ಬಂಡೀಪುರದದಲ್ಲಿ ಹುಲಿಯ ಹಿಂದೆ
.4 ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿಗೆ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಈ ಬಾರಿಯೂ ಕರೆ ಬಂದಿತ್ತು . ಗಣತಿಯಲ್ಲಿ ಪಾಲ್ಗೊಳ್ಳಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬೇಕಿತ್ತು. ಅದರಂತೆಯೇ ನಾನೂ ಕೂಡ ಹುಲಿ ಗಣತಿಗೆ apply ಮಾಡಿದೆ
.ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ನಾನು ಹುಲಿ ಗಣತಿಗೆ ಆಯ್ಕೆಯಾಗಿರುವ ಬಗ್ಗೆ ಮೇಲ್ ಬಂತು.ನಾನು ಬನ್ನೇರ್ ಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಗಣತಿ ಕಾರ್ಯಕ್ಕೆ ಆಯ್ಕೆಯಾಗಿದ್ದೆ
.ಆದರೆ ನನಗೆ ಬನ್ನೇರ್ ಘಟ್ಟ ಗಣತಿಯಲ್ಲಿ ಪಾಲ್ಗೊಳ್ಳಲು ಅಷ್ಟಾಗಿ ಮನಸ್ಸಿರಲಿಲ್ಲ ಹಾಗಾಗಿ ಈ ಬಾರಿಯ ಹುಲಿ ಗಣತಿಯಲ್ಲಿ ಪಾಲ್ಗೊಳ್ಳುವುದು ಬೇಡವೆಂದು ತೀರ್ಮಾನಿಸಿದೆ. ಬನ್ನೇರ್ ಘಟ್ಟ ದಲ್ಲಿ ಮಾನವ ಹಾಗು ವನ್ಯ ಜೀವಿಗಳ ಸಂಘರ್ಷ ಜಾಸ್ತಿಯೇ ಇದ್ದು ಅಲ್ಲಿನ ಆನೆಗಳು ಒಂದು ಕ್ಷಣ ನನಗೆ ಭಯ ಉಂಟು ಮಾಡಿದವು ಹಾಗು ಹುಲಿಗಳು ಘರ್ಜಿಸುವ ಕಾಡಿನಲ್ಲಿ ನಡೆಯುವ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಆಸೆಯಾಗಿತ್ತು
.ಈ ಅವದಿಯಲ್ಲಿಯೇ ಬಂಡೀಪುರದಲ್ಲಿ ಹುಲಿಯೊಂದು ಸರಣಿ ಬಲಿ ತೆಗೆದುಕೊಳ್ಳಲು ಶುರು ಮಾಡಿತ್ತು ಹಾಗು ಆ ಬಗ್ಗೆ ನಾನು ಬ್ಲಾಗ್ ನಲ್ಲಿ ಬರೆದಿದ್ದೇನೆ .ಬಂಡೀಪುರದಲ್ಲಿ ಹುಲಿ ಗಣತಿಗೆ ನನಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ಅಲ್ಲಿನ ಅಧಿಕಾರಿಗಳಿಗೆ ಮೇಲ್ ಮಾಡಿದೆ. ಅವರು ಈಗಾಗಲೇ ಬಂಡೀಪುರದಲ್ಲಿ ಗಣತಿಗೆ ಪಾಲ್ಗೊಳ್ಳುವ ಸ್ವಯಂಸೇವಕರು ಹೆಚ್ಚಿದ್ದು ಸಾಧ್ಯವಾದರೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಕೂಡಲೇ ಭದ್ರ ಹಾಗು ನಾಗರಹೊಳೆಯಲ್ಲಿ ನಡೆಯುವ ಹುಲಿ ಗಣತಿಗೂ apply ಮಾಡಿದೆ. ಆದರೆ ಅಲ್ಲಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ
.ಬಂಡೀಪುರದಿಂದ ಹಲವು ದಿನ ಕಳೆದರೂ ಯಾವುದೇ ಪ್ರತ್ಯುತ್ತರ ಬಾರದ ಕಾರಣ ಹುಲಿ ಗಣತಿಯಲ್ಲಿ ಪಾಲ್ಗೊಳ್ಳುವ ಯೋಜನೆ ಕೈಬಿಟ್ಟು ಮತ್ತೊಮ್ಮೆ ಸಕಲೇಶಪುರದ ಹಸಿರು ಹಾದಿಯ ಚಾರಣಕ್ಕೆ ಯೋಜನೆ ರೂಪಿಸತೊಡಗಿದೆ.ಇದಾದ ಕೆಲವು ದಿನಗಳ ನಂತರ ಅಂದರೆ ಡಿಸೆಂಬರ್12 ನೇ ತಾರೀಖು ಬಂಡೀಪುರದಿಂದ ಬಂದ ಮೇಲ್ ನನಗೆ ಅತೀವ ಆನಂದವನ್ನುಂಟು ಮಾಡಿತ್ತು.ನಾನು ಬಂಡೀಪುರದಲ್ಲಿ ನಡೆಯಲಿರುವ ಹುಲಿ ಗಣತಿಗೆ ಆಯ್ಕೆಯಾಗಿದ್ದೆ
.ಇದಾದ ನಂತರ ಅಂದರೆ ಡಿಸೆಂಬರ್ 13 ನೇ ತಾರೀಖು ನಾಗರಹೊಳೆಯಿಂದ ಬಂದ ಮೇಲ್ ಕೂಡ ನಾನು ನಾಗರಹೊಳೆ ಹುಲಿ ಗಣತಿಗೆ ಆಯ್ಕೆಯಾಗಿದ್ದೇನೆ ಎಂದು ತಿಳಿಸಿತ್ತು. ಆದರೆ ನಾನು ಬಂಡೀಪುರ ಹೋಗುವುದಾಗಿ ನಿರ್ಧರಿಸಿ ನಾಗರಹೊಳೆಗೆ ನನ್ನ ಸ್ಟುಡೆಂಟ್ ಒಬ್ಬನನ್ನು ಕಳುಹಿಸಲು ತೀರ್ಮಾನಿಸಿದೆ
.ಗಣತಿಗೆ ಕೆಲವೇ ವಾರಗಳ ಹಿಂದೆ ನಡೆದ ನರಭಕ್ಷಕ ಹುಲಿಯ ಕತೆ ಹಾಗೂ ಈ ಬಾರಿಯ ಗಣತಿಗೆ ಅರಣ್ಯ ಇಲಾಖೆ ವಿಧಿಸಿದ ಹಲವು ನಿಬಂಧನೆಗಳು ಸಹಜವಾಗಿಯೇ ಗಣತಿಯಲ್ಲಿ ಪಾಲ್ಗೊಳ್ಳುವ ಸ್ವಯಂ ಸೇವಕರ ಸಂಖ್ಯೆಯಲ್ಲಿ ಇಳಿಮುಖವಾಗುವಂತೆ ಮಾಡಿತ್ತು. ಹಿಂದಿನ ಬಾರಿ ಅಂದರೆ 2009 ರಲ್ಲಿ ನಡೆದ ಗಣತಿಯಲ್ಲಿ ಹಲವು ಸ್ವಯಂ ಸೇವಕರು ಕ್ಯಾಮರಾ ಉಪಯೋಗಿಸಿ ಗಣತಿಗಿಂತ ಹೆಚ್ಚಿನ ಕಾಲವನ್ನು ಕೇವಲ ಮೋಜು ಮಸ್ತಿಯಲ್ಲಿಯೇ ಕಳೆದದ್ದರಿಂದ ಈ ಬಾರಿಯ ಗಣತಿಯಲ್ಲಿ ಕ್ಯಾಮರ ಉಪಯೋಗಿಸುವುದನ್ನು ಬ್ಯಾನ್ ಮಾಡಲಾಗಿತ್ತು
.ಡಿಸೆಂಬರ್ 17 ಕ್ಕೆ ನಾನು ಬಂಡೀಪುರಕ್ಕೆ ತೆರಳಬೇಕಿತ್ತು.ಅಲ್ಲಿ ಅರಣ್ಯ ಇಲಾಖೆಯವರು ನೀಡುವ ಒಂದು ದಿನದ ತರಭೇತಿಯನ್ನು ತೆಗೆದುಕೊಂಡು ಡಿಸೆಂಬರ್ 18 ರಿಂದ 23 ನೇ ತಾರೀಖಿನವರೆಗೆ ನಡೆಯುವ ಹುಲಿ ಗಣತಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಈ ನಡುವೆ ನನ್ನ ಚಿಕ್ಕಮ್ಮನ ಮಗ ಸುಮಂತ್ ಕೂಡ ನನ್ನೊಂದಿಗೆ ಬರುವುದಾಗಿ ಹೇಳಿದ.ಅವನಿಗೂ ಬಂಡೀಪುರದಲ್ಲಿ ಹುಲಿ ಗಣತಿಯ ಅವಕಾಶ ಸಿಕ್ಕಿತು ಹಾಗು ಬಂಡೀಪುರ ಗಣತಿಗೆ ತೆರಳುವ ಬೆಂಗಳೂರಿನ ಪ್ರಸಾದ್ ಎಂಬುವವರ ಪರಿಚಯವೂ ಆಯಿತು
.ನನ್ನ ಹುಲಿ ಗಣತಿ ಅನುಭವವನ್ನು ಹೇಳುವುದಕ್ಕೂ ಮುಂಚೆ ಈ ಹುಲಿ ಗಣತಿಯ ಬಗ್ಗೆ ನಿಮಗೆ ಹೇಳಬಯಸುತ್ತೇನೆ. ದೇಶದಲ್ಲಿ ನಶಿಸುತ್ತಿರುವ ಹುಲಿಗಳನ್ನು ಉಳಿಸಿಕೊಳ್ಳುವುದು ಈಗ ಅತ್ಯಂತ ಅವಶ್ಯಕವಾಗಿದೆ. ಹಾಗಾಗಿಯೇ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುವುದು. ಗಣತಿಯು ಪಾರದರ್ಶಕವಾಗಿರಲಿ ಎಂದು ಇದರಲ್ಲಿ ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ವಯಂ ಸೇವಕರು ಒಂದು ವಾರಗಳ ಕಾಲ ದಟ್ಟ ಅರಣ್ಯದಲ್ಲಿ ಚಲಿಸಿ ಹುಲಿಯ ಲೆಕ್ಕಾಚಾರ ಮಾಡಬೇಕು. ಹುಲಿಯು ಮಾಡಿಹೋದ ಗುರುತುಗಳು ಅಂದರೆ ಅದು ನಡೆದ ಹೆಜ್ಜೆಯ ಗುರುತು,ಅದರ ಮಲ, ಅದು ಮರಕ್ಕೆ ಪರಚಿದ ಗುರುತು ಹೀಗೆ ಎಲ್ಲವನ್ನೂ ದಾಖಲಿಸಬೇಕು. ಇದರ ಜೊತೆಗೆ ಹುಲಿಯ ಬಲಿ ಪ್ರಾಣಿಗಳ ಬಗ್ಗೆಯೂ ದಾಖಲೆ ಮಾಡಬೇಕು. ಹೀಗೆ ಸ್ವಯಂ ಸೇವಕರನ್ನು ಬಳಸಿಕೊಂಡು ಮಾಡಿದ ಗಣತಿಯ ಮಾಹಿತಿಯನ್ನು ಕಲೆ ಹಾಕುವ ಅಧಿಕಾರಿಗಳು ಇನ್ನೂ ಎರಡು ಸುತ್ತಿನ ಗಣತಿಯನ್ನು ತಜ್ಞರನ್ನು ಬಳಸಿಕೊಂಡು ನಡೆಸುತ್ತಾರೆ ಕೊನೆಗೆ ಕ್ಯಾಮರಾ ಟ್ರಾಪ್ ಉಪಯೋಗಿಸಿ ಮಾಹಿತಿಯನ್ನು ಕಲೆ ಹಾಕುತ್ತಾರೆ .ಕೊನೆಗೆ ಎಲ್ಲಾ ಮಾಹಿತಿಯನ್ನು ಆಧರಿಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡುತ್ತಾರೆ . ಸರ್ಕಾರ ಇದನ್ನು ಪರಿಶೀಲಿಸಿ ದೇಶದಲ್ಲಿನ ಹುಲಿಗಳ ಸಂಖ್ಯೆಯನ್ನು ತಿಳಿಸುತ್ತದೆ
.2009 ರಲ್ಲಿ ನಡೆದ ಹುಲಿ ಗಣತಿಯಲ್ಲಿ ದೇಶದಲ್ಲಿ 1510 ರಿಂದ 1550 ರಷ್ಟು ಹುಲಿಗಳು ಇದ್ದವೆಂದು ತಿಳಿದು ಬಂದಿತ್ತು. ಅದರಲ್ಲಿ ಅಸ್ಸಾಂ ನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಪ್ರಥಮ ಸ್ಥಾನವನ್ನು ಪಡೆದರೆ ನಮ್ಮ ಬಂಡೀಪುರ 105 ರಿಂದ 110 ಹುಲಿಗಳನ್ನು ಹೊಂದಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ದೇಶದಲ್ಲಿಯೇ ಕರ್ನಾಟಕ ಅತ್ಯಂತ ಹೆಚ್ಚು ಹುಲಿ ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು .ಆದ್ದರಿಂದಲೇ ಈ ಬಾರಿಯ ಹುಲಿ ಗಣತಿಯಲ್ಲಿ ಕರ್ನಾಟಕ ಹಾಗು ಬಂಡೀಪುರದ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಕರ್ನಾಟಕದ ಸುಪ್ರಸಿದ್ದ ಹುಲಿ ತಾಣಗಳಾದ ಬಂಡೀಪುರ,ನಾಗರಹೊಳೆ, ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶ, ಭದ್ರ ಅಭಯಾರಣ್ಯ ಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಇದಲ್ಲದೇ ಹುಲಿಗಳು ಅಭಿವೃದ್ದಿಯಾಗುತ್ತಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ,ಅಣಶಿ ದಾಂಡೇಲಿ ರಾಷ್ಟ್ರೀಯ ಉದ್ಯಾನವನ ಕೂಡ ಕುತೂಹಲವನ್ನು ಉಂಟು ಮಾಡಿದ್ದವು. ರಾಜ್ಯದ ಎಲ್ಲಾ ರಾಷ್ಟ್ರೀಯ ಉದ್ಯಾನವನ ಹಾಗು ಅಭಯಾರಣ್ಯಗಳಲ್ಲಿ ಹುಲಿ ಗಣತಿಗೆ ಅರಣ್ಯ ಇಲಾಖೆ ಹಾಗು ಸ್ವಯಂ ಸೇವಕರು ಉತ್ಸಾಹದಿಂದ ತಯಾರಾಗಿದ್ದರು.ಬಂಡೀಪುರದ ಅರಣ್ಯದಲ್ಲಿ ಕಾಡಿನ ರಾಜನ ಜಾಡು ಹಿಡಿದು ಅಲೆಯಲು ನಾನು ಹಾಗು ಸುಮಂತ್ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡು ಡಿಸೆಂಬರ್ 16 ರ ರಾತ್ರಿ ಬಸ್ ಹಿಡಿದು ಬಂಡೀಪುರದ ಹುಲಿ ಕಾಡಿನ ಕಡೆಗೆ ಪ್ರಯಾಣ ಬೆಳೆಸಿದವು
.ಈ ಹುಲಿ ಕಾಡಿನಲ್ಲಿ ಕಳೆದ ಒಂದು ವಾರ ನಿಜಕ್ಕೂ ಅತ್ಯಂತ ಅವಿಸ್ಮರಣೀಯ, ಅಲ್ಲಿ ಅನುಭವಿಸಿದ ಎಲ್ಲಾ ಅನುಭವಗಳನ್ನು ಹೇಳುತ್ತಾ ಹೊರಟರೆ ಒಂದು ಪುಸ್ತಕವನ್ನೇ ಬರೆಯಬೇಕೋ ಏನೋ. ಅದ್ದರಿಂದ ಈ ಒಂದು ವಾರ ನಾನು ಪಡೆದ ಕೆಲವು ರೋಚಕ ಹಾಗು ಮರೆಯಲಾಗದ ಕೆಲವು ಅನುಭವಗಳನ್ನು ಮಾತ್ರ ಬರೆಯುತ್ತೇನೆ
.ಬಂಡೀಪುರ ಅರಣ್ಯದ ವನ್ಯ ಪ್ರಾಣಿಗಳ ಕುರಿತು ನಿಮಗೆ ಸ್ವಲ್ಪ ಮಾಹಿತಿ ನೀಡುತ್ತೇನೆ.ಬಂಡಿಪುರದ ಹೆಚ್ಚಿನ ಕಾಡು Dry Deciduous.ಈ ಕಾಡಿನಲ್ಲಿ ಸಾವಿರಕ್ಕೂ ಹೆಚ್ಚಿನ ಕಾಡಾನೆಗಳು, 100 ಕ್ಕೂ ಹೆಚ್ಚಿನ ಹುಲಿಗಳು, ಕರಡಿ, ಕಾಡು ನಾಯಿ,ಚಿರತೆ, ಮುಳ್ಳು ಹಂದಿ ಹಾಗು ಜಿಂಕೆ, ಸಂಬಾರ್, ಕಾಡು ಕುರಿ,ಕಾಡು ಕೋಣಗಳು ಹೆಚ್ಚಾಗಿ ವಾಸವಾಗಿವೆ.ಲಂಗೂರ್ ಮಂಗಗಳನ್ನು ಕಾಡಿನಲ್ಲಿ ಹೆಚ್ಚಾಗಿ ನೋಡಬಹುದು.ನಾಗರಹಾವು ,ರಸಲ್ ವೈಪರ್ ಗಳು ಇಲ್ಲಿವೆ. ಹಲವು ನಾನಾ ತರದ ಪಕ್ಷಿಗಳಿಗೆ ಅವಾಸ ತಾಣ ಈ ಬಂಡೀಪುರ ಕಾಡು. ಸ್ವಯಂ ಸೇವಕರು ಜಾಗರೂಕತೆಯಿಂದ ಇರಬೇಕಾದದ್ದು ಆನೆ,ಕರಡಿ ಹಾಗು ಕಾಡು ಕೋಣದ ವಿಚಾರದಲ್ಲಿ ಏಕೆಂದರೆ ಈ ಮೂವರೂ ನಮ್ಮ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ .ಹೆಚ್ಚಿನ ಹುಲಿಗಳು ದೂರದಿಂದಲೇ ಮನುಷ್ಯನ ವಾಸನೆ ಅಥವಾ ಸದ್ದು ಕೇಳಿಸಿಕೊಂಡು ಜಾಗ ಖಾಲಿ ಮಾಡುತ್ತವೆ .ಆದ್ದರಿಂದ ಸ್ವಯಂ ಸೇವಕರು ಆನೆ,ಕರಡಿ ಕಾಡು ಕೋಣ ಹಾಗು ಹಾವುಗಳ ಬಗ್ಗೆ ಅತ್ಯಂತ ಜಾಗರೂಕತೆ ವಹಿಸಿ ಹುಲಿ ಗಣತಿ ಕಾರ್ಯ ನಿರ್ವಹಿಸಬೇಕಿತ್ತು .ಬನ್ನಿ ಹಾಗಾದರೆ ಬಂಡೀಪುರದ ಹುಲಿ ಕಾಡಿಗೆ ನಿಮ್ಮನ್ನು ಬರಹದ ಮೂಲಕ ಕೊಂಡೊಯ್ಯುತ್ತಾ ನನ್ನ ಅನುಭವಗಳನ್ನು ಬಿಚ್ಚಿಡುತ್ತಿದ್ದೇನೆ
ಡಿಸೆಂಬರ್ -17
. ಬಂಡೀಪುರಕ್ಕೆ ಬಂದಿಳಿದ ನಮಗೆ ಹಲವು ಜನ ಹೊಸ ಸ್ನೇಹಿತರು ಪರಿಚಯವಾದರು.ತಿಂಡಿ ಮುಗಿಸಿದ ನಾವು ನಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿ 11 ಘಂಟೆಗೆ ನಡೆದ ತರಭೇತಿಯಲ್ಲಿ ಪಾಲ್ಗೊಂಡೆವು. ಹುಲಿ ಗಣತಿಯ ವಿಧಾನವನ್ನು ಅಲ್ಲಿನ ಡಿ ಸಿ ಎಫ್ ಕಾಂತರಾಜುರವರು ವಿವರಿಸಿದರು. ಮಧ್ಯಾಹ್ನ ವೇಳೆಗೆ ಊಟ ಮುಗಿಸಿದ ನಮಗೆ ನಾವು ಗಣತಿಯಲ್ಲಿ ಪಾಲ್ಗೊಳ್ಳಬೇಕಾದ ಪ್ರದೇಶದ ಮಾಹಿತಿ ಸಿಕ್ಕಿತು.ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 12 ರೇಂಜ್ ಗಳಿದ್ದು 115 ಬೀಟ್ ಗಳು ಇದ್ದವು. ಇಲ್ಲಿ ಸುಮಾರು 46 ಕಳ್ಳ ಭೇಟೆ ತಡೆ ಶಿಬಿರಗಳು ಕಾರ್ಯ ನಿರ್ವಹಿಸುತ್ತಿದ್ದವು ನಾವು ಇಂತಹುದೇ ಒಂದು ಕಳ್ಳ ಭೇಟೆ ತಡೆ ಶಿಬಿರದಲ್ಲಿ ತಂಗಿ ನಮಗೆ ತಿಳಿಸಿದ ಬೀಟ್ ನಲ್ಲಿ ಕಾರ್ಯ ನಿರ್ವಸಿಬೇಕಿತ್ತು .ನಾನು ಪ್ರಸಾದ್ ಹಾಗು ಸುಮಂತ್ ಜಿ ಎಸ್ ಭೆಟ್ಟ ರೇಂಜ್ ನ ದನಟ್ಟಿ ಕಳ್ಳ ಭೇಟೆ ತಡೆ ಶಿಬಿರಕ್ಕೆ ಆಯ್ಕೆಯಾದೆವು.ನಮ್ಮ ಜೊತೆ ಇನ್ನೂ ಇಬ್ಬರು ಅದೇ ಕ್ಯಾಂಪ್ ಗೆ ಆಯ್ಕೆಯಾದರು .ಕಾಡಿನಲ್ಲಿ ಹುಲಿ ಗಣತಿಯ ವೇಳೆ ಕಾಡು ಪ್ರಾಣಿಗಳಿಂದ ಯಾವುದೇ ರೀತಿಯ ತೊಂದರೆಗೆ ಒಳಗಾದರೆ ಹಾಗು ಅಕಸ್ಮಾತ್ ಸಾವು ಸಂಭವಿಸಿದರೂ ನಾವೇ ಹೊಣೆ ಎಂಬ ಒಪ್ಪಂದಕ್ಕೆ ನಾವು ಸಹಿ ಹಾಕಬೇಕಿತ್ತು.ಈ ಎಲ್ಲಾ ಕಾರ್ಯಗಳನ್ನು ಮುಗಿಸಿದ ನಮ್ಮನ್ನು ಸುಮಾರು 5 ಗಂಟೆಯ ಸಮಯಕ್ಕೆ ಬಂಡೀಪುರದಿಂದ ಹೊರಟ ಅರಣ್ಯ ಇಲಾಖೆ ವಾಹನ ದನಟ್ಟಿ ಕ್ಯಾಂಪ್ ಕಡೆ ಕೊಂಡೊಯ್ಯಿತು. ದಾರಿಯಲ್ಲಿ ಜಿಂಕೆಗಳು ಹಾಗು ಬಲಿಷ್ಟವಾದ ಎರಡು ಕಾಡು ಕೋಣಗಳು ನಮಗೆ ಸ್ವಾಗತ ಕೋರುವಂತೆ ನಿಂತಿದ್ದವು . ಸುಮಾರು 18 ಕಿಲೋಮೀಟರ್ ದೂರ ಇದ್ದ ನಮ್ಮ ಕ್ಯಾಂಪ್ ಗೆ ಜೀಪ್ ನಲ್ಲಿ ತೆರಳುವಾಗ ಕಂಡ ಕಾಡು ನನ್ನಲ್ಲಿ ಸ್ವಲ್ಪ ನಿರಾಸೆಯನ್ನು ಉಂಟು ಮಾಡಿತು. ಹೆಚ್ಚಾಗಿ ಲಂಟಾನ ಪೊದೆ,ಉಬ್ಬು ತಗ್ಗುಗಳಿಂದ ಕೂಡಿದ ಈ ರೇಂಜ್ ನಲ್ಲಿ ನಮಗೆ ಹುಲಿ ಸಿಗಬಹುದೇ ಎಂಬ ಅನುಮಾನ ಕಾಡತೊಡಗಿತು. 6 ಘಂಟೆಯ ಹೊತ್ತಿಗೆ ಕ್ಯಾಂಪ್ ಗೆ ತೆರಳಿದ ನಮಗೆ ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣ ಎನ್ನುವವರು ನೀಡಿದ ಬಿಸಿ ಬಿಸಿ ಬ್ಲಾಕ್ ಟಿ ( ಬೆಲ್ಲ ಹಾಗು ಟಿ ಸೊಪ್ಪಿನಿಂದ ಮಾಡಿದ ಟಿ ) ಹಿತವೆನ್ನಿಸಿತು. ಈ ಕಳ್ಳ ಭೇಟೆ ತಡೆ ಶಿಬಿರಗಳು ತುಂಬಾ ಸರಳವಾಗಿ ಇರುತ್ತವೆ. ಮಾಡಿನಿಂದ ಮಾಡಿದ ನಮ್ಮ ಕ್ಯಾಂಪ್ ನಲ್ಲಿ ಒಂದು ಸಣ್ಣ ಕೋಣೆ ಇತ್ತು.ಅದಕ್ಕೆ ಬಿಟ್ಟರೆ ಬೇರೆ ಎಲ್ಲೂ ಬಾಗಿಲುಗಳು ಇರಲಿಲ್ಲ, ಎದುರಿನ ವರಾಂಡದಲ್ಲಿ ನಾವು ಒಂದು ವಾರ ವಾಸ್ತವ್ಯ ಹೂಡಬೇಕಿತ್ತು. ಆನೆಗಳಿಂದ ರಕ್ಷಣೆ ಪಡೆಯಲು ಕ್ಯಾಂಪ್ ನ ಸುತ್ತಲೂ ಟ್ರೆಂಚ್ ನಿರ್ಮಾಣ ಮಾಡಲಾಗಿತ್ತು . ಕ್ಯಾಂಪ್ ನ ಕೆಳಗೆ 100 ಮೀಟರ್ ದೂರದಲ್ಲಿ ಒಂದು ಸಣ್ಣ ಹಳ್ಳ ಹರಿಯುತ್ತಿತ್ತು, ಕ್ಯಾಂಪ್ ಗೆ ಬೇಕಾದ ನೀರನ್ನು ಇಲ್ಲಿಂದಲೇ ತರಲಾಗುತ್ತಿತ್ತು.ಒಟ್ಟಿನಲ್ಲಿ ಯಾವುದೇ ವಿಶೇಷ ಸೌಲಭ್ಯ ವಿಲ್ಲದ ತೀರಾ ಸರಳವಾದ ಕ್ಯಾಂಪ್ ನಲ್ಲಿ ನಾವಿದ್ದೆವು. ಅದು ನಮ್ಮಲ್ಲಿ ಖುಷಿಯನ್ನುಂಟುಮಾಡಿತ್ತು . ಹೊರಗೆ ಬಯಲಿನಲ್ಲಿ ಒಲೆಯಲ್ಲಿ ನಮಗೆ ಅಡುಗೆ ತಯಾರಿಸುತ್ತಿದ್ದರು ಹಾಗು ಚಳಿಯಿಂದ ರಕ್ಷಣೆಗೆ ನಾವು ಸಣ್ಣ ಕ್ಯಾಂಪ್ ಫೈರ್ ಮಾಡಿಕೊಂಡಿದ್ದೆವು.ಕ್ಯಾಂಪ್ ನಲ್ಲಿ ಅರಣ್ಯ ವೀಕ್ಷಕರಾದ ಕೆಂಡಯ್ಯ, ಗುಜ್ಜ ,ಗಿರೀಶ್ ,ಕಾಳ ,ಕೃಷ್ಣಮೂರ್ತಿ ಹಾಗು ಅಡುಗೆ ಮಾಡುವ ಜವಾಬ್ದಾರಿ ಹೊತ್ತ ಕೃಷ ಇದ್ದರು .ಜೊತೆಗೆ ನಾವು 5 ಜನ ಸ್ವಯಂ ಸೇವಕರು.ರಾತ್ರಿ ಆವರಿಸುತಿತ್ತು. ಕೃಷ್ಣ ಮಾಡಿದ ಅನ್ನ ಸಂಬಾರ್ ಊಟ ಮಾಡಿ ವರಾಂಡದಲ್ಲಿ ಮಲಗಿದೆವು ಕೆಲವರು ಕ್ಯಾಂಪ್ ಫೈರ್ ನ ಎದುರೇ ಮಲಗಿದರು. ಕಾಡಿನ ನೀರವ ಮೌನದಲ್ಲಿ ಕೂಗುವ ರಾತ್ರಿ ಪಕ್ಷಿ ಕೀಟಗಳು, ದೂರದಲ್ಲಿ ಉರಿಯುತ್ತಿದ್ದ ಕ್ಯಾಂಪ್ ಫೈರ್, ಕೊರೆಯುವ ಚಳಿ, ಆಗಾಗ ಬೊಬ್ಬೆ ಹಾಕುವ ಕ್ಯಾಂಪ್ ನ ವಾಕಿ (ವಾಕಿ ಟಾಕಿ) ಒಂತರಾ ಹೊಸ ಅನುಭವಗಳ ನಡುವೆ ನಿದ್ರೆಗೆ ಜಾರಿದೆವು
ಡಿಸೆಂಬರ್ 18
.ಬೆಳೆಗ್ಗೆ ಚಳಿಯ ಅರ್ಭಟ ಜೋರಿತ್ತು. ನಾವು ಚಳಿಯಿಂದ ರಕ್ಷಣೆಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದರೂ ಸಹ ಅಲ್ಲಿನ ಚಳಿಗೆ ಕೈ ಕಾಲುಗಳು ಬೆದರಿದ್ದವು
.ಬೆಳಗ್ಗೆ 6 ಗಂಟೆಗೆ ಎದ್ದ ನಾವು ಹಳ್ಳಕ್ಕೆ ತೆರಳಿ ಬೆಳಗಿನ ಕೆಲಸ ಮುಗಿಸಿ ಕೃಷ್ಣ ಕೊಟ್ಟ ಟೀ ಕುಡಿದು ನಮ್ಮ ಬೀಟ್ ಗೆ ತೆರಳಲು ಸಜ್ಜಾದೆವು. ಕಾಡಿನಲ್ಲಿ ಆನೆಗಳಿಂದ ರಕ್ಷಣೆಗೆ ಗುಜ್ಜ ಕೆಲವು ಪಟಾಕಿಗಳನ್ನು ಹಿಡಿದುಕೊಂಡರು
.ನಮ್ಮ ಕ್ಯಾಂಪ್ ವ್ಯಾಪ್ತಿಗೆ 2 ಬೀಟ್ ಬರುತ್ತಿದ್ದವು, ಅದರಲ್ಲಿ ಮಾಸ್ತಿಮಕ್ಕಿ ಎಂಬ ಬೀಟ್ ಗೆ ನಮ್ಮ ತಂಡ ತೆರಳಬೇಕಿತ್ತು (ನಾನು ಸುಮಂತ್ ,ಪ್ರಸಾದ್ ಹಾಗು ಇಬ್ಬರು ಅರಣ್ಯ ವೀಕ್ಷಕರು ) ಇನ್ನೊಂದು ಬೀಟ್ ಗೆ ಇನ್ನಿಬ್ಬರು ಸ್ವಯಂ ಸೇವಕರು ಹಾಗು ಅರಣ್ಯ ವೀಕ್ಷಕರು ತೆರಳಬೇಕಿತ್ತು
.ನಾವಿಂದು ನಮ್ಮ ಬೀಟ್ ನಲ್ಲಿ ಸುಮಾರು 10 km ನಡೆದು ಮಾಂಸಾಹಾರಿ ಪ್ರಾಣಿಗಳ ಕುರಿತಾತ ದಾಖಲೆಗಳನ್ನು ಸಂಗ್ರಹಿಸಬೇಕಿತ್ತು
.ನಾನು,ಸುಮಂತ್ ,ಪ್ರಸಾದ್ ನಮ್ಮ ಜೊತೆ ಅರಣ್ಯ ವೀಕ್ಷಕರಾದ ಕೆಂಡಯ್ಯ ಹಾಗು ಗುಜ್ಜ ನಮ್ಮ ಬೀಟ್ ಗೆ ತೆರಳಿದೆವು. ಆಗಿನ್ನೂ ಮಂಜು ಸಣ್ಣದಾಗಿ ಬೀಳುತಿತ್ತು. ಮಾತನಾಡದೇ ಪ್ರತೀ ಹೆಜ್ಜೆಯನ್ನೂ ನಿಧಾನವಾಗಿಡುತ್ತಾ ಹುಲಿರಾಯರ ದರ್ಶನ ಮಾಡಲು ಮುಂದೆ ಮುಂದೆ ಸಾಗುತ್ತಿದ್ದೆವು.ಗುಜ್ಜ ನಮ್ಮಿಂದ ಮುಂದಿದ್ದರೆ ಕೆಂಡಯ್ಯ ಅವರ ಹಿಂದೆ ಹಾಗು ನಾವು ಮೂವರೂ ಅವರ ಹಿಂದೆ ಹೆಜ್ಜೆ ಹಾಕುತ್ತಿದ್ದೆವು
.ನಾನು ಹಾಗು ಸುಮಂತ್ ಕಾಡು ಪ್ರಾಣಿಗಳ ಗುರುತುಗಳಿಗಾಗಿ ನೆಲ ಹಾಗು ಸುತ್ತಲಿನ ಮರಗಳನ್ನು ಪರೀಕ್ಷಿಸುತ್ತಾ ಸಾಗುತ್ತಿದ್ದೆವು. ಪ್ರಸಾದ್ ಕೊನೆಯ ಹಂತದ ಪರೀಕ್ಷೆಯನ್ನು ಮಾಡುತ್ತಾ ಹಿಂದೆ ಬರುತ್ತಿದ್ದರು
.ಪ್ರತೀ ಹೆಜ್ಜೆಗೂ ನಾವು ಸುತ್ತಲಿನ ಕಾಡನೋಮ್ಮೆ ಸೂಕ್ಷವಾಗಿ ಪರಿಶೀಲಿಸಬೇಕಿತ್ತು. ಆಗಿನ್ನೂ ಬಿಸಿಲು ಬೀಳುತ್ತಿದ್ದರಿಂದ ಕಾಡು ಪ್ರಾಣಿಗಳು ಕಾಣುವ ಸಂಭವ ಹೆಚ್ಚಿತ್ತು. ಅದಕ್ಕಿಂತಲೂ ಹೆಚ್ಚಾಗಿ ಆನೆಗಳ ಇರುವಿಕೆಯನ್ನು ನಾವು ದೂರದಿಂದಲೇ ಪತ್ತೆ ಹಚ್ಚುವುದು ಅತ್ಯಂತ ಮುಖ್ಯವಾಗಿತ್ತು. ಒಂದು ಚೂರೂ ಸದ್ದು ಮಾಡದೆ ಮರ ಹಾಗು ಪೊದೆಗಳ ಹಿಂದೆ ಆನೆಗಳು ನಿಂತು ಬಿಡುತ್ತವೆ. ಕೆಲವೊಮ್ಮೆ ಹತ್ತಿರ ಹೋದಾಗಲೇ ಗೊತ್ತಾಗುವುದು ಅಲ್ಲಿ ಆನೆ ಇದೆ ಎಂದು. ಅದಕ್ಕಾಗಿಯೇ ಆದಷ್ಟು ಕಾಡಿನಿಂದ ಬರುವ ಸಣ್ಣ ಶಬ್ದಕ್ಕೂ ಕಿವಿಗೊಡುತ್ತಾ ಮುಂದುವರೆದೆವು .ನಾವು ಚಲಿಸುತ್ತಿದ್ದ ಕಾಡು ಹೆಚ್ಚಾಗಿ ಲಂಟಾನ ಹಾಗು ಇತರೆ ಹುಲ್ಲುಗಳಿಂದ ಆವೃತವಾಗಿದ್ದು ಮರಗಳ ಸಾಂದ್ರತೆ ಕಡಿಮೆ ಇತ್ತು.ಇದರ ನಡುವೆ ಇದ್ದ ಆನೆಗಳು ಮಾಡಿದ ಕಾಲು ದಾರಿಯಲ್ಲಿ ನಾವು ನಡೆಯುತ್ತಿದ್ದೆವು
.ನಾವು ನಡೆಯುತ್ತಿದ್ದ ಕಾಲು ದಾರಿಯ ಹಲವೆಡೆ ಆನೆಗಳ ಲದ್ದಿ ಕಂಡು ಬರುತ್ತಿತ್ತು. ಹಲವು ಹೊಸತು ಹಾಗು ಇನ್ನುಳಿದವು ಒಣಗಿ ಹೋದ ಹಳೆ ಲದ್ದಿಗಳು.ಒಟ್ಟಿನಲ್ಲಿ ಆನೆಗಳ ದಾರಿಯಲ್ಲಿ ಹುಲಿರಾಯನ ಹುಡುಕಾಟ ನಡೆಯುತ್ತಾ ಸಾಗಿತ್ತು
.ನಡೆಯುತ್ತಿದ್ದ ನನ್ನ ಕಣ್ಣಿಗೆ ಅದೇ ದಾರಿಯಲ್ಲಿ ಬಿದಿದ್ದ ಹುಲಿಯ ಮಲ ಕಾಣಿಸಿತು.ಕೊಡಲೇ ಇತರರು ಅದನ್ನು ಗಮನಿಸಿದರು. ಅದು ತೀರ ಹೊಸತು ಎಂದು ಕೆಂಡಯ್ಯ ನಮಗೆ ಹೇಳಿದರು.ಅಂದರೆ ನಾವು ಆ ದಾರಿಯಲ್ಲಿ ನಡೆಯುವ ಕೆಲವೇ ಘಂಟೆಗಳ ಮುಂಚೆ ಹುಲಿಯೊಂದು ಅಲ್ಲಿ ನಡೆದು ಸಾಗಿತ್ತು .ಆದರೆ ನೆಲ ಅಲ್ಲಿ ಗಟ್ಟಿ ಇದ್ದ ಕಾರಣ ಅದರ ಹೆಜ್ಜೆ ಗುರುತು ಇರಲಿಲ್ಲ .ಅದು ಹೋದ ದಿಕ್ಕನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು .ಅದನ್ನು ನಮ್ಮ ಪುಸ್ತಕದಲ್ಲಿ ದಾಖಲಿಸಿ ಮುಂದೆ ಸಾಗಿದೆವು
.ಸುಮಾರು 4 ಕಿಲೋಮೀಟರು ನಡೆದ ನಂತರ ಮತ್ತೆ ಒಂದು ಕಲ್ಲು ಬಂಡೆಯ ಹತ್ತಿರ ಮತ್ತೊಮ್ಮೆ ಹುಲಿ ಮಲದ ದರ್ಶನವಾಯಿತು.ಆದರೆ ಅದು ಹಳೆಯದು.ಅಲ್ಲಿ ಕೂಡ ಹುಲಿಯ ಹೆಜ್ಜೆ ಗುರುತು ಇರಲಿಲ್ಲ. ಅಲ್ಲಿಂದ ಒಂದು ಕಿಲೋಮೀಟರು ಸಾಗಿದ ನಮಗೆ ಹಲವಾರು ಬಂಡೆಗಳಿಂದ ಆವೃತವಾದ ಒಂದು ಪ್ರದೇಶ ಸಿಕ್ಕಿತು.ಇದನ್ನು ಗವಿ ಗದ್ದೆ ಎಂದು ಕರೆಯುತ್ತಿದ್ದರು.ಅಲ್ಲಿ ಬಂಡೆಗಳ ಹಲವು ಗವಿಗಳಿದ್ದವು. ಅಂತಹುದೇ ಒಂದು ಗವಿಯ ಮುಂದೆ ನಿಧಾನವಾಗಿ ನಿಶಬ್ದವಾಗಿ ಚಲಿಸಿದ ನಮಗೆ ಅಲ್ಲಿ ಹಲವು ಪ್ರಾಣಿಗಳು ನಡೆದಾಡಿದ ಕುರುಹು ಸಿಕ್ಕಿತು .ಕಾಡು ಹಂದಿ,ಸಾಂಬಾರ್ ಹಾಗು ಆನೆ ನಡೆದಾಡಿದ ಗುರುತು ಅಲ್ಲಿನ ತೇವಯುಕ್ತ ನೆಲದ ಮೇಲೆ ಅಚ್ಚೊತ್ತಿ ಬಿದ್ದಿದ್ದವು .ಗವಿಯ ಒಳಗೆ ಯಾವುದೇ ಕಾಡು ಪ್ರಾಣಿಯ ಸುಳಿವಿರಲಿಲ್ಲ. ಗವಿಯ ಪಕ್ಕವೇ ಇದ್ದ ಮರದ ಮೇಲೆ ಮತ್ತೆ ಹುಲಿರಾಯನ ಗುರುತು.ಮರದ ಮೇಲೆಲ್ಲಾ ಅವನು ಪರಚಾಡಿದ ಗುರುತು.ಸಾಧಾರಣವಾಗಿ ತನ್ನ ವ್ಯಾಪ್ತಿ ಗುರುತಿಸಲು ಹಾಗು ಉಗುರುಗಳನ್ನು ಸ್ವಚ್ಚ ಮಾಡಲು ಹುಲಿರಾಯರು ಈ ತರಹದ ಗುರುತುಗಳನ್ನು ಮರದ ಮೇಲೆ ಮಾಡುತ್ತಾರೆ
.ನಾನು ಹಲವು ಕಾಡುಗಳನ್ನು ಸುತ್ತಿದ್ದೇನೆ ಆದರೆ ಈ ಬಾರಿ ನಾನು ಸುತ್ತುತ್ತಿರುವ ಕಾಡು ನಡೆಯುತ್ತಿರುವ ದಾರಿ ಎಲ್ಲವೂ ಹುಲಿರಾಯರ ಜಾಡಿನಲ್ಲಿ. ಹುಲಿಯ ಹಲವು ಗುರುತುಗಳನ್ನು ನೋಡಿ ಮನಸ್ಸಿನಲ್ಲಿ ಆನಂದ ಉಂಟಾಯಿತು.ಕ್ಯಾಂಪ್ ಗೆ ಬರಬೇಕಾದರೆ ಈ ಪ್ರದೇಶದಲ್ಲಿ ಹುಲಿ ಇವೆಯೇ ಎಂಬ ಅನುಮಾನ ಮೂಡಿದ್ದ ನನಗೆ ಈಗ ಇಲ್ಲಿ ಸಿಗುತ್ತಿರುವ ಗುರುತುಗಳು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದವು ಇದು ಹಲವು ಹುಲಿಗಳ ಅವಾಸ ಸ್ಥಾನ ಎಂದು. ಈ ಗವಿಯಲ್ಲಿ ಮಳೆಗಾಲದಲ್ಲಿ ಕರಡಿ,ಚಿರತೆ ಇಲ್ಲವೇ ಹುಲಿರಾಯರು ತಂಗಿರುತ್ತಾರೆ ಎಂದು ಗುಜ್ಜ ವಿವರಿಸಿದರು
.ಗವಿಯಿಂದ ಕೆಲವೇ ಮೀಟರ್ ದೂರದಲ್ಲಿ ಒಂದು ಸಣ್ಣ ಜರಿ ಹರಿಯುತ್ತಿತ್ತು. ಅಲ್ಲಿನ ಒದ್ದೆ ನೆಲದ ಮೇಲೆ ಆಗಷ್ಟೇ ಮೂಡಿದ್ದ ದೊಡ್ಡದಾದ ಗಂಡು ಹುಲಿಯ ಹೆಜ್ಜೆ ಗುರುತುಗಳು. ಹುಲಿ ಕೆಲವೇ ಸಮಯದ ಹಿಂದೆ ಅಲ್ಲಿ ನಡೆದಿತ್ತು. ನಾವು ಮೊದಲು ನೋಡಿದ ಹುಲಿಯ ಮಲದ ಗುರುತುಗಳನ್ನು ಮಾಡಿದ ಹುಲಿ ಇದೇ ಹುಲಿಯೇ ಅಥವಾ ಬೇರೆಯೇ ಹೇಳಲಾಗದು.ಒಟ್ಟಿನಲ್ಲಿ ಬಹುಷಃ ಎರಡು ಹುಲಿಗಳ ಗುರುತು ನಮಗೆ ಈವರಗೆ ಕಂಡಿದೆ ಎಂಬುದನ್ನು ಕೆಂಡಯ್ಯ ಹೇಳಿದರು
.ಸ್ವಲ್ಪ ಹೊತ್ತು ಅಲ್ಲೇ ಒಂದು ಬಂಡೆಯ ಮೇಲೆ ವಿರಮಿಸಿದ ನಾವು ಮತ್ತೆ ಬಂದ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಕ್ಯಾಂಪ್ ಕಡೆ ತೆರಳಿದೆವು. ಒಮ್ಮೆ 5 km ಬೀಟ್ ನಲ್ಲಿ ನಡೆದ ನಂತರ ಮತ್ತೆ ಹೋಗುವ ದಾರಿಯಲ್ಲಿ ಸಿಗುವ ಪ್ರಾಣಿಗಳ ದಾಖಲೆ ಮಾಡುವ ಹಾಗಿರಲಿಲ್ಲ.ಅದು ಗಣತಿಯ ನಿಯಮವಾಗಿತ್ತು
.ಸುಮಾರು 2 ಕಿಲೋಮೀಟರು ಕ್ರಮಿಸಿರಬಹುದು.ತಕ್ಷಣ ಮುಂದೆ ಹೋಗುತ್ತಿದ್ದ ಗುಜ್ಜ ನಿಂತಲ್ಲೇ ನಿಂತರು.ನಾವುಗಳು ತಕ್ಷಣ ನಿಂತು ಅವರ ಕಡೆ ನೋಡತೊಡಗಿದೆವು. ಆನೆ ಎಂದು ಗುಜ್ಜ ಸಣ್ಣಗೆ ಹೇಳಿದಾಗ ಎದೆ ಬಡಿತ ಜೋರಾಯ್ತು. ಮುಂದೆ ನಿಧಾನವಾಗಿ ಬಂದು ನೋಡಿದಾಗ ಸುಮಾರು 400 ಮೀಟರ್ ದೂರದಲ್ಲಿ ಎರಡು ಬಲಿಷ್ಟ ಕೋರೆಯುಳ್ಳ ಗಂಡು ಆನೆಗಳು ಹುಲ್ಲನ್ನು ತಿನ್ನುತ್ತಾ ಕಿವಿಯನ್ನಾಡಿಸುತ್ತಿದ್ದವು. ಗಾಳಿಯು ವಿರುದ್ದ ದಿಕ್ಕಿನಲ್ಲಿ ಬಿಸುತ್ತಿದ್ದರಿಂದ ಆನೆಗಳಿಗೆ ನಮ್ಮ ವಾಸನೆ ಗೊತ್ತಾಗಲಿಲ್ಲ. ಅವು ನಾವು ಹೋಗುವ ದಾರಿಯಲ್ಲೇ ನಿಂತಿದ್ದವು. ಕೆಂಡಯ್ಯ , ಗುಜ್ಜ ನಿಧಾನವಾಗಿ ಒಂದು ಸಣ್ಣ ಸದ್ದೂ ಆಗದಂತೆ ನಮ್ಮನ್ನು ಸುತ್ತಿ ಬಳಸಿ ಬೇರೆ ದಾರಿಯಲ್ಲಿ ಕರೆದೊಯ್ದರು. ಹಲವು ವರ್ಷಗಳ ಕಾಡಿನ ಜೊತೆಗಿನ ಅವರ ಒಡನಾಟ ಅವರಿಗೆ ಅನೆಗಳ ಜೊತೆ ಹೇಗೆ ವರ್ತಿಸಬೇಕೆಂಬುದನ್ನು ಚೆನ್ನಾಗಿ ಹೇಳಿಕೊಟ್ಟಿತ್ತು. ಕೆಂಡಯ್ಯ ಒಂದು ಕೋಲು ತೆಗೆದುಕೊಂಡು ಮರಕ್ಕೆ ಬಡಿಯಲು ಶುರು ಮಾಡಿದರು. ನಿಧಾನವಾಗಿ ಆನೆಗಳು ಮುಂದಕ್ಕೆ ನಮ್ಮ ವಿರುದ್ದ ದಿಕ್ಕಿನಲ್ಲಿ ಚಲಿಸಲು ಆರಂಭಿಸಿದವು.ನಾವು ನಮ್ಮ ದಾರಿಯ ಕೆಳಗೆ ಅಂದರೆ ಆನೆ ಹೋದ ದಾರಿಯನ್ನು ಬಿಟ್ಟು ಅದರ ಕೆಳಗೆ ಆವೃತವಾಗಿದ್ದ ಹುಲ್ಲಿನ ನಡುವೆ ದಾರಿ ಮಾಡಿಕೊಂಡು ನಿಧಾನವಾಗಿ ನಡೆಯಲಾರಂಭಿಸಿದೆವು
.ಅಲ್ಲಿಂದ ಸುಮಾರು ಅರ್ಧ ಕಿಲೋಮೀಟರ್ ನಡೆದಿರಬಹುದು.ಹುಲ್ಲಿನಿಂದಲೇ ಆವೃತವಾದ ಒಂದು ಇಳಿಜಾರಿನ ಪ್ರದೇಶದ ನಡುವೆ ನಾವು ನಡೆಯುತ್ತಿದ್ದೆವು. ಅಲ್ಲೊಂದು ಚಿಕ್ಕ ಮರ,ಆ ಮರವನ್ನು ದಾಟಿ ಕೆಂಡಯ್ಯ ಮುಂದೆ ಒಂದೆರಡು ಹೆಜ್ಜೆ ಇಟ್ಟಿದ್ದರು. ನಾನು ಅವರ ಹಿಂದೆಯೇ ನಡೆಯುತ್ತಿದ್ದೆ. ಸುಮಂತ್ ಹಾಗು ಇತರರು ನಮ್ಮಿಂದ ಸ್ವಲ್ಪ ದೂರದಲ್ಲಿದ್ದರು. ಕೆಂಡಯ್ಯ ಅಲ್ಲೇ ಇದ್ದ ಮುಳ್ಳನ್ನು ಸರಿಸಲು ಕೋಲನ್ನು ಉಪಯೋಗಿಸಿದಾಗ ಸಣ್ಣ ಶಬ್ದ ಉಂಟಾಯಿತು.ಇದ್ದಕ್ಕಿದಂತೆ ಸುಮಾರು ನಮ್ಮಿಂದ 10 ಮೀಟರ್ ದೂರದಲ್ಲಿ ಪ್ರಾಣಿಯೊಂದು ಛಂಗನೆ ನೆಗೆದು ಇಳಿಜಾರಿನ ಮೇಲಕ್ಕೆ ಓಡುತ್ತಿರುವುದು ನನ್ನ ಕಣ್ಣಿಗೆ ಬಿತ್ತು, ಕೆಂಡಯ್ಯ ರನ್ನು ಎಚ್ಚರಿಸಿ ಆ ಕಡೆ ನೋಡುತ್ತೇನೆ ಅಲ್ಲಿ ಓಡುತ್ತಿರುವ ಪ್ರಾಣಿ ಮತ್ಯಾವುದೂ ಅಲ್ಲ. ಅದೇ ನಾವು ನೋಡಲೇಬೇಕೆಂದು ಹಂಬಲಿಸುತ್ತಿದ್ದ ಹುಲಿರಾಯರು. ಬಲಿಷ್ಟವಾದ ಗಂಡು ಹುಲಿ. ಎಳೆ ಬಿಸಿಲಿನಲ್ಲಿ ಇಳಿಜಾರಿನಲ್ಲಿ ಇಳಿಯುತ್ತಿದ್ದ ಅವನಿಗೆ ಕೆಂಡಯ್ಯ ಮಾಡಿದ ಕೋಲಿನ ಶಬ್ದ ಕೇಳಿದೆ.ತಕ್ಷಣ ಎಚ್ಚೆತ್ತ ಅವನು ಮೇಲಕ್ಕೆ ಒಡಲು ಶುರು ಮಾಡಿದ. ನಾನು ಅವನನ್ನು ಕಂಡು ಒಂದು ಕ್ಷಣ ಸ್ಥಬ್ದವಾಗಿ ನಿಂತು ಬಿಟ್ಟೆ. ಹಲವು ವರ್ಷಗಳ ಕಾಲ ತಪಸ್ಸು ಮಾಡಿದ ಭಕ್ತನಿಗೆ ದೇವರು ದರುಶನ ನೀಡಿದಾಗ ಉಂಟಾಗುವ ಭಾವ ನನ್ನಲ್ಲಿ ಆಗ ಮೂಡಿತು. ತಕ್ಷಣ ಎಚ್ಚೆತ್ತು ಸುಮಂತ್ ನನ್ನು ಹಾಗು ಉಳಿದವರಿಗೆ ಸನ್ನೆ ಮಾಡಿ ಕರೆದೆ.ಆದರೆ ಅವರು ನಾನು ಆನೆ ನೋಡಿಯೇ ಕರೆಯುತ್ತಿದ್ದೇನೆ ಎಂದು ತಿಳಿದು ಮುಂದೆ ಬರಲು ಸ್ವಲ್ಪವೇ ಸ್ವಲ್ಪ ತಡ ಮಾಡಿದರು. ಸುಮಂತ್ ನನ್ನ ಬಳಿ ಬರಲೂ ಹುಲಿಯು ಮೇಲಿನ ಪೊದೆಯನ್ನು ನುಗ್ಗಿ ಕಣ್ಮರೆಯಾಗುವುದಕ್ಕೂ ಸರಿಯಾಯಿತು . ಅವರು ಹುಲಿ ದರ್ಶನವನ್ನು ಮಿಸ್ ಮಾಡಿಕೊಂಡರು. ಆದರೆ ಕೆಲವೇ ಕ್ಷಣ ಹುಲಿ ನೋಡಿದ ನನಗೆ ಅವನ ಮುಖ ದರ್ಶನವಾಗಲಿಲ್ಲ ಹಾಗು ಮಿಂಚಿನಂತೆ ಒಂದು ಕ್ಷಣ ಬಂದು ಹೋದ ಅವನ ಲಕ್ಷಣಗಳು ಮನಸಿನ್ನಲ್ಲಿ ಅಷ್ಟಾಗಿ ದಾಖಲಾಗಲಿಲ್ಲ. ಕೇವಲ ಅವನು ಓಡುತ್ತಿರುವ ಹಾಗು ಪೊದೆ ಹಿಂದೆ ಮರೆಯಾದ ಸಣ್ಣ ತುಣುಕು ಚಿತ್ರವಷ್ಟೇ ಮನಸ್ಸಿನಲ್ಲಿ ರೆಕಾರ್ಡ್ ಆಯಿತು.ಕ್ಷಣ ಮಾತ್ರದಲ್ಲಿ ಮಿಂಚಿ ಹೋದ ಮಿಂಚಿನ ಲಕ್ಷಣಗಳನ್ನು ಹೇಳು ಎಂದರೆ ಹೇಗೆ ಹೇಳಬೇಕು ಹಾಗೆಯೇ ಅಸ್ಪಷ್ಟವಾಗಿ ಹುಲಿರಾಯರು ತಲೆಯ ಹಾರ್ಡ್ ಡಿಸ್ಕ್ ನಲ್ಲಿ ಸ್ಟೋರ್ ಆದರು. ಮೊದಲ ದಿನವೇ ಹುಲಿಯನ್ನು ತೋರಿಸಿದ ಖುಷಿ ಕೆಂಡಯ್ಯನ ಮುಖದಲ್ಲಿತ್ತು.ನನಗೆ ಮಾತುಗಳು ಹೊರಡಲಿಲ್ಲ.ನಿಧಾನವಾಗಿ ಅವನು ಹೋದ ದಾರಿ ಹಿಂದೆಯೇ ಸಾಗಿದೆವು.ಅದು ನಾವು ನಡೆಯಬೇಕಿದ್ದ ದಾರಿಯನ್ನು ಸೇರಿ ಕೆಳಗೆ ಇಳಿದಿತ್ತು. ಕೆಳಗೆ ದಟ್ಟವಾದ ಪೊದೆ ಇದ್ದ ಕಾರಣ ಅವನನ್ನು ಹಿಂಬಾಲಿಸಲಾಗಲಿಲ್ಲ.ಅವನು ನಡೆಯುತ್ತಿದ್ದ ದಾರಿಯಲ್ಲಿನ ಕಾಡು ಪ್ರಾಣಿಗಳ ಎಚ್ಚರಿಕೆಯ ಕೂಗಿನ ಸದ್ದುಗಳು ನಮ್ಮ ಕಿವಿಯ ಮೇಲೆ ಬೀಳುತ್ತಿದ್ದವು .ನಮ್ಮ ದಾರಿಯಲ್ಲೇ ಮುಂದುವರೆಯುತಿದ್ದ ನಮಗೆ ಅವನು ಆಗಷ್ಟೇ ಮಾಡಿ ಹೋಗಿದ್ದ ಮಲ ಕಾಣ ಸಿಕ್ಕಿತು. ಅವನು ನಾವು ನಡೆಯಬೇಕೆದ್ದ ದಾರಿಯಲ್ಲೇ ಸ್ವಲ್ಪ ಹೊತ್ತಿಗೆ ಮುಂಚೆ ನಡೆದು ಬಂದು ಹುಲ್ಲುಗಾವಲಿನ ಇಳಿಜಾರಿನಲ್ಲಿ ಕೆಳಗೆ ಬರುತ್ತಿದ್ದ. ದಾರಿಯನ್ನು ಬ್ಲಾಕ್ ಮಾಡಿದ ಆನೆಗಳು ನಮ್ಮನ್ನು ನೇರವಾಗಿ ಹುಲಿಯ ಎದುರೇ ತಂದು ನಿಲ್ಲಿಸಿದ್ದವು. ಅದನೆಲ್ಲಾ ಯೋಚಿಸಿ ಸುಮಾರು 10 ಘಂಟೆಯ ಹೊತ್ತಿಗೆ ಕ್ಯಾಂಪ್ ಗೆ ಮರಳಿದೆವು
.ಕೃಷ್ಣ ಮಾಡಿಟ್ಟಿದ್ದ ತಿಂಡಿ ತಿಂದು ಅಲ್ಲೇ ಹೊರಗೆ ಒಂದು ಚಾಪೆಯ ಮೇಲೆ ಮಲಗಿದೆವು. ಮಿಂಚಿನಂತೆ ಬಂದು ಹೋದ ಹುಲಿ ರಾಯ ಮನಸಿನಲ್ಲಿ ಪದೇ ಪದೇ ಮೂಡುತ್ತಿದ್ದ.ಸ್ವಲ್ಪ ಸಮಯದ ನಂತರ ಅಲ್ಲಿಗೆ ಮಾಧ್ಯಮ ಮಿತ್ರರು ಭೇಟಿ ಕೊಟ್ಟರು,ಆಕಾಶವಾಣಿಯಿಂದ ಬಂದಿದ್ದ ಮಿತ್ರರು ನನ್ನ ಅನುಭವ ರೆಕಾರ್ಡ್ ಮಾಡಿಕೊಂಡರು.ಇನ್ನೊಂದು ಬೀಟ್ ಗೆ ತೆರಳಿದ್ದ ತಂಡಕ್ಕೂ ಹುಲಿಯ ಗುರುತುಗಳು ಸಿಕ್ಕಿದ್ದವು.ಆದರೆ ದರ್ಶನವಾಗಿರಲಿಲ್ಲ
.ಒಂದು ಸಣ್ಣ ನಿದ್ರೆಯ ನಂತರ ಮಧ್ಯಾನ್ಹದ ವೇಳೆಗೆ ಸ್ನಾನ ಮಾಡಲು ಕ್ಯಾಂಪ್ ನ ಹಿಂದೆ ಇದ್ದ ಹಳ್ಳದ ಕಡೆ ತೆರಳಿದೆವು. ಆ ಹಳ್ಳಕ್ಕೆ ಆನೆಗಳು ಆಗಾಗ ಭೇಟಿ ನೀಡುತ್ತಿದ್ದವು. ಜೊತೆಗೆ ಅಲ್ಲಿ ಹೆಚ್ಚಿನ ಲಂಟಾನ ಪೊದೆ ಬೆಳೆದುಕೊಂಡಿದ್ದರಿಂದ ದೂರದ ವೀಕ್ಷಣೆ ಕಷ್ಟವಾಗಿತ್ತು.ಆದ್ದರಿಂದಲೇ ಒಬ್ಬೊಬ್ಬರೇ ಆ ಹಳ್ಳಕ್ಕೆ ಭೇಟಿ ನೀಡುವುದು ಅಪಾಯಕಾರಿ ಎಂದು ಅಲ್ಲಿನ ಸಿಬ್ಬಂದಿ ನಮಗೆ ಎಚ್ಚರಿಸಿದ್ದರು. ಆದ್ದರಿಂದ ನಾವು ಯಾವಾಗಲು ಹಳ್ಳಕ್ಕೆ ಗುಂಪಾಗಿಯೇ ಭೇಟಿ ನೀಡುತ್ತಿದ್ದೆವು. ತಣ್ಣನೆ ಕೊರೆಯುತ್ತಿದ್ದ ಹಳ್ಳದ ನೀರಿನ ಸ್ನಾನ ಚೇತೋಹರಕಾರಿಯಾಗಿತ್ತು . ಘಂಟೆಗಟ್ಟಲೆ ಸ್ನಾನ ಮಾಡಿದ ನಾವು ಕ್ಯಾಂಪ್ ಗೆ ಮರಳಿದಾಗ ಸೂರ್ಯ ಕೆಲಸ ಮುಗಿಸಿ ಹೊರಡಲು ಸಿದ್ದನಾಗಿದ್ದ. ಚಳಿ ಮೆಲ್ಲಗೆ ಆವರಿಸುತ್ತಿತ್ತು .ಈ ಸಂಜೆ ನಮ್ಮನ್ನು ರವಿ ಹಾಗು ಗಿರೀಶ್ ಎಂಬ ಇನ್ನಿಬರು ಸ್ವಯಂ ಸೇವಕರು ಸೇರಿಕೊಂಡರು.ಕ್ಯಾಂಪ್ ಫೈರ್ ಹತ್ತಿಸಿದ ನಾವು ಸುತ್ತಲೂ ಕುಳಿತು ಮಾತನಾಡತೊಡಗಿದೆವು. ಜಿಂಕೆಯೊಂದು ದೂರದಲ್ಲಿ ಗಾಬರಿಯಲ್ಲಿ ಕೂಗು ಹಾಕಿತು ಅದನ್ನನುಸರಿಸಿ ಕಾಡು ಕುರಿ ಕೂಗಿತು.ಯಾವುದೋ ಮಾಂಸಾಹಾರಿ ಪ್ರಾಣಿಯ ಸಂಚಾರ ಆರಂಭವಾಗಿದೆ ಎಂದು ಕೃಷ್ಣ ತಿಳಿಸಿದರು .ರಾತ್ರಿ ಊಟ ಮುಗಿಸಿ ಕಾಡಿನ ನೀರವ ಮೌನದೊಂದಿಗೆ ನಾವು ನಿದ್ರೆಗೆ ಶರಣಾದೆವು
ಡಿಸೆಂಬರ್ 19
.ಬೆಳಗ್ಗೆ 6 ಕ್ಕೆ ಎದ್ದಾಗ ಚಳಿ ಜೋರಾಗಿತ್ತು. ಬೀಟ್ ನತ್ತ ಹೊರಟ ನಮ್ಮ ಟೀಂ ರಸ್ತೆಯನ್ನು ಬಿಟ್ಟು ಲಂಟನಾ ಪೋದೆಯಡಿ ದಾರಿ ಮಾಡಿಕೊಂಡು ತೆರಳಲು ಶುರು ಮಾಡಿತು
.ದಟ್ಟವಾದ ಲಂಟಾನ ಪೊದೆಯಡಿ ನಾವೇ ದಾರಿ ಮಾಡಿಕೊಂಡು ತೆರಳಬೇಕಿತ್ತು. ಮುಳ್ಳುಗಳು ಮೈ ಮೇಲಿನ ಬಟ್ಟೆಗೆ ಅಂಟಿಕೊಂಡು ಬಹಳ ತೊಂದರೆ ನೀಡುತ್ತಿದ್ದವು. ಹೀಗೆ ಲಂಟಾನದಡಿ ನಡೆಯುತ್ತಿದ್ದ ನಮಗೆ ಅಲ್ಲೊಂದು ಕಡೆ ಹುಲಿ ನೆಲವನ್ನು ಪರಚಿ ಮೂತ್ರ ಮಾಡಿದ ಗುರುತು ಸಿಕ್ಕಿತು. ಈ ದಟ್ಟ ಲಂಟಾನ ಪೋದೆಗಳಲ್ಲೂ ಕೂಡ ಹುಲಿರಾಯ ಬೀಟ್ ಮಾಡಿರುವುದನ್ನು ನೋಡಿ ಒಮ್ಮೆ ಆಶ್ಚರ್ಯವಾಯಿತು
.ಸುಮಾರು 1 ಘಂಟೆಗಳ ಕಾಲ ಲಂಟನಾದ ಹಾದಿಯಲ್ಲೇ ನಡೆದ ನಮಗೆ ಆಗ ಎದುರಾದದ್ದು ಆಳೆತ್ತರದ ಹುಲ್ಲುಗಳು. ಇವುಗಳ ನಡುವೆ ನಡೆಯಬೇಕಾದರೆ ಮುಂದೆ ಇದ್ದವರೇ ಕಾಣುತ್ತಿರಲಿಲ್ಲ. ಹುಲ್ಲಿನ ನಡುವೆ ದಾರಿ ಮಾಡಿಕೊಂಡು ಮೇಲೆ ಬೆಟ್ಟದ ನೆತ್ತಿಯ ಕಡೆ ನಡೆಯುವಷ್ಟರಲ್ಲಿ ದೇಹವೆಲ್ಲಾ ಬೆವರಿತ್ತು. ಈ ದಾರಿಯಲ್ಲಿ ಎಲ್ಲಾದರೂ ನಮಗೆ ಆನೆ ಸಿಕ್ಕಿದ್ದರೆ ನಮ್ಮ ಕತೆ ಅಷ್ಟೇ....
5km ದುರ್ಗಮ ಹಾದಿ ಕ್ರಮಿಸಿದ ನಾವು ಮತ್ತೊಂದು ದಾರಿಯಲ್ಲಿ ಕ್ಯಾಂಪ್ ಕಡೆ ಹೊರಟೆವು. ಕ್ಯಾಂಪ್ ಸಮೀಪ ಬಂದು ಹಳ್ಳದಲ್ಲಿ ವಿರಮಿಸುತ್ತಿದ್ದಾಗ ಕೆಂಡಯ್ಯ ನಮ್ಮನ್ನು ಕರೆದು ಹಿಂದಿನ ರಾತ್ರಿ ಹಳ್ಳದ ದಂಡೆಯಲ್ಲೇ ನಡೆದು ಹೋದ ಹುಲಿಯ ಹೆಜ್ಜೆ ಗುರುತುಗಳನ್ನು ತೋರಿಸಿದರು. ಕ್ಯಾಂಪ್ ನ ಹತ್ತಿರದ ಹಳ್ಳದ ಬಳಿಯೇ ಹುಲಿ ರಾಯ ರಾತ್ರಿ ಬೀಟ್ ಮಾಡಿರುವುದು ನಮ್ಮಲ್ಲಿ ರೋಮಾಂಚನವನ್ನುಂಟು ಮಾಡಿತು. ಕ್ಯಾಂಪ್ ಗೆ ಮರಳಿ ವಿಶ್ರಮಿಸಿ ಹಳ್ಳದಲ್ಲಿ ಸ್ನಾನ ಮಾಡಲು ತೆರಳಿದೆವು
.ಇಂದು ಸಂಜೆ ಕ್ಯಾಂಪ್ ಫೈರ್ ನಲ್ಲಿ ನಮಗೆ ಅನೆಗಳ ವಿಚಾರವಾಗಿ ಅಲ್ಲಿನ ಸಿಬ್ಬಂದಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರು ಅದೆಷ್ಟು ಬಾರಿ ಅನೆಗಳ ಜೊತೆ ಮುಖಾಮುಖಿಯಾಗಿದ್ದರೂ ಲೆಕ್ಕವೇ ಇಲ್ಲ. ಅವರ ಪ್ರಕಾರ ಕೆಲವೇ ತಿಂಗಳುಗಳ ಹಿಂದೆ ಕ್ಯಾಂಪ್ ನ ಸಮೀಪದ ರಸ್ತೆಗಳಲ್ಲೇ ನಡೆಯುವುದು ಕಷ್ಟವಾಗುತಿತ್ತು. ಅನೆಗಳ ಗುಂಪು ದಾರಿಯುದ್ದಕ್ಕೂ ನಿಂತಿರುತ್ತಿದ್ದವು. ಅವುಗಳಿಗೆ ತಿಳಿಯದಂತೆ ದಾರಿ ಮಾಡಿಕೊಂಡು ನಡೆಯುವುದು ಅವರಿಗೆ ದೊಡ್ಡ ಸಾಹಸವೇ ಆಗಿತ್ತು .ಹೆಚ್ಚಿನ ಬಾರಿ ಆನೆಗೆಳು ಇವರ ಮೇಲೆ ದಾಳಿ ಮಾಡಲು ಅಟ್ಟಿಸಿಕೊಂಡು ಬಂದದ್ದೂ ಉಂಟು.ಕೃಷ ಅಂತೂ ಅವರ ಸ್ನೇಹಿತನನ್ನು ಅವರ ಕಣ್ಣೆದುರೇ ಆನೆ ತುಳಿದು ಕೊಂದದ್ದನ್ನು ನೆನಸಿಕೊಂಡು ಒಂದು ಕ್ಷಣ ಸುಮ್ಮನಾದರು. ಹಳ್ಳಗಳಲ್ಲಿ ನೀರು ಈಗ ಕಡಿಮೆಯಾದ ಕಾರಣ ಆನೆಗಳು ನೀರಿರುವ ಕಡೆ ತೆರಳಿವೆ ಎಂದು ತಿಳಿಸಿದರು. ಜೀವದ ಹಂಗು ತೊರೆದು, ಹೊರ ಲೋಕದ ಸಂಪರ್ಕವೇ ಇಲ್ಲದೇ ಅಂತಹ ಕಳ್ಳ ಭೇಟೆ ಶಿಬಿರಗಳಲ್ಲಿ ವಾಸವಿದ್ದು ಕಾಡನ್ನು ಕಾಯುವ ಅವರ ಬಗ್ಗೆ ಮನಸ್ಸಿನಲ್ಲಿ ಹೆಮ್ಮೆ ಮೂಡಿತು. ಯಾವ ಕ್ಷಣದಲ್ಲಿ ಯಾವ ಕಾಡು ಪ್ರಾಣಿಯಿಂದ ಏನೂ ಬೇಕಾದರೂ ಎದುರಾಗಬಹುದಾದ ಅಪಾಯವನ್ನು ಎದುರಿಸಿಕೊಂಡು ಧೈರ್ಯವಾಗಿ ಕಷ್ಟಗಳನ್ನು ಎದುರಿಸಿ ಬದುಕುತ್ತಿರುವ ಕಾಡಿನ ನಿಜವಾದ ಹಿರೋಗಳಿವರು..ನಿಜಕ್ಕೂ ಇವರಿಗೊಂದು ನಮ್ಮ ಸಲಾಂ
.ಆನೆಗಳು ಮನಸ್ಸಿನಲ್ಲಿ ಆವರಿಸಿದವು.ಮತ್ತದೇ ಕಾಡಿನ ನೀರವ ಮೌನ.ದೂರದಲೆಲ್ಲೂ ಕೂಗುವ ಕಾಡು ಕುರಿ.ಇದರ ಮದ್ಯೆ ಹುಲಿ ಕಂಡಿರುವ ಬಗ್ಗೆ ವಾಕಿಯಲ್ಲಿ ಬರುತ್ತಿರುವ ಮೆಸೇಜ್ ಗಳು, ಅಲ್ಲೆಲ್ಲೋ ಆನೆ ಓಡಿಸಿ ಸುಸ್ತಾಗಿರುವ ಅರಣ್ಯ ಸಿಬ್ಬಂದಿ ವಾಕಿಯಲ್ಲಿ ತಮ್ಮ ಗೋಳು ತೋಡಿಕೊಳ್ಳುತ್ತಿರುವುದು.... ನಾನು ಯಾವುದೂ ಒಂದು ವನ್ಯ ಲೋಕದಲ್ಲಿ ಕಳೆದು ಹೋಗುತ್ತಿದ್ದೆ..ನಿಧಾನವಾಗಿ ನಿದ್ರೆ ಹತ್ತಿತು
ಡಿಸೆಂಬರ್ 20
.ಹಿಂದಿನ ದಿನ ನಮ್ಮ ಕ್ಯಾಂಪ್ ಗೆ ಬಂದಿದ್ದ ಇಬ್ಬರು ವಯಸ್ಸಾದ ಗಂಡ ಹೆಂಡತಿ ನಮ್ಮ ಕ್ಯಾಂಪ್ ನಲ್ಲೆ ತಂಗಿ ಈ ದಿನ ನಮ್ಮ ತಂಡದ ಜೊತೆ ಗಣತಿಗೆ ಬರುವವರಿದ್ದರು. ಅವರು ದೇಶ ವಿದೇಶ ಸುತ್ತಿ ಈ ವಯಸ್ಸಿನಲ್ಲಿ ಹುಲಿ ಗಣತಿಗೆ ಬಂದದ್ದು ನೋಡಿ ಆಶ್ಚರ್ಯವಾಯಿತು. ಮಾಹಿತಿ ಕೊರತೆಯಿಂದ ಅವರು ರಾತ್ರಿ ತಂಗಲು ಯಾವ ವ್ಯವಸ್ಥೆಯನನ್ನೂ ಮಾಡಿಕೊಳ್ಳದೆ ಬಂದಿದ್ದರು. ನಾವು ಕೆಲವು ಹೊದಿಕೆ ಹಾಗು ಚಾಪೆಯನ್ನು ಅವರಿಗೆ ನೀಡಿದ್ದೆವು. ರಾತ್ರಿ ಚಳಿ ಅರ್ಭಟ ತಡೆದುಕೊಂಡು ಅವರು ನಮ್ಮ ಜೊತೆ ಹೊರಡಲು ಸಿದ್ದರಾಗಿದ್ದರು
.ನಾವು ಮೊದಲನೇ ದಿನ ನಡೆದು ವಾಪಾಸ್ ಕ್ಯಾಂಪ್ ಗೆ ಬಂದ ದಾರಿಯಲ್ಲಿ ಈ ಬಾರಿ ಸಾಗಿದೆವು. ನಾವು ಮೊದಲನೇ ದಿನ ಹುಲಿ ನೋಡಿದ ಜಾಗ ತಲುಪುವ ಸ್ವಲ್ಪ ಮೊದಲೇ ನಮಗೆ ಒಂದು ಕಡೆ ಹುಲಿ ಆಗಷ್ಟೇ ರಸ್ತೆ ದಾಟಿದ ಕುರುಹುಗಳು ಕಂಡು ಬಂದವು. ಅತ್ಯಂತ ಜಾಗರೂಕವಾಗಿ ನಡೆದು ಸಣ್ಣ ಶಬ್ದವೆನಾದರೂ ಕೇಳುತ್ತದೆಯೇ ಎಂದು ಆಲಿಸುತ್ತಾ ನಡೆದೆವು. ಹುಲಿ ರಾಯರು ಕಾಣಲಿಲ್ಲ. 5km ಬೀಟ್ ಮುಗಿಸಿ ವಾಪಾಸಾಗುತ್ತಿದ್ದಾಗ ಮತ್ತೊಮ್ಮೆ ಹುಲಿಯ ಮಲ.ಮಲದಲ್ಲಿ ಸಂಬಾರ್ ಕೂದಲುಗಳು ಹಾಗು ಚಿಕ್ಕ ಮೂಳೆಯ ತುಂಡು.ಈ ಗುರುತೂ ಕೂಡ ಕೆಲವೇ ಗಂಟೆಗಳ ಹಿಂದಿನದು. ಸ್ವಲ್ಪ ದೂರದಲ್ಲೇ ಹುಲಿಯ ಹೆಜ್ಜೆ ಗುರುತುಗಳು. ಒಟ್ಟಿನಲ್ಲಿ ನಾವು 3 ದಿನಗಳಿಂದ ಹುಲಿಗಳ ಹಿಂದೆಯೇ ಅಲೆಯುತ್ತಿದ್ದೇವೆ.ಅವುಗಳು ನಮಗಿಂತ ಕೆಲವೇ ಘಂಟೆಗಳ ಮುಂಚೆ ಅಲ್ಲಿ ಓಡಾಡಿ ಗುರುತುಗಳನ್ನು ಮಾಡಿ ಹೋಗುತ್ತಿವೆ
.ಸುಮಾರು 9.45 ರ ಹೊತ್ತಿಗೆ ಕ್ಯಾಂಪ್ ಗೆ ಬಂದು ವಿಶ್ರಮಿಸಿದೆವು.ಹಿಂದಿನ ದಿನ ಲಂಟಾನ ಪೊದೆ ಹಾಗು ಹುಲ್ಲಿನ ನಡುವೆ ನಡೆದದ್ದರಿಂದ ಮೈನೆಲ್ಲಾ ticks (ಉಣುಗು) ಗಳು ಕಚ್ಚಿದ್ದವು. ನಮಗೀಗ ತುರ್ತಾಗಿ ಸ್ನಾನದ ಅವಶ್ಯಕತೆ ಇತ್ತು. ಅಂದು ಅದೆಷ್ಟು ಹೊತ್ತು ಹಳ್ಳದ ನೀರಿನಲ್ಲಿ ಸ್ನಾನ ಮಾಡಿದೆವೂ ನಮಗೇ ಗೊತ್ತಿಲ್ಲ.ದಿನ ಕಳೆದಂತೆ ಕ್ಯಾಂಪ್ ನ ಹಳ್ಳದಲ್ಲಿನ ಸ್ನಾನಕ್ಕೆ ನಾವು ಮನಸೋಲತೊಡಗಿದೆವು
.ನಮ್ಮೊಂದಿಗಿದ್ದ ವಯೋವೃದ್ದರು ವಾಪಾಸ್ ತೆರಳಿದರು. ಸಂಜೆ ಊಟ ಮಾಡಿದ ನಂತರ ಕೆಲವರು ಒಂದು ರೌಂಡ್ ಜೀಪು ರೋಡ್ ನಲ್ಲಿ ವಾಕಿಂಗ್ ಹೋಗೋಣವೆಂದು ನಿರ್ಧರಿಸಿ ಅರಣ್ಯ ವಿಕ್ಷಕ ಕೃಷ್ಣ ಮೂರ್ತಿ ಜೊತೆ ತೆರಳಿದರು. ಅರಣ್ಯ ಸಿಬ್ಬಂದಿ ಇಲ್ಲದೆ ಕ್ಯಾಂಪ್ ನಿಂದ ಹೊರ ಹೋಗುವುದು ನಿಜಕ್ಕೂ ಅಪಾಯಕಾರಿಯಾಗಿತ್ತು. ನಾನು ವಾಕಿಂಗ್ ಗೆ ತೆರಳಿಲ್ಲ .ಸುಮಾರು ಅರ್ಧ ಘಂಟೆಯ ನಂತರ ತೆರಳಿದ ತಂಡಕ್ಕೆ ಒಂಟಿ ಸಲಗವೊಂದು ಎದುರಾಗಿತ್ತು.ಆದರೆ ರಸ್ತೆಯ ಬದಿಯಲಿದ್ದ ಅದು ಇವರೆಡೆಗೆ ಯಾವುದೇ ಪ್ರತಿಕ್ರಿಯೆ ತೋರದೆ ಕಾಡಿನತ್ತ ತೆರಳಿತ್ತು . ಸಂಜೆ ಕ್ಯಾಂಪ್ ಫೈರ್ ನಲ್ಲಿ ನಾವು ಹುಲಿಯ ಬಗ್ಗೆ ಮಾತನಾಡಿದೆವು. ಕೆಂಡಯ್ಯ ,ಗುಜ್ಜ , ಕಾಳ , ಕೃಷ್ಣ ಮೂರ್ತಿ ,ಕೃಷ್ಣ ಎಲ್ಲರೂ ಹಲವು ಬಾರಿ ಹುಲಿಯ ದರ್ಶನ ಮಾಡಿದವರೇ.ಅವರು ಹೇಳಿದ ಎರಡು ಸಂಧರ್ಭ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು.ಆ ಘಟನೆಗಳನ್ನು ಇಲ್ಲಿ ಬರೆದಿದ್ದೇನೆ
.ಒಮ್ಮೆ ಮರಿ ಆನೆಯೊಂದು ಗುಂಡಿಯೊಳಗೆ ಬಿದ್ದು ಹೊರಬರಲಾಗದೆ ಅದರ ತಾಯಿ ಅದನ್ನು ಅಲ್ಲಿಯೇ ಬಿಟ್ಟು ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಿ ಅದಕ್ಕೆ ಉಪಚಾರ ನೀಡುತ್ತಿದ್ದರು. ಆಗ ಮರಿಯ ಕೂಗು ದೂರದಲ್ಲಿ ಇದ್ದ ಅದರ ತಾಯಿ ಕಿವಿಗೆ ಬಿದ್ದು ಅದು ಮರಿಯ ಬಳಿ ಓಡಿ ಬಂದಿತು.ಅರಣ್ಯ ಇಲಾಖೆ ಸಿಬ್ಬಂದಿ ಮರಿಯನ್ನು ಬಿಟ್ಟು ದೂರ ಸರಿದರು. ಮರಿಯ ಬಳಿ ಬಂದ ತಾಯಿ ಯಾಕೋ ಅದರ ಮೇಲೆ ಅಷ್ಟು ಸಲುಗೆ ತೋರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮರಿಯನ್ನು ಬಿಟ್ಟು ಅದು ವಾಪಾಸ್ ತೆರಳಿತು. ಕತ್ತಲಾಗುತ್ತಿರುವುದರಿಂದ ಅರಣ್ಯ ಸಿಬ್ಬಂದಿ ಮರಿಯನ್ನು ರಾತ್ರಿ ತಾಯಿ ಕರೆದೊಯ್ಯಬಹುದು ಎಂಬ ನಂಬಿಕೆಯಿಂದ ಅದನ್ನು ಅಲ್ಲಿಯೇ ಬಿಟ್ಟು ತೆರಳಿದರು.ಮಾರನೆಯ ದಿನ ಬೆಳೆಗ್ಗೆ ಬಂದು ಮರಿಗಾಗಿ ಹುಡುಕಾಟ ನಡೆಸಿದರು.ಅಲ್ಲೆಲ್ಲೂ ಮರಿಯ ಸುಳಿವಿರಲಿಲ್ಲ. ತಾಯಿ ಅದನ್ನು ಕರೆದುಕೊಂಡು ಹೋಗಿದೆ ಎಂದು ಭಾವಿಸುವಷ್ಟರಲ್ಲಿಯೇ ಅಲ್ಲೊಂದು ಭಯಾನಕ ದೃಶ್ಯ ಕಂಡು ಬಂದಿತ್ತು.ಮರಿಯ ದೇಹ ತಲೆರಹಿತವಾಗಿ ಅಲ್ಲೇ ದೂರದಲ್ಲಿ ಬಿದ್ದಿತ್ತು,ಜೊತೆಗೆ ಹುಲಿ ರಾಯನ ಹೆಜ್ಜೆ. ಕೃಷ್ಣಮೂರ್ತಿ ಹಾಗು ಕೆಂಡಯ್ಯಗೆ ಹೆಚ್ಚಿನ ವಿವರ ಬೇಕಿರಲಿಲ್ಲ ತಕ್ಷಣ ಜಾಡನ್ನು ಹಿಡಿದು ಹೊರಟರು. ಜಾಡು ಲಂಟಾನ ಪೊದೆಯಲ್ಲಿ ಸಾಗಿತ್ತು.ಅಲ್ಲೊಂದು ಕಡೆ ಇವರು ಸಮೀಪಿಸುತ್ತಿದಂತೆ ಹುಲಿ ಘರ್ಜನೆ ಕೇಳಿ ಬಂತು.ಹೋಗಿ ನೋಡಿದರೆ ಹುಲಿ ಆನೆ ಮರಿಯ ತಲೆಯೊಂದಿಗೆ ಅಲ್ಲೇ ಕುಳಿತಿದೆ .ಇವರನ್ನು ನೋಡಿ ಹುಲಿಯು ಅಲ್ಲಿಂದ ಜಾಗ ಖಾಲಿ ಮಾಡಿತು. ಧೈರ್ಯಗೆಡದ ಮೂರ್ತಿ ಹಾಗು ಕೆಂಡಯ್ಯ ಆನೆಯ ತಲೆಯನ್ನು ಅಲ್ಲೇ ಮಣ್ಣು ಮಾಡಿದರು .ಈ ಕತೆಯನ್ನು ಅವರ ಬಾಯಲ್ಲಿ ಕೇಳುತ್ತಿದಂತೆ ನಮ್ಮ ಮೈ ಒಮ್ಮೆ ಜುಮ್ ಎಂದಿತು. ಆನೆ ಯಾಕೆ ಮರಿಯನ್ನು ಕರೆದೊಯ್ಯಲಿಲ್ಲ ಎಂಬ ನಮ್ಮ ಪ್ರಶ್ನೆಗೆ ಅವರು ನೀಡಿದ ಉತ್ತರ ಹೀಗಿತ್ತು ''ಮನುಷ್ಯ ಮುಟ್ಟಿದ ಮರಿಗಳನ್ನು ಯಾವ ತಾಯಿಯೂ ಹತ್ತಿರ ಸೇರಿಸುವುದಿಲ್ಲ''
.ಇನ್ನೊಮ್ಮೆ ನಮ್ಮ ಕ್ಯಾಂಪ್ ನಲ್ಲಿ ಕೆಂಡಯ್ಯ ಚಾವಣಿ ಮೇಲೆ ಹತ್ತಿ ಮಾಡನ್ನು ಪರೀಕ್ಷೆ ಮಾಡುತ್ತಿದ್ದರು. ಕೆಳಗೆ ಕೆಲಸ ಮಾಡುತ್ತಿದ್ದ ಕಾಳನ ಕಣ್ಣಿಗೆ ಕ್ಯಾಂಪ್ ನ ಎದುರೇ ಬರುತ್ತಿರುವ ಹುಲಿ ಕಂಡಿತು. ತಕ್ಷಣ ಕಾಳ ಕೆಂಡಯ್ಯನನ್ನು ಕರೆದು ಹುಲಿಯನ್ನು ತೋರಿಸಿದರು. ಇವರನ್ನೇ ಸ್ವಲ್ಪ ಹೊತ್ತು ದುರುಗುಟ್ಟಿ ನೋಡಿದ ಹುಲಿ ಅಲ್ಲಿಂದ ಜಾಗ ಖಾಲಿ ಮಾಡಿತು .ನಾವು ಯಾರ ಹಿಂದೆ 4 ದಿನದ ಹಿಂದೆ ಅಲೆಯುತ್ತಿದ್ದೆವೋ ಅವರು ಹೀಗೆ ನಮ್ಮ ಕಾಡಿನ ಹಿರೋಗಳಿಗೆ ಹಲವು ಬಾರಿ ಹಲವು ರೀತಿಯಲ್ಲಿ ದರ್ಶನವಿತ್ತಿದ್ದಾರೆ. ಅವರ ಬಾಯಲ್ಲಿ ಇದನ್ನು ಕೇಳಿದ ನಂತರ ನಾವು ದಿನವೂ ಗಣತಿ ಮುಗಿಸಿ ಬಂದ ನಂತರ ಕ್ಯಾಂಪ್ ನ ಎದುರು ಕಾಣುವ ಆ ಜೀಪ್ ರೋಡ್ ಅನ್ನೇ ನೋಡುತ್ತಾ ಒಂದು ಚಿಕ್ಕ ಮರದ ಬುಡದಲ್ಲಿ ಮಲಗಿರುತ್ತಿದ್ದೆವು
.ಹೀಗೆ ಅವರ ಅನುಭವಗಳನ್ನು ಕೇಳುತ್ತಾ ಕೇಳುತ್ತಾ ಹೊಟ್ಟೆ ಚುರುಗುಡಲು ಶುರು ಮಾಡಿತು.ಕೃಷ್ಣನ ಬಿಸಿ ಬಿಸಿ ಅನ್ನ,ಸಂಬಾರ್ ಗಾಗಿ ಬಾಯಿ ಚಡಪಡಿಸುತ್ತಿತ್ತು. ಈ ದಿನದ ಸಂಜೆ ಕೆಂಡಯ್ಯ ಕ್ಯಾಂಪ್ ಬಳಿಯೇ ಇದ್ದ ನೆಲ್ಲಿಕಾಯಿ ಮರದಿಂದ ನೆಲಿಕಾಯಿ ತಂದು ಅದನ್ನು ಜಿರಿಗೆ ಮೆಣಸು ಹಾಗು ಉಪ್ಪಿನೊಂದಿಗೆ ಜಜ್ಜಿ ಒಂದು ಉಪ್ಪಿನಕಾಯಿ ತಯಾರಿಸಿದ್ದರು.ಇದು ಊಟದ ಜೊತೆ ಅತ್ಯಂತ ರುಚಿಕರವಾಗಿತ್ತು .ರವಿಯಂತೂ ಈ ಉಪ್ಪಿನಕಾಯಿಯ ಫ್ಯಾನ್ ಆಗಿ ಬಿಟ್ಟರು
.ಮಲಗಲು ತಯಾರಿ ನಡೆಸುತ್ತಿದ್ದಂತೆ ವಾಕಿಯಲ್ಲಿ ಹುಲಿಯನ್ನು ನೋಡಿದ ಬಗ್ಗೆ ಮೆಸೇಜ್ ಗಳು ಬರಲಾರಂಭಿಸಿದವು. ಈ ವರೆಗೆ ಸುಮಾರು 14 ಕ್ಕೂ ಹೆಚ್ಚು ಹುಲಿಗಳನ್ನು ಬೇರೆ ಬೇರೆ ಕ್ಯಾಂಪ್ ಗಳಲ್ಲಿ ತಂಗಿದ್ದ ಸ್ವಯಂ ಸೇವಕರು ನೋಡಿದ್ದರು.ಅದರಲ್ಲಿ ಅತ್ಯಂತ ಹೆಚ್ಚು ಹುಲಿ ಕಂಡದ್ದು ಮೂಳೆಹೊಳೆ ರೇಂಜ್ ನಲ್ಲಿ ಎಂದು ತಿಳಿದು ಬಂದಿತು. ಹೀಗೆ ವಾಕಿಯ ಶಬ್ದ ಆಲಿಸುತ್ತಾ ಉರಿಯುತ್ತಿದ್ದ ಕ್ಯಾಂಪ್ ಫೈರ್ ನೋಡುತ್ತಾ ಕಾಡಿನ ನಿಶಾಚರ ಪಕ್ಷಿಗಳ ಸದ್ದು ಕೇಳುತ್ತಾ ಕಾಡಿನಲ್ಲಿ ನಾಲಕ್ಕನೇ ದಿನದ ನಿದ್ರೆಗೆ ಜಾರಿದೆವು
ಡಿಸೆಂಬರ್ 21
.ಈ ದಿನದ ನಮ್ಮ ಹುಲಿ ಗಣತಿಯ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಇತ್ತು. ನಾವು ಇನ್ನುಳಿದ ಮೂರು ದಿನ ಅರಣ್ಯ ಇಲಾಖೆಯವರು ಮೊದಲೇ ನಿರ್ಮಿಸಿದ 2 ಕಿಲೋಮೀಟರು Transact ಲೈನ್ ನಲ್ಲಿ ಚಲಿಸಿ ಸಸ್ಯಾಹಾರಿ ಪ್ರಾಣಿಗಳ ದಾಖಲೆ ಹಾಗು ಪ್ರತೀ 400 ಮೀಟರ್ ಗೆ ಒಮ್ಮೆ ಗಿಡ ಮರಗಳ ದಾಖಲಾತಿಯನ್ನು ಮಾಡಬೇಕಿತ್ತು
.ಬೆಳಗ್ಗೆ 6.30 ಕ್ಕೆಲ್ಲಾ ನಾವು ನಮ್ಮ Transact ಲೈನ್ ಶುರುವಾಗುವ ಮಾಸ್ತಿ ಮಕ್ಕಿಸರ್ಕಲ್ ನಲ್ಲಿದ್ದೆವು. ಈ ಸರ್ಕಲ್ ಮೂರು ಜೀಪು ರೋಡ್ ಗಳು ಕೂಡುವ ಸ್ಥಳ .ಒಂದು ಬಂಡೀಪುರದ ಕಡೆ ಸಾಗಿದರೆ ಇನ್ನೆರಡು ಬೇರೆ ಕಳ್ಳ ಭೇಟೆ ತಡೆ ಶಿಬಿರದ ಕಡೆ ಸಾಗುವ ದಾರಿಗಳು. ಇಲ್ಲಿಂದ ನಮ್ಮ 2 km ದೂರದ Transact ಲೈನ್ ಸಾಗಿತ್ತು
.ದೂರ ಕಡಿಮೆಯಾದರೂ ಗಿಡ ಮರಗಳ ಗಣತಿ ಕಾರ್ಯ ಸ್ವಲ್ಪ ಜಾಸ್ತಿ ಸಮಯವನ್ನೇ ತೆಗೆದುಕೊಂಡಿತು .ನಮ್ಮ ದಾರಿಯಲ್ಲಿ ಹರಿಯುವ ಹಳ್ಳದಲ್ಲಿ ಚಿರತೆಯ ಹೆಜ್ಜೆ ಗುರುಗಳು ಅಸ್ಪಷ್ಟವಾಗಿ ಮೂಡಿದ್ದವು .ಸುಮಾರು 10.30 ರ ಸಮಯಕ್ಕೆ ನಾವು ಕ್ಯಾಂಪ್ ಗೆ ಮರಳಿದೆವು.ನಮ್ಮ ಕಣ್ಣಿಗೆ ಕಳೆದ ನಾಲ್ಕು ದಿನದಿಂದ ಕೇವಲ ಮಾಂಸಾಹಾರಿಗಳ ಗುರುತು ಕಂಡಿದ್ದವೇ ವಿನಃ ಆನೆ ಬಿಟ್ಟರೆ ಬೇರೆ ಸಸ್ಯಾಹಾರಿ ಪ್ರಾಣಿಗಳು ಕಣ್ಣಿಗೆ ಬಿದ್ದಿರಲಿಲ್ಲ
.ಮಧ್ಯಾನ್ಹ ಕ್ಯಾಂಪ್ ನಲ್ಲಿ ಕುಳಿತು ಮಾತನಾಡುತ್ತಿರುವಾಗ ಇನ್ನೊಂದು ಕ್ಯಾಂಪ್ ನ ಕೆಲ ಸದಸ್ಯರು ಅರಣ್ಯ ಸಿಬ್ಬಂದಿ ಜೊತೆ ನಮ್ಮ ಕ್ಯಾಂಪ್ ಗೆ ಬಂದರು. ಅವರು ತಮ್ಮ ಅನುಭವಗಳನ್ನು ಹೇಳುತ್ತಾ ಅವರು ನಡೆಯುತ್ತಿದ್ದ ದಾರಿಯಲ್ಲಿ ಹುಲಿಯೊಂದು ಘರ್ಜಿಸಿ ಅವರಿಗೆ ದರ್ಶನ ಕೊಟ್ಟಿತು ಎಂದರು. ಇದನ್ನು ಕೇಳಿದ ನಾವು ನಮ್ಮಲ್ಲೇ ತಮಾಷೆಯಾಗಿ ಮಾತನಾಡಿಕೊಂಡೆವು. ಬಹುಷಃ ನಮ್ಮ ಬೀಟ್ ನಲ್ಲಿ ಇರುವ ಹುಲಿಗಳಿಗೆ ಬಾಯಿ ಬರುವುದಿಲ್ಲವೇನೋ,ಅದಕ್ಕೆ ಹತ್ತಿರ ಹೋದರೂ ಘರ್ಜಿಸಲಿಲ್ಲ ಹಾಗು ಕಳೆದ ನಾಲಕ್ಕು ದಿನದಲ್ಲಿ ಒಂದೇ ಒಂದು ಸಾರಿಯೂ ಒಂದೇ ಒಂದು ಹುಲಿಯ ಘರ್ಜನೆ ಕೇಳಲಿಲ್ಲ ನಾವು ಎಂದು. ಇದಕ್ಕೆ ತಂಡದ ಉಳಿದ ಸದಸ್ಯರು ಹೌದೆಂದು ತಲೆಯಾಡಿಸಿದರು. ಆದರೆ ಇದನ್ನು ಬಹುಷಃ ಹುಲಿರಾಯರು ಕದ್ದು ಕೇಳಿಸಿಕೊಂಡರೋ ಏನೋ...
.ಸಂಜೆ ಸಮಯ 5. ನಮ್ಮ ತಂಡ ಕೃಷ್ಣಮುರ್ತಿಯವರ ಜೊತೆ ಮತ್ತೊಮ್ಮೆ ಸಂಜೆ ವಾಕಿಂಗ್ ಗೆ ಹೊರಟರು .ಅವರು ಹುಲಿಯನ್ನು ನೋಡಲೇಬೇಕೆಂದು ಪಣ ತೊಟ್ಟಿದ್ದರು. ನಾನು ಈ ಬಾರಿಯೂ ಅವರ ಜೊತೆ ಹೋಗಲಿಲ್ಲ .ನಮ್ಮ ಗಣತಿಯ ಬುಕ್ ಹಿಡಿದುಕೊಂಡು ಅಡುಗೆ ಮಾಡುತಿದ್ದ ಕೃಷ್ಣ ನ ಜೊತೆ ಕುಳಿತುಕೊಂಡು ಹರಟೆ ಹೊಡೆಯಲು ಶುರು ಮಾಡಿದೆ .ಜೊತೆಗೆ ಗಿರೀಶ್, ಕೆಂಡಯ್ಯ , ಗುಜ್ಜ , ಕಾಳ ಎಲ್ಲರೂ ಒಲೆಯ ಮುಂದೆ ಕುಳಿತಿದ್ದರು
.ಸಮಯ ಸುಮಾರು 5.45 ಇರಬಹುದು ಮಾತನಾಡುತಿದ್ದ ನಮ್ಮ ಕಿವಿಗೆ ಒಮ್ಮೆಲೆ ನಾವು ಕುಳಿತಿದ್ದ ಬಲ ಭಾಗದ ಕಾಡಿನಿಂದ ಹುಲಿರಾಯರ ಘರ್ಜನೆ ಕಿವಿಗಪ್ಪಳಿಸಿತು. ಗಿರೀಶ್ ಹಾಗು ಗುಜ್ಜ ಹುಲಿಯ ಸವಾರಿ ಮಾಸ್ತಿಮಕ್ಕಿ ಸರ್ಕಲ್ ಬಳಿ ಹೊರಟಿದೆ ಎಂದು ತಿಳಿಸುತ್ತಿದ್ದಂತೆ ಮತ್ತೊಮ್ಮೆ ಅ ಭಯಂಕರ ಘರ್ಜನೆ ನಮ್ಮ ಕಿವಿಗಪ್ಪಳಿಸಿತು.ಅದೆಂತಾ ಮೈ ನಡುಗಿಸುವ ಘರ್ಜನೆ ಅದು.ಹುಲಿಯ ಘರ್ಜನೆಯನ್ನು ಕಾಡಿನಲ್ಲಿ ಕೇಳಬೇಕು ಎಂಬ ನನ್ನ ಬಹುದಿನದ ಕನಸು ಆಗ ನನಸಾಗಿತ್ತು . ನಾವು ಎದ್ದು ಆ ಕಡೆ ನೋಡತೊಡಗಿದೆವು. ಅ ಕ್ಷಣಕ್ಕೆ ಸರಿಯಾಗಿ ಮಸ್ತಿ ಮಕ್ಕಿ ಸರ್ಕಲ್ ಕಡೆಯ ಕಾಡಿನಿಂದ ಜಿಂಕೆಯೊಂದು ಅರಚಿಕೊಂಡಿತು. ಗುಜ್ಜ ಹೇಳಿದಂತೆ ಹುಲಿ ಸವಾರಿ ಮಾಸ್ತಿ ಮಕ್ಕಿ ಸರ್ಕಲ್ ಬಳಿ ಹೊರಟಿತ್ತು. ಅಂದರೆ ವಾಕಿಂಗ್ ಗೆ ತೆರಳಿರುವು ನಮ್ಮ ತಂಡ ಮಸ್ತಿ ಮಕ್ಕಿ ಸರ್ಕಲ್ ಕಡೆ ಹೋದರೆ ಖಂಡಿತವಾಗಿಯೂ ಅವರಿಗೆ ಹುಲಿ ದರ್ಶನವಾಗುವುದರಲ್ಲಿ ಸಂದೇಹವಿರಲಿಲ್ಲ.ಒಂದೆರಡು ನಿಮಿಷ ಮೌನ. ನಾವು ಮತ್ತೆ ಬಂದು ಒಲೆಯ ಬುಡ ನಿಶಬ್ದವಾಗಿ ಕುಳಿತುಕೊಂಡೆವು. ಇದ್ದಕ್ಕಿದ್ದಂತೆ ಹುಲಿ ಕೂಗಿದ ಜಾಗದ ಕಡೆಯಿಂದ ಕಾಡು ಕೋಣಗಳು ಕಿರುಚಲು ಆರಂಭಿಸಿದವು. ಅದರ ನಡುವೆಯೇ ಹುಲಿ ಮತ್ತೊಮ್ಮೆ ಆರ್ಭಟಿಸಿತು. ತಕ್ಷಣ ಗಿರೀಶ್ ಹಾಗು ಕೆಂಡಯ್ಯ ಆ ಕೂಗು ಬಂದ ಜಾಗದೆಡೆ ಹೊರಟರು ನಾನು ಅವರನ್ನು ಹಿಂಬಾಲಿಸಿದೆ.ಹುಲಿ ಕೂಗಿದ ಜಾಗ ಕ್ಯಾಂಪ್ ನ ಬಲಭಾಗಕ್ಕೆ ಇರುವ ಗುಡ್ಡದ ನೆತ್ತಿಯ ಸ್ವಲ್ಪ ಕೆಳಗೆ ಇದ್ದಿರಬಹುದು
.ಸುತ್ತಲೂ ಕತ್ತಲು ಆವರಿಸುತ್ತಿದೆ,ನಾನು ಕೆಂಡಯ್ಯ ಹಾಗು ಗಿರೀಶ್ ಹುಲಿ ಕೂಗಿದ ಜಾಗದೆಡೆ ಅವಸರದಿಂದ ಹೆಜ್ಜೆ ಹಾಕುತ್ತಿದ್ದೇವೆ. ನಿನ್ನೆ ಸಂಜೆ ಇದೇ ಕಡೆಯಿಂದ ಆನೆಯೊಂದು ಮರ ಮುರಿಯುತ್ತಿರುವ ಸದ್ದು ಕೇಳಿತ್ತು. ಎದೆಯಲ್ಲಿ ಏನೋ ಡವ ಡವ. ಹುಲಿಯು ನಮ್ಮಿಂದ ಕೂಗಳತೆ ದೂರದಲ್ಲಿತ್ತು, ಯಾವುದೇ ಅಪಾಯಕಾರಿ ಸಂಧರ್ಭ ಬೇಕಾದರೂ ಇಲ್ಲಿ ಎದುರಾಗಬಹುದಿತ್ತು.ಅಲ್ಲದೇ ನಾವು ನಡೆಯುತ್ತಿದ್ದ ದಾರಿಯಲ್ಲಿ ಮುಳ್ಳಿನ ಪೊದೆಗಳು ಕಾಲಿಗೆ ವಿಪರೀತ ತೊಂದರೆ ನೀಡುತ್ತಿದ್ದವು. ನಾವು ಸುಮಾರು 1.50 ಕಿಲೋಮೀಟರು ನಡೆದಿರಬಹುದು. ತಕ್ಷಣ ಗಿರೀಶ್ ನಾವು ನಡೆಯುತ್ತಿದ್ದ ಎಡ ಭಾಗಕ್ಕೆ ತಿರುಗಿ ಕಾಡು ಕೋಣಗಳನ್ನು ನೋಡಿದರು. ಹುಲಿಯನ್ನು ಕಂಡು ಕಿರುಚಿದ ಕಾಡು ಕೋಣಗಳು ಅವು. ಒಂದು ಬಲಿಷ್ಟ ಕಾಡು ಕೋಣ ನಮ್ಮನ್ನೇ ದಿಟ್ಟಿಸಿ ನೋಡುತ್ತಿತ್ತು.ನಾವು ಅದರ ಹತ್ತಿರ ಸಾಗಿ ಒಂದು ಮರದ ಮರೆಯಲ್ಲಿ ನಿಂತುಕೊಂಡೆವು. ತಕ್ಷಣ ಆ ಕಾಡು ಕೋಣ ಅಲ್ಲಿಂದ ಕಾಲಿಗೆ ಬುದ್ದಿ ಹೇಳಿತು.ಅದು ಓಡುತ್ತಿದ್ದಂತೆ ಅಲ್ಲೇ ಮರೆಯಲ್ಲಿ ಅಡಗಿದ್ದ ಇತರ 3 ಕಾಡು ಕೋಣಗಳು ಮೊದಲನೆಯದನ್ನು ಹಿಂಬಾಲಿಸಿದವು. ನಾವು ಇನ್ನು ಮೇಲೆ ಗುಡ್ಡ ಹತ್ತಿ ಪ್ರಯೋಜನವಿರಲಿಲ್ಲ , ಕತ್ತಲು ಸುತ್ತಲೂ ಆವರಿಸುತ್ತಿತ್ತು. ಬಂದ ದಾರಿಯಲ್ಲೇ ಇಳಿಯದೆ ಅದರ ಎಡ ಬದಿ ಸುತ್ತಿ ಇಳಿಯಲಾರಂಭಿಸಿದೆವು. ಅಲ್ಲೊಂದು ಕಡೆ ಹುಲಿ ನಾವು ನಡೆಯುತ್ತಿದ್ದ ಗಿಡಗಳ ನಡುವೆ ಎಡದಿಂದ ಬಲ ಭಾಗದ ಕಣಿವೆಗೆ ಇಳಿದು ಹೋದ ಗುರುತುಗಳು ಸ್ಪಷ್ಟವಾಗಿ ಮೂಡಿದ್ದವು. ಗಿಡಗಳು ಆಗ ತಾನೆ ಬಾಗಿದ್ದವೂ ಮತ್ತೆ ನಿಧಾನಕ್ಕೆ ಮೇಲೆಳುತ್ತಿದ್ದವು. ಕಾಡು ಕುರಿಯೊಂದು ನಮ್ಮಿಂದ ಸ್ವಲ್ಪ ದೊರದಲ್ಲೇ ಕಿರುಚಿತು.ಬಹುಷಃ ಹುಲಿ ನಾವು ಈಗ ಹೋಗುತ್ತಿರುವ ಜಾಗವನ್ನು ಕೇವಲ 10 ನಿಮಿಷದ ಹಿಂದೆ ದಾಟಿ ಹೋಗಿದೆ.ಅದನ್ನು ಹಿಂಬಾಲಿಸಲು ನಮಗೆ ಸಮಯವಿರಲಿಲ್ಲ.ಈ ಹೊತ್ತಿನಲ್ಲಿ ಅದರ ಹಿಂದೆ ಸಾಗುವುದು ಅಪಾಯಕಾರಿಯೇ ಆಗಿತ್ತು.ನಾವು ಕ್ಯಾಂಪ್ ಗೆ ಮರಳಿದಾಗ ವಾಕಿಂಗ್ ಗೆ ಹೋದ ತಂಡ ವಾಪಾಸಾಗಿತ್ತು. ಅವರು ಮಸ್ತಿ ಮಕ್ಕಿ ಸರ್ಕಲ್ ಹೋಗದೆ ದಾರಿಯಲ್ಲಿ ಬಲ ತಿರುವು ಪಡೆದುಕೊಂಡು ಕಾಲು ದಾರಿಯಲ್ಲಿ ಸಾಗಿದ್ದರು ಅವರಿಗೆ 4 ರಿಂದ 5 ರಷ್ಟಿದ್ದ ಆನೆ ಗುಂಪೊಂದು ಎದುರಾಗಿ ಅವರು ಮುಂದೆ ಹೋಗದೆ ವಾಪಾಸ್ ಕ್ಯಾಂಪ್ ಗೆ ತೆರಳಿದ್ದರು.
.ರಾತ್ರಿ ಫೈರ್ ಕ್ಯಾಂಪ್ ನ ಎದುರು ಮಾತನಾಡುತ್ತಾ ಮಧ್ಯಾನ್ಹ ನಾವು ತಮಾಷೆಯಾಗಿ ಮಾತನಾಡಿದ ನಮ್ಮ ಬೀಟ್ ಹುಲಿಗಳಿಗೆ ಬಾಯಿ ಬರುವುದಿಲ್ಲ ಎಂಬ ಮಾತನ್ನು ಸ್ಮರಿಸುತ್ತಾ ಸಂಜೆಯ ಘಟನೆಯನ್ನು ನೆನಪಿಸಿಕೊಂಡೆವು. ಹುಲಿರಾಯರು ನಮ್ಮ ತಮಾಷೆಯ ಮಾತನ್ನು ಸಿರಿಯಸ್ ಆಗಿ ತೆಗೆದುಕೊಂಡು ಕ್ಯಾಂಪ್ ನ ಹತ್ತಿರವೇ ಬಂದು ತಮ್ಮ ಘರ್ಜನೆಯ ಶಕ್ತಿಯನ್ನು ತೋರಿದ್ದರು
.ರಾತ್ರಿಯ ಊಟ ಮಾಡುತ್ತಿದ್ದಾಗ ಮಸ್ತಿ ಮಕ್ಕಿ ಸರ್ಕಲ್ ಬಳಿ ಇನ್ನೊಂದು ಕ್ಯಾಂಪ್ ನ ಕೆಲವರು ಹುಲಿಯನ್ನು ಸಂಜೆ 6.45 ರ ವೇಳೆಗೆ ನೋಡಿದ್ದಾರೆಂದು ವಾಕಿಯಲ್ಲಿ ಮೆಸೇಜ್ ಬಂದಿತ್ತು .ವಾಕಿಂಗ್ ಗೆ ತೆರಳಿದ್ದ ನಮ್ಮ ಸದಸ್ಯರು ಮಾಸ್ತಿಮಕ್ಕಿ ಸರ್ಕಲ್ ಗೆ ಹೋಗದ ತಮ್ಮ ನಿರ್ಧಾರವನ್ನು ಶಪಿಸಿಕೊಂಡರು
. ಮತ್ತೊಂದು ಕಾಡಿನ ನೀರವ ಮೌನದಲ್ಲಿ ನಿದ್ರೆಗೆ ಶರಣಾದೆವು
ಡಿಸೆಂಬರ್- 22
.ಇಂದು ನಮ್ಮ ತಂಡದ ಕೆಂಡಯ್ಯ ಊರಿಗೆ ತೆರಳುವವರಿದ್ದರು. ಅವರ ಸಂಭಂದಿಕರೊಬ್ಬರು ತೀರಿಕೊಂಡದ್ದರಿಂದ ಅವರು ಊರಿಗೆ ಹೊರಟಿದ್ದರು. ಬೆಳಗಿನ ನಮ್ಮ Transact ಲೈನ್ ಸರ್ವೆ ಮುಗಿಸಿ ಅವರನ್ನು ಹಿಮವದ್ ಗೋಪಾಲ ಸ್ವಾಮೀ ಬೆಟ್ಟಕ್ಕೆ ಹೋಗುವ ರಸ್ತೆಯವರೆಗೆ ಬಿಟ್ಟು ಬರೋಣವೆಂದು ತೀರ್ಮಾನಿಸಿ ಕಾಡಿನತ್ತ ಹೊರಟೆವು
.ನಮ್ಮ ಕೆಲಸ ಮುಗಿಸಿ ಹಿಮವದ್ ಗೋಪಾಲ ಸ್ವಾಮೀ ಬೆಟ್ಟದ ರಸ್ತೆಯ ಕಡೆ ಹೊರಟೆವು. ಕ್ರಮಿಸಬೇಕಾದ ದಾರಿ ತುಂಬಾ ದೂರವಿತ್ತು. ಆದರೂ ಹುಲಿಯನ್ನು ನೋಡುವ ಕಾತುರತೆ ನಮ್ಮಲ್ಲಿ ಎಷ್ಟು ದೂರ ಬೇಕಾದರೂ ನಡೆಯುವ ಚೈತನ್ಯವನ್ನು ತಂದು ಕೊಟ್ಟಿತ್ತು.ನಾವು ಮೊದಲನೇ ದಿನ ಹೋದ ಗವಿ ಗದ್ದೆಯ ಮುಖಾಂತರ ಬೆಟ್ಟ ಹತ್ತಲು ಶುರು ಮಾಡಿದೆವು. 10 ಘಂಟೆಯ ಹೊತ್ತಿಗೆ ನಾವು ಹಿಮವದ್ ಗೋಪಾಲ ಸ್ವಾಮೀ ಬೆಟ್ಟದ ರಸ್ತೆಯಲ್ಲಿದ್ದೆವು. ಇಲ್ಲಿಂದ ದೇವಸ್ಥಾನ 3 km ದೂರದಲ್ಲಿತ್ತು. ಹಲವು ವಾಹನಗಳು ಮೇಲೆ ದೇವಸ್ಥಾನಕ್ಕೆ ತೆರಳುತ್ತಿದ್ದವು. ಸ್ವಲ್ಪ ಹೊತ್ತು ವಿಶ್ರಮಿಸಿ ಕೆಂಡಯ್ಯಯನನ್ನು ಕೊನೆಯ ಬಾರಿಗೆ ಬೀಳ್ಕೊಟ್ಟು ಮರಳಿ ಕ್ಯಾಂಪ್ ಕಡೆ ಹೊರಟೆವು. ಈಗ ನಮ್ಮನ್ನು ಲೀಡ್ ಮಾಡುತಿದ್ದದ್ದು ಗುಜ್ಜ ಮಾತ್ರ
.ಬಂಡೆಯೊಂದರ ಬದಿ ಸಾಗುತ್ತಿದ್ದಾಗ ಇದ್ದಕ್ಕಿದಂತೆ ಪ್ರಾಣಿಯೊಂದು ನಮ್ಮ ಬಳಿಯೇ ಓಡಿದ ಶಬ್ದವಾಯಿತು. ಹಿಂದೆ ಇದ್ದ ಪ್ರಸಾದ್ ಅದೊಂದು ಕಾಡು ಕೋಣವೆಂದು ತಿಳಿಸಿದರು . ಅಲ್ಲೊಂದು ಕಡೆ ಹೋಗಿ ವಿಶಾಲವಾದ ಬಂಡೆಯ ಮೇಲೆ ಕುಳಿತ ನಮ್ಮ ಕಣ್ಣಿಗೆ ಕೆಳಗಿನ ವಿಶಾಲವಾದ ಹುಲಿ ಕಾಡು ಬೆಟ್ಟ ಗುಡ್ಡ ಗಳು ನಯನ ಮನೋಹರವಾಗಿ ಕಾಣುತ್ತಿದ್ದವು .ದೂರದಲ್ಲೇ ನಮ್ಮ ಇನ್ನೊಂದು ಟೀಂ ನಮ್ಮ ಬಳಿ ಬರುವುದು ಕಂಡು ಬಂದಿತು. ಅವರ ಶಬ್ದಕ್ಕೆ ಬೆದರಿ ಕಾಡು ಕೋಣವೊಂದು ಓಡುತ್ತಿರುವುದು ನಮಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವರಿಗಾಗಿ ನಾವು ಬಂಡೆಯ ಮೇಲೆಯೇ ಕಾದೆವು . ಅವರು ನಮ್ಮನ್ನು ತಲುಪಿದ ನಂತರ ಒಟ್ಟಿಗೆ ಕ್ಯಾಂಪ್ ಕಡೆ ಹೆಜ್ಜೆ ಹಾಕಿದೆವು.ಮತ್ತೊಮ್ಮೆ ದೂರದಲ್ಲಿದ್ದ ಇನ್ನೊಂದು ವಿಶಾಲವಾದ ಬಂಡೆಯ ಮೇಲೆ ಕುಳಿತೆವು.ತಕ್ಷಣ ಗುಜ್ಜ ಗಿರೀಶ್ ಹಾಗು ಕೃಷ್ಣಮುರ್ತಿ ಕಣ್ಣಿಗೆ ದೂರದಲ್ಲಿ ನಿಂತಿದ್ದ ಆನೆಗಳ ಗುಂಪೊಂದು ಕಾಣಿಸಿತು. ನಾವು ಎಷ್ಟೇ ಹುಡುಕಿದರೂ ಬರಿ ಕಣ್ಣಿಗೆ ಏನೂ ಕಾಣಲಿಲ್ಲ. ಕಾಡಿನಲ್ಲಿದ್ದು ಅವರ ಕಣ್ಣು ಎಷ್ಟು ತೀಕ್ಷ್ಣವಾಗಿದ್ದವು ಎಂದರೆ ಗುಂಪಿನಲ್ಲಿದ್ದ ಮರಿಯನ್ನು ಕೂಡ ಅವರು ನಿಖರವಾಗಿ ನೋಡುತ್ತಿದ್ದರು.ನಾವು ಹಲವು ಬಾರಿ ಪ್ರಯತ್ನಿಸಿದ ನಂತರ ದೂರದಲ್ಲಿ ಇರುವೆಯ ಹಾಗೆ ಕಂಡವು ಆನೆಗಳು.ಅವರು ಅಲ್ಲಿ ಆನೆ ಇದೆ ಎಂದು ಹೇಳದಿದ್ದರೆ ನಮಗೆ ಗೊತ್ತೇ ಆಗುತ್ತಿರಲಿಲ್ಲ.ಗುಂಪಿನಲ್ಲಿದ್ದ ಆನೆಗಳು ಅಲ್ಲೇ ಹತ್ತಿರದಲ್ಲಿದ್ದ ಕೆರೆಯೊಂದರ ಬಳಿ ತೆರಳುತ್ತಿದ್ದವು. ಸ್ವಲ್ಪ ಹೊತ್ತು ಬಂಡೆಯ ಮೇಲೆ ಕುಳಿತು ಪ್ರಯಾಣ ಮುಂದುವರೆಸಿದೆವು
.ಹೋಗುತ್ತಿರುವ ಬೆಟ್ಟದ ಮೇಲಿನ ದಾರಿಯಲ್ಲಿ ಹಲವು ಸಂಬಾರ್ ಗಳು ನಮಗೆ ಕಾಣ ಸಿಕ್ಕವು. ಬೆಟ್ಟದಿಂದ ಇಳಿದ ದಾರಿ ಏರು,ಪೇರುಗಳಿಂದ ಕೂಡಿ ಅತ್ಯಂತ ದಟ್ಟವಾದ ಲಂಟನಾ ಪೊದೆಯ ನಡುವೆ ಸಾಗಿತ್ತು.ಅಲ್ಲೊಂದು ಕಡೆ ಗಿರೀಶ್ ಒಂದು ಹಾವಿನ ಮೇಲೆ ಕಾಲಿಟ್ಟರು ಎಂದು ಕಾಣುತ್ತದೆ.ತಕ್ಷಣ ಹಾವು ಓಡಿ ಹುಲ್ಲಿನ ನಡುವೆ ಮಾಯವಾಯ್ತು.ಹಾವು ಯಾವುದೆಂದು ತಿಳಿಯಲಿಲ್ಲ. ದಟ್ಟವಾದ ಲಂಟಾನ ಪೊದೆ ಹಾಗು ಆಳೆತ್ತರದ ಹುಲ್ಲಿನ ನಡುವೆ ಸುಮಾರು 1.30 ಘಂಟೆಗೂ ಹೆಚ್ಚು ಕಾಲ ನಡೆದ ದೇಹ ದಣಿದಿತ್ತು. ಕ್ಯಾಂಪ್ ದೂರದಲ್ಲಿ ಕಂಡಾಗ ಕಾಲು ಬೇಗ ಬೇಗ ಕ್ಯಾಂಪ್ ಕಡೆ ಹೆಜ್ಜೆ ಹಾಕಿತು
.ಕ್ಯಾಂಪ್ ಗೆ ಮರಳಿದವರೇ ತಿಂಡಿ ತಿಂದು ಹಳ್ಳದ ಕಡೆ ಸ್ನಾನಕ್ಕೆ ತೆರಳಿದೆವು. ಅಬ್ಬಾ ಅದೆಂತಾ ಅದ್ಭುತ ಸ್ನಾನ... ಆ ಹಳ್ಳ ಹಾಗು ಅಲ್ಲಿನ ಸ್ನಾನವನ್ನು ಇಂದಿಗೂ ನಾನು ತುಂಬಾ ಮಿಸ್ ಮಾಡುತ್ತೇನೆ
.ಬೆಳಿಗ್ಗೆಯೇ ಸಾಕಷ್ಟು ನಡೆದದ್ದರಿಂದ ಇಂದು ಸಂಜೆ ಯಾರೂ ವಾಕ್ ಹೋಗಲಿಲ್ಲ
.ನಾವು ನಮ್ಮ ಕ್ಯಾಂಪ್ ನಲ್ಲಿ ಇಂದು ಕೊನೆಯ ರಾತ್ರಿಯನ್ನು ಕಳೆಯುತ್ತಿದ್ದೆವು
.ರಾತ್ರಿ ಊಟದ ನಂತರ ಹಲವರು ಮಲಗಲು ತೆರಳಿದರು.ನಾನು ಸುಮಂತ್ ಹಾಗು ಪ್ರಸಾದ್ ಫೈರ್ ನ ಮುಂದೆ ಕುಳಿತುಕೊಂಡು ದೂರದ ಕಾಡಿನಿಂದ ಬರುವ ಶಬ್ದಗಳನ್ನು ಕೇಳುತ್ತಾ ಇದ್ದೆವು. ಯಾವುದೊ ಒಂದು ಪಕ್ಷಿ ತುಂಬಾ ವಿಚಿತ್ರವಾಗಿ ದೂರದಲ್ಲೆಲ್ಲೂ ಕೂಗುತ್ತಿತ್ತು. ಅದರ ದ್ವನಿ ತುಂಬಾ ವಿಚಿತ್ರವಾಗಿತ್ತು. ಮನುಷ್ಯ ಕೂಗು ಹಾಕುವ ತರಹದ ಒಂದು ಶಬ್ದ ಅದು. ಅಲ್ಲೇ ಇದ್ದ ಕೃಷ್ಣ ಇದರ ಬಗ್ಗೆ ಇದ್ದ ಕತೆಗಳನ್ನು ಹೇಳಲು ಶುರು ಮಾಡಿದರು . ಅವರ ಪ್ರಕಾರ ಈ ಹಕ್ಕಿಗೆ ವಿಶೇಷವಾದ ಶಕ್ತಿ ಇದೆ,ಹಾಗು ಇದು ಕಾಡಿನಲ್ಲಿ ಒಬ್ಬೊಬ್ಬರೇ ಮನುಷ್ಯರು ಓಡಾಡುವಾಗ ದೂರದಿಂದ ಮನುಷ್ಯರ ತರಹವೇ ಕೂಗಿ ಅವರನ್ನು ದಾರಿ ತಪ್ಪಿಸುತ್ತದೆ ಎಂದು ಮತ್ತು ಇದು ಇನ್ನೂ ವಿಚಿತ್ರ ವಿಚಿತ್ರ ಸ್ವರಗಳನ್ನು ಹೊರಡಿಸುತ್ತದೆ ಎಂದು ಹೇಳಿದರು.ಅವರ ನಂಬಿಕೆಗಳಿಗೆ ನಾವು ಇಲ್ಲವೆನ್ನಲಾಗುತ್ತದೆಯೇ .. ನಾವು ಆಶ್ಚರ್ಯ ಭಾವದಿಂದ ಅವರ ಕಡೆ ನೋಡಿ ಹೌದಾ ಎಂದು ಕೇಳುತ್ತಿದ್ದೆವು . ಕೃಷ್ಣ ಮುಂದುವರೆಸಿ ಆ ಹಕ್ಕಿಗೆ ಯಾವುದೇ ಕಾರಣಕ್ಕೂ ಯಾರೂ ಬೈಯ್ಯಬಾರದು ಮತ್ತು ಕೆಲವು ಜನಾಂಗದವರು ಹಕ್ಕಿ ಕೂಗಿದಾಗ ಹಸಿ ಬೀಡಿಯನ್ನು ಬಿಸಾಡಿದರೆ ಅದು ಕೂಗು ನಿಲ್ಲಿಸುತ್ತದೆ ಎಂದು ಹೇಳಿದರು. ಕೃಷ್ಣ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ನಮ್ಮ ಎಡಭಾಗದ ಕಾಡಿನ ಹಳ್ಳದ ಕಡೆಯಿಂದ ಒಂಟಿ ಆನೆಗೊಂದು ಘೀಳಿಡುವ ಸದ್ದು ಕೇಳಿ ಬಂತು.ನಾವು ಸುಮ್ಮನೆ ಆ ಸದ್ದನ್ನು ಆಲಿಸಿದೆವು. ಕಾಡಿನ ಮೌನದ ನಡುವೆ ಅದರ ಘೀಳು ನಿಜಕ್ಕೂ ಒಂದು ರೀತಿಯ ಭಯವನ್ನು ಮನಸ್ಸಿನಲ್ಲಿ ಉಂಟು ಮಾಡುತ್ತಿತ್ತು. ನಾವು ಹಗಲು ನಡೆದಾಡುವ ಜಾಗದಲ್ಲೆಲ್ಲಾ ರಾತ್ರಿ ಆನೆಗಳು ಬಂದು ಹೋಗುತ್ತಿದ್ದವು. ಕಾಡಿನ ದಾರಿಯಲ್ಲೇ ಎಲ್ಲಂದಿರಲ್ಲಿ ಸಿಗುವ ಆನೆಗಳ ಹೊಸ ಲದ್ದಿಗಳು ಈ ವಾದಕ್ಕೆ ಪುಷ್ಟಿ ಕೊಡುತ್ತಿದ್ದವು. ಸ್ವಲ್ಪ ಹೊತ್ತು ಸುಮ್ಮನೆ ಫೈರ್ ಮುಂದೆ ಕುಳಿತ ನಮಗೆ ನಿಧಾನವಾಗಿ ನಿದ್ರೆ ಹತ್ತಲು ಶುರುವಾಯಿತು. ಮತ್ತೊಮ್ಮೆ ಕಾಡಾನೆ ಘೀಳಿಟ್ಟಿತು . ಹೋಗಿ ನಮ್ಮ ಜಾಗದಲ್ಲಿ ಮಲಗಿಕೊಂಡೆವು. ವಿಚಿತ್ರವಾಗಿ ಕೂಗುತ್ತಿದ್ದ ಪಕ್ಷಿ ಕ್ಯಾಂಪ್ ಗೆ ಹತ್ತಿರವಾಗುತ್ತಿತ್ತು........
ಡಿಸೆಂಬರ್ 23
.ಅಂದು ಎಲ್ಲಾ ದಿನಕ್ಕಿಂತ ಹೆಚ್ಚಿನ ಮಂಜು ಕವಿದಿತ್ತು. ಮಂಜು ಕಡಿಮೆಯಾಗುವವರೆಗೂ ಕಾದ ನಾವು ನಮ್ಮ ಸರ್ವೆ ಪ್ರದೇಶಕ್ಕೆ ತೆರಳಿ ಕೊನೆಯ ಗಣತಿ ಮುಗಿಸಿ ಬಂದೆವು.ಈ ಬಾರಿಯೂ ವಿಶೇಷವಾದದ್ದು ನಮಗೇನೂ ಕಾಣಲಿಲ್ಲ .ನಾವು ಕ್ಯಾಂಪ್ ಗೆ ಮರಳುವ ಹೊತ್ತಿಗೆ ನಮ್ಮನ್ನು ಕರೆದೊಯ್ಯಲು ಬಂಡೀಪುರದಿಂದ ಜೀಪು ಬಂದಿತ್ತು. ನಮಗೆ ಹೆಚ್ಚು ಸಮಯವಿರಲಿಲ್ಲ ಕೊನೆಯ ದಿನ ಹಳ್ಳದಲ್ಲಿ ಸ್ನಾನ ಮಾಡಲಾಗಲಿಲ್ಲ. ಹಳ್ಳಕ್ಕೆ ಭೇಟಿ ನೀಡಿ ಕೈ ಕಾಲು ಮುಖ ತೊಳೆದು ಕೊನೆಯ ಬಾರಿಗೆ ನಮ್ಮ ಮೆಚ್ಚಿನ ಹಳ್ಳಕ್ಕೆ ಗುಡ್ ಬಾಯ್ ಹೇಳಿದೆವು. ಕ್ಯಾಂಪ್ ಗೆ ಬಂದು ನಮ್ಮ ನೆಚ್ಚಿನ ಎಲ್ಲಾ ಅರಣ್ಯ ಸಿಬ್ಬಂದಿ ಜೊತೆ ಒಂದು ಫೋಟೋ ತೆಗೆಸಿಕೊಂಡು ಕೃಷ್ಣ ಕೊಟ್ಟ ಬ್ಲಾಕ್ ಟೀ ಯನ್ನು ಕೊನೆಯ ಬಾರಿಗೆ ಕುಡಿದು ಲಗೇಜ್ ತೆಗೆದುಕೊಂಡು ಹೋಗಿ ವಾಹನದಲ್ಲಿ ಕುಳಿತೆವು .ಆಗ ಸಮಯ ಸುಮಾರು 12.15 ಆಗಿತ್ತು
.ಮನಸ್ಸೇಕೋ ಅಂದು ಭಾರವಾಗಿತ್ತು. ಕ್ಯಾಂಪ್ ನಲ್ಲಿ ನಾವಿದದ್ದು ಕೇವಲ 6 ದಿನವಾದರೂ ಅಲ್ಲಿನ ವಾತಾವರಣದ ಜೊತೆ ಒಂದು ಸಂಬಂದ್ಧ ನಮ್ಮಲ್ಲಿ ಬೆಳೆದಿತ್ತು. ಕೃಷ್ಣನ ಅಡುಗೆ, ತಣ್ಣಗೆ ಕೊರೆಯುತ್ತಾ ಹರಿಯುತ್ತಿದ್ದ ಹಳ್ಳ, ಕೆಂಡಯ್ಯ, ಗುಜ್ಜ , ಕೃಷ್ಣಮೂರ್ತಿ ಹೇಳುತ್ತಿದ್ದ ಕತೆಗಳು , ಯಾವಾಗಲೂ ಬಡಿದುಕೊಳ್ಳುತ್ತಿದ್ದ ವಾಕಿ, ರಾತ್ರಿಯ ಕಾಡಿನ ನೀರವ ಮೌನ, ದೂರದಲ್ಲೆಲ್ಲೋ ಕೂಗುವ ಆನೆ,ಜಿಂಕೆ ,ಕಾಡು ಕುರಿ ,ದಿನ ಬೆಳಗಾದರೆ ಹುಲಿಯನ್ನು ಕಾಣಲು ಹೊರಡುವ ನಮ್ಮ ತಂಡ ಹೀಗೆ ಅದೆಷ್ಟೂ ವಿಷಯಗಳನ್ನು ಮಿಸ್ ಮಾಡಿಕೊಂಡು ಅಲ್ಲಿಂದ ಇಂದು ವಾಪಾಸ್ ಹೊರಟಿದ್ದೆವು. ಗುಜ್ಜ , ಗಿರೀಶ್ ಹಾಗು ಕೃಷ್ಣಮುರ್ತಿ ನಮ್ಮೊಡನೆ ಬರುವವರಿದ್ದರು. ವಾಹನ ಸ್ಟಾರ್ಟ್ ಆಯಿತು ಕೃಷ್ಣ ಹಾಗು ಕಾಳ ಕ್ಯಾಂಪ್ ನಲ್ಲಿ ನಿಂತು ನಮ್ಮೆಡೆಗೆ ಟಾಟಾ ಮಾಡುತ್ತಿದ್ದರು....ನಾವು ಟಾಟಾ ಮಾಡಿದೆವು....ನಿಧಾನವಾಗಿ ಕ್ಯಾಂಪ್ ದೂರಾಯಿತು...ಹಗಲು ರಾತ್ರಿ ಮಳೆ ಚಳಿ ಎನ್ನದೆ ಕ್ಯಾಂಪ್ ನಲ್ಲಿ ಇದ್ದು ಪ್ರಾಣದ ಹಂಗು ತೊರೆದು ಕಾಡನ್ನು ರಕ್ಷಿಸುವ ಈ ಹೀರೋಗಳಿಗೆ ಮನಸ್ಸು ಜೈಕಾರ ಹಾಕಿತ್ತು....
.ಹೋಗುತ್ತಾ ನಿರ್ಭಯವಾಗಿ ಜಿಂಕೆಗಳು ದಾರಿಯ ಪಕ್ಕ ಮಲಗಿದ್ದವು.ಬಂಡೀಪುರಕ್ಕೆ ತೆರಳಿ ನಮ್ಮ ಹುಲಿ ಗಣತಿಯ ಪ್ರಮಾಣ ಪತ್ರವನ್ನು ಪಡೆದು ಅಲ್ಲಿನ ಅಧಿಕಾರಿಗಳು ನೀಡಿದ ಅಭಿಪ್ರಾಯ ಪತ್ರವನ್ನು ತುಂಬಿದೆವು.. ಸುಮಾರು 2.15 ರ ಹೊತ್ತಿಗೆ ನಾವು ಬಂಡೀಪುರದ ಹುಲಿ ಕಾಡಿಗೆ ವಿಧಾಯ ಹೇಳಿ ಮೈಸೂರಿನತ್ತ ಪ್ರಯಾಣ ಬೆಳೆಸಿದೆವು....
.ನಿಜಕ್ಕೂ ಈ ಹುಲಿ ಗಣತಿಯನ್ನು ನಾನು ಎಂದೂ ಮರೆಯುವುದಿಲ್ಲ. ಇಲ್ಲಿನ ಕಾಡು ಕಲಿಸಿದ ಪಾಠಗಳು ನಿಜಕ್ಕೂ ಬೆಲೆ ಕಟ್ಟಲಾಗದಂತಹುಗಳು. ಗಣತಿಯ ಮೊದಲ ದಿನವೇ ದಟ್ಟ ಕಾಡಿನಲ್ಲಿ ಕಣ್ಣೆದುರೇ ಮಿಂಚಿ ಓಡಿ ಹೋದ ಹುಲಿ..ವಾವ್ ಅದನ್ನು ಮರೆಯಲಾಗುತ್ತದೆಯೇ... ಸುಮಂತ್ ಹಾಗು ಪ್ರಸಾದ್ ಜೊತೆ ಕಾಡಿನಲ್ಲಿ ಮೈಯೆಲ್ಲಾ ಕಿವಿಯಾಗಿಸಿಕೊಂಡು ನಡೆದ ಸಮಯಗಳು ನಿಜಕ್ಕೂ ಸ್ಮರಣೀಯ...
ಗಣತಿ ಅವದಿಯಲ್ಲಿ ಬಂಡೀಪುರದಲ್ಲಿ 20 ಹುಲಿಗಳ ದರ್ಶನವಾಗಿದೆ ಎಂದು ಆಮೇಲೆ ನಮಗೆ ಗೊತ್ತಾಯಿತು. ಹೌದು ಬಂಡೀಪುರದಲ್ಲಿ ಹುಲಿಗಳು ಬೆಳೆಯುತ್ತಿವೆ. ಈ ಬಾರಿ ಬಂಡೀಪುರ ದೇಶದಲ್ಲೇ No 1 ಹುಲಿ ಕಾಡು ಆಗುವುದರಲ್ಲಿ ಅನುಮಾನವಿಲ್ಲ. ಕರ್ನಾಟಕ ಹುಲಿ ರಾಜ್ಯ ಪಟ್ಟ ಉಳಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ .ಹಾಗೆಯೇ ಆಗಲಿ ಎಂದು ಆಶಿಸುತ್ತಾ ಧೀರ್ಘವಾದ ಈ ಲೇಖನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ............
ಕ್ಯಾಂಪ್ ನ ಎದುರಿನ ಅಂಗಳ. ಇಲ್ಲೇ ನಮಗೆ ಅಡುಗೆತಯಾರಾಗುತಿದ್ದದ್ದು
ಬಂಡೀಪುರದಲ್ಲಿ ಹುಲಿ ಗಣತಿ ಪ್ರಮಾಣ ಪತ್ರ ಪಡೆಯುತ್ತಿರುವ ಸುಮಂತ್
-ಪ್ರಕೃತಿಯನ್ನು ರಕ್ಷಿಸಿ-

ನಮ್ಮ ತಂಡ- ಎಡದಿಂದ ಬಲಕ್ಕೆ ಪ್ರಸಾದ್,ಸುಮಂತ್ ,ನಾನು ,ಕೃಷ್ಣ ,ಗಿರೀಶ್
-ಪ್ರಕೃತಿಯನ್ನು ರಕ್ಷಿಸಿ-
ವಾವ್ !! ಖುಷಿಯಾಯ್ತು ಕಾಡಿನಲ್ಲಿನ ನಿಮ್ಮ ಅನುಭವಗಳನ್ನ ಓದಿ ....ಸ್ವಲ್ಪ ಹೊಟ್ಟೆಕಿಚ್ಚು ಕೂಡ .. ಇಂತಹ ಅವಕಾಶ ಮಿಸ್ ಆಗಿದ್ದಕ್ಕೆ
ReplyDeleteಧನ್ಯವಾದಗಳು ಸುಮ. ಮುಂದಿನ ವರ್ಷ ಆನೆ ಗಣತಿ ನಡೆಯುತ್ತದೆ ಅದರಲ್ಲಿ ಪಾಲ್ಗೊಳ್ಳಿ....
ReplyDeleteraghu nevu anae ganathigae banni ...
Deleteಖಂಡಿತಾ ಬರುತ್ತೇನೆ ಪ್ರಸಾದ್
Deleteaane gaNati yaavaga pls heLi, i was alloted to MM hills DCf for tiger census, but I missed it in the last moment,, But aane gaNatiyannu miss maaDalu ishTavilla. So yavaga anta swalpa information koDteera
Deleteಆನೆ ಗಣತಿ ಸದ್ಯಕ್ಕಿಲ್ಲ..ನಮಗೆ ತಿಳಿದಾಗ ನಿಮಗೆ ತಿಳಿಸುತ್ತೇವೆ
Deleteಅದ್ಬುತ ಅನುಭವ ರಾಘು.ಲೇಖನದಲ್ಲಿ ನೀನೇ ಹೇಳಿರುವಂತೆ ಎಷ್ಟೋ ವರ್ಷಗಳ ತಪಸ್ಸಿನ ಫಲವಾಗಿ ದೇವರ ದರ್ಶನ ಪಡೆದ ಧನ್ಯತಾ ಭಾವ ನಿನ್ನ ಮಾತುಗಳಲ್ಲಿ ಎದ್ದು ಕಾಣುತ್ತಿದೆ.
ReplyDeleteಹಾಗೆಯೇ ಅನುಭವಗಳನ್ನು ನಿರೂಪಿಸಿರುವ ಶೈಲಿಯೂ ಸುಂದರವಾಗಿದೆ.
ನಿಜ ಮಧು.. ಹುಲಿಯನ್ನು ನೋಡುವುದೇ ಕಣ್ಣಿಗೆ ಹಬ್ಬ ಅಂತಹ ಅದ್ಭುತವಾದ ದೇವರ ಸೃಷ್ಟಿ ಅವನು. ಅವನ ದರ್ಶನ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯವೇ ಸರಿ. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ. ಧನ್ಯವಾದಗಳು
ReplyDeleteಆಸಕ್ತಿದಾಯಕ
ReplyDeleteಧನ್ಯವಾದಗಳು ಸಾರ್...
Deleteರಾಘಣ್ಣ, ನಿಮ್ಮ ಈ ಅನುಭವಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ಈ ದಿನಗಳಲ್ಲಿ ಜನರು ಪರಿಸರ-ಪ್ರಾಣಿಗಳ ಬಗ್ಗೆ ಜನರು ಆಸಕ್ತಿ ಕಳೆದುಕೊಂಡಿದ್ದಾರೆ, ಅದರಲ್ಲಿ ನೀವು ಮಲೆನಾಡಿನ ಯಾವುದೋ ಮೂಲೆಯಿಂದ ಈ ಬಗ್ಗೆ ಆಸಕ್ತಿ ಹೊಂದಿ ಇದರಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ವಿಶೇಷವಾಗಿ ವಿಶ್ವದಾದ್ಯಂತ ಅಳಿವಿನ ಅಂಚಿನಲ್ಲಿರುವ ಹುಲಿ ಸಂರಕ್ಷಣೆಯ ಬಗ್ಗೆ ಈಗಾಗಲೇ ಕೆಲಸ ಮಾಡುತ್ತಿರುವ ನಿಮಗೆ, ನಿಮ್ಮ ಎಲ್ಲ ಪರಿಸರ ಕಾಳಜಿ ಕಾರ್ಯಗಳಿಗೆ ಯಶಸ್ಸು ಸಿಗಲಿ.
ReplyDeleteಧನ್ಯವಾದಗಳು ರಾಘಣ್ಣ
Deletesuper gurugale... miss madkonde !! next time hogovaga heli, nanu free idre pakkabarthini!
ReplyDeleteಧನ್ಯವಾಧಗಳು ಕಾರ್ತಿಕ್. ಮುಂದಿನ ಸಲ ಹೋಗುವಾಗ ತಿಳಿಸುವೆ.ಆದರೆ ಮನೆಯಲ್ಲಿ Permission ಮಾತ್ರ ನೀನೇ ತಗೋಬೇಕು
DeleteHi Raghu,
ReplyDeleteI Think I have missed it :( But hopefully I am back to India in Sep 2014 so defiantly we will go for Elephant counting also we can plan for the "Grate route" again.... :) :)
Sure gurugale.
ReplyDelete