇರಲಿಕೆ ಸಾಧ್ಯವಿಲ್ಲ. ನಾನು ಇಲ್ಲಿ ಹೇಳ ಹೊರಟಿರುವ ಪ್ರದೇಶದ ವಿವರಗಳು ಯಾವುದೇ ಹುಲಿ ಸಂರಕ್ಷಿತ ವಲಯದ ಒಳಗೆ ಬಾರದ ಮನುಷ್ಯರು ವಾಸಿಸುತ್ತಿರುವ ದಟ್ಟವಲ್ಲದ ಅರಣ್ಯ ಭೂ ಭಾಗಗಳು 

. ಹುಲಿ ಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಹುಲಿಗಳ ಜೀವನ ಕ್ರಮ ಅವುಗಳ ವ್ಯಾಪ್ತಿ ಪ್ರದೇಶ ಹಾಗು ಅವುಗಳ ಗುಣಗಳನ್ನು ಅಧ್ಯಯನ ಮಾಡುವುದು ಸುಲಭ.ಆದರೆ ಇಂತಹ ಭೂ ಭಾಗಗಳಲ್ಲಿ ಹುಲಿಯ ಬಗ್ಗೆ ಅಧ್ಯಯನ ತುಂಬಾ ಕಷ್ಟಕರ . ಎಲ್ಲಾ ಕಾಡಿನಲ್ಲೂ ಹುಲಿಯ ಜೀವಾನುಕ್ರಮ ಅವುಗಳ ಗುಣಗಳೂ ಒಂದೇ ಎಂದು ಹೇಳಲಾಗುವುದಿಲ್ಲ. ಕಾಡಿನ ಸಾಂದ್ರತೆ, ಅವುಗಳಿಗೆ ಬದುಕಲು ಬೇಕಾದ ಬಲಿ ಪ್ರಾಣಿಯ ಸಂಖ್ಯೆ, ಅವುಗಳ ಅವಾಸ ಸ್ಥಾನದ ಮೇಲೆ ಮನುಷ್ಯನ ಪ್ರಭಾವ ಈ ಎಲ್ಲಾ ಅಂಶಗಳನ್ನು ಗಮನಿಸಿಸಬೇಕಾಗುತ್ತದೆ

. ಸಾಧಾರಣವಾಗಿ ನಾನು ಆಗಲೇ ಹೇಳಿದಂತೆ ಈ ಭಾಗಗಳಲ್ಲಿ ( ಕುದುರೆಮುಖ ಉದ್ಯಾನವನ ಹಾಗು ಭದ್ರಾ ಹುಲಿ ಸಂರಕ್ಷಿತ ಪ್ರದೇಶವನ್ನು ಹೊರತುಪಡಿಸಿ) ಅರಣ್ಯದ ಸಾಂದ್ರತೆ ಕಡಿಮೆ, ಹುಲಿಗಳಿಗೆ ಬೇಕಾದ ಬಲಿ ಪ್ರಾಣಿಗಳ ಸಂಖ್ಯೆಯೂ ವಿರಳ, ಹಾಗು ಹುಲಿಗಳಿಗೆ ಇದು ಯೋಗ್ಯ ಆವಾಸ ಸ್ಥಾನ ಎಂದು ಹೇಳಲಾಗುವುದಿಲ್ಲ. ಹಾಗಾದರೆ ಇಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿಗಳು ಎಲ್ಲಿಂದ ಬಂದವು ? ಜನರು ಹೇಳಿದಂತೆ ತಂದು ಬಿಟ್ಟ ಹುಲಿಗಳೇ ? ಅಥವಾ ಈ ಭಾಗಗಳಿಗೆ ಹೊಂದಿಕೊಂಡಂತೆ ಇರುವ ಭದ್ರ ಹುಲಿಧಾಮದಿಂದ ಹೊರಬಿದ್ದ ಹುಲಿಗಳೇ ?

. ಉತ್ತರ ಯಾವುದಕ್ಕೂ ಸ್ಪಷ್ಟ ಇಲ್ಲದಿದ್ದರೂ ಸಹ ಒಂದಂತೂ ಸತ್ಯ ಜನರು ಹೇಳಿದಂತೆ ಇವು ತಂದು ಬಿಟ್ಟ ಹುಲಿಗಳು ಅಲ್ಲ. ಹುಲಿಗಳನ್ನು ತಂದು ಬಿಡುವುದು ಒಂದು ಊರಿನ ನಾಯಿಗಳನ್ನು ಮತ್ತೊಂದು ಊರಿಗೆ ಸಾಗಿಸಿದಂತೆ ಅಲ್ಲ. ಅದೂ ಅಲ್ಲದೇ ದೇಶದಲ್ಲಿ ಇರುವ ಹುಲಿಗಳ ಸಂಖ್ಯೆ ಕೇವಲ 1700 ರಿಂದ 1900. ಇರುವ ಹುಲಿಗಳನ್ನೇ ಅವುಗಳ ಆವಾಸ ಸ್ಥಾನದಲ್ಲಿ ಉಳಿಸಿಕೊಳ್ಳುವುದು ಇಂದು ಸವಾಲಿನ ಕೆಲಸವಾಗಿರುವಾಗ ಹುಲಿಗಳನ್ನು ಬೇರೆಡೆ ಸಾಗಿಸುವುದು ಎಂದರೆ ಅದು ತಮಾಷೆಯ ವಿಷಯವಲ್ಲದೇ ಮತ್ತೇನು ? ಅದೂ ಅಲ್ಲದೇ ಹುಲಿಗಳಿಗೆ ಯೋಗ್ಯವಲ್ಲದ ಪ್ರದೇಶದಲ್ಲಿ ಹುಲಿಗಳನ್ನು ತಂದು ಬಿಟ್ಟು ಅಲ್ಲಿ ಆಗುವ ಅನಾಹುತಗಳಿಗೆ ಪ್ರತಿಭಟನೆ ಎದುರಿಸಿ ಪರಿಹಾರ ಕೊಡಲು ಅರಣ್ಯ ಇಲಾಖೆಗೆ ಏನು ಬುದ್ಧಿ ಸರಿ ಇಲ್ಲವೇ ? ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಹುಲಿ ತಂದು ಬಿಡುವುದು ಎಂಬ ಮಾತು ಕೇವಲ ತಮಾಷೆಯ ಮಾತಾಗಿ ಕಾಣುತ್ತದೆಯೇ ಹೊರತು ಅದಕ್ಕೆ ಸರಿಯಾದ ಯಾವ ಆಧಾರವೂ ಇಲ್ಲ . ಒಂದು ಹುಲಿಯನ್ನು ಇನ್ನೊಂದು ಪ್ರದೇಶಕ್ಕೆ ಸಾಗಿಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಾವಿರಾರು ನಿಯಮ ನಿಭಂದನೆಗಳಿವೆ  . ಹುಲಿ ಸಂತತಿ ನಿರ್ನಾಮವಾಗಿದ್ದ ಸರಿಸ್ಕಾ ರಾಷ್ಟ್ರೀಯ ಉದ್ಯಾನವನದಲ್ಲೇ ರಣತಂಬೂರ್  ನಿಂದ ಹುಲಿ ತಂದು ಬಿಡಲು ಅಧಿಕಾರಿಗಳು ಪಟ್ಟ ಪಾಡು ನಾವು ನೋಡಿಲ್ಲವೇ ??

. ಹಾಗಾದರೆ ಹುಲಿಗಳು ಈ ಕಾಡಿನಲ್ಲಿ ಮೊದಲಿನಿಂದಲೂ ಇದ್ದವೇ ? ಅವುಗಳ ಸಂತತಿ ಇಲ್ಲಿ ಬೆಳೆಯುತ್ತಿದೆಯೇ ? ಇಷ್ಟು ವರ್ಷ ಹಾಗಾದರೆ ಏಕೆ ಅವುಗಳ ಬಗ್ಗೆ ಸುದ್ದಿಗಳು ಬರುತ್ತಿರಲಿಲ್ಲ ? ಈಗೇಕೆ ಜಾಸ್ತಿಯಾಗಿದೆ ? ಅವುಗಳ ಸಂತತಿ ಜಾಸ್ತಿಯಾಗಿದೆ ಎನ್ನುವುದಾದರೆ ಅದಕ್ಕೆ ಬೇಕಾದ ಅವುಗಳ ಬಲಿ ಪ್ರಾಣಿಗಳು ಇಲ್ಲಿ ಎಲ್ಲಿವೆ ? ಚಿರತೆಗಳು  ಕಷ್ಟಸಹಿಷ್ಣು ಜೀವಿಗಳು ಅವುಗಳು ಬದುಕಲು ಹುಲಿಗೆ ಬೇಕಾದಂತಹ ಮಾನವನ ಹಸ್ತಕ್ಷೇಪವಿಲ್ಲದ ನಿರ್ಭಯ ಕಾಡು ಬೇಕೆಂದೇನೂ ಇಲ್ಲ. ಆದರೆ ಹುಲಿಗಳು ಹಾಗಲ್ಲ. ಅವುಗಳು ಬಾಳಿ ಬದುಕಲು ಅದರದ್ದೇ ಆದ ವಿಶಾಲ ಅರಣ್ಯ, ಬಲಿ ಪ್ರಾಣಿಗಳು ಬೇಕಾಗುತ್ತದೆ. ಅದಕ್ಕೆಂದೇ ನಮ್ಮ ಸರ್ಕಾರ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿರುವುದು ಹಾಗು ಅಲ್ಲಿ ಹುಲಿಗಳಿಗೆ ಬೇಕಾದ ಸ್ವಚ್ಚಂದ ಅರಣ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವುದು

. ಹೋಗಲಿ ಸುತ್ತಲಿನ ಭದ್ರಾ ಅರಣ್ಯದಿಂದ ಹೊರ ಬಿದ್ದ ಹುಲಿಗಳಾ ಇವು ಎಂದು ವಿಮರ್ಶೆ ಮಾಡುವುದಾದರೆ ಅದಕ್ಕೂ ಕೂಡ ಯಾವುದೇ ಸ್ಪಷ್ಟ ಆಧಾರವಿಲ್ಲ. ನಿಮಗೆ ಗೊತ್ತಿರಬಹುದು ಹುಲಿಗಳಿಗೆ ಯಾವಾಗ ತನ್ನ ವ್ಯಾಪ್ತಿ ಪ್ರದೇಶವನ್ನು ಕಾಪಾಡಿಕೊಳ್ಳಲು ಆಗುವುದಿಲ್ಲವೂ ( ಅವುಗಳಿಗೆ ಆದ ಗಾಯದಿಂದಲೋ ಅಥವಾ ವಯಸ್ಸಿನ ಕಾರಣದಿಂದಲೋ ) ಆಗ ಅವು ಬೇರೆ ಹುಲಿಗಳಿಂದ ಹೊರ ನೂಕಲ್ಪಡುತ್ತವೆ.ಆಗ ಅವು ದಟ್ಟ ಕಾಡನ್ನು ತೊರೆದು ಕಾಡಿನಂಚಿನ ಗ್ರಾಮಗಳಿಗೆ ಹೋಗಿ ತನ್ನ ನೆಲೆಯನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತವೆ. ಈ ಹಂತದಲ್ಲೇ ಅವು ಜನರ ಜಾನುವಾರುಗಳ ಮೇಲೆ ದಾಳಿ ಮಾಡುವುದು ಹಾಗು ಕೆಲವೊಮ್ಮೆ ನರಭಕ್ಷಕ ಕೂಡಾ ಆಗುವುದು. ಹಾಗಾದರೆ ಇಲ್ಲಿ ಕಾಣುತ್ತಿರುವ ಹಾಗು ಜಾನುವಾರಗಳ ಮೇಲೆ ದಾಳಿ ಮಾಡಿದ ಹುಲಿಗಳು ಭದ್ರಾ ಅಥವಾ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಮೇಲೆ ಹೇಳಿದಂತೆ ವಯಸ್ಸಿನ ಕಾರಣದಿಂದಲೂ ಅಥವಾ ಗಾಯದ ಸಮಸ್ಯೆಯಿಂದಲೋ ಅಥವಾ ತಾಯಿಯಿಂದ ಸರಿಯಾದ ಶಿಕ್ಷಣ ದೊರೆಯದೆ ಕಾಡಿನಿಂದ ನಾಡಿಗೆ ಬಂದ ಹುಲಿಗಳೋ  ???

. ನನಗೆ ಗೊತ್ತಿರುವಂತೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂತತಿ ಬೆಳೆಯುತ್ತಿದೆ.. ಆದರೆ 492 sqkm ಇರುವ ಭದ್ರಾದಲ್ಲಿ ಹುಲಿಗಳಿಗೆ ಜಾಗ ಕಡಿಮೆಯಾಗಿದೆ ಎನ್ನುವುದಕ್ಕೆ ಪುರಾವೆ ಇಲ್ಲ. ಈಗ ತನ್ನಲ್ಲಿರುವ ಹುಲಿ ಸಂತತಿಗಿಂತಲೂ ಹೆಚ್ಚಿನ ಹುಲಿಗಳನ್ನು ತನ್ನಲ್ಲಿ ಸಾಕಬಲ್ಲ ಶಕ್ತಿ ಭದ್ರಾ ಹುಲಿಧಾಮಕ್ಕಿದೆ. ಹಾಗಾಗಿ ಹುಲಿ ಸಾಂದ್ರತೆ ಹೆಚ್ಚಿ ಅಲ್ಲಿಂದ ಹೊರ ಬಿದ್ದ ಹುಲಿಗಳಿವು ಎಂದು ಹೇಳಲೂ ಸಾಧ್ಯವಿಲ್ಲ...

.ಇನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ತೆಗೆದುಕೊಂಡರೆ ಅಲ್ಲಿನ ಭೂ ಭಾಗಗಳಲ್ಲಿ ಹುಲಿ ಘರ್ಜನೆ ತುಂಬಾ ವಿರಳವೆಂದೇ ಹೇಳಬಹುದು, ಗುಡ್ಡಗಾಡುಗಳು,ಅಲ್ಲಿನ ಮಳೆ ಇವೆಲ್ಲಾ ಹುಲಿಗೆ ಅಷ್ಟು ಸೂಕ್ತವಲ್ಲದ ಅಂಶಗಳು ಅಲ್ಲದೇ ಕುದುರೆಮುಖದ ಹುಲಿಗಳಿಗೆ Territory ಹಾಗು ಬಲಿ ಪ್ರಾಣಿಯ ಸಮಸ್ಯೆ ಅಷ್ಟಾಗಿ ಇಲ್ಲ 

.ಹಾಗಾದರೆ ಹುಲಿಗಳು ಚಿರತೆಗಳಂತೆ ಇರುವ ಅವಾಸ ಸ್ಥಾನದಲ್ಲೇ ಕಷ್ಟದಿಂದ ಬದುಕು ಕಟ್ಟಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿವೆಯೇ ?  ಇರುವ ವ್ಯಾಪ್ತಿ ಪ್ರದೇಶದಲ್ಲೇ ತನ್ನ ಸಾಮ್ರಾಜ್ಯ ಕಟ್ಟಿಕೊಂಡು ಮನುಷ್ಯನ ಸಮೀಪ್ಯವನ್ನು ಲೆಕ್ಕಿಸದೇ ಕಡಿಮೆ ಬಲಿ ಪ್ರಾಣಿಗಳ ಮೇಲೆ ಅವಲಂಬಿತವಾಗಿ ಬದುಕುವ ಕಲೆ ಮೈಗೂಡಿಸಿಕೊಳ್ಳುತ್ತಿದೆಯೇ ಹುಲಿ? ಆದರೆ ಹುಲಿಗಳಿಗೆ ಈ ತರಹ ಬದುಕುವುದು ನಿಜಕ್ಕೂ ದುಸ್ತರ

. ಈ ಸಮಯ ಅಂದರೆ ನವೆಂಬರ್ ನಿಂದ ಫೆಬ್ರವರಿ ಹುಲಿಗಳ ಮಿಲನ ಸಮಯ. ಪರಸ್ಪರ ಗಂಡು ಹೆಣ್ಣು ಹುಲಿಗಳು ಒಂದ್ದನೊಂದು ಅರಸುತ್ತಾ ವ್ಯಾಪ್ತಿ ಪ್ರದೇಶವನ್ನು ಮೀರಿ ಅಲೆಯುತ್ತಿರುತ್ತವೆ. ಹಾಗಾದರೆ ಇಲ್ಲಿ ಕಂಡ ಹುಲಿಗಳು ಹೀಗೆ ಮಿಲನಕ್ಕಾಗಿ ಒಂದಾನೊಂದು ಹುಡುಕುತ್ತಿರುವ ಗಂಡು ಹೆಣ್ಣು ಹುಲಿಗಳೇ ???? ಗೊತ್ತಿಲ್ಲ

.ಏನಪ್ಪಾ ಇವನು ಅದೂ ಅಲ್ಲ ಇದೂ ಅಲ್ಲ ಅನ್ನುತ್ತನಲ್ಲಾ ಹಾಗದರೆ ಏನು ಎಂದು ನೀವು ಕೇಳಬಹುದು...

.ಇದೆ ಈ ಎಲ್ಲಾ ಪ್ರಶ್ನೆಗಳಿಗೂ ಖಂಡಿತಾ ಉತ್ತರ ಇದೆ. ಆದರೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಿದೆ. ಹಾಗೆಂದು ನಾನು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಅದು ಅರಣ್ಯ ಇಲಾಖೆಯ ನಿಯಮಗಳ ಉಲ್ಲಂಘನೆಯಾಗಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಇಂದು ಉತ್ತರ ಹುಡುಕಬೇಕಿರುವುದು ಜವಾಬ್ದಾರಿ ಸ್ಥಾನದಲ್ಲಿರುವ ಅರಣ್ಯ ಇಲಾಖೆ. ಹಾಗಾದರೆ ಹೇಗೆ ಈ ಎಲ್ಲಾ ಪ್ರಶ್ನೆಗಳಿಗೆ ಅರಣ್ಯ ಇಲಾಖೆ ಉತ್ತರ ಕಂಡುಹಿಡಿಯಬಹುದು ???

. ಅರಣ್ಯ ಇಲಾಖೆ ಮಾಡಬೇಕಿರುವ ಮೊದಲ ಕೆಲಸವೆಂದರೆ ಈಗ ಹುಲಿಗಳು ಕಾಣುತ್ತಿರುವ ಪ್ರದೇಶಗಳಲ್ಲಿ ಕ್ಯಾಮೆರಾ ಟ್ರಾಪ್ ಗಳನ್ನು ಅಳವಡಿಸಿ ಅದರ ಮೂಲಕ ಬೇರೆ ಬೇರೆ ಪ್ರದೇಶಗಳಲ್ಲಿ ಕಾಣುತ್ತಿರುವ ಹುಲಿಗಳು ಬೇರೆ ಬೇರೆಯವೇ ? ಅಥವಾ ಒಂದೇ ಹುಲಿಯು ಬೇರೆ ಬೇರೆ ಪ್ರದೇಶಗಳಲ್ಲಿ ಕಾಣುತ್ತಿದೆಯೇ ? ಎಂದು ಅಧ್ಯಯನ ನಡೆಸಬೇಕು. ಹುಲಿ ಕಾಣುತ್ತಿರುವ ನಿರ್ದಿಷ್ಟ ಪ್ರದೇಶಗಳ ನಕ್ಷೆ ತಯಾರಿಸಿ ಅಲ್ಲಿರುವ ಕಾಡಿನ ಬಗ್ಗೆ ಅಧ್ಯಯನ ನಡೆಸಬೇಕು. ಈ ಕಾರ್ಯಕ್ಕೆ ಸ್ವಯಂ ಸೇವಕರುಗಳನ್ನು ಅಳವಡಿಸಿಕೊಳ್ಳುವುದರ ಮೂಲಖ ಹುಲಿ ಕಾಣುತ್ತಿರುವ ಕಾಡಿನ ಸಾಂದ್ರತೆ, ಅಲ್ಲಿರುವ ಬಲಿ ಪ್ರಾಣಿಗಳ ಸಂಖ್ಯೆ ಮುಂತಾದವು ಗಳ ಮಾಹಿತಿಯನ್ನು ಕಲೆ ಹಾಕಿ ನಿರ್ದಿಷ್ಟ ಕಾಡು ಹುಲಿಗೆ ಯೋಗ್ಯವಾಗಿದೆಯೂ ಇಲ್ಲವೂ ಎಂಬುದನ್ನು ಕಂಡುಹಿಡಿಯಬೇಕು. ಅಕಸ್ಮಾತ್ ಹುಲಿಗೆ ಯೋಗ್ಯವಾದ ಕಾಡು ಅಲ್ಲಿದ್ದರೆ ಆ ಕಾಡಿನ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹುಲಿ ಪದೇ ಪದೇ ಕಾಣುತ್ತಿರುವ ಪ್ರದೇಶಗಳ ಜನರ ಸುರಕ್ಷತೆಗೆ ಆದ್ಯತೆ ನೀಡಿ ಅಲ್ಲಿನ ಜನರಿಗೆ ಹುಲಿಯ ಸಂರಕ್ಷಣೆ, ಮಹತ್ವ ಹಾಗು ಅನಾಹುತಗಳನ್ನು ತಪ್ಪಿಸುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಹುಲಿ ಹಾಗು ಜನರು ಇವರ ನಡುವೆ ಸಾಮರಸ್ಯವನ್ನು ಬೆಳೆಸುವ  ಮೂಲಕ ಈ ಕಾಡುಗಳಲ್ಲಿ ಹುಲಿ ಸಂರಕ್ಷಣೆ ಮಾಡಬಹುದೇ ಹೊರತು ಅಧಿಕಾರ ಬಳಸಿ ಹುಲಿ ಸಂರಕ್ಷಿತವಲ್ಲದ ಪ್ರದೇಶದಲ್ಲಿ ಹುಲಿ ಸಂರಕ್ಷಿಸುವುದು ಅಸಾಧ್ಯದ ಕೆಲಸವೆಂಬುದು ನನ್ನ ಅಭಿಪ್ರಾಯ

. ಕ್ಯಾಮೆರಾ ಟ್ರಾಪ್ ಮೂಲಕ ಸಿಗುವ ಮಾಹಿತಿ ಅತ್ಯಂತ ಮಹತ್ವದ ಪಾತ್ರವನ್ನು ಇಲ್ಲಿ ವಹಿಸುತ್ತದೆ . ಅಕಸ್ಮಾತ್ ಬೇರೆ ಬೇರೆ ಪ್ರದೇಶಗಳಲ್ಲಿ ದನಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಒಂದೇ ಆಗಿದ್ದರೆ ಮೊದಲು ಆ ಹುಲಿಯನ್ನು ಹಿಡಿದು ಅದನ್ನು ಕೃತಕ ಪರಿಸರದಲ್ಲಿ ಸಂರಕ್ಷಿಸುವುದು ಉತ್ತಮ. ಇತ್ತೀಚಿಗೆ ಹುಲಿ ಕಂಡ ಮಾಹಿತಿ ಪ್ರಕಾರ ಕೊಪ್ಪದ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಹುಲಿ ಮರಿಯೊಂದಿಗೆ ಹೋಗುತ್ತಿರುವುದನ್ನು ನೋಡಿದ್ದಾಗಿ ಕೆಲವರು ಹೇಳುತ್ತಿದ್ದರು. ಈ ಅಂಶ ಸತ್ಯವೇ ಆಗಿದ್ದರೆ ಇದರ ಬಗ್ಗೆ ಮೊದಲು ಅರಣ್ಯ ಇಲಾಖೆ ಕಾಳಜಿ ತೆಗೆದುಕೊಳ್ಳಬೇಕು. ಮರಿಯನ್ನು ಸಾಕುತ್ತಿರುವ ತಾಯಿ ಹುಲಿ ಅತ್ಯಂತ ಒತ್ತಡದಲ್ಲಿರುತ್ತದೆ ಹಾಗು ತನ್ನ ಮರಿಗಳಿಗೆ ಕಾಡಿನಲ್ಲಿ ಬಲಿ ಪ್ರಾಣಿಗಳು ಸಿಗದೇ ಇದ್ದರೆ ಅದು ಜಾನುವಾರಗಳ ಮೇಲೆ ದಾಳಿಗಿಳಿದು ಕೊನೆಗೆ ಮನುಷ್ಯರ ಮೇಲೂ ದಾಳಿ ಮಾಡುವುದರಲ್ಲಿ ಸಂಶಯವಿಲ್ಲ . ಆದ್ದರಿಂದ ಕ್ಯಾಮೆರಾ ಟ್ರಾಪ್ ಈ ಎಲ್ಲಾ ಅಂಶಗಳ ಮೇಲೆ ಬೆಳಕು ಚೆಲ್ಲುವುದರಿಂದ ಆದಷ್ಟು ಕಡೆ ಕ್ಯಾಮೆರಾ ಟ್ರಾಪ್ ಅಳವಡಿಸುವುದರ ಮೂಲಕ ಸ್ಪಷ್ಟ ಮಾಹಿತಿಗಳನ್ನು ಪಡೆಯಬೇಕು

. ಇವಿಷ್ಟು ಅರಣ್ಯ ಇಲಾಖೆ ಜವಾಬ್ದಾರಿಯಾದರೆ ನಾವು ಹಾಗಾದರೆ ಏನು ಮಾಡಬಹುದು ???  ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬನ ಕರ್ತವ್ಯ. ಈ ಸಂದರ್ಭಗಳಲ್ಲಿ ನಾವು ಮಾಡಬಹುದಾದ ಕೆಲಸವೆಂದರೆ ಆದಷ್ಟು ಗಾಳಿ ಸುದ್ದಿಗೆ ಕಿವಿಗೊಡದೆ ಇರುವುದು ಹಾಗೂ ಅದನ್ನು ಹರಡದೆ ಇರುವುದು. ಹುಲಿ ಇರುವಿಕೆ ಬಗ್ಗೆ ತಿಳಿದಲ್ಲಿ ತಕ್ಷಣ ಅದನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು. ಹುಲಿ ತಂದು ಬಿಟ್ಟಿದ್ದಾರೆ ಎನ್ನುವ ಜನರಿಗೆ ಆದಷ್ಟು ಮಟ್ಟಿಗೆ ತಿಳುವಳಿಕೆ ಹೇಳುವುದು ಹಾಗು ಹುಲಿಗಳ ಸಂರಕ್ಷಣೆ ಮಹತ್ವವನ್ನು ಆದಷ್ಟು ಜನರಿಗೆ ತಿಳಿಸುವುದು. ಅರಣ್ಯ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು ಅವರು ಮಾಡುವ ಸಂರಕ್ಷಣೆ ಕೆಲಸಕ್ಕೆ ನೆರವಾಗುವುದು. ಗೋವನ್ನು ನಾವು ದೇವತೆ ಎಂದು ಪೂಜಿಸುತ್ತೇವೆ..ಆದರೆ ಯಾವುದೇ ಕಾರಣಕ್ಕೂ ಹುಲಿಯನ್ನು ರಾಕ್ಷಸನಂತೆ ಕಾಣುವುದು ಸಲ್ಲ. ಹುಲಿ ಎಂದೊಡನೆ ಮನಸ್ಸಿನಲ್ಲಿ ಭೀತಿ ಮೂಡಿಸಿಕೊಳ್ಳುವುದರ ಬದಲು ಪ್ರೀತಿಯನ್ನ ಬೆಳೆಸಿಕೊಳ್ಳಿ. ಯಾವ ಹುಲಿಯೂ ಸುಮ್ಮನೆ ನಿಮ್ಮ ಮೈಮೇಲೆ ಎರಗುವುದಿಲ್ಲ ಹಾಗೆಂದು ಹುಲಿ ಕಂಡಿತೆಂದು ಅದರ ಜೊತೆ selfie ತೆಗೆದುಕೊಳ್ಳಲು ಮುಂದಾಗಬೇಡಿ 

.ಇವನಿಗೇನು ಮಾಡಲು ಕೆಲಸವಿಲ್ಲ ಹಾಗೆ ಮಾಡಿ ಹೀಗೆ ಮಾಡಿ ಎಂದು ಬರೆದಿದ್ದಾನೆ ಅಂದುಕೊಳ್ಳುತ್ತಿದ್ದೀರಾ? ಖಂಡಿತಾ ಇಲ್ಲ ನಾನು ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯದೇ ಇದ್ದಲ್ಲಿ ಅನಾಹುತ ಖಚಿತ ಎಂದು ಹೇಳಲು ಹೊರಟಿದ್ದೇನೆ ಅಷ್ಟೇ. ಇಂದು ಜಾನುವಾರಗಳ ಮೇಲೆ ಎರಗಿರುವ ಹುಲಿ ನಾಳೆ ಮನುಷ್ಯನ ಮೇಲೆ ಎರಗಬಹುದು. ಗೊತ್ತಲ್ಲ ನಿಮಗೆ ಇತ್ತೀಚಿಗೆ ಚಿಕ್ಕಮಗಳೂರು ನರಭಕ್ಷಕ ಹುಲಿಯ ವ್ಯಥೆಯ ಕತೆ. ನಮ್ಮ ರಾಷ್ಟ್ರ ಪ್ರಾಣಿಯನ್ನು ಕೊಂದಾದರೂ ತರುತ್ತೇವೆ ಎಂದು ಪಣ ತೊಟ್ಟ 300 ಮಂದಿ...ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ.ಕಾಡಿನಲ್ಲಿ ಸ್ವಚ್ಚಂದವಾಗಿ ಓಡಾಡಿಕೊಂಡಿದ್ದ ಹುಲಿಯನ್ನು ನರಭಕ್ಷಕನನ್ನಾಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿಕೊಳ್ಳೋಣ ನಮ್ಮ ಆತ್ಮಸಾಕ್ಷಿಗೆ... 122 ಕೋಟಿ ಜನಸಂಖ್ಯೆ...1500 ಹುಲಿಗಳು  ಯುದ್ದ ಮಾಡಿ ಬದುಕಲು ಸಾದ್ಯವೇ  ಪ್ರಕೃತಿಯ ಆ ಸುಂದರ ಮೂಖ ಪ್ರಾಣಿಗೆ ???????????

.ಇಂತಹ ಘಟನೆ ನಮ್ಮ ಮಲೆನಾಡಿನಲ್ಲೂ ನಡೆಯಬೇಕೇ ?? ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯದೇ ಇದ್ದರೆ  ಖಂಡಿತಾ ಇಂತಹ ಘಟನೆ ನಡೆದೇ ನಡೆಯುತ್ತದೆ..

. ಹಾಗೆ ಮಾಡಬಹುದು ಹೀಗೆ ಮಾಡಬಹುದು ಎಂದು ಹೇಳುವುದು ಸುಲಭ ಮಾಡುವುದರ ಕಷ್ಟ ಕುಳಿತುಕೊಂಡು ಬ್ಲಾಗ್ ಬರೆಯುವವರಿಗೆ ಹೇಗೆ ಗೊತ್ತಾಗುತ್ತದೆ ಎಂದು ಇದನ್ನು ಓದಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಜನರು ಪ್ರಶ್ನೆ ಮಾಡಬಹುದು...ಆದರೆ ಬೇರೆ ವಿಧಿ ಇಲ್ಲ.. ಕಷ್ಟವಾದರೂ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲೇಬೇಕು. ಕೇವಲ 100 ವರ್ಷಗಳ ಅಂತರದಲ್ಲಿ 80000 ಇದ್ದ ಹುಲಿಗಳ ಸಂಖ್ಯೆಯನ್ನು 1800 ತಂದವರಿಗೆ 1800 ರನ್ನು 0ಗೆ ತರುವುದು ಕೇವಲ just a matter of time. ಹುಲಿ ಉಳಿಯಲು ಕಾಡು ಬೇಕು ಹಾಗು ಆ ಕಾಡು ಉಳಿಯಲು ಹುಲಿಗಳು ಬೇಕು ಎಂದು ಸಾವಿರಾರು ವರ್ಷಗಳ ಹಿಂದೆ ನಮ್ಮ ಮಹಾಭಾರತದಲ್ಲೇ ಹೇಳಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ....ನಮ್ಮ ರಾಷ್ಟ್ರೀಯ ಪ್ರಾಣಿಯನ್ನೇ ಉಳಿಸಿಕೊಳ್ಳದೆ ಇದ್ದರೆ ನಾವಿನ್ನೇನನ್ನು ಉಳಿಸಿಕೊಳ್ಳುತ್ತೇವೆ ...............?????????????????

Thursday, January 15, 2015

ಯಾರು ಈ ಪ್ರಾಣಿ ಹಂತಕರು ???

. ವನ್ಯ ಜೀವಿ ಸಂರಕ್ಷಣೆ ಎಂದು ಒಂದೆಡೆ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ! ಪ್ರಾಣಿ ಪ್ರಿಯರಂತೂ ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಇದರ ಬಗ್ಗೆ ಚರ್ಚೆಗಳನ್ನು ನಡೆಸುತ್ತಾರೆ ! ನಿಜವಾದ ಕಾಳಜಿ ಇರುವವರು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಾರೆ !! ಇದರೆಲ್ಲದರ ನಡುವೆಯೇ ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆದ ಕೆಲವು ಇಮೇಜ್ ಗಳು ನಿಜಕ್ಕೂ ಗಾಬರಿಯನ್ನುಂಟು ಮಾಡಿದವು

. ಕೋವಿಗಳನ್ನು ಹಿಡಿದುಕೊಂಡು ಕಾಡಲೆಯುತ್ತಾ, ಮೊಲವೊಂದನ್ನು ಹಿಡಿದು ಪೋಸ್ ಕೊಡುತ್ತಾ ರಾಜಾರೋಷವಾಗಿ 'ವನ್ಯ ಜೀವಿ ಸಂರಕ್ಷಣಾ ಕಾಯ್ದೆ' ಗೆ ಸೆಡ್ಡು ಹೊಡೆದು ತಮ್ಮ ಸಾಹಸವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಆ  'ಮನುಷ್ಯರು???' ನ್ನು ನೋಡಿದ ಯಾವುದೇ ಪ್ರಾಣಿ ಪ್ರಿಯನ ರಕ್ತ ಕುದಿಯದೆಯೇ ಇದ್ದದ್ದಿಲ್ಲ

. ಇದನ್ನು ನೋಡಿದ ಕೂಡಲೇ ನಮ್ಮ ಸಾಮಾಜಿಕ ಜಾಲ ತಾಣದ ವನ್ಯ ಜೀವಿ ಸಂರಕ್ಷಕರು ಇವರ ಕಾರ್ಯದ ವಿರುದ್ದ ಮುಗಿಬಿದ್ದರು..ಸಾಧ್ಯವಾದಷ್ಟು ಪೇಜ್ ಗಳಲ್ಲಿ ಅದನ್ನು ಶೇರ್ ಮಾಡಿದರು. ಅವರ 'ಪೋಸ್ಟ್ ಶೇರ್' ಪ್ರಭಾವದಿಂದಲೋ ಏನೋ ಇದು ಅರಣ್ಯ ಇಲಾಖೆಯ ಗಮನಕ್ಕೆ ಹೋಗಿ ಇಂದು ಮೀಡಿಯಾಗಳಲ್ಲಿ ಅದರ ಬಗ್ಗೆ ಪ್ರಸ್ತಾಪವಾಗಿದೆ

.ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವನ್ಯ ಜೀವಿ ಪ್ರಧಾನ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾರವರು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ವನ್ಯ ಜೀವಿ ಸಂರಕ್ಷಣಾ ಖಾಯಿದೆಯಡಿಯಲ್ಲಿ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.  ಕರ್ನಾಟಕದ ಭಾಗದಲ್ಲಿರುವ ನೀಲಗಿರಿ Biosphere ನಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ

. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಇದರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ರಾಜಾರೋಷವಾಗಿ ವನ್ಯ ಜೀವಿ ಸಂರಕ್ಷಣೆಗೆ ಸೆಡ್ಡು ಹೊಡೆಯುವ ಇಂತಹ ಜನರು ಬೆಳೆಯುವುದರಲ್ಲಿ ಸಂಶಯವಿಲ್ಲ

. ಇವರ ಕೃತ್ಯಗಳನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ವಿರೋಧಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಸಾಮಾಜಿಕ ಜಾಲತಾಣ ವನ್ಯ ಜೀವಿ ಪ್ರಿಯರಿಗೊಂದು ನಮ್ಮ ಕಡೆಯಿಂದ ಥ್ಯಾಂಕ್ಸ್ ಹೇಳೋಣ ಅಲ್ಲವೇ....
ಚಿತ್ರ ಕೃಪೆ - Internet

Tuesday, January 13, 2015

ಹೊಸ ಬ್ಲಾಗ್ ????

ಪ್ರಿಯ ಓದುಗ ಮಿತ್ರರೇ ಸರಿಸುಮಾರು ಒಂದು ವರ್ಷದಿಂದ ನಾನು ಬ್ಲಾಗ್ ನಲ್ಲಿ ಯಾವುದೇ ಪೋಸ್ಟ್ ಗಳನ್ನು ಪ್ರಕಟಿಸಿಲ್ಲ. ಯಾವುದೋ technology ಸಮಸ್ಯೆಯಿಂದ ನನ್ನ ಬ್ಲಾಗ್ ನಲ್ಲಿದ್ದ ಎಲ್ಲಾ ಪೋಸ್ಟ್ ಗಳ ಇಮೇಜ್ ಗಳು ಅಳಿಸಿಹೋದವು. ಈ ಬಗ್ಗೆ ಗೂಗಲ್ ನವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಕಳೆದ ವರ್ಷ ಹೊಸ ಲೇಖನಗಳನ್ನು ಪ್ರಕಟಿಸಿಲ್ಲ. ಈಗ ಮತ್ತೆ ಬಂದಿದ್ದೇನೆ. ಹೊಸದೊಂದು ಬ್ಲಾಗ್ ಮಾಡಿ ಅಲ್ಲಿ ಹೊಸ ಲೇಖನಗಳನ್ನು ಪ್ರಕಟಿಸುವ ಯೋಚನೆ ನನ್ನಲ್ಲಿದೆ. ಇದಕ್ಕೆ ನಿವೇನನ್ನುತ್ತೀರಿ ? ಹೊಸ ಬ್ಲಾಗ್ ತೆರೆಯಲೋ ಅಥವಾ ಇಲ್ಲೇ ಹೊಸ ಲೇಖನಗಳನ್ನು ಪ್ರಕಟಿಸಲೋ?????? ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆ....