Wednesday, April 18, 2012

-ಬಿಸಿಲ ದಗೆಗೆ ಬೇಯುತ್ತಿದೆ ಜೀವ ಸಂಕುಲ-
.ಅಬ್ಬಾ....ಏನು ಸೆಖೆ ರೀ ಈ ವರ್ಷ...ಹಿಂದೆಂದೂ ನೋಡಿರಲಿಲ್ಲ ಇಂತಹ ಸೆಖೆ ಯನ್ನು....

ಇಂಥ ಮಾತುಗಳು ಈಗ ಸರ್ವೆ ಸಾಮಾನ್ಯವಾಗಿದೆ.ಇಡೀ ಜೀವ ಸಂಕುಲವೇ ಈ ಬಾರಿಯ ಬಿರು ಭೇಸಿಗೆಗೆ ತತ್ತರಿಸಿಹೋಗಿದೆ

.ಭಾರತದ ಹಲವು ಪ್ರದೇಶಗಳಲ್ಲಿ ಭೇಸಿಗೆ ಈ ಬಾರಿ ತನ್ನ ರುದ್ರರೂಪವನ್ನು ತೋರಿಸಿದೆ.ಕರ್ನಾಟಕದಲ್ಲಂತೂ ಬರ ಪರಿಸ್ಥಿತಿ ತಲೆದೂರಿದೆ

.ಸಾಧಾರಣವಾಗಿ ಉತ್ತರ ಕರ್ನಾಟಕದಲ್ಲಿ ಹಾಗು ಕರಾವಳಿ ಜಿಲ್ಲೆಗಳಲ್ಲಿ  ಯಾವಾಗಲು ಹೆಚ್ಚಿನ  ತಾಪಮಾನವಿರುತ್ತದೆ.ಆದರೆ ಈ ಬಾರಿ ಆ ತಾಪಮಾನವನ್ನೂ ಮೀರಿ ಉಷ್ಣಾಂಶ ದಾಖಲಾಗುತ್ತಿದೆ

.ಇನ್ನು ಮಲೆನಾಡಿನಲ್ಲಿ ಮಿತಿ ಮೀರಿದ ಉಷ್ಣಾಂಶ ಇಲ್ಲಿನ ಜನರ ಬದುಕಿನ ಮೇಲೆ ನೇರ ಪರಿಣಾಮವನ್ನು ಬೀರಲಾರಂಭಿಸಿದೆ

.ಇಂತಹ ಹೆಚ್ಚಿನ ಉಷ್ಣಾಂಶವನ್ನು ನಾನು ಕೂಡ ಈ ಹಿಂದೆ ನೋಡಿರಲಿಲ್ಲ.ಶುಭ್ರ ನೀಲಿ ಆಕಾಶದಲ್ಲಿ ಮಧ್ಯಾನ್ಹದ ನಂತರ ಮೋಡಗಳು ಕಾಣುತ್ತವೆಯಾದರೂ ಅವುಗಳ ಮಳೆಯಾಗಿ ಪರಿವರ್ತನೆಗೊಳುತ್ತಿಲ್ಲ .ಎಲ್ಲೊ ಒಂದೆರಡು ಕಡೆ ಮಳೆ ಬಂದರೂ ಕೂಡ ಮಳೆ ಬಂದು ಹೋದ ನಂತರದ ದಿನಗಳಲ್ಲಿ ತಾಪಮಾನ ಅತ್ಯಧಿಕವಾಗಿರುತ್ತದೆ 

.ಮಲೆನಾಡಿನ ಜೀವ ನದಿ ತುಂಗೆಯಂತೂ ಬಳಲಿ ಬೆಂಡಾಗಿ ಹೋಗಿದ್ದಾಳೆ.ಹೆಚ್ಚಿನ ಕಡೆಯಲ್ಲಿ ಅವಳನ್ನು ನದಿ ಎಂದು ಕರೆಯಲು ಸಹ ಆಗದ ಸ್ಥಿತಿಯಲ್ಲಿದ್ದಾಳೆ

.ಇನ್ನು ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಮರಗಳ ಮಾರಣ ಹೋಮದಿಂದ ಉಷ್ಣಾಂಶ ಮಿತಿಮೀರತೊಡಗಿದೆ.ಮರಗಳ ಮಾರಣ ಹೋಮದ ಬಿಸಿ ಈಗಾಗಲೇ ಬೆಂಗಳೂರಿಗರಿಗೆ ತಟ್ಟುತ್ತಿದೆ   

.ಇಷ್ಟೆಲ್ಲಾ ಉಷ್ಣಾಂಶ  ಏರುತ್ತಿದ್ದರೂ ಇದು ಮಾನವನ ಮೇಲೆ ಬೀರುವ ಪರಿಣಾಮಕ್ಕಿಂತ ವನ್ಯ ಜೀವಿಗಳ ಮೇಲೆ ಬೀರುವ ಪರಿಣಾಮ ಅತ್ಯಂತ ಘೋರವಾದದ್ದು

.ನಾವಾದರೂ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಂಡು, ಕೃತಕ ಹವಾಮಾನ ಸೃಷ್ಟಿಸಿಕೊಳ್ಳುತ್ತೇವೆ.ಅದೇ ಕಾಡು ಪ್ರಾಣಿಗಳ ಪರಿಸ್ಥಿತಿ.... ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಬಿಸಿಲಿಗೆ ಬರಲೇಬೇಕು..ಅಲ್ಲದೆ ನಮಂತೆ ಅವುಗಳಿಗೆ ಕೃತಕ ಹವಾಮಾನ ಸೃಷ್ಟಿಸಲು ಸಾಧ್ಯವಿಲ್ಲ

.ಮುಖ್ಯವಾಗಿ ಕಾಡು ಪ್ರಾಣಿಗಳಿಗೆ ಎದುರಾಗುವ ಸಮಸ್ಯೆ ನೀರಿನದ್ದು.ನೀರಿನ ಹೊಂಡಗಳು,ಕೆರೆಗಳು ಬಿಸಿಲಿನ ತೀವ್ರತೆಗೆ ಬತ್ತಿ ಹೋಗಿರುವುದರಿಂದ ಕುಡಿಯಲು ನೀರಿಲ್ಲದೆ ಅವುಳಗ ಜೀವನ ಮೂರಾಬಟ್ಟೆಯಾಗಿರುವುದಂತೂ ಸತ್ಯ

.ದೈತ್ಯ ಜೀವಿ ಆನೆಗಳಿಗಂತೂ ಭೇಸಿಗೆ ಜೀವನ ಬಲು ಕಷ್ಟ.ಅವುಗಳಿಗೆ ದಿನಕ್ಕೆ 100 ರಿಂದ 150 ಲೀಟರ್ ನಷ್ಟು ನೀರಿನ ಅವಶ್ಯಕತೆ ಇರುವುದರಿಂದ ಅಷ್ಟು ಪ್ರಮಾಣದ ನೀರನ್ನು ಅರಸುತ್ತಾ ಸಾಗುವ ಅವುಗಳ ದಾರಿಯಲ್ಲಿ ನಾವು ಮನುಷ್ಯರು ರೆಸಾರ್ಟ್ ಗಳನ್ನು,ಜಮೀನನ್ನು ಮಾಡಿ ಕೂತಿರುವುದರಿಂದ ಅವುಗಳು  ಬಹಳ ಕಷ್ಟ ಪಡುತ್ತವೆ

.ಆನೆಗಳು ಈ ರೀತಿ ನೀರಿಗೆ ಕಷ್ಟ ಪಡುವ  ಸನ್ನಿವೇಶವನ್ನು ವನ್ಯ ಜೀವಿ ತಜ್ಞ ಸಂಜಯ್ ಗುಬ್ಬಿಯವರು ಬಂಡೀಪುರ ಅಭಯಾರಣ್ಯದಲ್ಲಿ ಚಿತ್ರಿಸಿದ್ದಾರೆ

.ಒಂದು ಭೇಸಿಗೆಯ ಮಧ್ಯಾನ್ನದಲ್ಲಿ ಸಂಜಯ್ ರವರು ಬಂಡೀಪುರದಲ್ಲಿ ಚಿತ್ರ ತೆಗೆಯುತ್ತಿದ್ದಾಗ ಕಂಡು ಬಂದ ಘಟನೆಯನ್ನು ಕೆಳಗೆ ಚಿತ್ರ ಸಮೇತವಾಗಿ ಪ್ರಕಟಿಸಲಾಗಿದೆ

.ಸುಮಾರು ಮಧ್ಯಾನ್ಹ  3.20 ರ ಸಮಯ.ನೀರನ್ನು ಅರಸುತ್ತಾ ಬಳಲಿರುವ ಆನೆಗಳ ಗುಂಪು ಅಲ್ಲೇ 600 ಮೀಟರ್ ದೂರದಲ್ಲಿದ್ದ ಒಂದು ನೀರಿನ ಹೊಂಡದ ಬಳಿ ತೆರಳಲು ಸಾಗುತ್ತವೆ .ಈ ಆನೆಯ ಗುಂಪಿನಲ್ಲಿ ಮರಿಗಳು ಕೂಡ ಇವೆ.ಆದರೆ ಅದರ ದಾರಿಯಲ್ಲಿ  Soo Called ಬುದ್ದಿವಂತ ಮನುಷ್ಯ ತನ್ನ ತೆವಲು ತೀರಿಸಿಕೊಳ್ಳಲು ರೆಸಾರ್ಟ್ ಗಳನ್ನು ಮಾಡಿ,ಅದಕ್ಕೆ ಕಾಡು ಪ್ರಾಣಿಗಳಿಂದ ತೊಂದರೆ ಆಗದಿರಲಿ ಎಂದು ಒಂದಷ್ಟು ನಾಯಿಗಳನ್ನೂ ಹಾಗು Security guard ಗಳನ್ನು ನೇಮಕ ಮಾಡಿದ್ದಾನೆ

.ಹೀಗಾಗಿ ಕೇವಲ 600 ಮೀಟರ್ ದೂರದ ನೀರಿನ ಹೊಂಡದ ಬಳಿ ಬರಲು ಈ ಆನೆಗಳ ಗುಂಪಿಗೆ ಒಂದು ಘಂಟೆಗೂ ಹೆಚ್ಚು ಕಾಲ ಹಿಡಿಯುತ್ತದೆ.ಮೊದಲೇ ಬಳಲಿ ಬೆಂಡಾಗಿ ಹೋಗಿರುವ ಆನೆಗಳಿಗೆ ಅಲ್ಲಿ ಮಾನವನಿಂದಾದ ಮೊದಲ ''ಉಪಕಾರ??'' ಇದು

 .ಅಂತೂ ಕಷ್ಟ ಪಟ್ಟು ನೀರಿನ ಹೊಂಡದ ಬಳಿ ಬರುವ ಆನೆಗಳು ತಮ್ಮ ದಾಹವನ್ನು ನೀಗಿಸಿಕೊಳ್ಳಲು ನೀರನ್ನು ಕುಡಿಯಲು ಶುರು ಮಾಡುತ್ತವೆ

.ಅಷ್ಟರಲ್ಲಿ ಇದ್ದಕ್ಕಿದಂತೆ ಒಂದು ಹೆಣ್ಣು ಆನೆ ಹಿಂದೆ ತಿರುಗಿ ಅಪಾಯದ ಕೂಗನ್ನು ಕೂಗುತ್ತದೆ
  .ನೋಡಿದರೆ ಅಲ್ಲಿ ರೆಸಾರ್ಟ್  ನಾಯಿಗಳು ಆನೆಗಳ ಮೇಲೆ ಯುದ್ದಕ್ಕೆ ಬಂದಿರುತ್ತವೆ


                             Image Courtesy-ಸಂಜಯ್ ಗುಬ್ಬಿ

.ಆನೆಗಳು ಭೇಸಿಗೆಯಲ್ಲಿ ಹೆಚ್ಚಿನ ಸಮಯವನ್ನು ನೀರಿನ ಹೊಂಡಗಳ ಬಳಿ ಕಳೆಯುತ್ತವೆ.ಆದರೆ ಇಲ್ಲಿ ಅವಿನ್ನೂ ಬಂದು ಸರಿಯಾಗಿ ನೀರು ಕುಡಿದಿಲ್ಲ ಅಷ್ಟರಲ್ಲೇ ಅವುಗಳು ನಾಯಿಗಳ ದೆಸೆಯಿಂದ ನೀರಿನ ಹೊಂಡ ಬಿಟ್ಟು ಬಂದ ದಾರಿಯಲ್ಲಿ ವಾಪಾಸ್ ಸಾಗುತ್ತವೆ .ನೀವು ಕೇಳಬಹುದು ಆನೆಗಳು ಎಲ್ಲಿ ,ನಾಯಿಗಳು ಎಲ್ಲಿ ಎಂದು ಆದರೆ ಈ ಆನೆಗಳ ಗುಂಪಿನಲ್ಲಿ ಮರಿಗಳಿವೆ.ಆನೆಗಳು ಅವುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತವೆ .ಹೀಗೆ ಒಂದೆರಡು ಆನೆ ಮರಿಗಳನ್ನು ಸುತ್ತುವರಿದು ಅವುಗಳಿಗೆ ರಕ್ಷಣೆ ಕೊಟ್ಟರೆ,ಉಳಿದೆರಡು ಆನೆಗಳು  ನಾಯಿಗಳನ್ನು ಓಡಿಸಲು ಮುಂದಾಗುತ್ತವೆ .ಕೊನೆಗೆ ನಾಯಿಗಳ ಕಾಟದಿಂದ ಭೆಸತ್ತ ಆನೆಗಳು ಬಂದ ದಾರಿಯಲ್ಲೇ ತಮ್ಮ ಮರಿಗಳನ್ನು ಸುತ್ತುವರಿದುಕೊಂಡೇ ತೆರಳುತ್ತವೆ .ಮತ್ತೆ ಅವುಗಳು ನೀರನ್ನು ಕುಡಿಯಲು ಅದಿನ್ನೆಷ್ಟು ದೂರ ಸವೆಸಬೇಕೂ ಎಂದು ಸಂಜಯ್ ಕಳವಳ ವ್ಯಕ್ತ ಪಡಿಸುತ್ತಾರೆ

.ನಿಜವಾಗಿಯೂ ಇದು ಮಾನವ ಸಮಾಜ ತಲೆ ತಗ್ಗಿಸುವಂತಹ ದೃಶ್ಯ. ನಾವಿರುವ ಜಾಗಗಳನ್ನು ಹಾಳು ಮಾಡಿದ್ದಲದೇ ಕಾಡಿಗೆ ನುಗ್ಗಿ,ಅವುಗಳ ಬದುಕನ್ನು ಹಿಂಸಿಸುವ ಮಾನವನ ಈ ರಾಕ್ಷಸೀ ಗುಣ ಮಾನವನ್ನ ವಿನಾಶವನ್ನು ಸೂಚಿಸುವ ಮುನ್ಸೂಚನೆಯಷ್ಟೇ

.ಇದು ಕೇವಲ ಅನೆಗಳ ವ್ಯತೆಯಲ್ಲ,ಕಾಡಿನ ಎಲ್ಲಾ ಪ್ರಾಣಿಗಳು ಒಂದೆಡೆ ಭೇಸಿಗೆಯಿಂದ ನರಳುತ್ತಿದ್ದರೆ,ಇನ್ನೊಂದೆಡೆ ಮಾನವನ ಕಾಟದ  ಮದ್ಯೆ ನಲುಗುತ್ತಿವೆ.ಕಾಡು ಪ್ರಾಣಿಗಳ ದಾರಿಯಲ್ಲಿ ರೆಸಾರ್ಟ್ ಮಾಡುವುದು,ಅವುಗಳಿಗೆ ಅಲ್ಪ ಸ್ವಲ್ಪ ಉಳಿದ ಹುಲ್ಲಿಗೆ ಬೆಂಕಿ ಕೂಡುವುದು ಇಂತಹ ಮಾನವನ ನೀಚ ಕೃತ್ಯಗಳು ಅವುಗಳಿಗೆ ಭೇಸಿಗೆಗಿಂತ ಹೆಚ್ಚು ಕಷ್ಟವನ್ನು ನೀಡುತ್ತಿದೆ

.ಆದರೆ ಪ್ರಕೃತಿ ಯಾರನ್ನೂ ಬಿಡುವುದಿಲ್ಲ... ಭೇಸಿಗೆಯ ದಗೆಯಲ್ಲಿ ಮಾನವ ಒದ್ದಾಡುತ್ತಿರುವುದೇ ಇದಕ್ಕೆ ಉದಾಹರಣೆ.ಮಾನವನೇನೂ ಕೃತಕ ವಾತಾವರಣ ನಿರ್ಮಿಸಿಕೊಂಡು ಭೇಸಿಗೆಯನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದು ಹೇಳಬಹುದು.ಆದರೆ ತಿನ್ನುವ ಅನ್ನ,ಉಸಿರಾಡುವ ಗಾಳಿ,ಕುಡಿಯುವ ನೀರು ಇವುಗಳನ್ನು ಕೃತಕವಾಗಿ ಸೃಷ್ಟಿಸಿ ಬದುಕುವುದು ಮಾನವನಿಗೆ ಯಾವುದೇ ಯುಗದಲ್ಲೂ ಸಾಧ್ಯವಿಲ್ಲ.ಇದನ್ನರಿತು ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು

.ಯಾವ ಪ್ರದೇಶದಲ್ಲಿ ಕಾಡು ಸಮೃದ್ದವಾಗಿರುತ್ತದೂ ಅಂತಹ ಪ್ರದೇಶದ ಜನ ಎಂದಿಗೂ ಭೇಸಿಗೆಯ ಹೊಡೆತದಿಂದಾಗಲಿ  ಅಥವಾ ಮಳೆಯ ಅರ್ಭಟದಿಂದಾಗಲಿ  ನೋವನ್ನು ಅನುಭವಿಸುವುದಿಲ್ಲ.ಅದೇ ಕಾಡನ್ನು ಕಡಿದು ನಾಡನ್ನು ಬೆಳೆಸುತ್ತಾ ಹೋದರೆ ಇಂದು ನಾವು ಮಲೆನಾಡಿನಲ್ಲಿ ಅನುಭವಿಸುತ್ತಿರುವ ಪರಿಸ್ಥಿತಿ ಉದ್ಭವವಾಗುತ್ತದೆ

.ಇನ್ನಾದರೂ ನಾವು ಎಚ್ಚೆತ್ತು ಕಾಡನ್ನು ಹೆಚ್ಚು ಹೆಚ್ಚು ಬೆಳಿಸಿ ವಾತಾವರಣವನ್ನು ಕಪಾಡಬೇಕಿದೆ.ಅದರಿಂದಾಗಿ ಮಾನವ ಹಾಗು ವನ್ಯ ಜೀವಿಗಳು ಇಬ್ಬರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು

ಇಲ್ಲವಾದಲ್ಲಿ
.ಹಿಂದೊಮ್ಮೆ ತನ್ನ ಮೇಲೆ ನಡೆದ ವಾತಾವರಣದ ರೌದ್ರತೆಯನ್ನು ಮತ್ತೆ ಈಗ ನಡೆಸಲು ಈ ಧರಿತ್ರಿ ಸಿದ್ದಳಾಗುತ್ತಾಳೆ 

-ಪ್ರಕೃತಿಯನ್ನು ರಕ್ಷಿಸಿ- 

(ವಿಶೇಷ  ಸೂಚನೆ -ಈ ಬ್ಲಾಗ್ ಗೆ ಹೊಸ ರೂಪ ನೀಡಿರುವುದರಿಂದ ಹಿಂದೆ ಇದ್ದ ಹಲವು Gadget ಗಳು ಈಗ ಲಭ್ಯವಿರುವುದಿಲ್ಲ.Blog Archive ಹಾಗು ಇನ್ನಿತರ ಮಾಹಿತಿಗಾಗಿ ಬ್ಲಾಗ್ ಪೇಜ್ ನ ಭಾಲಭಾಗದಲ್ಲಿರುವ dock ಮೇಲೆ ಕ್ಲಿಕ್ಕ್ಕಿಸಿ)


Tuesday, April 10, 2012

-ಮೋಡಗಳು-
.ಬಿರು ಭೇಸಿಗೆಯ ಈ ಸಮಯದಲ್ಲಿ ಕೆಲವು ಕಡೆ ಮಳೆ ಸುರಿಯಲಾರಂಭಿಸಿದೆ

.ಹಲವೆಡೆ ಈಗ ವಾತಾವರಣದಲ್ಲಿ  ಮಧ್ಯಾಹ್ನದವರೆಗೆ ಸುಡು ಬಿಸಿಲಿರುವ ಶುಭ್ರ  ಆಕಾಶ,ಆನಂತರ  ನಿಧಾನವಾಗಿ ಹಲವು ಬಗೆಯ ಮೋಡಗಳು ಕಾಣಲಾರಂಭಿಸುತ್ತವೆ.ವಿಚಿತ್ರ ವಿಚಿತ್ರ ಅಕಾರದ ಮೋಡಗಳು ಒಂದಾಗುವುದು,ದೂರವಾಗುವುದು,ಬಿಳಿಯ ಮೋಡಗಳು ಕಪ್ಪು ಬಣ್ಣಕ್ಕೆ ತಿರುಗುವುದು ಇಂತಹ ಹಲವಾರು ಪ್ರಕ್ರಿಯೆಗಳು ನಡೆಯುತ್ತಿರುತ್ತದೆ 

.ನಾನು ಹಲವಾರು ಬಾರಿ ಈ ಮೋಡಗಳ ಆಟವನ್ನು ನೋಡಿ enjoy ಮಾಡುತ್ತಿದ್ದೆ.ಈ ಮೋಡಗಳು ಹುಟ್ಟುವುದು ಅವುಗಳಿಂದ ಮಳೆ ಸುರಿಯುವುದು,ಗುಡುಗು,ಮಿಂಚು ಇವುಗಳ ಬಗ್ಗೆ ತಿಳಿಯಬೇಕೆಂದು ಮನವು ಹಂಬಲಿಸುತ್ತಿತ್ತು

.ಹೀಗೆ ಒಂದು ದಿನ ಮೋಡಗಳ ಬಗ್ಗೆ ವಿವರವಿರುವ ಒಂದು ಡಾಕ್ಯುಮೆಂಟರಿ ನೋಡಿದೆ.ಅದರಲ್ಲಿ ಮೋಡದ ಹಲವು ಬಗೆಗಳು ಹಾಗು ಮಿಂಚು ಗುಡುಗುಗಳ ಹುಟ್ಟುವಿಕೆಯ ಬಗ್ಗೆ ವಿವರಗಳಿದ್ದವು

.ಇನ್ನೇನು ಎರಡು ತಿಂಗಳಲ್ಲಿ ರಾಜ್ಯಕ್ಕೆ ಮಾನ್ಸೂನ್ ಆಗಮನವಾಗುತ್ತದೆ.ಆಗ ಮೋಡಗಳ ಬಗ್ಗೆ ತಿಳಿಯುವವರಿಗೆ  ಒಳ್ಳೆಯ ಕಾಲ.ಆದ್ದರಿಂದಲೇ ನನಗೆ ತಿಳಿದ ಮೋಡಗಳ ವಿವರಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ

.ಮೋಡಗಳಲ್ಲಿ ಹಲವಾರು ಬಗೆಗಳಿವೆ.ನಾನು ಇಲ್ಲಿ ಹೇಳಹೊರಟಿರುವುದು ಮುಖ್ಯವಾದ 5 ಬಗೆಯ ಮೋಡಗಳನ್ನು

.ಈ 5 ಬಗೆಯ ಮೋಡಗಳು

1) CUMULUS


.ಈ ಬಗೆಯ ಮೋಡಗಳನ್ನು ಬಿಸಿಲಿನ ದಿನಗಳಲ್ಲಿ ನೋಡಬಹುದು.ಭೂಮಿಯಿಂದ ಸುಮಾರು 2000 ದಿಂದ 3000 ಅಡಿ ಎತ್ತರದಲ್ಲಿ CUMULUS ಮೋಡದ ಬಗೆಯು ಕಾಣಸಿಗುತ್ತದೆ

.ಸಣ್ಣದಾಗಿ ಸುಂದರವಾಗಿ ಕಾಣುವ ಈ ಮೋಡಗಳು ಅದರ ಮೇಲಿನ ಗಾಳಿಯ ವರ್ತನೆಯ ಸಲುವಾಗಿ ಒಂದಕ್ಕೊಂದು ಕೂಡಿ ಎತ್ತರಕ್ಕೆ ಬೆಳೆಯುತ್ತಾ ಸಾಗುತ್ತವೆ.ಇದು CUMULUS CONGESTUS ಎನ್ನುವ ಇನ್ನೊಂದು ಬಗೆಯ ಮೋಡಗಳ ಸೃಷ್ಟಿಗೆ ಕಾರಣವಾಗುತ್ತದೆ.ಮಧ್ಯಾಹ್ನದ ಮೊದಲು ಆಕಾಶದಲ್ಲಿ ಈ CUMULUS CONGESTUS ಹುಟ್ಟಿದ್ದೇ ಆದಲ್ಲಿ ಅಂದು ಮಧ್ಯಾಹ್ನ ಮಳೆ ಬರುವ ಲಕ್ಷಣಗಳಿರುತ್ತದೆ 

.ಸೂರ್ಯನ ಬಿಸಿಲಿಗೆ ಕಾಯುವ ಭೂಮಿಯಿಂದ ಮೇಲೇಳುವ ತೇವಾಂಶ ಬರಿತ  ಗಾಳಿಯೇ ಈ CUMULUS ಮೋಡಗಳನ್ನು ಹುಟ್ಟುಹಾಕುವುದು

2) STRATOCUMULUS


.ಭೂಮಿಯಿಂದ 2000-6500 ಅಡಿಯ ಎತ್ತರದಲ್ಲಿ ಈ ಬಗೆಯ ಮೋಡಗಳು ಕಂಡುಬರುತ್ತವೆ

.ಈ ಬಗೆಯ ಮೋಡಗಳಿಂದ ಮಳೆ ಅಥವಾ ಹಿಮ ಬೀಳುತ್ತದೆ

.CUMULUS ಮೋಡದ ಮೇಲಿರುವ ಬಿಸಿ ಗಾಳಿಯು ಅದನ್ನು ವಿಸ್ತರಿಸುತ್ತಾ ಹೋಗಿ ಮತ್ತೊಂದು CUMULUS ಮೋಡದ ಜೊತೆ ಒಂದುಗೂಡಿಸಿ ಈ STRATOCUMULUS ಮೋಡಗಳ ಉತ್ಪತ್ತಿಗೆ ಕಾರಣವಾಗುತ್ತದೆ

3)CUMULONIMBUS


.2000 ದಿಂದ 450000 ಅಡಿ ಎತ್ತರದ ವರೆಗೆ ಕಂಡು ಬರುವ ಈ ಮೋಡಗಳು ಮೋಡಗಳಲ್ಲೇ ಅತ್ಯಂತ ರೌದ್ರಾವತಾರ ತಾಳುವ ಮೋಡಗಳು

.ಈ ಬಗೆಯ ಮೋಡಗಳು ಗುಡುಗು ಸಹಿತ ಮಳೆಯನ್ನು ತರುತ್ತವೆ

.CUMULUS ಮೋಡಗಳೇ ಈ ಬಗೆಯ ಮೋಡಗಳಿಗೆ ಮೂಲ.ಮೋಡಗಳಲ್ಲೇ ಅತ್ಯಂತ ಎತ್ತರವಾದ ಮೋಡ  ಈ CUMULONIMBUS

.CUMULONIMBUS ಮೋಡಗಳಲ್ಲಿನ ಒಟ್ಟು ಶಕ್ತಿ ಹತ್ತು ಅಣು ಬಾಂಬ್ ಗಳಿಗೆ ಸಮ

.ಈ CUMULONIMBUS ಮೋಡಗಳಲ್ಲಿ ಇರುವ ಕಣಗಳು ಮೇಲೇರಿದಂತೆ ಗಾತ್ರದಲ್ಲಿ  ದೊಡ್ಡದಾಗುತ್ತವೆ.ಇದೇ ಸಮಯದಲ್ಲಿ ಹೊಸದಾದ ಕಣಗಳು ಮೋಡದ ಕೆಳಗಿನಿಂದ ಮೇಲೇರಲು ಪ್ರಾರಂಭಿಸುತ್ತವೆ.ಅತ್ತ ಮೇಲೇರಿದ ದೊಡ್ಡ ಕಣಗಳು ಕೆಳಗೆ ಬರುವ ಸಮಯದಲ್ಲಿ ಮೇಲೇರುತ್ತಿರುವ ಸಣ್ಣ ಕಣ್ಣಗಳೊಂದಿಗೆ ಘರ್ಷಣೆಗೆ ಒಳಗಾಗುತ್ತವೆ.ಈ ಘರ್ಷಣೆಯಲ್ಲಿ ಅವುಗಳು ತಮ್ಮ ಚಾರ್ಜ್ (+ And - Charge)ಗಳನ್ನು ಬದಲಾವಣೆ ಮಾಡಿಕೊಳ್ಳುತ್ತವೆ.ಹೀಗೆ ಬದಲಾದ ಚಾರ್ಜ್ ಯುಕ್ತ ಕಣಗಳು ವಿರುದ್ದ ದಿಕ್ಕಿನಲ್ಲಿ ಸಾಗುತ್ತವೆ.ಪಾಸಿಟಿವ್ ಚಾರ್ಜ್ ಕಣಗಳು ಮೋಡದ ಮೇಲಕ್ಕೆ ಹೋದರೆ,ನೆಗೆಟಿವ್ ಚಾರ್ಜ್ ಕಣಗಳು ಮೋಡದ ಕೆಳಕ್ಕೆ ಸಾಗುತ್ತವೆ.ಹೀಗೆ ಪ್ರಕ್ರಿಯೆ ನಡೆದು ಪಾಸಿಟಿವ್ ಹಾಗು ನೆಗೆಟಿವ್ ಚಾರ್ಜ್ ಕಣಗಳ ನಡುವೆ ಒಂದು ಪರಿಪೂರ್ಣವಾದ Voltage ನಿರ್ಮಾಣವಾಗುತ್ತದೆ.ಹೀಗಾದ ಕೂಡಲೇ ಅಲ್ಲಿ ವಿದ್ಯುತ್ ಪ್ರವಹಿಸುತ್ತದೆ.ಇದೇ ನಮಗೆ ಕಾಣುವ ಮಿಂಚು

.ಹೀಗೆ ಮಿಂಚು ಉಂಟಾದಾಗ ಅಲ್ಲಿ ಹೆಚ್ಚಿನ ಪ್ರಮಾಣದ ಶಾಖ ಬಿಡುಗಡೆಯಾಗುತ್ತದೆ.ಇದು ಮೋಡದ ಉಷ್ಣತೆಯನ್ನು ಬರೋಬ್ಬರಿ 30000 ಡಿಗ್ರಿ ಯಷ್ಟು ಹೆಚ್ಚಿಸುತ್ತದೆ.ಈ ಪ್ರಮಾಣದ ಶಾಖದಿಂದಾಗಿ  ಮೋಡವು ಹಿಗ್ಗುತ್ತದೆ .ಈ ಹಿಗ್ಗುವಿಕೆಯ ಸದ್ದೇ ಗುಡುಗು

4)NIMBOSTRATUS 

.2000 ದಿಂದ 18000 ಅಡಿ ಎತ್ತರದವರೆಗೆ  ಕಂಡುಬರುತ್ತದೆ

.ಇವು ಮಳೆಯ ಮೋಡಗಳು.ಮಳೆಗಾಳದಲ್ಲಿ ಈ ಬಗೆಯ ಮೋಡಗಳು ಇಡೀ ಆಕಾಶವನ್ನು ಸುತ್ತುವರೆದಿರುತ್ತದೆ

.ಸಾಧಾರಣವಾಗಿ ಸಮಶೀತೋಷ್ಣ ಪ್ರದೇಶದಲ್ಲಿ ಮೋಡಗಳಿಂದ ನೇರವಾಗಿ ಮಳೆ ಹನಿಗಳು ಬಿಳದೆ  ಹಿಮವು ಮೋಡದಿಂದ ಕೆಳಗೆ ಬೀಳುತ್ತದೆ.ಇದು ವಾತಾವರಣದ ಉಷ್ಣಾಂಶದಿಂದಾಗಿ ಮಳೆ ಹನಿಗಳಾಗಿ ಭೂಮಿಗೆ ಬೀಳುತ್ತದೆ

.ಮೋಡದಿಂದ ಮಳೆ ಬರುವ ಪ್ರಕ್ರಿಯೆಯು  ಕೆಲವು ಕ್ರಿಯೆಗಳನ್ನು ಒಳಗೊಂಡಿರುತ್ತದೆ.ಮೋಡಗಳಲ್ಲಿನ ಐಸ್ ಕ್ರಿಸ್ಟಲ್  ಗಳು (Crystal) ಉಷ್ಣತೆ ಕಡೆಮೆ ಇದ್ದಾಗ ಹುಟ್ಟಿಕೊಳ್ಳುತ್ತವೆ .ಇದು ಒಂದು ಸರಣಿ ಕ್ರಿಯೆಗೆ ಒಳಪಡುತ್ತದೆ .ಈ ಐಸ್ ಕ್ರಿಸ್ಟಲ್ ಗಳು ದೊಡ್ಡದಾಗಿ ಒಡೆದು ನಂತರ  ಮೋಡದಲ್ಲಿರುವ ನೀರಿನ ಕಣಗಳ ಜೊತೆ ಬೆರೆತು ಅವುಗಳನ್ನು ತಂಪು ಮಾಡುತ್ತವೆ.ಈ ಪ್ರಕ್ರಿಯೆ ಮುಂದುವರೆದು  ಐಸ್ ಕ್ರಿಸ್ಟಲ್ ಗಳು ವಾತಾವರಣದ ಎತ್ತರ ಹಾಗು ತಾಪಮಾನದ ಆಧಾರದ ಮೇಲೆ ಮಳೆ ಹನಿಗಳಾಗಿ ಪರಿವರ್ತನೆ ಹೊಂದಿ ಭೂಮಿಗೆ ಬೀಳುತ್ತದೆ.ಈ ಐಸ್ ಕ್ರಿಸ್ಟಲ್ ಗಳನ್ನು ಕರಗಿಸಲು ಸಾಕಷ್ಟು ತಾಪಮಾನ ಇಲ್ಲದ ಕಡೆ ಇವುಗಳ ಹಿಮದ ರೂಪದಲ್ಲಿ ಭೂಮಿಯ ಮೇಲೆ ಬೀಳುತ್ತದೆ
  
5)CIRRUS 


.16500 ರಿಂದ 45000 ಅಡಿಗಳವರೆಗೆ ಈ ಬಗೆಯ ಮೋಡಗಳು ಕಂಡುಬರುತ್ತವೆ 

.ಆಗಸದಲ್ಲಿ ಅತ್ಯಂತ ಎತ್ತರದಲ್ಲಿ ಇರುವ ಹಾಗು ವೇಗವಾಗಿ  ಚಲಿಸುವ ಮೋಡಗಳಿವು 

.ಈ ಮೋಡಗಳು ವಿಸ್ತಾರವಾಗುತ್ತಾ,ಕೂಡಿಕೊಳ್ಳುತ್ತಾ ಇದ್ದರೆ ಅಂದು ಮಳೆ ಬರುವ ಸಂಭವ ಹೆಚ್ಚು 


.ಇವಿಷ್ಟು ಮೋಡಗಳ ಬಗ್ಗೆ ಸಣ್ಣ ಪರಿಚಯ.ಮೋಡಗಳ ಬಗ್ಗೆ ತಿಳಿದಷ್ಟೂ ವಿಷಯಗಳು ಇವೆ

.ನೀವು ಇನ್ನೊಮ್ಮೆ ಮೋಡಗಳನ್ನು ನೋಡಿದಾಗ ಈ ಪೋಸ್ಟ್ ನಲ್ಲಿರುವ ಅಂಶಗಳು ನಿಮ್ಮ ಮನಸ್ಸಿನಲ್ಲಿ ಬರಬಹುದು.So ಮೋಡಗಳ ಬಗ್ಗೆ ತಿಳಿಯಿರಿ,ಅವುಗಳ ಜೊತೆ ಒಂದು ಭಾವನಾತ್ಮಕ ಸಂಭಂದ ಬೆಳೆಸಿಕೊಳ್ಳಿ,ಆಗ ನಿಮಗೆ ಸಿಗುವ ಸಂತೋಷ ವರ್ಣನಾತೀತ...

ವಿಶೇಷ  ಸೂಚನೆ-ನಾವು ಸಧ್ಯದಲ್ಲೇ ''ಮಾನ್ಸೂನ್ ಸ್ಪೆಷಲ್'' ಎಂಬ ಸರಣಿಯನ್ನು ಆರಂಭಿಸುತ್ತಿದ್ದೇವೆ.ಈ ಸರಣಿಯಲ್ಲಿ ಮೋಡಗಳ ಯಾವುದೇ ಚಿತ್ರಗಳಿದ್ದರೂ ಅದನ್ನು ಪ್ರಕಟಿಸುತ್ತೇವೆ.ನೀವು ಕೂಡ ನಮಗೆ ಮೋಡಗಳ ಚಿತ್ರಗಳನ್ನು ಕಳುಹಿಸಿಕೊಡಬಹುದು.ನೀವು ತೆಗೆಯುವ ಮೋಡದ ಚಿತ್ರಗಳನ್ನು acct4rag@gmail.com ಗೆ ಮೇಲ್ ಮಾಡಿ

Monday, April 2, 2012

-TIGER DYNASTY..... ಸರಿಸ್ಕಾದಲ್ಲಿ ಮತ್ತೆ ಘರ್ಜಿಸುವುದೇ ಹುಲಿ ಸಂತತಿ....??!!-


.2005 ನೇ ಇಸವಿ.. ರಾಜಸ್ತಾನದ ಸರಿಸ್ಕಾ  ನ್ಯಾಷನಲ್ ಪಾರ್ಕ ನಲ್ಲಿ ಹುಲಿಗಳ ಸುಳಿವಿಲ್ಲ..ಹಿಂದಿನ ವರ್ಷ ಸುಮಾರು  15 ರಷ್ಟಿದ್ದ ಹುಲಿಗಳು ಈಗ ಒಂದೂ ಇಲ್ಲ... ಸರಿಸ್ಕಾ ಈಗ  ಹುಲಿಗಳ್ಳಿಲ್ಲದ ಕಾಡು..

.ಕಳ್ಳ ಭೇಟೆ,ಅಪಘಾತ ಇಲ್ಲಿನ ಎಲ್ಲಾ ಹುಲಿಗಳನ್ನು ಬಲಿ ತೆಗೆದುಕೊಂಡಿತ್ತು
 
.ತಕ್ಷಣ ಕಾರ್ಯಪ್ರವೃತರಾದ ಅರಣ್ಯ ಸಿಬ್ಬಂದಿ ಹಾಗು ವಿಜ್ಞಾನಿಗಳು ಸರಿಸ್ಕಾ ದಲ್ಲಿ ಮತ್ತೆ ಹುಲಿಗಳ ಘರ್ಜನೆ ಕೇಳಿಸಲು ಟೊಂಕ ಕಟ್ಟಿ ನಿಂತರು 

.ಸರಿಸ್ಕಾ ರಾಷ್ಟ್ರೀಯ ಉದ್ಯಾನವನ ಒಂದು ಸುಂದರವಾದ ಪ್ರದೇಶ.ಇದು ರಾಷ್ಟ್ರೀಯ ಉದ್ಯಾನವನ ಆಗಿದ್ದರೂ ಕೂಡ ಸುಮಾರು 50000 ಜನರು ಇನ್ನೂ ಇಲ್ಲಿ ವಾಸಿಸುತ್ತಿದ್ದಾರೆ.ಸರ್ಕಾರ ಅವರಿಗೆ ಪಾರ್ಕಿನ ಹೊರಗಡೆ ಬದುಕು ಕಟ್ಟಿಕೊಡಲು ಮುಂದಾದಾಗ ಹಲವರು ಒಪ್ಪಲಿಲ್ಲ..ಕೆಲವರು ಒಪ್ಪಿ ಹೊರ ಹೋಗಿದ್ದಾರೆ

.ಈಗ ನಮ್ಮ ಅರಣ್ಯ ಇಲಾಖೆ ಹಾಗು ಹುಲಿ ರಕ್ಷಣೆಗೆ ಸಂಭದಿಸಿದ ಇಲಾಖೆಗಳು ಸರಿಸ್ಕಾದಲ್ಲಿ ಮತ್ತೆ ಹುಲಿ ಸಂತತಿಯನ್ನು ಬೆಳೆಸಲು ನಿರ್ಧರಿಸಿ ಇಲ್ಲಿಂದ 140 ಕಿಲೋಮೀಟರ್ ದೂರದ ರಣತಂಬೂರ್ ನ್ಯಾಷನಲ್ ಪಾರ್ಕನಿಂದ ಹುಲಿಗಳನ್ನು ಸರಿಸ್ಕಾ ಗೆ ತಂದು ಬಿಡಲು ನಿರ್ಧರಿಸಿ ಅದರ ಪ್ರಕಾರ ಕಾರ್ಯಪ್ರವೃತರಾಗಿದ್ದಾರೆ 

.ಈ ಎಲ್ಲಾ ಪ್ರಯತ್ನಗಳ ಫಲವಾಗಿ 2010 ರಲ್ಲಿ ಸರಿಸ್ಕಾಗೆ  ಒಟ್ಟು ಎರಡು ಗಂಡು ಹುಲಿಗಳು ಹಾಗು 3 ಹೆಣ್ಣು ಹುಲಿಗಳನ್ನು ತಂದು ಬಿಡಲಾಯಿತು

.ಹೀಗೆ ತಂದು ಬಿಟ್ಟ ಹುಲಿಗಳಲ್ಲಿ ನಾನು ಇಂದು ಹೇಳಲು ಹೊರಟಿರುವುದು ಒಂದು ಸುಂದರವಾದ,ಪ್ರಕೃತಿ ಸೌಂದರ್ಯದ ಖನಿ  'ಬಘಾನಿ' ಎಂಬ ಹುಲಿ ಯ ಬಗ್ಗೆ

.'ಬಘಾನಿ' ರಣತಂಬೂರ್ ನಲ್ಲಿ ಹುಟ್ಟಿ ಬೆಳೆದು ಅಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ ಗಟ್ಟಿ ಮುಟ್ಟಿನ ಹೆಣ್ಣು ಹುಲಿ.ಈ ಹುಲಿಯನ್ನು ಅದು ಮರಿಯಾಗಿದ್ದಾಗಿನಿಂದ ಹಿಂಬಾಲಿಸಿ ಅದರ ಜೀವನವನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುತಿದ್ದ ತಾಳ್ಮೆಯ ವ್ಯಕ್ತಿ ಸುಬ್ಬಯ್ಯ ನಲ್ಲ ಮುತ್ತು 

.ಅರಣ್ಯ ಅಧಿಕಾರಿಗಳು ಹಾಗು ತಜ್ಞರು ರಣತಂಬೂರ್ ನಲ್ಲಿ  'ಬಘಾನಿ' ಗೆ ಅರವಳಿಕೆ ಮದ್ದು ನೀಡಿ ರೇಡಿಯೋ ಕಾಲರ್ ಅಳವಡಿಸಿ ಹೆಲಿಕಾಪ್ಟರ್ ನ ಸಹಾಯದಿಂದ ಸರಿಸ್ಕಾ ಗೆ ತಂದು ಬಿಟ್ಟಿದ್ದಾರೆ..

.ನಲ್ಲ ಮುತ್ತು ಈಗ ಸರಿಸ್ಕಾ ದಲ್ಲಿ 'ಬಘಾನಿ'ಯ ಹೊಸ ಜೀವನವನ್ನು ಚಿತ್ರಿಸಲು ಉತ್ಸೂಕರಾಗಿದ್ದಾರೆ

.ಸರಿಸ್ಕಾ ದಲ್ಲಿ 'ಬಘಾನಿ'ಗೆ ಜೊತೆಗಾರನಾಗಲು 'ರಥೋರ್' ಎಂಬ ಬಲಿಷ್ಟ ಗಂಡು ಹುಲಿಯನ್ನು ರಣತಂಬೂರ್ ನಿಂದ ತಂದು ಬಿಡಲಾಗಿದೆ

.'ಬಘಾನಿ' ಗೆ ಇದು ಕಷ್ಟದ  ದಿನಗಳು..ನೀರಿನ ಹೊಂಡದಲ್ಲಿ ಅವಳು ಭೇಸರದಲ್ಲಿ ಮಲಗಿದ್ದಾಳೆ.ಪರಿಚಯವಿಲ್ಲದ ಕಾಡು,ಹೊಸ ಗಾಳಿಯ ವಾಸನೆ ಇವುಗಳು ರಣತಂಬೂರ್ ನ ರಾಣಿಯನ್ನು ಕಂಗೆಡಿಸಿವೆ
 .ಹೊಟ್ಟೆ ಹಸಿವು 'ಬಘಾನಿ'ಯನ್ನು ಭೇಟೆಯಾಡಲು ಪ್ರೇರೇಪಿಸುತ್ತಿದೆ,ಆದರೆ ಇಲ್ಲಿ ಭೇಟೆಯಾಡುವುದು ಈಗ ಆಕೆಗೆ ಸುಲಭದ ವಿಷಯವಲ್ಲ.. ಅವಳು ಈಗ ತನ್ನ ಭೇಟೆಯ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ .ಒಂದೆರಡು ಬಾರಿ ಭೇಟೆಯಾಡಲು ಪ್ರಯತ್ನಿಸಿ ವಿಫಲವಾಗುತ್ತಾಳೆ
 .ಹಲವು ವರ್ಷಗಳಿಂದ ಸರಿಸ್ಕಾದಲ್ಲಿ ಹುಲಿಗಳ್ಳಿಲ್ಲದೆ ಸಸ್ಯಹಾರಿಗಳ ಸಂಖ್ಯೆ ಹೆಚ್ಚಿದೆ..ಜಿಂಕೆ,ಸಾಂಬಾರ್ ಗಳು ಯಾವುದೇ ಹೆದರಿಕೆ ಇಲ್ಲದೇ ಹಗಲಲ್ಲಿ  ತಿರುಗಾಡುತ್ತಿವೆ,ಲಂಗೂರ್ ಗಳು ಎತ್ತರವಾದ ಮರದಲ್ಲಿ ಕುಳಿತು ಕಾಡನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.'ಬಘಾನಿ' ಗೆ ಇದೂ ಕೂಡ ಭೇಟೆ ವಿಫಲವಾಗಲು ಕಾರಣವಾಗಿದೆ.ಲಂಗೂರ್,ಹಕ್ಕಿಗಳು ಮಾಂಸಹಾರಿ ಪ್ರಾಣಿಗಳನ್ನು ನೋಡಿದ ಕೂಡಲೇ ನೀಡುವ 'ಅಪಾಯದ ಎಚ್ಚರಿಕೆ ಕರೆಗಳು' ಸಸ್ಯಹಾರಿಗಳನ್ನು ಜಾಗೃತಗೊಳಿಸುತ್ತವೆ

.ಇದಲ್ಲದೆ ಸರಿಸ್ಕಾದಲ್ಲಿ ಅತ್ಯಂತ ಹೆಚ್ಚಿನ ನವಿಲುಗಳು ವಾಸವಾಗಿವೆ.ಅವುಗಳು ಕೂಡ ಇತರೆ ಸಸ್ಯಹಾರಿಗಳಿಗೆ ಬಘಾನಿಯ ಬಗ್ಗೆ ಎಚ್ಚರಿಕೆ ಕೊಡಬಹುದು 
.'ಬಘಾನಿ' ಈಗ ಭೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳಲೇಬೇಕು,ಇಲ್ಲವಾದಲ್ಲಿ ಅವಳು ಹಸಿವಿನಿಂದ ಬಳಲಿ ಭೇಟೆಯಾಡುವ ಶಕ್ತಿಯನ್ನು ಕೂಡಾ ಕಳೆದುಕೊಳ್ಳಬಹುದು 

.ನಲ್ಲ ಮುತ್ತು ಕೂಡ ಬಹಳ ಕುತೂಹಲದಿಂದ ಸರಿಸ್ಕಾದಲ್ಲಿ ಅವಳ ಪ್ರಥಮ ಭೇಟೆಯಾಡುವಿಕೆಯನ್ನು ನಿರೀಕ್ಷಿಸುತ್ತಿದ್ದಾರೆ

.ಅಂತೂ ಕೊನೆಗೆ ಅವಳು ಭೇಟೆಯಾಡುವಲ್ಲಿ ಯಶಸ್ವಿಯಾಗುತ್ತಾಳೆ.ಜಿಂಕೆ ಮರಿಯೊಂದನ್ನು ಹಿಡಿದು ತಿನ್ನುವ ಅವಳಿಗೀಗ ಆತ್ಮವಿಶ್ವಾಸ ಹೆಚ್ಚುತ್ತದೆ

.ಇನ್ನೊಂದು ಕಡೆ 'ರಥೋರ್' ಕೂಡ ಭೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ಪಾರ್ಕಿನ ಒಳಗಿರುವ ಹಳ್ಳಿಗಳ ಸಮೀಪ ತಿರುಗುತ್ತಿರುತ್ತಾನೆ..ಹಳ್ಳಿಗಳ ಸಾಕು ಪ್ರಾಣಿಗಳ ಮೇಲೆ ಅವನೊಂದು ಕಣ್ಣಿಟ್ಟಿರುತ್ತಾನೆ

.ಸರಿಸ್ಕಾದಲ್ಲಿ ಹುಲಿಗಳು ಸಂಪೂರ್ಣವಾಗಿ ಕಣ್ಮರೆಯಾದ ಮೇಲೆ ಅಲ್ಲಿ ಚಿರತೆಗಳದ್ದೇ ರಾಜ್ಯ ಭಾರವಾಗಿರುತ್ತದೆ .ಈಗ ಮತ್ತೆ ಸರಿಸ್ಕಾ ಗೆ ಹುಲಿಗಳು ಹಲವು ವರ್ಷಗಳ ನಂತರ ಬಂದಿರುವುದು ಅಲ್ಲಿನ ಚಿರತೆಗಳಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ.ಅವುಗಳ ವರ್ತನೆಯಲ್ಲಿ ಆದ ಬದಲಾವಣೆ ನಲ್ಲ ಮುತ್ತು ರವರ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದೆ

. 'ಬಘಾನಿ' ಹಾಗು ರಥೋರ್  ಈಗ ದಿನ ನಿತ್ಯ ಭೇಟೆಯಾಡುತ್ತಿದ್ದಾರೆ.ಅದು ಹುಲಿಗಳನ್ನು ಹಿಂಬಾಲಿಸುತ್ತಿದ್ದ ನಲ್ಲ ಮುತ್ತು ಮತ್ತವರ ತಂಡಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ  

.ಸರಿಸ್ಕಾ ದಲ್ಲಿ ಚಳಿಗಾಲ ಆರಂಭವಾಗಿದೆ.. ಹುಲಿಗಳು ಈಗ ಸೇರುವ ಕಾಲ. ರಥೋರ್ ಮುಂಜಾನೆಯ ಚಳಿಯಲ್ಲಿ ಬಘಾನಿ ಬಿಟ್ಟು  ಹೋದ  ಕುರುಹು (ಸೆಂಟ್ ಮಾರ್ಕ್) ಗಳನ್ನು ಹುಡುಕುತ್ತಾ ಹೆಣ್ಣು ಹುಲಿಗಾಗಿ ಅರಸುತ್ತಾ ಕಾಡಿನ ದಾರಿಗಳಲ್ಲಿ ನಡೆಯುತ್ತಿದ್ದಾನೆ.ಅತ್ತ ಬಘಾನಿ ಕೂಡ ಗಂಡು ಹುಲಿಯ ವಾಸನೆಯನ್ನು ಹಿಡಿದು ಹುಡುಕುತ್ತಿದ್ದಾಳೆ .ಇವರಿಬ್ಬರು ಸಂಧಿಸುವುದನ್ನು ನಲ್ಲ ಮುತ್ತು ಕುತೂಹಲದಿಂದ ಕಾಯುತ್ತಿದ್ದಾರೆ.ಸರಿಸ್ಕಾದಲ್ಲಿ ಹುಲಿ ಯೋಜನೆ ಯಶಸ್ವಿಯಾಗಬೇಕಾದರೆ ಇವರಿಬ್ಬರು ಸಂಧಿಸಲೇಬೇಕು

.ಆದರೆ ಗಂಡು ಹುಲಿಗಾಗಿ ಹುಡುಕುತಿದ್ದ 'ಬಘಾನಿ' ತನ್ನ ಹುಡುಕಾಟ ನಿಲ್ಲಿಸುತ್ತಾಳೆ...ಇದರರ್ತ 'ಬಘಾನಿ' ಇನ್ನೂ ತಾಯಿಯಾಗಲು ತಯಾರಾಗಿಲ್ಲ,ಅವಳಿನ್ನೂ ಹೊಸ ಪ್ರದೇಶದಲ್ಲಿ ಗಟ್ಟಿಯಾಗಿ ತನ್ನ ನೆಲೆ ಸ್ಥಾಪಿಸಿಲ್ಲ,ಹಾಗು ಆ ನೆಲೆ  ಸ್ಥಾಪಿಸದೇ ಮರಿಗಳನ್ನು ಪಡೆಯಲು ಅವಳು ತಯಾರಿಲ್ಲ..

.ನಂತರದ ಹಲವು ತಿಂಗಳುಗಳಲ್ಲಿ 'ಬಘಾನಿ' ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾಳೆ.ಅವಳನ್ನು ಹಿಂಬಾಲಿಸುತ್ತಿದ್ದ ನಲ್ಲ ಮುತ್ತುವಿಗೆ ಒಮ್ಮೆ ತಾನು ಅವಳನ್ನು ಹಿಂಬಾಲಿಸಿಕೊಂಡು ಪದೇ ಪದೇ ಒಂದು ಜಾಗಕ್ಕೆ ಬರುತ್ತಿರುವುದು ಖಚಿತವಾಗುತ್ತದೆ.. ಅವರ ಊಹೆಯಂತೆಯೇ ಅಲ್ಲಿ ನಡೆದಿರುತ್ತದೆ. ಒಂದು ಕೆರೆಯ ಸುತ್ತ ಮುತ್ತಲಿನ ಪ್ರದೇಶವನ್ನು 'ಬಘಾನಿ' ತನ್ನ 'Territory' ಯಾಗಿ ಆಯ್ಕೆ ಮಾಡಿಕೊಂಡಿರುತ್ತಾಳೆ,ಈಗ ಅವಳ ಪ್ರದೇಶದಲ್ಲಿ ಅವಳೇ ರಾಣಿ,ಅವಳ ಎದುರು ನಿಲ್ಲವ ಧೈರ್ಯ  ಅಲ್ಲಿ ಯಾರಿಗೂ ಇಲ್ಲ. ಒಂದು ಕಾಡು ಹಂದಿಯನ್ನು ಅವಳು ಕೊಂದು ಅದನ್ನು ಕೊಂದ ಪ್ರದೇಶದಲ್ಲೇ ಬಿಟ್ಟು ಸ್ವಲ್ಪ ದೂರಕ್ಕೆ ಹೋಗಿ  ವಿಶ್ರಾಂತಿ ತೆಗೆದುಕೊಳ್ಳುತ್ತಾಳೆ..  'ಬಘಾನಿ' ಕೊಂದ ಪ್ರಾಣಿಯನ್ನು ಅಲ್ಲೇ ಬಿಟ್ಟು ದೂರ ಹೋಗಿ ವಿಶ್ರಮಿಸುವ ಹಂತ ತಲುಪಿದ್ದಾಳೆ ಅಂದರೆ ಆ ಪ್ರದೇಶಕ್ಕೆ ಅವಳು ಬಾಸ್ ಆಗಿದ್ದಾಳೆ ಎಂದೇ ಅರ್ಥ .. ಅವಳು ಕೊಂದ ಬಲಿಯನ್ನು ಮುಟ್ಟುವ  ಧೈರ್ಯ  ಅಲ್ಲಿ ಬೇರೆ ಯಾರಿಗೆ ತಾನೇ ಇರಲು ಸಾಧ್ಯ??

.ಸರಿಸ್ಕಾದಲ್ಲಿ ಮಳೆಗಾಲದ ಆರಂಭ. ಅರಣ್ಯ ಸಿಬ್ಬಂದಿ ಹಳ್ಳಿಯ ಜನರ ಜಾನುವಾರುಗಳನ್ನು ಅರಣ್ಯದಿಂದ ಬೇರೆಡೆ ಸ್ಥಳಾ೦ತರಿಸುತ್ತಿದ್ದಾರೆ.ನಮ್ಮ ಗಂಡು ಹುಲಿ ರಥೋರ್ ಹಳ್ಳಿಯ ಜಾನುವಾರುಗಳನ್ನು ಭೇಟೆಯಾಡುತ್ತಿರುವುದು ಕಂಡು ಬಂದಿದೆ.ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹಳ್ಳಿಯ ಜನ ರಥೋರ್ ನ ಜೀವಕ್ಕೆ ಅಪಾಯ ತರಬಹುದು

.ಹಲವು ದಿನಗಳ ನಂತರ ಒಮ್ಮೆ ರಥೋರ್ ಕೊಂದು ಬಿಟ್ಟು ಹೋಗಿದ್ದ ಪ್ರಾಣಿಯ ಬಳಿ ಬಘಾನಿ ಬಂದು ಅದನ್ನು ತಿನ್ನುವುದನ್ನು ನಲ್ಲ ಮುತ್ತು ಗಮನಿಸುತ್ತಾರೆ,ಸಾಧಾರಣವಾಗಿ ಹುಲಿಗಳು ತಮ್ಮ ಬಲಿಯನ್ನು ಇನ್ನೊಂದು ಹುಲಿಯೊಂದಿಗೆ ಹಂಚಿಕೊಳ್ಳುವುದಿಲ್ಲ

.ಇದಾದ ಕೆಲವೇ ದಿನಗಳಲ್ಲಿ ನಲ್ಲ ಮುತ್ತು ಸರಿಸ್ಕಾದ ಕಾಡುಗಳಲ್ಲಿ ಗಂಡು ಹಾಗು ಹೆಣ್ಣು ಹುಲಿಯ ಪ್ರೀತಿಯ ಕರೆಗಳನ್ನು ಕೇಳುತ್ತಾರೆ.ಅವರು ಅಂದುಕೊಂಡ ಪ್ರಕಾರವೇ ಈಗ ಬಘಾನಿ ಹಾಗು ರಥೋರ್ ಮತ್ತೆ ಒಬ್ಬರನ್ನೊಬ್ಬರು ಹುಡುಕುತ್ತಿದ್ದಾರೆ

.ಬಘಾನಿಗೆ ಈಗ ಹಿಂದೆ ಕಾಡುತ್ತಿದ್ದ ಅಭದ್ರತೆ ಈಗ ಇಲ್ಲ.ಅವಳು ಈಗ ರಥೋರ್ ಜೊತೆ ಸರಸಕ್ಕೆ ತಯಾರಿದ್ದಾಳೆ

.ಅಂತೂ 7 ತಿಂಗಳ ನಂತರ ನಲ್ಲ ಮುತ್ತು ಬಘಾನಿ ಹಾಗು ರಥೋರ್ ಇಬ್ಬರನ್ನೂ ಒಟ್ಟಿಗೆ ನೋಡುತ್ತಾರೆ.ನಂತರದ ಮೂರು ದಿನಗಳು ಬಘಾನಿ ಹಾಗು ರಥೋರ್ ಒಟ್ಟಿಗೆ ಇದ್ದು ತಮ್ಮ ಮುಂದಿನ ಪೀಳಿಗೆಯನ್ನು ಸರಿಸ್ಕಾಗೆ ತರಲು ಪ್ರಯತ್ನಪಡುತ್ತಾರೆ

.ಈ ಮಧ್ಯೆ ಚಿರತೆಗಳಿಗೆ ಹುಲಿಗಳು ತಲೆ ನೋವಾಗಿ ಪರಿಣಮಿಸುತ್ತಿರುತ್ತದೆ.ಒಮ್ಮೆ ಬಘಾನಿ ಒಂದು ಚಿರತೆಯ ಹಿಂದೆ ಬೀಳುತ್ತದೆ 

.ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಚಿರತೆ ಮರದ ಮೇಲೆ ಕುಳಿತು ಕೆಳಗೆ ಕಾಯುತ್ತಿದ್ದ ಬಘಾನಿಯ ನಿರ್ಗಮನಕ್ಕೆ ಕಾಯುತ್ತಿರುತ್ತದೆ.ಆ ದೃಶ್ಯವನ್ನು ಸಂಜೆಯವರೆಗೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ನಲ್ಲ ಮುತ್ತು ಕತ್ತಲು ಕವಿದಂತೆ ನಿರ್ಗಮಿಸುತ್ತಾರೆ.ಅಂದು ಅವರ ಮನಸ್ಸಿನಲ್ಲಿ ಒಂದು ಭಯ ಕಾಡುತ್ತಿರುತ್ತದೆ.ಅಕಸ್ಮಾತ್ ಈ ಚಿರತೆಯ ಹಿಂದೆ ಬಘಾನಿ ಹೋಗಿ ಜಗಳ ತೆಗೆದು ತನಗೆ ಎಲ್ಲಿ ತೊಂದರೆ ಮಾಡಿಕೊಳ್ಳುತ್ತದೆಯೂಯೆಂದು 

.ರಾತ್ರಿ ಇವರು ಅಳವಡಿಸಿದ್ದ Night Camera ಗಳ ಸಹಾಯದಿಂದ ಅಲ್ಲಿ ನಡೆಯುತ್ತಿದ್ದ ಘಟನೆಗಳು ಗೋಚರಿಸುತ್ತದೆ.ಮರದ ಮೇಲೆ ಕುಳಿತ ಚಿರತೆ ಕೆಳಗಿಳಿದು ಮುಂದೆ ಸಾಗಿದಂತೆ ಬಘಾನಿ ಅದರ ಹಿಂದೆ ಸಾಗುತ್ತಿರುತ್ತದೆ.ಅಂದು ರಾತ್ರಿ ಅರಣ್ಯ ಅಧಿಕಾರಿಗಳು ಬಘಾನಿಯ ರಕ್ಷಣೆಗೆ ಬರುತ್ತಾರೆ.ಅವರು ಚಿರತೆ ಹಾಗು ಬಘಾನಿಯ ಜಾಡನ್ನು ಹಿಡಿದು ಅವುಗಳು ಹೋದ ದಾರಿಯಲ್ಲೇ ಸಾಗುತ್ತಾರೆ.ನಲ್ಲ ಮುತ್ತು ಬಘಾನಿಗೆ ಏನೂ ಆಗದಿರಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.. ಇದ್ದಕ್ಕಿದಂತೆ ಅರಣ್ಯ ಅಧಿಕಾರಿಗಳ ಕಣ್ಣಿಗೆ ಅಲ್ಲಿ ನಡೆದ ಘಟನೆಯ ಗುರುತುಗಳು ಗೋಚರಿಸುತ್ತವೆ.ಅಲ್ಲಿ ಚಿರತೆಯ ಬಾಲ ತುಂಡಾಗಿ ಬಿದ್ದಿರುತ್ತದೆ ಸರಿಸ್ಕಾದ ರಾಣಿ ಬಘಾನಿ ಚಿರತೆಯನ್ನು ಮುಗಿಸಿರುತ್ತಾಳೆ. ಅಲ್ಲಿಗೆ ಒಂದು ವಿಷಯ ಎಲ್ಲರಿಗೂ ಸ್ಪಷ್ಟವಾಗುತ್ತದೆ.ಸರಿಸ್ಕಾದಲ್ಲಿ ಬಘಾನಿ ಗೆ ಸರಿಸಮರು ಅಲ್ಲಿ ಯಾರಿಲ್ಲವೆಂದು  

.ಹಲವು ದಿನಗಳು ಕಳೆದಿವೆ ... ಬಘಾನಿ ತಾಯಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.. ಅಂದರೆ ಅವಳು ಹಾಗು ರಥೋರ್ ನಡುವೆ ನಡೆದ ಮೊದಲ ಮಿಲನ ಫಲಪ್ರದವಾಗಿಲ್ಲ... ಆದ್ದರಿಂದ ಸದ್ಯದಲ್ಲೇ ಅವಳು ಮತ್ತೊಂದು ಮಿಲನಕ್ಕೆ ರೆಡಿಯಾಗುತ್ತಾಳೆ

.ಈ ಸಮಯದಲ್ಲಿ ರಥೋರ್ ಹೆಚ್ಚಿನ ಸಮಯವನ್ನು ನೀರಿನ ಹೊಂಡದಲ್ಲಿ ಕಳೆಯುತ್ತಿರುತ್ತಾನೆ.ಇದರ ಜೊತೆ ಕ್ಯಾಮರ ಕಣ್ಣುಗಳು ಇನ್ನೊಂದು ಅಪಾಯಕಾರಿ ಸತ್ಯವನ್ನು ತೆರೆದಿಡುತ್ತವೆ..ರಥೋರ್  ನ ಜಾಗಕ್ಕೆ ಮತ್ತೆ ಹಳ್ಳಿಗಳ ಜಾನುವಾರುಗಳು ಬರಲಾರಂಭಿಸಿರುತ್ತವೆ.. ಇದು ನಿಜವಾಗಿಯೂ ಅಪಾಯಕಾರಿ ಸಂಗತಿ

.ಸ್ವಲ್ಪ ದಿನಗಳಲ್ಲೇ ಬಘಾನಿ ಮತ್ತೊಮ್ಮೆ  ಮಿಲನಕ್ಕೆ ತಯಾರಾಗಿ ರಥೋರ್ ನನ್ನು ಅರಸುತ್ತಾ ಮುಂಜಾನೆಯೆಲ್ಲಾ ಅವನನ್ನು ಕರೆಯುತ್ತಿರುತ್ತಾಳೆ... ಆದರೆ ರಥೋರ್ ನಿಂದ ಮಾತ್ರ ಯಾವುದೇ ಉತ್ತರವಿಲ್ಲ....ಹಾಗಾದರೆ ಎಲ್ಲಿ ಹೋದ ನಮ್ಮ ಕಿಂಗ್ ರಥೋರ್.....

.ಮೂರು ದಿನಗಳಾದರೂ ರಥೋರ್ ಕಾಣದೆ ಇದ್ದಾಗ ಅರಣ್ಯ ಅಧಿಕಾರಿಗಳ ತಂಡ ಅವನನ್ನು ಹುಡುಕಲು ತಯಾರಾಗುತ್ತಾರೆ..ಅವನ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಾ ಸಾಗುತ್ತಾರೆ....ಕೊನೆಗೂ ರಥೋರ್ ಸಿಗುತ್ತಾನೆ....... ಆದರೆ 'ಹೆಣವಾಗಿ'...... ಹೌದು ಸಾರಿಸ್ಕಾದ ರಾಜ ರಥೋರ್ ಒಂದು ಕಡೆ ಹೆಣವಾಗಿ ಮಲಗಿರುತ್ತಾನೆ. ಮೊದಲೇ ಇದ್ದ ಭಯದಂತೆ ಹಳ್ಳಿಯ ಯಾರೋ ರಥೋರ್ ನನ್ನ ವಿಷವಿಟ್ಟು ಕೊಂದಿರುತ್ತಾರೆ.........
 .ಇತ್ತ ಬಘಾನಿ ರಥೋರ್ ಗಾಗಿ ಹಗಲೂ ರಾತ್ರಿ ಅಲೆಯುತ್ತಾಳೆ..ನಂತರದ ಮೂರು ದಿನಗಳು ಅವನಿಗಾಗಿ ರೋಧಿಸುತ್ತಾಳೆ...ಆ ದೃಶ್ಯ ನಿಜವಾಗಿಯೂ ನಮ್ಮ ಹೃದಯ ಓಡೆಯುವಂತಹದ್ದು...ಅವನಿಲ್ಲದೆ ಅವಳ ಭವಿಷ್ಯ ಈಗ ಕತ್ತಲಲ್ಲಿದೆ 
 .ಸರಿಸ್ಕಾದಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿದೆ ...  ಜಡಿ ಮಳೆಯಲ್ಲಿ ಸರಿಸ್ಕಾದ ಅರಣ್ಯ ಪ್ರವೇಶ ಅಸಾಧ್ಯವಾಗುತ್ತದೆ.ನಲ್ಲ ಮುತ್ತುವಿಗೆ ಇನ್ನು ಬಘಾನಿಯನ್ನು ಹಿಂಬಾಲಿಸಲು ಸಾಧ್ಯವಿಲ್ಲ..ಅವಳನ್ನು ಕೊನೆಯ ಬಾರಿ ತಮ್ಮ ಕ್ಯಾಮೆರಾ ದಲ್ಲಿ ಸೆರೆ ಹಿಡಿದು ಭಾರವಾದ ಮನ್ನಸ್ಸಿನೊಂದಿಗೆ ವಾಪಾಸಾಗುತ್ತಾರೆ..ಇನ್ನು ಸರಿಸ್ಕಾದಲ್ಲಿ ಹುಲಿ ಯೋಜನೆ ಮುಗಿದಂತೆಯೇ ಎಂದುಕೊಳ್ಳುತ್ತಾರೆ...

.ಆದರೆ ಹುಲಿ ಯೋಜನೆ ಯನ್ನು ಯಶಸ್ವಿಗೊಳಿಸಲು ಟೂ೦ಕ್ಕ ಕಟ್ಟಿ ನಿಂತಿರುವ ಅರಣ್ಯ ಅಧಿಕಾರಿಗಳು ಹಾಗು ತಜ್ಞರು ಇದನ್ನು ಇಲ್ಲಿಗೇ ಬಿಡಲು ತಯಾರಿಲ್ಲ.. ಅವರು ಮತ್ತೊಂದು ಗಂಡು ಹುಲಿಯನ್ನು ರಣತಂಬೂರ್ ನಿಂದ ತರಲು ನಿರ್ಧರಿಸಿ ಅದರಂತೆ ಬಘಾನಿಗೆ ಹೊಸ ಜೋಡಿಯನ್ನು ರಣತಂಬೂರ್ ನಿಂದ ಸರಿಸ್ಕಾಗೆ ತಂದು ಬಿಡುತ್ತಾರೆ..

.ಮಳೆಗಾಲ ಕಳೆದ ನಂತರ ಹಲವು ಹಳ್ಳಿಯ ಜನರು ಪಾರ್ಕ್ ನಿಂದ ಹೊರಗೆ ಜೀವನ ನಡೆಸಲು ಒಪ್ಪಿಗೆ ಕೊಟ್ಟು ಕಾಡಿನಿಂದ ಮರಳುತ್ತಾರೆ

.ನಲ್ಲ ಮುತ್ತು ಹಾಗು ತಂಡ ಮತ್ತೆ ಬಘಾನಿ ಯನ್ನು ಹುಡುಕುತ್ತಾ ಸರಿಸ್ಕಾದ ದುರ್ಗಮ ಹಾದಿಗಳಲ್ಲಿ ಸಾಗುತ್ತದೆ.ಅವರಿಗೆ ಬಘಾನಿ ಯ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ,ಅದರ ಜೊತೆಗೆ ಹೊಸ ಗಂಡು ಹುಲಿಯ ಹೆಜ್ಜೆಗಳೂ ಕೂಡ ಕಂಡು ಬರುತ್ತದೆ.ಇದು ಅವರಲ್ಲಿ ಹೊಸ ಉತ್ಸಾಹವನ್ನು  ತಂದು ಕೊಡುತ್ತದೆ .ಕೊನೆಗೂ ಎಂಟು ದಿನಗಳ ನಂತರ  'ಅರಣ್ಯ ಪ್ರಾಣಿಗಳ ಕೂಗಿನ ಸೂಚನೆ' ನಲ್ಲ ಮುತ್ತುರನ್ನು ಬಘಾನಿಯ ಬಳಿ ಕರೆದೊಯ್ಯುತ್ತದೆ....

.ಬಘಾನಿ ಅಲ್ಲಿದ್ದಾಳೆ..ಅವಳಿನ್ನೂ ಬಲಿಷ್ಟವಾಗಿದ್ದಾಳೆ..ಸರಿಸ್ಕಾದ ಎಲ್ಲಾ ಕಷ್ಟಗಳನ್ನು ಎದುರಿಸಿ ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾಳೆ...ಅವಳ ಧೈರ್ಯ ಹಾಗು ಬುದ್ದಿವಂತಿಕೆ ಅವಳನ್ನು ಇನ್ನೂ ಹೆಚ್ಚು ಗಟ್ಟಿ ಮುಟ್ಟಾಗಿಸಿದೆ.. ಅವಳು ಈಗ ಮತ್ತೆ ತಾಯಿಯಾಗಲು ರೆಡಿಯಾಗಿದ್ದಾಳೆ.. ಸರಿಸ್ಕಾದ ಹುಲಿ ಯೋಜನೆ ಇವಳ ಮೇಲೆ ನಿರ್ಧರಿತವಾಗಿದೆ..ನಲ್ಲ ಮುತ್ತು ರವರಿಗೆ ನಂಬಿಕೆ ಇದೆ.. ಖಂಡಿತವಾಗಿಯೂ ಬಘಾನಿ ತಾಯಿಯಾಗುತ್ತಾಳೆ ಹಾಗು ಪ್ರಥಮ ಬಾರಿಗೆ ಸರಿಸ್ಕಾದ ಅರಣ್ಯದಲ್ಲಿ ಅವಳ ಮರಿಗಳು ಕಣ್ಣು ಬಿಡುತ್ತವೆಯೆಂದು.....
 .ಅವರ ನಂಬಿಕೆ ಹುಸಿಯಾಗದಿರಲಿ.... ಬಘಾನಿ ತಾಯಿಯಾಗಿ ಮರಿಗಳಿಗೆ ಜನ್ಮ ನೀಡಲಿ...ಅವಳ ಸಂತತಿ ಸರಿಸ್ಕಾದಲ್ಲಿ ಬೆಳೆದು ಉಳಿಯಲಿ.. ಸರಿಸ್ಕಾದಲ್ಲಿ ಹುಲಿಗಳ ಘರ್ಜನೆ ಇನ್ನೂ ಹೆಚ್ಚಾಗಲಿಯೆಂದು ನಾವು ಆಶಿಸೋಣ.......

.ಸರಿಸ್ಕಾದ ಈ ಸುಂದರ ಹುಲಿಗಳ  ಬದುಕನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿರುವ  ನಲ್ಲ ಮುತ್ತುರವರು ಈಗ ಇದನ್ನು BBC ರವರ ಸಹಾಯದಿಂದ ಡಾಕ್ಯುಮೆಂಟರಿ ರೂಪದಲ್ಲಿ ಹೊರತಂದಿದ್ದಾರೆ.BBC ಯ Natural Word Series ನಲ್ಲಿ 'TIGER DYNASTY' ಎಂಬ ಹೆಸರಿನಲ್ಲಿ ಈ ಡಾಕ್ಯುಮೆಂಟರಿ ಲಭ್ಯವಿದೆ.. 
ಇದನ್ನು ಕೊಂಡು ಒಮ್ಮೆ ನೋಡಿ..ಸರಿಸ್ಕಾದ ಹುಲಿಗಳ ಲೋಕ ಇಲ್ಲಿ ಅತ್ಯದ್ಭುತವಾಗಿ ಚಿತ್ರಿತಗೊಂಡಿದೆ.. ಹಾಗೆ ಈ ಸುಂದರ ಡಾಕ್ಯುಮೆಂಟರಿ ಯನ್ನು ನಮಗೆ ನೀಡಿದ ನಲ್ಲ ಮುತ್ತುರವರಿಗೆ ನಮ್ಮ ಕಡೆಯಿಂದ Hats off...

.image and info courtesy-BBC

-ಪ್ರಕೃತಿಯನ್ನು ರಕ್ಷಿಸಿ-