-TIGER DYNASTY..... ಸರಿಸ್ಕಾದಲ್ಲಿ ಮತ್ತೆ ಘರ್ಜಿಸುವುದೇ ಹುಲಿ ಸಂತತಿ....??!!-


.2005 ನೇ ಇಸವಿ.. ರಾಜಸ್ತಾನದ ಸರಿಸ್ಕಾ  ನ್ಯಾಷನಲ್ ಪಾರ್ಕ ನಲ್ಲಿ ಹುಲಿಗಳ ಸುಳಿವಿಲ್ಲ..ಹಿಂದಿನ ವರ್ಷ ಸುಮಾರು  15 ರಷ್ಟಿದ್ದ ಹುಲಿಗಳು ಈಗ ಒಂದೂ ಇಲ್ಲ... ಸರಿಸ್ಕಾ ಈಗ  ಹುಲಿಗಳ್ಳಿಲ್ಲದ ಕಾಡು..

.ಕಳ್ಳ ಭೇಟೆ,ಅಪಘಾತ ಇಲ್ಲಿನ ಎಲ್ಲಾ ಹುಲಿಗಳನ್ನು ಬಲಿ ತೆಗೆದುಕೊಂಡಿತ್ತು
 
.ತಕ್ಷಣ ಕಾರ್ಯಪ್ರವೃತರಾದ ಅರಣ್ಯ ಸಿಬ್ಬಂದಿ ಹಾಗು ವಿಜ್ಞಾನಿಗಳು ಸರಿಸ್ಕಾ ದಲ್ಲಿ ಮತ್ತೆ ಹುಲಿಗಳ ಘರ್ಜನೆ ಕೇಳಿಸಲು ಟೊಂಕ ಕಟ್ಟಿ ನಿಂತರು 

.ಸರಿಸ್ಕಾ ರಾಷ್ಟ್ರೀಯ ಉದ್ಯಾನವನ ಒಂದು ಸುಂದರವಾದ ಪ್ರದೇಶ.ಇದು ರಾಷ್ಟ್ರೀಯ ಉದ್ಯಾನವನ ಆಗಿದ್ದರೂ ಕೂಡ ಸುಮಾರು 50000 ಜನರು ಇನ್ನೂ ಇಲ್ಲಿ ವಾಸಿಸುತ್ತಿದ್ದಾರೆ.ಸರ್ಕಾರ ಅವರಿಗೆ ಪಾರ್ಕಿನ ಹೊರಗಡೆ ಬದುಕು ಕಟ್ಟಿಕೊಡಲು ಮುಂದಾದಾಗ ಹಲವರು ಒಪ್ಪಲಿಲ್ಲ..ಕೆಲವರು ಒಪ್ಪಿ ಹೊರ ಹೋಗಿದ್ದಾರೆ

.ಈಗ ನಮ್ಮ ಅರಣ್ಯ ಇಲಾಖೆ ಹಾಗು ಹುಲಿ ರಕ್ಷಣೆಗೆ ಸಂಭದಿಸಿದ ಇಲಾಖೆಗಳು ಸರಿಸ್ಕಾದಲ್ಲಿ ಮತ್ತೆ ಹುಲಿ ಸಂತತಿಯನ್ನು ಬೆಳೆಸಲು ನಿರ್ಧರಿಸಿ ಇಲ್ಲಿಂದ 140 ಕಿಲೋಮೀಟರ್ ದೂರದ ರಣತಂಬೂರ್ ನ್ಯಾಷನಲ್ ಪಾರ್ಕನಿಂದ ಹುಲಿಗಳನ್ನು ಸರಿಸ್ಕಾ ಗೆ ತಂದು ಬಿಡಲು ನಿರ್ಧರಿಸಿ ಅದರ ಪ್ರಕಾರ ಕಾರ್ಯಪ್ರವೃತರಾಗಿದ್ದಾರೆ 

.ಈ ಎಲ್ಲಾ ಪ್ರಯತ್ನಗಳ ಫಲವಾಗಿ 2010 ರಲ್ಲಿ ಸರಿಸ್ಕಾಗೆ  ಒಟ್ಟು ಎರಡು ಗಂಡು ಹುಲಿಗಳು ಹಾಗು 3 ಹೆಣ್ಣು ಹುಲಿಗಳನ್ನು ತಂದು ಬಿಡಲಾಯಿತು

.ಹೀಗೆ ತಂದು ಬಿಟ್ಟ ಹುಲಿಗಳಲ್ಲಿ ನಾನು ಇಂದು ಹೇಳಲು ಹೊರಟಿರುವುದು ಒಂದು ಸುಂದರವಾದ,ಪ್ರಕೃತಿ ಸೌಂದರ್ಯದ ಖನಿ  'ಬಘಾನಿ' ಎಂಬ ಹುಲಿ ಯ ಬಗ್ಗೆ

.'ಬಘಾನಿ' ರಣತಂಬೂರ್ ನಲ್ಲಿ ಹುಟ್ಟಿ ಬೆಳೆದು ಅಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದ ಗಟ್ಟಿ ಮುಟ್ಟಿನ ಹೆಣ್ಣು ಹುಲಿ.ಈ ಹುಲಿಯನ್ನು ಅದು ಮರಿಯಾಗಿದ್ದಾಗಿನಿಂದ ಹಿಂಬಾಲಿಸಿ ಅದರ ಜೀವನವನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುತಿದ್ದ ತಾಳ್ಮೆಯ ವ್ಯಕ್ತಿ ಸುಬ್ಬಯ್ಯ ನಲ್ಲ ಮುತ್ತು 

.ಅರಣ್ಯ ಅಧಿಕಾರಿಗಳು ಹಾಗು ತಜ್ಞರು ರಣತಂಬೂರ್ ನಲ್ಲಿ  'ಬಘಾನಿ' ಗೆ ಅರವಳಿಕೆ ಮದ್ದು ನೀಡಿ ರೇಡಿಯೋ ಕಾಲರ್ ಅಳವಡಿಸಿ ಹೆಲಿಕಾಪ್ಟರ್ ನ ಸಹಾಯದಿಂದ ಸರಿಸ್ಕಾ ಗೆ ತಂದು ಬಿಟ್ಟಿದ್ದಾರೆ..

.ನಲ್ಲ ಮುತ್ತು ಈಗ ಸರಿಸ್ಕಾ ದಲ್ಲಿ 'ಬಘಾನಿ'ಯ ಹೊಸ ಜೀವನವನ್ನು ಚಿತ್ರಿಸಲು ಉತ್ಸೂಕರಾಗಿದ್ದಾರೆ

.ಸರಿಸ್ಕಾ ದಲ್ಲಿ 'ಬಘಾನಿ'ಗೆ ಜೊತೆಗಾರನಾಗಲು 'ರಥೋರ್' ಎಂಬ ಬಲಿಷ್ಟ ಗಂಡು ಹುಲಿಯನ್ನು ರಣತಂಬೂರ್ ನಿಂದ ತಂದು ಬಿಡಲಾಗಿದೆ

.'ಬಘಾನಿ' ಗೆ ಇದು ಕಷ್ಟದ  ದಿನಗಳು..ನೀರಿನ ಹೊಂಡದಲ್ಲಿ ಅವಳು ಭೇಸರದಲ್ಲಿ ಮಲಗಿದ್ದಾಳೆ.ಪರಿಚಯವಿಲ್ಲದ ಕಾಡು,ಹೊಸ ಗಾಳಿಯ ವಾಸನೆ ಇವುಗಳು ರಣತಂಬೂರ್ ನ ರಾಣಿಯನ್ನು ಕಂಗೆಡಿಸಿವೆ
 .ಹೊಟ್ಟೆ ಹಸಿವು 'ಬಘಾನಿ'ಯನ್ನು ಭೇಟೆಯಾಡಲು ಪ್ರೇರೇಪಿಸುತ್ತಿದೆ,ಆದರೆ ಇಲ್ಲಿ ಭೇಟೆಯಾಡುವುದು ಈಗ ಆಕೆಗೆ ಸುಲಭದ ವಿಷಯವಲ್ಲ.. ಅವಳು ಈಗ ತನ್ನ ಭೇಟೆಯ ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ .ಒಂದೆರಡು ಬಾರಿ ಭೇಟೆಯಾಡಲು ಪ್ರಯತ್ನಿಸಿ ವಿಫಲವಾಗುತ್ತಾಳೆ
 .ಹಲವು ವರ್ಷಗಳಿಂದ ಸರಿಸ್ಕಾದಲ್ಲಿ ಹುಲಿಗಳ್ಳಿಲ್ಲದೆ ಸಸ್ಯಹಾರಿಗಳ ಸಂಖ್ಯೆ ಹೆಚ್ಚಿದೆ..ಜಿಂಕೆ,ಸಾಂಬಾರ್ ಗಳು ಯಾವುದೇ ಹೆದರಿಕೆ ಇಲ್ಲದೇ ಹಗಲಲ್ಲಿ  ತಿರುಗಾಡುತ್ತಿವೆ,ಲಂಗೂರ್ ಗಳು ಎತ್ತರವಾದ ಮರದಲ್ಲಿ ಕುಳಿತು ಕಾಡನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.'ಬಘಾನಿ' ಗೆ ಇದೂ ಕೂಡ ಭೇಟೆ ವಿಫಲವಾಗಲು ಕಾರಣವಾಗಿದೆ.ಲಂಗೂರ್,ಹಕ್ಕಿಗಳು ಮಾಂಸಹಾರಿ ಪ್ರಾಣಿಗಳನ್ನು ನೋಡಿದ ಕೂಡಲೇ ನೀಡುವ 'ಅಪಾಯದ ಎಚ್ಚರಿಕೆ ಕರೆಗಳು' ಸಸ್ಯಹಾರಿಗಳನ್ನು ಜಾಗೃತಗೊಳಿಸುತ್ತವೆ

.ಇದಲ್ಲದೆ ಸರಿಸ್ಕಾದಲ್ಲಿ ಅತ್ಯಂತ ಹೆಚ್ಚಿನ ನವಿಲುಗಳು ವಾಸವಾಗಿವೆ.ಅವುಗಳು ಕೂಡ ಇತರೆ ಸಸ್ಯಹಾರಿಗಳಿಗೆ ಬಘಾನಿಯ ಬಗ್ಗೆ ಎಚ್ಚರಿಕೆ ಕೊಡಬಹುದು 
.'ಬಘಾನಿ' ಈಗ ಭೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳಲೇಬೇಕು,ಇಲ್ಲವಾದಲ್ಲಿ ಅವಳು ಹಸಿವಿನಿಂದ ಬಳಲಿ ಭೇಟೆಯಾಡುವ ಶಕ್ತಿಯನ್ನು ಕೂಡಾ ಕಳೆದುಕೊಳ್ಳಬಹುದು 

.ನಲ್ಲ ಮುತ್ತು ಕೂಡ ಬಹಳ ಕುತೂಹಲದಿಂದ ಸರಿಸ್ಕಾದಲ್ಲಿ ಅವಳ ಪ್ರಥಮ ಭೇಟೆಯಾಡುವಿಕೆಯನ್ನು ನಿರೀಕ್ಷಿಸುತ್ತಿದ್ದಾರೆ

.ಅಂತೂ ಕೊನೆಗೆ ಅವಳು ಭೇಟೆಯಾಡುವಲ್ಲಿ ಯಶಸ್ವಿಯಾಗುತ್ತಾಳೆ.ಜಿಂಕೆ ಮರಿಯೊಂದನ್ನು ಹಿಡಿದು ತಿನ್ನುವ ಅವಳಿಗೀಗ ಆತ್ಮವಿಶ್ವಾಸ ಹೆಚ್ಚುತ್ತದೆ

.ಇನ್ನೊಂದು ಕಡೆ 'ರಥೋರ್' ಕೂಡ ಭೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ಪಾರ್ಕಿನ ಒಳಗಿರುವ ಹಳ್ಳಿಗಳ ಸಮೀಪ ತಿರುಗುತ್ತಿರುತ್ತಾನೆ..ಹಳ್ಳಿಗಳ ಸಾಕು ಪ್ರಾಣಿಗಳ ಮೇಲೆ ಅವನೊಂದು ಕಣ್ಣಿಟ್ಟಿರುತ್ತಾನೆ

.ಸರಿಸ್ಕಾದಲ್ಲಿ ಹುಲಿಗಳು ಸಂಪೂರ್ಣವಾಗಿ ಕಣ್ಮರೆಯಾದ ಮೇಲೆ ಅಲ್ಲಿ ಚಿರತೆಗಳದ್ದೇ ರಾಜ್ಯ ಭಾರವಾಗಿರುತ್ತದೆ .ಈಗ ಮತ್ತೆ ಸರಿಸ್ಕಾ ಗೆ ಹುಲಿಗಳು ಹಲವು ವರ್ಷಗಳ ನಂತರ ಬಂದಿರುವುದು ಅಲ್ಲಿನ ಚಿರತೆಗಳಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ.ಅವುಗಳ ವರ್ತನೆಯಲ್ಲಿ ಆದ ಬದಲಾವಣೆ ನಲ್ಲ ಮುತ್ತು ರವರ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದೆ

. 'ಬಘಾನಿ' ಹಾಗು ರಥೋರ್  ಈಗ ದಿನ ನಿತ್ಯ ಭೇಟೆಯಾಡುತ್ತಿದ್ದಾರೆ.ಅದು ಹುಲಿಗಳನ್ನು ಹಿಂಬಾಲಿಸುತ್ತಿದ್ದ ನಲ್ಲ ಮುತ್ತು ಮತ್ತವರ ತಂಡಕ್ಕೆ ಸ್ಪಷ್ಟವಾಗಿ ಗೋಚರವಾಗುತ್ತಿದೆ  

.ಸರಿಸ್ಕಾ ದಲ್ಲಿ ಚಳಿಗಾಲ ಆರಂಭವಾಗಿದೆ.. ಹುಲಿಗಳು ಈಗ ಸೇರುವ ಕಾಲ. ರಥೋರ್ ಮುಂಜಾನೆಯ ಚಳಿಯಲ್ಲಿ ಬಘಾನಿ ಬಿಟ್ಟು  ಹೋದ  ಕುರುಹು (ಸೆಂಟ್ ಮಾರ್ಕ್) ಗಳನ್ನು ಹುಡುಕುತ್ತಾ ಹೆಣ್ಣು ಹುಲಿಗಾಗಿ ಅರಸುತ್ತಾ ಕಾಡಿನ ದಾರಿಗಳಲ್ಲಿ ನಡೆಯುತ್ತಿದ್ದಾನೆ.ಅತ್ತ ಬಘಾನಿ ಕೂಡ ಗಂಡು ಹುಲಿಯ ವಾಸನೆಯನ್ನು ಹಿಡಿದು ಹುಡುಕುತ್ತಿದ್ದಾಳೆ .ಇವರಿಬ್ಬರು ಸಂಧಿಸುವುದನ್ನು ನಲ್ಲ ಮುತ್ತು ಕುತೂಹಲದಿಂದ ಕಾಯುತ್ತಿದ್ದಾರೆ.ಸರಿಸ್ಕಾದಲ್ಲಿ ಹುಲಿ ಯೋಜನೆ ಯಶಸ್ವಿಯಾಗಬೇಕಾದರೆ ಇವರಿಬ್ಬರು ಸಂಧಿಸಲೇಬೇಕು

.ಆದರೆ ಗಂಡು ಹುಲಿಗಾಗಿ ಹುಡುಕುತಿದ್ದ 'ಬಘಾನಿ' ತನ್ನ ಹುಡುಕಾಟ ನಿಲ್ಲಿಸುತ್ತಾಳೆ...ಇದರರ್ತ 'ಬಘಾನಿ' ಇನ್ನೂ ತಾಯಿಯಾಗಲು ತಯಾರಾಗಿಲ್ಲ,ಅವಳಿನ್ನೂ ಹೊಸ ಪ್ರದೇಶದಲ್ಲಿ ಗಟ್ಟಿಯಾಗಿ ತನ್ನ ನೆಲೆ ಸ್ಥಾಪಿಸಿಲ್ಲ,ಹಾಗು ಆ ನೆಲೆ  ಸ್ಥಾಪಿಸದೇ ಮರಿಗಳನ್ನು ಪಡೆಯಲು ಅವಳು ತಯಾರಿಲ್ಲ..

.ನಂತರದ ಹಲವು ತಿಂಗಳುಗಳಲ್ಲಿ 'ಬಘಾನಿ' ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸುತ್ತಾ ಹೋಗುತ್ತಾಳೆ.ಅವಳನ್ನು ಹಿಂಬಾಲಿಸುತ್ತಿದ್ದ ನಲ್ಲ ಮುತ್ತುವಿಗೆ ಒಮ್ಮೆ ತಾನು ಅವಳನ್ನು ಹಿಂಬಾಲಿಸಿಕೊಂಡು ಪದೇ ಪದೇ ಒಂದು ಜಾಗಕ್ಕೆ ಬರುತ್ತಿರುವುದು ಖಚಿತವಾಗುತ್ತದೆ.. ಅವರ ಊಹೆಯಂತೆಯೇ ಅಲ್ಲಿ ನಡೆದಿರುತ್ತದೆ. ಒಂದು ಕೆರೆಯ ಸುತ್ತ ಮುತ್ತಲಿನ ಪ್ರದೇಶವನ್ನು 'ಬಘಾನಿ' ತನ್ನ 'Territory' ಯಾಗಿ ಆಯ್ಕೆ ಮಾಡಿಕೊಂಡಿರುತ್ತಾಳೆ,ಈಗ ಅವಳ ಪ್ರದೇಶದಲ್ಲಿ ಅವಳೇ ರಾಣಿ,ಅವಳ ಎದುರು ನಿಲ್ಲವ ಧೈರ್ಯ  ಅಲ್ಲಿ ಯಾರಿಗೂ ಇಲ್ಲ. ಒಂದು ಕಾಡು ಹಂದಿಯನ್ನು ಅವಳು ಕೊಂದು ಅದನ್ನು ಕೊಂದ ಪ್ರದೇಶದಲ್ಲೇ ಬಿಟ್ಟು ಸ್ವಲ್ಪ ದೂರಕ್ಕೆ ಹೋಗಿ  ವಿಶ್ರಾಂತಿ ತೆಗೆದುಕೊಳ್ಳುತ್ತಾಳೆ..  'ಬಘಾನಿ' ಕೊಂದ ಪ್ರಾಣಿಯನ್ನು ಅಲ್ಲೇ ಬಿಟ್ಟು ದೂರ ಹೋಗಿ ವಿಶ್ರಮಿಸುವ ಹಂತ ತಲುಪಿದ್ದಾಳೆ ಅಂದರೆ ಆ ಪ್ರದೇಶಕ್ಕೆ ಅವಳು ಬಾಸ್ ಆಗಿದ್ದಾಳೆ ಎಂದೇ ಅರ್ಥ .. ಅವಳು ಕೊಂದ ಬಲಿಯನ್ನು ಮುಟ್ಟುವ  ಧೈರ್ಯ  ಅಲ್ಲಿ ಬೇರೆ ಯಾರಿಗೆ ತಾನೇ ಇರಲು ಸಾಧ್ಯ??

.ಸರಿಸ್ಕಾದಲ್ಲಿ ಮಳೆಗಾಲದ ಆರಂಭ. ಅರಣ್ಯ ಸಿಬ್ಬಂದಿ ಹಳ್ಳಿಯ ಜನರ ಜಾನುವಾರುಗಳನ್ನು ಅರಣ್ಯದಿಂದ ಬೇರೆಡೆ ಸ್ಥಳಾ೦ತರಿಸುತ್ತಿದ್ದಾರೆ.ನಮ್ಮ ಗಂಡು ಹುಲಿ ರಥೋರ್ ಹಳ್ಳಿಯ ಜಾನುವಾರುಗಳನ್ನು ಭೇಟೆಯಾಡುತ್ತಿರುವುದು ಕಂಡು ಬಂದಿದೆ.ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹಳ್ಳಿಯ ಜನ ರಥೋರ್ ನ ಜೀವಕ್ಕೆ ಅಪಾಯ ತರಬಹುದು

.ಹಲವು ದಿನಗಳ ನಂತರ ಒಮ್ಮೆ ರಥೋರ್ ಕೊಂದು ಬಿಟ್ಟು ಹೋಗಿದ್ದ ಪ್ರಾಣಿಯ ಬಳಿ ಬಘಾನಿ ಬಂದು ಅದನ್ನು ತಿನ್ನುವುದನ್ನು ನಲ್ಲ ಮುತ್ತು ಗಮನಿಸುತ್ತಾರೆ,ಸಾಧಾರಣವಾಗಿ ಹುಲಿಗಳು ತಮ್ಮ ಬಲಿಯನ್ನು ಇನ್ನೊಂದು ಹುಲಿಯೊಂದಿಗೆ ಹಂಚಿಕೊಳ್ಳುವುದಿಲ್ಲ

.ಇದಾದ ಕೆಲವೇ ದಿನಗಳಲ್ಲಿ ನಲ್ಲ ಮುತ್ತು ಸರಿಸ್ಕಾದ ಕಾಡುಗಳಲ್ಲಿ ಗಂಡು ಹಾಗು ಹೆಣ್ಣು ಹುಲಿಯ ಪ್ರೀತಿಯ ಕರೆಗಳನ್ನು ಕೇಳುತ್ತಾರೆ.ಅವರು ಅಂದುಕೊಂಡ ಪ್ರಕಾರವೇ ಈಗ ಬಘಾನಿ ಹಾಗು ರಥೋರ್ ಮತ್ತೆ ಒಬ್ಬರನ್ನೊಬ್ಬರು ಹುಡುಕುತ್ತಿದ್ದಾರೆ

.ಬಘಾನಿಗೆ ಈಗ ಹಿಂದೆ ಕಾಡುತ್ತಿದ್ದ ಅಭದ್ರತೆ ಈಗ ಇಲ್ಲ.ಅವಳು ಈಗ ರಥೋರ್ ಜೊತೆ ಸರಸಕ್ಕೆ ತಯಾರಿದ್ದಾಳೆ

.ಅಂತೂ 7 ತಿಂಗಳ ನಂತರ ನಲ್ಲ ಮುತ್ತು ಬಘಾನಿ ಹಾಗು ರಥೋರ್ ಇಬ್ಬರನ್ನೂ ಒಟ್ಟಿಗೆ ನೋಡುತ್ತಾರೆ.ನಂತರದ ಮೂರು ದಿನಗಳು ಬಘಾನಿ ಹಾಗು ರಥೋರ್ ಒಟ್ಟಿಗೆ ಇದ್ದು ತಮ್ಮ ಮುಂದಿನ ಪೀಳಿಗೆಯನ್ನು ಸರಿಸ್ಕಾಗೆ ತರಲು ಪ್ರಯತ್ನಪಡುತ್ತಾರೆ

.ಈ ಮಧ್ಯೆ ಚಿರತೆಗಳಿಗೆ ಹುಲಿಗಳು ತಲೆ ನೋವಾಗಿ ಪರಿಣಮಿಸುತ್ತಿರುತ್ತದೆ.ಒಮ್ಮೆ ಬಘಾನಿ ಒಂದು ಚಿರತೆಯ ಹಿಂದೆ ಬೀಳುತ್ತದೆ 

.ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಚಿರತೆ ಮರದ ಮೇಲೆ ಕುಳಿತು ಕೆಳಗೆ ಕಾಯುತ್ತಿದ್ದ ಬಘಾನಿಯ ನಿರ್ಗಮನಕ್ಕೆ ಕಾಯುತ್ತಿರುತ್ತದೆ.ಆ ದೃಶ್ಯವನ್ನು ಸಂಜೆಯವರೆಗೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ನಲ್ಲ ಮುತ್ತು ಕತ್ತಲು ಕವಿದಂತೆ ನಿರ್ಗಮಿಸುತ್ತಾರೆ.ಅಂದು ಅವರ ಮನಸ್ಸಿನಲ್ಲಿ ಒಂದು ಭಯ ಕಾಡುತ್ತಿರುತ್ತದೆ.ಅಕಸ್ಮಾತ್ ಈ ಚಿರತೆಯ ಹಿಂದೆ ಬಘಾನಿ ಹೋಗಿ ಜಗಳ ತೆಗೆದು ತನಗೆ ಎಲ್ಲಿ ತೊಂದರೆ ಮಾಡಿಕೊಳ್ಳುತ್ತದೆಯೂಯೆಂದು 

.ರಾತ್ರಿ ಇವರು ಅಳವಡಿಸಿದ್ದ Night Camera ಗಳ ಸಹಾಯದಿಂದ ಅಲ್ಲಿ ನಡೆಯುತ್ತಿದ್ದ ಘಟನೆಗಳು ಗೋಚರಿಸುತ್ತದೆ.ಮರದ ಮೇಲೆ ಕುಳಿತ ಚಿರತೆ ಕೆಳಗಿಳಿದು ಮುಂದೆ ಸಾಗಿದಂತೆ ಬಘಾನಿ ಅದರ ಹಿಂದೆ ಸಾಗುತ್ತಿರುತ್ತದೆ.ಅಂದು ರಾತ್ರಿ ಅರಣ್ಯ ಅಧಿಕಾರಿಗಳು ಬಘಾನಿಯ ರಕ್ಷಣೆಗೆ ಬರುತ್ತಾರೆ.ಅವರು ಚಿರತೆ ಹಾಗು ಬಘಾನಿಯ ಜಾಡನ್ನು ಹಿಡಿದು ಅವುಗಳು ಹೋದ ದಾರಿಯಲ್ಲೇ ಸಾಗುತ್ತಾರೆ.ನಲ್ಲ ಮುತ್ತು ಬಘಾನಿಗೆ ಏನೂ ಆಗದಿರಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.. ಇದ್ದಕ್ಕಿದಂತೆ ಅರಣ್ಯ ಅಧಿಕಾರಿಗಳ ಕಣ್ಣಿಗೆ ಅಲ್ಲಿ ನಡೆದ ಘಟನೆಯ ಗುರುತುಗಳು ಗೋಚರಿಸುತ್ತವೆ.ಅಲ್ಲಿ ಚಿರತೆಯ ಬಾಲ ತುಂಡಾಗಿ ಬಿದ್ದಿರುತ್ತದೆ ಸರಿಸ್ಕಾದ ರಾಣಿ ಬಘಾನಿ ಚಿರತೆಯನ್ನು ಮುಗಿಸಿರುತ್ತಾಳೆ. ಅಲ್ಲಿಗೆ ಒಂದು ವಿಷಯ ಎಲ್ಲರಿಗೂ ಸ್ಪಷ್ಟವಾಗುತ್ತದೆ.ಸರಿಸ್ಕಾದಲ್ಲಿ ಬಘಾನಿ ಗೆ ಸರಿಸಮರು ಅಲ್ಲಿ ಯಾರಿಲ್ಲವೆಂದು  

.ಹಲವು ದಿನಗಳು ಕಳೆದಿವೆ ... ಬಘಾನಿ ತಾಯಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.. ಅಂದರೆ ಅವಳು ಹಾಗು ರಥೋರ್ ನಡುವೆ ನಡೆದ ಮೊದಲ ಮಿಲನ ಫಲಪ್ರದವಾಗಿಲ್ಲ... ಆದ್ದರಿಂದ ಸದ್ಯದಲ್ಲೇ ಅವಳು ಮತ್ತೊಂದು ಮಿಲನಕ್ಕೆ ರೆಡಿಯಾಗುತ್ತಾಳೆ

.ಈ ಸಮಯದಲ್ಲಿ ರಥೋರ್ ಹೆಚ್ಚಿನ ಸಮಯವನ್ನು ನೀರಿನ ಹೊಂಡದಲ್ಲಿ ಕಳೆಯುತ್ತಿರುತ್ತಾನೆ.ಇದರ ಜೊತೆ ಕ್ಯಾಮರ ಕಣ್ಣುಗಳು ಇನ್ನೊಂದು ಅಪಾಯಕಾರಿ ಸತ್ಯವನ್ನು ತೆರೆದಿಡುತ್ತವೆ..ರಥೋರ್  ನ ಜಾಗಕ್ಕೆ ಮತ್ತೆ ಹಳ್ಳಿಗಳ ಜಾನುವಾರುಗಳು ಬರಲಾರಂಭಿಸಿರುತ್ತವೆ.. ಇದು ನಿಜವಾಗಿಯೂ ಅಪಾಯಕಾರಿ ಸಂಗತಿ

.ಸ್ವಲ್ಪ ದಿನಗಳಲ್ಲೇ ಬಘಾನಿ ಮತ್ತೊಮ್ಮೆ  ಮಿಲನಕ್ಕೆ ತಯಾರಾಗಿ ರಥೋರ್ ನನ್ನು ಅರಸುತ್ತಾ ಮುಂಜಾನೆಯೆಲ್ಲಾ ಅವನನ್ನು ಕರೆಯುತ್ತಿರುತ್ತಾಳೆ... ಆದರೆ ರಥೋರ್ ನಿಂದ ಮಾತ್ರ ಯಾವುದೇ ಉತ್ತರವಿಲ್ಲ....ಹಾಗಾದರೆ ಎಲ್ಲಿ ಹೋದ ನಮ್ಮ ಕಿಂಗ್ ರಥೋರ್.....

.ಮೂರು ದಿನಗಳಾದರೂ ರಥೋರ್ ಕಾಣದೆ ಇದ್ದಾಗ ಅರಣ್ಯ ಅಧಿಕಾರಿಗಳ ತಂಡ ಅವನನ್ನು ಹುಡುಕಲು ತಯಾರಾಗುತ್ತಾರೆ..ಅವನ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಾ ಸಾಗುತ್ತಾರೆ....ಕೊನೆಗೂ ರಥೋರ್ ಸಿಗುತ್ತಾನೆ....... ಆದರೆ 'ಹೆಣವಾಗಿ'...... ಹೌದು ಸಾರಿಸ್ಕಾದ ರಾಜ ರಥೋರ್ ಒಂದು ಕಡೆ ಹೆಣವಾಗಿ ಮಲಗಿರುತ್ತಾನೆ. ಮೊದಲೇ ಇದ್ದ ಭಯದಂತೆ ಹಳ್ಳಿಯ ಯಾರೋ ರಥೋರ್ ನನ್ನ ವಿಷವಿಟ್ಟು ಕೊಂದಿರುತ್ತಾರೆ.........
 .ಇತ್ತ ಬಘಾನಿ ರಥೋರ್ ಗಾಗಿ ಹಗಲೂ ರಾತ್ರಿ ಅಲೆಯುತ್ತಾಳೆ..ನಂತರದ ಮೂರು ದಿನಗಳು ಅವನಿಗಾಗಿ ರೋಧಿಸುತ್ತಾಳೆ...ಆ ದೃಶ್ಯ ನಿಜವಾಗಿಯೂ ನಮ್ಮ ಹೃದಯ ಓಡೆಯುವಂತಹದ್ದು...ಅವನಿಲ್ಲದೆ ಅವಳ ಭವಿಷ್ಯ ಈಗ ಕತ್ತಲಲ್ಲಿದೆ 
 .ಸರಿಸ್ಕಾದಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿದೆ ...  ಜಡಿ ಮಳೆಯಲ್ಲಿ ಸರಿಸ್ಕಾದ ಅರಣ್ಯ ಪ್ರವೇಶ ಅಸಾಧ್ಯವಾಗುತ್ತದೆ.ನಲ್ಲ ಮುತ್ತುವಿಗೆ ಇನ್ನು ಬಘಾನಿಯನ್ನು ಹಿಂಬಾಲಿಸಲು ಸಾಧ್ಯವಿಲ್ಲ..ಅವಳನ್ನು ಕೊನೆಯ ಬಾರಿ ತಮ್ಮ ಕ್ಯಾಮೆರಾ ದಲ್ಲಿ ಸೆರೆ ಹಿಡಿದು ಭಾರವಾದ ಮನ್ನಸ್ಸಿನೊಂದಿಗೆ ವಾಪಾಸಾಗುತ್ತಾರೆ..ಇನ್ನು ಸರಿಸ್ಕಾದಲ್ಲಿ ಹುಲಿ ಯೋಜನೆ ಮುಗಿದಂತೆಯೇ ಎಂದುಕೊಳ್ಳುತ್ತಾರೆ...

.ಆದರೆ ಹುಲಿ ಯೋಜನೆ ಯನ್ನು ಯಶಸ್ವಿಗೊಳಿಸಲು ಟೂ೦ಕ್ಕ ಕಟ್ಟಿ ನಿಂತಿರುವ ಅರಣ್ಯ ಅಧಿಕಾರಿಗಳು ಹಾಗು ತಜ್ಞರು ಇದನ್ನು ಇಲ್ಲಿಗೇ ಬಿಡಲು ತಯಾರಿಲ್ಲ.. ಅವರು ಮತ್ತೊಂದು ಗಂಡು ಹುಲಿಯನ್ನು ರಣತಂಬೂರ್ ನಿಂದ ತರಲು ನಿರ್ಧರಿಸಿ ಅದರಂತೆ ಬಘಾನಿಗೆ ಹೊಸ ಜೋಡಿಯನ್ನು ರಣತಂಬೂರ್ ನಿಂದ ಸರಿಸ್ಕಾಗೆ ತಂದು ಬಿಡುತ್ತಾರೆ..

.ಮಳೆಗಾಲ ಕಳೆದ ನಂತರ ಹಲವು ಹಳ್ಳಿಯ ಜನರು ಪಾರ್ಕ್ ನಿಂದ ಹೊರಗೆ ಜೀವನ ನಡೆಸಲು ಒಪ್ಪಿಗೆ ಕೊಟ್ಟು ಕಾಡಿನಿಂದ ಮರಳುತ್ತಾರೆ

.ನಲ್ಲ ಮುತ್ತು ಹಾಗು ತಂಡ ಮತ್ತೆ ಬಘಾನಿ ಯನ್ನು ಹುಡುಕುತ್ತಾ ಸರಿಸ್ಕಾದ ದುರ್ಗಮ ಹಾದಿಗಳಲ್ಲಿ ಸಾಗುತ್ತದೆ.ಅವರಿಗೆ ಬಘಾನಿ ಯ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ,ಅದರ ಜೊತೆಗೆ ಹೊಸ ಗಂಡು ಹುಲಿಯ ಹೆಜ್ಜೆಗಳೂ ಕೂಡ ಕಂಡು ಬರುತ್ತದೆ.ಇದು ಅವರಲ್ಲಿ ಹೊಸ ಉತ್ಸಾಹವನ್ನು  ತಂದು ಕೊಡುತ್ತದೆ .ಕೊನೆಗೂ ಎಂಟು ದಿನಗಳ ನಂತರ  'ಅರಣ್ಯ ಪ್ರಾಣಿಗಳ ಕೂಗಿನ ಸೂಚನೆ' ನಲ್ಲ ಮುತ್ತುರನ್ನು ಬಘಾನಿಯ ಬಳಿ ಕರೆದೊಯ್ಯುತ್ತದೆ....

.ಬಘಾನಿ ಅಲ್ಲಿದ್ದಾಳೆ..ಅವಳಿನ್ನೂ ಬಲಿಷ್ಟವಾಗಿದ್ದಾಳೆ..ಸರಿಸ್ಕಾದ ಎಲ್ಲಾ ಕಷ್ಟಗಳನ್ನು ಎದುರಿಸಿ ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾಳೆ...ಅವಳ ಧೈರ್ಯ ಹಾಗು ಬುದ್ದಿವಂತಿಕೆ ಅವಳನ್ನು ಇನ್ನೂ ಹೆಚ್ಚು ಗಟ್ಟಿ ಮುಟ್ಟಾಗಿಸಿದೆ.. ಅವಳು ಈಗ ಮತ್ತೆ ತಾಯಿಯಾಗಲು ರೆಡಿಯಾಗಿದ್ದಾಳೆ.. ಸರಿಸ್ಕಾದ ಹುಲಿ ಯೋಜನೆ ಇವಳ ಮೇಲೆ ನಿರ್ಧರಿತವಾಗಿದೆ..ನಲ್ಲ ಮುತ್ತು ರವರಿಗೆ ನಂಬಿಕೆ ಇದೆ.. ಖಂಡಿತವಾಗಿಯೂ ಬಘಾನಿ ತಾಯಿಯಾಗುತ್ತಾಳೆ ಹಾಗು ಪ್ರಥಮ ಬಾರಿಗೆ ಸರಿಸ್ಕಾದ ಅರಣ್ಯದಲ್ಲಿ ಅವಳ ಮರಿಗಳು ಕಣ್ಣು ಬಿಡುತ್ತವೆಯೆಂದು.....
 .ಅವರ ನಂಬಿಕೆ ಹುಸಿಯಾಗದಿರಲಿ.... ಬಘಾನಿ ತಾಯಿಯಾಗಿ ಮರಿಗಳಿಗೆ ಜನ್ಮ ನೀಡಲಿ...ಅವಳ ಸಂತತಿ ಸರಿಸ್ಕಾದಲ್ಲಿ ಬೆಳೆದು ಉಳಿಯಲಿ.. ಸರಿಸ್ಕಾದಲ್ಲಿ ಹುಲಿಗಳ ಘರ್ಜನೆ ಇನ್ನೂ ಹೆಚ್ಚಾಗಲಿಯೆಂದು ನಾವು ಆಶಿಸೋಣ.......

.ಸರಿಸ್ಕಾದ ಈ ಸುಂದರ ಹುಲಿಗಳ  ಬದುಕನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿರುವ  ನಲ್ಲ ಮುತ್ತುರವರು ಈಗ ಇದನ್ನು BBC ರವರ ಸಹಾಯದಿಂದ ಡಾಕ್ಯುಮೆಂಟರಿ ರೂಪದಲ್ಲಿ ಹೊರತಂದಿದ್ದಾರೆ.BBC ಯ Natural Word Series ನಲ್ಲಿ 'TIGER DYNASTY' ಎಂಬ ಹೆಸರಿನಲ್ಲಿ ಈ ಡಾಕ್ಯುಮೆಂಟರಿ ಲಭ್ಯವಿದೆ.. 
ಇದನ್ನು ಕೊಂಡು ಒಮ್ಮೆ ನೋಡಿ..ಸರಿಸ್ಕಾದ ಹುಲಿಗಳ ಲೋಕ ಇಲ್ಲಿ ಅತ್ಯದ್ಭುತವಾಗಿ ಚಿತ್ರಿತಗೊಂಡಿದೆ.. ಹಾಗೆ ಈ ಸುಂದರ ಡಾಕ್ಯುಮೆಂಟರಿ ಯನ್ನು ನಮಗೆ ನೀಡಿದ ನಲ್ಲ ಮುತ್ತುರವರಿಗೆ ನಮ್ಮ ಕಡೆಯಿಂದ Hats off...

.image and info courtesy-BBC

-ಪ್ರಕೃತಿಯನ್ನು ರಕ್ಷಿಸಿ-

Comments

  1. Superb Narration Raghu..

    Will look forward to read more posts like these, thanks for this brilliant one!!1

    -
    Sumanth

    ReplyDelete
  2. Thanks a lot for ur words sumanth.

    ReplyDelete
  3. Nice words. Saw the documentary by NGC on Ranathambore Reserve.
    Karnataka now really needs to take some steps to preserve tiger territory. There are lot of people living inside the reserves of Nagarahole and Bandipur

    ReplyDelete
  4. Tumbaa Upayukta Lekhana Raghu avre....Its really Nice....Keep Writing.....

    ReplyDelete
  5. 'so called me' Thank u very much.. ur right our government must take brave steps to protect our tigers..

    ReplyDelete
  6. ತುಂಬಾ ಧನ್ಯವಾದಗಳು ಅಶೋಕ್ ಸರ್...

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....