ಬಂಡೀಪುರದ ನರಭಕ್ಷಕ..!!!

.ಪ್ರಿಯ ಪ್ರಕೃತಿ ಪ್ರಿಯ ಮಿತ್ರರೇ ಮೊದಲನೆಯದಾಗಿ ಹಲವು ತಿಂಗಳುಗಳಿಂದ ಬ್ಲಾಗ್ ಪೋಸ್ಟ್ ಬರೆಯದೆ ಇರುವುದಕ್ಕಾಗಿ ಕ್ಷಮೆ ಇರಲಿ

(ಚಿತ್ರ ಕೃಪೆ-ವಿಜಯವಾಣಿ)

(ಈ ಹುಲಿಗೆ ಸಂಭಂದಪಟ್ಟ updates ಗಳನ್ನು ಪೋಸ್ಟ್ ನ ಕೊನೆಯಲ್ಲಿ ಮಾಡಲಾಗಿದೆ )

ಬಂಡೀಪುರದ ನರಭಕ್ಷಕ...!! ಕಳೆದ ಒಂದು ವಾರದಿಂದ ದಿನಪತ್ರಿಕೆಗಳಲ್ಲಿ ನೀವು ಈ ವಿಷಯವನ್ನು ಗಮನಿಸಿರಬಹುದು. ನವೆಂಬರ್ 27 ರ ಬುಧವಾರದಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೊರ ಪ್ರದೇಶದಲ್ಲಿ ಬಸವರಾಜು ಎಂಬುವವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಹುಲಿಯೊಂದರ ಬಗ್ಗೆ ಸುದ್ದಿಯನ್ನು ನೀವು ಕೇಳಿರಬಹುದು 

.ಇದಾದ ಕೇವಲ 2 ದಿನಗಳ ನಂತರ ಉದ್ಯಾನವನದ 100 ಮೀಟರ್ ಹೊರ ಪ್ರದೇಶದಲ್ಲಿ ಜೇನು ಕುರುಬ ಜನಾಂಗದ ಚೆಲುವ ಎಂಬುವವರ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ

.ಈ ಮೇಲಿನ ಎರಡೂ ಘಟನೆಗಳಲ್ಲೂ ಕೂಡ ಹುಲಿ ಕೊಂದ ದೇಹವನ್ನು ತಿನ್ನದೇ ಬಿಟ್ಟು ಹೋಗಿದೆ.ಮೊದಲೇ ಘಟನೆಯಲ್ಲಿ ಹುಲಿ ಬಸವರಾಜುರವರ ತಲೆಗೆ ಗಾಯ ಮಾಡಿದ್ದು ದೇಹದ ಯಾವುದೇ ಭಾಗವನ್ನು ತಿನ್ನದೇ ಬಿಟ್ಟು ಹೋಗಿದೆ.ಎರಡನೇ ಘಟನೆಯಲ್ಲಿ ಹುಲಿ ಚೆಲುವರ ಮೇಲೆ ದಾಳಿ ನಡೆಸಿದಾಗ ಅವರ ಜೊತೆಯಲ್ಲಿ ಇದ್ದ ಅವರ ಸ್ನೇಹಿತ ಚಿಕ್ಕ ತಮ್ಮ ಬಳಿ ಇದ್ದ ಕತ್ತಿಯೊಂದಿಗೆ ಹುಲಿಯನ್ನು ಹಿಂಬಾಲಿಸಿದ್ದಾರೆ

 .ಆಗ ಹುಲಿ ಚೆಲುವವ ದೇಹವನ್ನು ಬಿಟ್ಟು ಇವರ ಮೇಲೆ ದಾಳಿಗೆ ಮುಂದಾಗಿದ್ದು ಅವರು ಅದರಿಂದ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯಲ್ಲೂ ಕೊಡ ಚೆಲುವನ ದೇಹವನ್ನು ಅದು ಬಿಟ್ಟು ಹೋಗಿದೆ.ಇಲ್ಲೂ ತಲೆಯ ಮೇಲೆ ಬಲವಾದ ಹೊಡೆತ ಬಿದ್ದ ಕಾರಣ ಚೆಲುವ ಅಸುನೀಗಿದ್ದಾರೆ .ಸಹಜವಾಗಿ ಈ ಘಟನೆಯಿಂದ ಅಲ್ಲಿನ ಸುತ್ತ ಮುತ್ತಲಿನ ಹಾಡಿಯ ಜನರು ಗಾಬರಿಗೊಂಡಿದ್ದಾರೆ 

.ಅರಣ್ಯ ಇಲಾಖೆಯವರ ಪ್ರಕಾರ  ವಯಸ್ಸಾದ ಹುಲಿ ಇದಾಗಿದ್ದು ಸಹಜವಾಗಿ ಕಾಡಿನಲ್ಲಿ ಬೇರೆ ಹುಲಿಗಳೊಂದಿಗೆ Territory ಜಗಳದಿಂದಾಗಿಯೂ ಅಥವಾ ಬೇರೆ ಕಾರಣಗಳಿಂದ ಕಾಡಿನ ಪ್ರಾಣಿಗಳನ್ನು ಹಿಡಿಯಲಾಗದೆ ಇಲ್ಲಿನ ಹಳ್ಳಿಯ ಜನರ ದನ ಕರು ಗಳ ಮೇಲೆ ದಾಳಿ ನಡೆಸಲು ಬಂದಾಗ ಆಕಸ್ಮಿಕವಾಗಿ ಮನುಷ್ಯನ ಮೇಲೆ ದಾಳಿ ನಡೆಸಿದೆ ಎಂದು 

.ಅರಣ್ಯ ಇಲಾಖೆಯವರ ಈ ಊಹೆ ಸರಿ ಕೂಡ ಹೌದು. ಏಕೆಂದರೆ ಕೇವಲ ಒಂದಿಬ್ಬರು ಮನುಷ್ಯರ ಮೇಲೆ ದಾಳಿ ನಡೆಸಿದ ಮಾತ್ರಕ್ಕೆ ದಾಳಿ ಮಾಡಿದ ಹುಲಿಯನ್ನು ನರಭಕ್ಷಕ ಎಂದು ಕರೆಯಲು ಆಗುವುದಿಲ್ಲ. ಇಲ್ಲಿ ನಡೆದ ಘಟನೆಗಳನ್ನು ಆಧರಿಸಿ ಹೇಳುವುದೇ ಆದರೆ ಮೊದಲನೇ ಘಟನೆಯಲ್ಲಿ ಬಂಡೀಪುರ ಉದ್ಯಾನವನದ ಒಂದು ವಯಸ್ಸಾದ ಹುಲಿ ಕಾಡಿನಲ್ಲಿ ತನ್ನ ಸಹಜ ಭೇಟೆಯನ್ನು ಹಿಡಿಯಲು ಅಸಮರ್ಥವಾಗಿ ಹಳ್ಳಿಯ ಜನಗಳ ದನ ಕರುಗಳ ಮೇಲೆ ಅದರ ಕಣ್ಣು ಬಿದ್ದಿರುತ್ತದೆ. ಈ ಸಂದರ್ಭದಲ್ಲಿ ಅದು ದನ ಕರುಗಳಿಗೆ ಹೊಂಚು ಹಾಕಿ ಮರೆಯಲ್ಲಿ ಕಾದು ಕುಳಿತಿರುತ್ತದೆ. ಹೀಗೆ ದನ ಕರುಗಳ ಹಿಂಡಿನ ಮೇಲೆ ಕಣ್ಣಿಟ್ಟ ಹುಲಿಯ ಕಣ್ಣಿಗೆ ಅಚಾನಕ್ಕಾಗಿ ಬಸವರಾಜು ಕಣ್ಣಿಗೆ ಬಿದ್ದಿರಬಹುದು. ಹುಲಿಗಳು ಪೊದೆಯ ಹಿಂಬದಿಯಲ್ಲೋ ಅಥವಾ ಬೇರೆ ಕಲ್ಲು ಬಂಡೆಗಳ ಹಿಂದೆಯೂ ಅಡಗಿ ಕುಳಿತಾಗ ಅದಕ್ಕೆ ಬೆನ್ನು ಮಾಡಿ ನಿಂತಿರುವ ಅಥವಾ ಕುಳಿತಿರುವ ವ್ಯಕ್ತಿಗೆ ಇದು ತಿಳಿಯುವುದಿಲ್ಲ. ಹುಲಿ ದನ ಕರುಗಳ ಮೇಲೆ ದಾಳಿ ಮಾಡಿದಾಗ ಬಸವರಾಜು ಪ್ರತಿರೋಧ ತೋರಿದಾಗ ಹುಲಿ ಅವರ ಮೇಲೆ ದಾಳಿ ಮಾಡಿತ್ತೋ ಅಥವಾ ಅವರ ಮೇಲೆಯೇ ನೇರವಾಗಿ ದಾಳಿ ಮಾಡಿತ್ತೋ ನಮಗೆ ಮಾಹಿತಿ ಇಲ್ಲ. ಅವರ ಮೇಲೆ ನೇರವಾಗಿ ದಾಳಿ ಮಾಡಿದ್ದೇ ಆಗಿದಲ್ಲಿ ಅದಕ್ಕೋ ಒಂದು ಕಾರಣ ನೀಡಬಹುದು. ಮರೆಯಲ್ಲಿ ಕುಳಿತ ಹುಲಿ ಸಹಜ ಕುತೂಹಲದಿಂದ ನಿಂತಿದ್ದ ಅಥವಾ ಕುಳಿತಿದ್ದ ಬಸವರಾಜುರವರ ಮೇಲೆ ಬೇರೆ ಪ್ರಾಣಿ ಎಂದುಕೊಂಡು ಅಥವಾ ತನಗೆ ತೊಂದರೆ ಮಾಡಬಹುದು ಎಂಬ ಭಯದಿಂದಲೋ ದಾಳಿ ನಡೆಸಿದೆ.ಹಾಗೆ ದಾಳಿ ನಡೆಸಿ ತಲೆಗೆ ಗಾಯ ಮಾಡಿ ಅಲ್ಲಿಂದ ದೇಹವನ್ನು ತಿನ್ನದೇ ತೆರಳಿದೆ.ಈ ಘಟನೆಯಿಂದ ಒಂದನ್ನಂತೂ ಸ್ಪಷ್ಟ ಪಡಿಸಬಹುದು. ಹುಲಿ ಉದ್ದೇಶಪೂರ್ವಕವಾಗಿ ಇಲ್ಲಿ ಅವರ ಮೇಲೆ ದಾಳಿ ನಡೆಸಿಲ್ಲ.ಹಾಗೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದೆ ಆದರೆ ಅದು ಆ ದೇಹವನ್ನು ಸ್ವಲ್ಪವೂ ತಿನ್ನದೇ ಹಾಗೆ ಅಲ್ಲಿ ಬಿಟ್ಟು ಹೋಗುತ್ತಿರಲಿಲ್ಲ . ಇಲ್ಲವೆಂದರೆ ಹಿಂದೆ ಅದು ದನ ಕರುಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದ ಸಮಯದಲ್ಲಿ ಅದಕ್ಕೆ ಅಲ್ಲಿನ ದನಗಾಹಿಗಳಿಂದ ಅಡಚಣೆಯಾಗಿರಬಹುದು ಹಾಗು ಈ ದನಗಾಹಿಗಳ ಮೇಲೆ ಅದು  ತೀರ್ವವಾದ ಸಿಟ್ಟು ಹಾಗು ಅಸಹನೆಯನ್ನು ಬೆಳೆಸಿಕೊಂಡಿರಬಹುದು 

.ಈ ಘಟನೆಯ ಆಗಿ ಎರಡು ದಿನ ಕಳೆದಿದೆ ಹುಲಿಯು ಬಹುಷಃ ತೀವ್ರವಾಗಿ ಹಸಿದಿರಬೇಕು ಅದು ಅಲ್ಲೇ ಸುತ್ತ ಮುತ್ತಲೇ ಅಡ್ಡಾಡುತ್ತಾ ದನ ಕರುಗಳಿಗೆ ಮತ್ತೊಮ್ಮೆ ಹೊಂಚು ಹಾಕಿ ತಿರುಗಾಡುತ್ತಿದ್ದಿರಬೇಕು.ಸರಿಯಾಗಿ ಶುಕ್ರವಾರ ಬೆಳೆಗ್ಗೆ ಮತ್ತೊಮ್ಮೆ ಅದಕ್ಕೆ ಇನ್ನೊಂದು ಸಮಯ ಒದಗಿ ಬಂದಿರಬೇಕು.ಆದರೆ ಈ ಬಾರಿ ಅಲ್ಲಿ ಇದ್ದದು ಇಬ್ಬರು ದನಗಾಹಿಗಳು. ಹುಲಿಗೆ ಮತ್ತೊಮ್ಮೆ ಸಿಟ್ಟು ತಾರಕ್ಕಕ್ಕೆ ಏರಿತೆಂದು ಕಾಣುತ್ತದೆ. ಈ ಬಾರಿಯೂ ಕೂಡ ಹಿಂಬದಿಯಿಂದಲೇ ಚೆಲುವನ ಮೇಲೆ ದಾಳಿ ನಡೆಸಿ ತಲೆಗೆ ಬಲವಾದ ಏಟು ನೀಡಿದೆ. ಹಸಿದಿದ್ದ ಹುಲಿ ಈ ಬಾರಿ ಚೆಲುವನನ್ನು ತಿಂದು ಮುಗಿಸುವ ಯೋಚನೆ ಮಾಡಿತ್ತೋ ಏನೋ ಆದರೆ ಚೆಲುವನ ಸ್ನೇಹಿತ ಚಿಕ್ಕ ಅದನ್ನು ಹಿಂಬಾಲಿಸಿ ಪ್ರತಿರೋಧ ನೀಡಲು ಶುರು ಮಾಡಿದ್ದಾರೆ.ಮೊದಲೇ ಹಸಿವಿನಿಂದ ಕಂಗೆಟ್ಟ ಚೆಲುವನ ದೇಹವನ್ನು ಹಿಡಿದಿದ್ದ ಹುಲಿಗೆ ಈ ಪ್ರತಿರೋಧವನ್ನು ಸಹಿಸಲಾಗದೆ ಚೆಲುವನ ದೇಹವನ್ನು ಬಿಟ್ಟು ಚಿಕ್ಕನ ಮೇಲೆ ಎಗರಲು ಬಂದಿದೆ.ಆಗ ಚಿಕ್ಕ ತಪ್ಪಿಸಿಕೊಂಡು ಊರಿನವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹುಲಿ ಚೆಲುವನ ದೇಹವನ್ನು ತಿನದೇ ಅಲ್ಲೇ ಬಿಟ್ಟು ತೆರಳಿತ್ತಾದರೂ ಕೂಡ ದೇಹದ ಒಂದು ಕಣ್ಣಿನ ಗುಡ್ಡೆ ಇರಲಿಲ್ಲ. ಹುಲಿ ಇಲ್ಲೂ ಕೂಡ ದೇಹವನ್ನು ತಿನ್ನದೇ ಹಾಗೆ ಬಿಟ್ಟು ಹೋಗಿರಲು ಕಾರಣ ಬಹುಷಃ ಅದು ಚಿಕ್ಕನ ಪ್ರತಿರೋಧವನ್ನು ನೋಡಿ ಮತ್ತು ತದ ನಂತರದಲ್ಲಿ ಊರಿನವರು ಬಂದಿದ್ದರಿಂದ ಅದು ಹೆದರಿ ತಾನು ಕೊಂದ ದೇಹವನ್ನು ಅಲ್ಲೇ ಬಿಟ್ಟು ಹೋಗಿದೆ. ದನಗಾಹಿಗಳ ಮೇಲಿನ ಅಸಹನೆ ಹಸಿವು ಅದನ್ನು ಚೆಲುವನ ಮೇಲಿನ ದಾಳಿಗೆ ಪ್ರೇರಣೆ ನೀಡಿದೆ ಅಥವಾ ಹುಲಿ ಮತ್ತೊಮ್ಮೆ ಚೆಲುವನ ಹಿಂಬದಿಯಲ್ಲಿದ್ದು ಚೆಲುವನನ್ನು ಯಾವುದೋ ಪ್ರಾಣಿ ಎಂದು ತಿಳಿದೇ ದಾಳಿ ಮಾಡಿದೆ . ಒಟ್ಟಿನಲ್ಲಿ ಹುಲಿ ನರಭಕ್ಷಕನಾಗುವ ಲಕ್ಷಣಗಳನ್ನು ತೋರಿಸಿದೆಯೇ ಹೊರತು ನರಭಾಕ್ಷಕನಾಗಿಲ್ಲ 

.ಸಾಧಾರಣವಾಗಿ ನರಭಕ್ಷಕನಾಗಿ ಪರಿವರ್ತನೆಗೊಳ್ಳುವ ಹಲವು ಹುಲಿಗಳು ಮೊದಲು ದನ ಕರು ಗಳ ಹಿಂಡಿನ ಮೇಲೆಯೇ ದಾಳಿ ನಡೆಸುವುದು.ಯಾವಾಗ ಅಲ್ಲಿನ ದನಗಾಹಿಗಳಿಂದ ಪ್ರತಿರೋಧ ಎದುರಿಸಲ್ಪಡುತ್ತದೋ ಆಗ ಅಸಹನೆಯಿಂದ ಅದು ಅವರ ಮೇಲೆ ದಾಳಿ ನಡೆಸುತ್ತದೆ.ಒಮ್ಮೆ ಮಾನವನ ರಕ್ತದ ರುಚಿ ನೋಡಿದ ಹುಲಿಗೆ ದನ ಕರುಗಳಿಗಿಂತ ಸುಲಭವಾಗಿ ಸಿಗುವ ಮನುಷ್ಯನ ಮೇಲೆ ಆಸೆ ಹೆಚ್ಚಾಗಿ ಮುಂದಿನ ಅದರ ದಾಳಿಗಳಲ್ಲಿ ಅದು ಮನುಷ್ಯನನ್ನೇ ಗುರಿಯಾಗಿಸಿ ದಾಳಿ ನಡೆಸುತ್ತದೆ.ಈ ಪ್ರಕಾರವೇ ನೋಡುವುದಾದರೆ ಬಂಡೀಪುರದ ಹುಲಿ ಮುಂದೆ ತನ್ನ ದಾಳಿಯನ್ನು ಮನುಷ್ಯನ ಮೇಲೆ ನಡೆಸಿದ್ದೇ  ಅದಲ್ಲಿ ಅದು ಖಂಡಿತಾ ತನ್ನ ಬಲಿಯನ್ನು ದೂರದ ಕಾಡಿಗೆ ತೆಗೆದುಕೊಂಡು ಹೋಗಿ ಅಥವಾ ಅಲ್ಲಿಯೇ ಅದರ ರುಚಿ ನೋಡಬಹುದು ಹಾಗು ಎರಡು ಬಾರಿ ಮನುಷ್ಯನ ಮೇಲೆ ದಾಳಿ ನಡೆಸಿದ್ದರಿಂದ ಅದರ ಆತ್ಮವಿಶ್ವಾಸ ಕೂಡಾ ಹೆಚ್ಚಾಗಿ ನಡವಳಿಕೆಯಲ್ಲಿ ಬದಲಾವಣೆಯನ್ನು ತಂದಿರುತ್ತದೆ.ಹಾಗಾಗಿಯೇ ಒಮ್ಮೆ ನರಭಕ್ಷಕನಾಗಿ ಪರಿವರ್ತನೆಗೊಂಡ ಹುಲಿಯನ್ನು ಹಿಡಿಯುವುದು ಅಷ್ಟು ಸುಲಭದ ಮಾತಲ್ಲ 

.ಈ ನರಭಕ್ಷಕನಾಗಿ ಪರಿವರ್ತನೆ ಹೊಂದುತ್ತಿರುವ ಹುಲಿಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆ 90 ಜನರ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿದಿದೆ.ಈ ಕಾರ್ಯಾಚರಣೆಗೆ ಪಳಗಿದ ಆನೆಗಳನ್ನು ಬಳಸಿಕೊಳ್ಳಲಾಗಿದೆ. ಹುಲಿಯನ್ನು ಬೇರೆ ಬಲಿ ಪ್ರಾಣಿ ಕಟ್ಟಿ ಆಕರ್ಷಿಸಿ ಹೊಡೆಯುವಷ್ಟು ಸಮಯವಿಲ್ಲ ಇಲ್ಲ.ಏಕೆಂದರೆ ಅದು ಬೇರೆ ಪ್ರಾಣಿಗಳಿಗೆ ಆಕರ್ಷಿತವಾಗದೆ ಇರಬಹುದು ಹಾಗು ಅದು ಹಿಂದಿನ ಎರಡು ಘಟನೆಗಳಿಂದ ಹೆಚ್ಚಿನ ಜಾಗ್ರತೆ ವಹಿಸಿರಬಹುದು.ಎಲ್ಲಕ್ಕಿಂತ ಹೆಚ್ಚಾಗಿ ಆ ಹುಲಿ ಮುಂದಿನ ತನ್ನ ದಾಳಿಯನ್ನು ಮನುಷ್ಯರ ಮೇಲೆ ಅಥವಾ ದನ ಕರುಗಳ ಮೇಲೆ ನಡೆಸುವುದಕ್ಕಿಂತ ಮೊದಲು ಅರಣ್ಯ ಇಲಾಖೆಯವರು ಅದನ್ನು ಹಿಡಿಯಲೇ ಬೇಕಾದ ಒತ್ತಡದಲ್ಲಿದ್ದಾರೆ .ಅರವಳಿಕೆ ತಜ್ಞರೊಂದಿಗೆ ಈಗಾಗಲೇ ಅದು ಇರಬಹುದು ಎಂದು ಊಹಿಸಿದ ಜಾಗಗಳಲ್ಲಿ ಕಾರ್ಯಾಚರಣೆ ನಡೆದಿದೆ.ನಿನ್ನೆ (ಡಿಸೆಂಬರ್ ೧) ಭಾನುವಾರದ ಸಂಜೆಯವರೆಗೂ ಹುಲಿಯ ಸುಳಿವು ಸಿಕ್ಕಿರಲಿಲ್ಲ 

.ಇಲ್ಲಿ ಗಮಸಿಸಬೇಕಾದ ಇನ್ನೊಂದು ಅಂಶವೆಂದರೆ ಇದೆ ಡಿಸೆಂಬರ್ 16 ರಿಂದ ದೇಶಾದ್ಯಂತ ಹುಲಿ ಗಣತಿ ಆರಂಭವಾಗಲಿದೆ. ಬಂಡೀಪುರದಲ್ಲೂ ಹುಲಿ ಗಣತಿ ಇರುವುದರಿಂದ ಆ ವೇಳೆಯ ಒಳಗೆ ಹುಲಿ ಸಿಗದಿದ್ದರೆ ಹುಲಿ ಗಣತಿಗೆ ಬರುವವರು ಇದರಿಂದ ಭೀತಿಗೆ ಒಳಗಾಗುವ ಸಾಧ್ಯತೆ ಇದೆ

.ಮೊದಲೇ ದೇಶದಲ್ಲಿ ಹುಲಿಗಳ ಸಂಖ್ಯೆ ಇಳಿಯುತ್ತಿರುವ ಈ ಸಂಧರ್ಭದಲ್ಲಿ ಇಂತಹ ಘಟನೆಗಳು ಕಾಡಿನಲ್ಲಿ ವಾಸವಿರುವ ಜನರ ಮನಸ್ಸಿನಲ್ಲಿ ಹುಲಿಯನ್ನು ಮತ್ತಷ್ಟು ವಿಲನ್ ಆಗಿ ಮೂಡಿಸಿ ಅವುಗಳ ಜೀವಕ್ಕೆ ಕುತ್ತು ತಂದುಕೊಳ್ಳುವ ಸಂಧರ್ಭವೇ ಹೆಚ್ಚು

.ಹುಲಿ ಕಾಡು ಹಾಗು ಸುತ್ತ ಮುತ್ತಲಿನ ಜಾಗದಲ್ಲಿ ಯಾವುದೇ ಜನವಸತಿ ಇರಬಾರದು ಎಂದು ಹೇಳುವುದು ಇದೇ ಕಾರಣಕ್ಕೆ. ದೇಶದಲ್ಲೇ ಹುಲಿ ಸಂತತಿ ಅತ್ಯಂತ ಚೆನ್ನಾಗಿ ಅಭಿರುದ್ದಿಯಾಗುತ್ತಿರುವ ಬಂಡೀಪುರ ಹಾಗು ನಾಗರಹೊಳೆಯಲ್ಲಿ ಮುಂದೆ ಈ ಸಮಸ್ಯೆ ಬರಲಾಗದು ಎಂದು ಹೇಳಲಾಗುವುದಿಲ್ಲ. ಹುಲಿ ಸಂತತಿ ಹೆಚ್ಚುತ್ತಿದೆ ಎಂದರೆ ಅಲ್ಲಿನ ಕಾಡು ಕೂಡಾ ಬೆಳೆಯುತ್ತಿರಬೇಕು ಇಲ್ಲವಾದಲ್ಲಿ ಅವುಗಳ ನಡುವೆ ಜಾಗಕ್ಕಾಗಿ ಪೈಪೋಟಿ ನಡೆದು ಗಾಯಗೊಂಡು ಅಥವಾ ತನ್ನ ಪ್ರದೇಶವನ್ನು ಸ್ಥಾಪಿಸಿಕೊಳ್ಳಲಾಗದೆ ಮತ್ತು ವಯೋ ಸಹಜ ಕಾರಣಗಳಿಂದ ಹುಲಿಗಳು ತಾಳ್ಮೆ ಕಳೆದುಕೊಂಡಾಗ ಕಾಡಿನಲ್ಲಿರುವ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತವೆ ಮತ್ತು ಇದೇ ಮುಂದೆ ಅವುಗಳನ್ನು ನರಭಕ್ಷಕನನ್ನಾಗಿ ಮಾಡಲೂಬಹುದು 

.ಅದ್ದರಿಂದ ಹುಲಿ ಅಭಿರುದ್ದಿಯಾಗುತ್ತಿರುವ ಕಾಡುಗಳಲ್ಲಿನ ಜನವಸತಿಯನ್ನು ಆದಷ್ಟು ಕಡಿಮೆ ಮಾಡುವುದೇ ಇದಕ್ಕೆ ಇರುವ ಏಕೈಕ ಪರಿಹಾರ ಎಂದು ನಾನು ಭಾವಿಸುತ್ತೇನೆ 

.ಹಾ ಅಂದ ಹಾಗೆ ಶನಿವಾರ ನಾಗರಹೊಳೆಯ ಕಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಅರಣ್ಯ ರಕ್ಷಕ ಸುರೇಶ್ ಎಂಬುವವರು ಮೃತರಾಗಿದ್ದಾರೆ .ಈ ದಾಳಿಯಲ್ಲಿ ಸುರೇಶ್ ಸಂಜೆ ಬಹಿರ್ದೆಸೆಗೆಂದು ತೆರಳಿದಾಗ ಹಿಂದಿನಿಂದ ಹುಲಿ (ಬಂಡೀಪುರದ ಹುಲಿ ಹಾಗು ಈ ಹುಲಿ ಬೇರೆ ಬೇರೆ )  ಅವರ ಮೇಲೆ ದಾಳಿ ಮಾಡಿ ದೇಹದ ಬಹುತೇಕ ಭಾಗವನ್ನು ತಿಂದು ಹಾಕಿದೆ.ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಹುಲಿ ಇಲ್ಲಿ ದನ ಕರುಗಳನ್ನು ಹಿಡಿಯಲು ಬಂದದ್ದಲ್ಲ. ಕುಳಿತ ಸುರೇಶ್ ರನ್ನು ಹುಲಿ ಯಾವುದೊ ಪ್ರಾಣಿ ಎಂದು ತಿಳಿದು ಆಕ್ರಮಣ ಮಾಡಿದ ಸಾಧ್ಯತೆಯೇ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಅಥವಾ ಈ ಹುಲಿ ತನ್ನ ಮರಿಗಳೊಂದಿಗೆ ಇದ್ದಾಗ ಸುರೇಶ್ ಆ ಜಾಗಕ್ಕೆ ತೆರಳಿದಾಗ ಆಕ್ರಮಣವಾಗಿರಬಹುದು. ತಾಯಿ ಹುಲಿ ತನ್ನ ಮರಿಗಳ ರಕ್ಷಣೆಗೆ ಎಂತಹ ಸನ್ನಿವೇಶಕ್ಕೂ ಕೂಡ ತಯಾರಿರುತ್ತದೆ. ಹಾಗೆಂದು ಮನುಷ್ಯನ ರಕ್ತ ನೋಡಿದ ಈ ಹುಲಿ ನರಭಕ್ಷಕವಾಗುತ್ತದೆಂದು ಅಲ್ಲ.ಇದು ಕೇವಲ ಅಕಸ್ಮಿಕವಾಗಿದ್ದು ಹುಲಿ ಮತ್ತೆ ದಾಳಿ ಮಾಡದ ಸಾಧ್ಯತೆಯೇ ಹೆಚ್ಚು. ಹಲವು ಮಧ್ಯ ವಯಸ್ಸಿನ ಆರೋಗ್ಯವಂತ ಹುಲಿಗಳು ಕೆಲವೊಮ್ಮೆ ಹೀಗೆ ನಡೆಯುವ ಆಕಸ್ಮಿಕ ಘಟನೆಗಳಿಂದ ಹಾಗು ಮರಿಗಳು ನರಭಕ್ಷಕ ತಾಯಿಯಿಂದ ನರಭಕ್ಷಕಗಳಾಗಿ ಪರಿವರ್ತನೆ ಹೊಂದುತ್ತವೆ.ಆದರೆ ಅವು ತಮ್ಮ ನರಭಕ್ಷಕ ಗುಣವನ್ನು ಬಿಟ್ಟು ಕಾಡಿನ ತಮ್ಮ ಸಹಜವಾದ ಭೇಟೆಯ ಮೇಲೆ ಅವಲಂಭಿತವಾಗುವ ಸಾಮರ್ಥ್ಯವನ್ನು ಹೊಂದಿರುತ್ತವೆ ಹಾಗು ಹಲವು ಬಾರಿ ಹಾಗೆ ಆಗಿದೆ ಕೂಡ  

.ಈ ತರಹದ ಸಮಸ್ಯೆಗಳಿಗೆ ಮೂಲವಾದ ಕಾರಣವೇ  ಹುಲಿಗಳಿಗೆ ಬೇಕಾದ ನಿರ್ಭಯ ಹಾಗು ಮಾನವನ ತೊಂದರೆಗಳಿಂದ ಮುಕ್ತವಾದ ಕಾಡಿನ ಅವಾಸ ಸ್ಥಾನ ಸಿಗದೇ ಇರುವುದು.ಹೆಚ್ಚು ಹೆಚ್ಚು ಕಾಡು ಬೆಳದಂತೆ ಹುಲಿಯ ಬಲಿ ಪ್ರಾಣಿಗಳೂ ಕೂಡ ಅಲ್ಲಿ ಬೆಳೆಯುತ್ತವೆ.ಹುಲಿಗಳೂ ಕೂಡಾ ಅವುಗಳ ಮೇಲೆ ಅವಲಂಭಿತವಾಗಿ ಹೆಚ್ಚು ಹೆಚ್ಚು ಬೆಳೆಯುತ್ತವೆ.ಯಾವಾಗ ಅಲ್ಲಿ ಮಾನವನ ಪ್ರವೇಶವಾಗಿ ತೊಂದರೆಗಳು ಹುಟ್ಟುತ್ತವೆಯೋ ಆಗ ಅಲ್ಲಿ ಇಂತಹ ಸಮಸ್ಯೆಗಳು ಬಂದೇ ಬರುತ್ತವೆ 

.Anyway ನಾನು ಈ ಪೋಸ್ಟ್ ಬರೆಯುವ ಹೊತ್ತಿಗೆ ಬಂಡೀಪುರದಲ್ಲಿ ನಮ್ಮ ಕತೆಯ ಹುಲಿಯ ಹುಡುಕಾಟ ನಡೆದಿರಬಹುದು..ಅದಕ್ಕೆ ತೊಂದರೆಯಾಗದಂತೆ ಅದು ಸೆರೆ ಸಿಗಲಿ ಹಾಗು ಸಿಗದೇ ಇದ್ದ ಪಕ್ಷದಲ್ಲಿ ಅದು ತನ್ನ ನರಭಕ್ಷಕ ಪ್ರವೃತ್ತಿಯನ್ನು ತೊರೆದು ಕಾಡಿನ ಬಲಿ ಪ್ರಾಣಿಗಳ ಮೇಲೆ ಮನಸ್ಸು ಮಾಡಲಿ ಎಂದು ಆಶಿಸೋಣ.ಆದರೆ ಅದು ತುಂಬಾ ವಯಸ್ಸಾದ ಹಾಗು ಗಾಯಗೊಂಡ ಹುಲಿಯಾದರೆ ಅದು ಸೆರೆ ಸಿಕ್ಕುವುದೇ ಉತ್ತಮ..... ಈ ಹುಲಿಯ ಬಗ್ಗೆ ಮಾಹಿತಿ ಸಿಕ್ಕಾಗ update ಮಾಡುತ್ತೇನೆ

update (03-12-2013) - ಹುಲಿಯ ಪತ್ತೆಗೆ ಕಾಡಿನ ಅಂಚಿನಲ್ಲಿ 10 ಕ್ಕೂ ಹೆಚ್ಚು ಕ್ಯಾಮರಾ ಟ್ರಾಪ್ ಗಳನ್ನು ಅಳವಡಿಸಲಾಗಿದೆ.ಆದರೆ ನಿನ್ನೆ ಸಂಜೆಯವರೆಗೂ ಯಾವುದೇ ಹುಲಿಯ ಸುಳಿವು ಸಿಕ್ಕಿಲ್ಲ.ಈ ಮಧ್ಯೆ ಕಾರ್ಯಾಚರಣೆಯನ್ನು ಇನ್ನೂ ಒಂದು ವಾರದವರೆಗೆ  ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹುಲಿ ಸೆರೆ ಸಿಗದಿದ್ದ ನಂತರದಲ್ಲಿ ಮುಂದಿನ ಹಂತದ ಕಾರ್ಯಾಚರಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಈ ಸಂಧರ್ಭದಲ್ಲಿ ತಿಳಿಸಿದ್ದಾರೆ  

update (03-12-2013 9.30 PM) - ಬಂಡೀಪುರದ ನರಭಕ್ಷಕ ತಾನು ನರಭಕ್ಷಕನಾಗಿದ್ದೇನೆ ಎಂಬುವುದನ್ನು ಸಾಬೀತು ಪಡಿಸಿದೆ. ಇಂದು ಸಂಜೆ ಹೆಚ್ ಡಿ ಕೋಟೆ ತಾಲೋಕಿನ ಚಿಕ್ಕಬರಗಿ ಎಂಬಲ್ಲಿ ಬಸಪ್ಪ ಎಂಬ 55 ವರ್ಷದ ವ್ಯಕ್ತಿಯ ಮೇಲೆ  ಹುಲಿ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ .ದನ ಮೇಯಿಸಿಕೊಂಡು ಬರಲು ತೆರಳಿದ್ದ ಬಸಪ್ಪ ಕತ್ತಲಾಗುತ್ತಾ ಬಂದರೂ ಮನೆಯ ಕಡೆ ಬಾರದಿದ್ದನ್ನು ಗಮನಿಸಿ ಜನರು ಬಸಪ್ಪನಿಗಾಗಿ ಜಮೀನಿನ ಬಳಿ ಹುಡುಕಾಡಿದಾಗ ಜಮೀನಿಗೆ ಹೊಂದಿಕೊಂಡಂತೆಯೇ ಇರುವ ಕಾಡಿನ (Baladkuppe forest area) ಸರಹದ್ದಿನಲ್ಲಿ ಮೃತರ ಅರ್ಧ ದೇಹ ಪತ್ತೆಯಾಗಿದೆ. ಹತ್ತಿರದಲ್ಲೇ ಹುಲಿಯ ಘರ್ಜನೆ ಕೆಳುತ್ತಿತ್ತಾದರೂ ಕತ್ತಲು ಹಾಗು ನರಭಕ್ಷಕನ ಭಯದಿಂದ ಜನರು ಹುಲಿಯನ್ನು ಹಿಂಬಾಲಿಸದೆ ತೆರಳಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಯ ಪ್ರವಾಸಿ ಮಂದಿರದ ಮೇಲೆ ದಾಳಿ ನಡೆಸಿ ಇಲಾಖೆಯ ಜೀಪ್ ಅನ್ನು ಧ್ವಂಸಗೊಳಿಸಿದ್ದಾರೆ. ನಾವು ಈ ಪೋಸ್ಟ್ ನಲ್ಲಿ ತಿಳಿಸಿದಂತೆಯೇ ಹುಲಿ ತನ್ನೆರಡು ಬಲಿ ತೆಗೆದುಕೊಂಡ ನಂತರ ಹೆಚ್ಚಿನ ಜಾಗರೂಕತೆಯನ್ನು ವಹಿಸಿದೆ. 90 ಜನರ ತಂಡ ಹಿಂದೆ ಬಿದ್ದರೂ ಕೂಡ ಅವರಿಗೆ ಸಣ್ಣ ಸುಳಿವನ್ನೂ ನೀಡದೇ ತನ್ನ 3 ನೇ ಬಲಿಯನ್ನು ತೆಗೆದುಕೊಂಡು ತಾನು ನರಭಕ್ಷಕ ನಾಗಿದ್ದೇನೆ ಎಂಬ  ಸಂದೇಶವನ್ನು ಇಡೀ ಬಂಡೀಪುರಕ್ಕೆ ಕೇಳುವಂತೆ ಘರ್ಜಿಸಿದೆ

.update (04-12-2013 11.00 AM)   - ಬಂಡೀಪುರದ ನರಭಕ್ಷಕನನ್ನು ಗುಂಡಿಕ್ಕಿ ಕೊಲ್ಲುವಂತೆ ಮೈಸೂರು ಎಸ್ ಪಿ ಆದೇಶ ನೀಡಿದ್ದಾರೆ.ಗ್ರಾಮಸ್ಥರಿಂದ ಅರಣ್ಯ ಇಲಾಖೆಯ ವಿರುದ್ದ ತೀರ್ವವಾದ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 303 ರೈಫೆಲ್ ನಿಂದ ಹುಲಿಯನ್ನು ಕೊಲ್ಲಲು ಎಸ್ ಪಿ ಆದೇಶ ನೀಡಿದ್ದಾರೆ 

updtae (05-12-2013 1.00 PM) - ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶವಿದ್ದರೂ ಛಲ ಬಿಡದೆ ಅರಣ್ಯ ಇಲಾಖೆಯವರು ಇಂದು ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯನ್ನು ಜೀವಂತವಾಗಿ ಸೆರೆಹಿಡಿದ್ದಿದ್ದಾರೆ. ಇಂದು ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸುಮಾರು 12.15 ರ ಸಮಯಕ್ಕೆ ಕಾಂತಿ ಎಂಬ ಆನೆ ಹುಲಿ ಇರುವ ಜಾಗದ ಕಡೆಗೆ ತೆರಳಿದಾಗ ಹುಲಿಯ ದರ್ಶನವಾಗಿದೆ .ತಕ್ಷಣ ವೈದ್ಯರು ಅರವಳಿಕೆ ನೀಡಿ ಹುಲಿಯನ್ನು ಪ್ರಜ್ಞೆ ತಪ್ಪಿಸಿದ್ದಾರೆ.ನಂತರದಲ್ಲಿ ಅದನ್ನು ಸೆರೆಹಿಡಿಯಲಾಗಿದೆ.ಹುಲಿಯನ್ನು ನೋಡಲು ಜನ ಜಾತ್ರೆಯೇ ಸೇರಿದೆ  .ಹುಲಿಯನ್ನು ನೋಡಿದ ಗ್ರಾಮಗಳ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಈ ಹುಲಿಯ ಆರೋಗ್ಯ ತಪಾಸಣೆಯ ನಂತರ ಅದನ್ನು ಮೈಸೂರು ಮೃಗಾಲಯ ಅಥವಾ  ಬನ್ನೇರ್ ಘಟ್ಟ ದ ಉದ್ಯಾನವನಕ್ಕೆ ಸಾಗಿಸುವ ಸಾಧ್ಯತೆ ಇದೆ.ಈ ಹುಲಿ ನರಭಕ್ಷಕವಾಗಿದ್ದರಿಂದ ಇದನ್ನು ಮತ್ತೆ ಕಾಡಿಗೆ ಬಿಡುವುದಿಲ್ಲ.ಹುಲಿಯು ತನ್ನ ಜೀವಿತಾವದಿಯನ್ನು ಬಂದನದ ಒಳಗೆಯೇ ಕಳೆಯಬೇಕಿದೆ. ಹುಲಿಯನ್ನು ಕೊಲ್ಲದೆ ಕಷ್ಟ ಪಟ್ಟು  ಜೀವಂತವಾಗಿ ಸೆರೆ ಹಿಡಿದ ಅರಣ್ಯ ಇಲಾಖೆಯ ಪ್ರತಿಯೊಬ್ಬರಿಗೂ ಹಾಗು ಅವರಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮದೊಂದು ಸಲಾಂ.ಹುಲಿ ಸಂತಿತಿ ನಶಿಸುತ್ತಿರುವ ಈ ಸಮಯದಲ್ಲಿ ಒಂದು ಹುಲಿಯ ಜೀವವೂ ತುಂಬಾ ಮಹತ್ವದ್ದಾಗಿದೆ....

(updtae-06-12-2013) ಹುಲಿಯನ್ನು ಪರೀಕ್ಷೆಗೊಳಪಡಿಸಿದಾಗ ಅದರ ಬಾಯಿಯಲ್ಲಿ ಮುಳ್ಳುಹಂದಿಯ ಮುಳ್ಳುಗಳು ಚುಚ್ಚಿರುವುದು ತಿಳಿದುಬಂದಿದೆ.ಸುಮಾರು 12 ವರ್ಷ ಪ್ರಾಯದ ಈ ಹುಲಿ ಕಾಡಿನ ತನ್ನ ಸಹಜ ಪ್ರಾಣಿಗಳನ್ನು ಭೇಟೆಯಾಡುವ ಸಾಮರ್ಥ್ಯವನ್ನು ಕಳೆದುಕೊಂಡಿತ್ತು  ಮುಳ್ಳುಹಂದಿ ಮಾಡಿದ ಗಾಯಗಳಿಂದ ನರಳುತ್ತಿತ್ತು .ದುರ್ಬಲವಾಗಿದ್ದ ಇದ್ದು ಕಾಡಿನಂಚಿಗೆ ತಳ್ಳಲ್ಪಟ್ಟಾಗ ಈ ಘಟನೆಗಳು ಸಂಭವಿಸಿವೆ
courtesy-net

ಇನ್ನಾದರೂ ಇಂತಹ ಘಟನೆಗಳು ನಡೆಯದೇ ಇರಲಿ. ಕಾಡನ್ನು ಹೆಚ್ಚು ಬೆಳಿಸಿ ಹುಲಿಗಳೂ ಬೆಳೆಯಲು ಅವಕಾಶ ನೀಡಬೇಕಿದೆ.ಕಾಡಿನಲ್ಲಿ ಹಾಗು ಕಾಡಿನಂಚಿನ ಜನಗಳಿಗೆ ಈ ಬಗ್ಗೆ ತಿಳುವಳಿಕೆಯನ್ನು ನೀಡಿ ಇಂತಹ ಸಂಧರ್ಭಗಳನ್ನು ನಿಭಾಯಿಸುವ ಬಗ್ಗೆ ಅರಿವು ಮೂಡಿಸಬೇಕಿದೆ.ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರ ಜವಾಬ್ಧಾರಿಯೂ ಬಹು ದೊಡ್ಡದಿದೆ. ಇಲ್ಲಿಗೆ ಈ ಪೋಸ್ಟ್ ಅನ್ನು ಕೊನೆಗೊಳಿಸುತ್ತಿದ್ದೇನೆ

ಈ ವರ್ಷ ದೇಶದಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ-71 (ಕೃಪೆ-ಭಾರತೀಯ ವನ್ಯಜೀವಿ ಪ್ರಾಧಿಕಾರ)

-ಪ್ರಕೃತಿಯನ್ನು ರಕ್ಷಿಸಿ-

Comments

  1. ನರಹಂತಕ ಹುಲಿಯ ಬಗೆಗಿನ ಅಭಿಪ್ರಾಯ ಸರಿಯಾಗಿದೆ . ಅದು ಆದಷ್ಟು ಬೇಗ ಸೆರೆಸಿಗಲೇ ಬೇಕು..ಕೊನೆಗೆ ನಿರ್ಜೀವವಾಗಿಯಾದರೂ ಸರಿ...ಇಲ್ಲವಾದರೆ ಉಳಿದ ಹುಲಿಗಳಿಗೂ ತೊಂದರೆ ತಪ್ಪಿದ್ದಲ್ಲ.

    ReplyDelete
  2. ರಾಘಣ್ಣ ನಿಮ್ಮ ಬರವಣಿಗೆ ಚೆನ್ನಾಗಿದೆ, ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಾಣಿಗಳ ಬಗೆಗಿನ ಲೇಖನಗಳು ಕಮ್ಮಿ, ನೀವು ಯಾಕೆ ಇದರ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಬಾರದು ?

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....