ಫ್ಲೈಯಿಂಗ್ ಸ್ನೇಕ್
.ಪ್ರಿಯ ಓದುಗ ಮಿತ್ರರೇ ಹಲವು ತಿಂಗಳುಗಳ ಬಳಿಕ i am back with ಫ್ಲೈಯಿಂಗ್ ಸ್ನೇಕ್
.ಈ ಹಾವನ್ನು ನೀವು ಸಾಧಾರಣವಾಗಿ ನೋಡಿರುತ್ತಿರಾ. ಹಳ್ಳಿ,ಕೆಲವೊಮ್ಮೆ ನಗರ ಪ್ರದೇಶಗಳಲ್ಲೂ ಇದು ಕಂಡುಬರುತ್ತದೆ.ಮರದ ಮೇಲೆ ವಾಸ ಮಾಡುವ ಈ ಹಾವು ಕೀಟ ಮತ್ತು ಕಪ್ಪೆಗಳನ್ನು ತಿಂದು ಬದುಕುತ್ತವೆ
.ಮಲೆನಾಡಿನ ಭಾಗದ ಜನರು ಈ ಹಾವನ್ನು ಹಾರುಂಬೆ ಹಾವು ಎಂದು ಕರೆಯುತ್ತಾರೆ.ಇದರ ಬಗೆಯ ಕತೆಗಳು ನಂಬಿಕೆಗಳು ತೀರಾ ಉತ್ಪ್ರೇಕ್ಷೆ ಎನ್ನಿಸುವಷ್ಟರ ಮಟ್ಟಿಗೆ ಇದೆ
.ಈ ಹಾವು ಸಾಧಾರಣವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೆಲವೊಮ್ಮೆ ಗಾಳಿಯಲ್ಲಿ ಹಾರುವುದರಿಂದ
(Gliding) ಇದರ ಬಗ್ಗೆ ವಿಶೇಷ ಕತೆಗಳು ಸೃಷ್ಟಿಯಾಗಿವೆ.ಈ ಹಾವಿನ ವಿಷ ಅದು ಕೇವಲ ತನ್ನ ಬಲಿಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಮನುಷ್ಯರಿಗೆ ಇದರ ವಿಷದಿಂದ ಯಾವ ತೊಂದರೆಯೂ ಸಂಭವಿಸುವುದಿಲ್ಲ
.ಹಲವರ ಪ್ರಕಾರ ಇದು ವಿಷಯುಕ್ತ ಹಾವಾಗಿದ್ದು,ಇದು ತಲೆಯ ಮಧ್ಯ ಭಾಗಕ್ಕೆ ಕಚ್ಚುತ್ತದೆ,ಸಾವು ಸಂಭವಿಸುತ್ತದೆ ಎಂದು ನಂಬಿದ್ದಾರೆ. ಜನರ ಈ ನಂಬಿಕೆಯಿಂದ ಈ ಹಾವನ್ನು ಸಾಧಾರಣವಾಗಿ ಕಂಡಲ್ಲಿ ಸಾಯಿಸಲಾಗುತ್ತದೆ ಜನರ ಮನಸ್ಸಿನಲ್ಲಿರುವ ಈ ಸುಳ್ಳು ನಂಬಿಕೆಗಳು ಈ ಹಾವಿಗೆ ಮಾರಕವಾಗಿರುವುದು ನಿಜಕ್ಕೂ ದುರಾದೃಷ್ಟಕರ
.ಹಲವು ಕಡೆ ನಾನು ನೋಡಿದ್ದೀನಿ ಈ ಹಾವನ್ನು ವಿಷಜಂತು ಎಂದು ಎಂದು ಹೊಡೆದು ಕೊಲ್ಲುವುದನ್ನು.ಆ ಸಂಧರ್ಭಗಳಲ್ಲಿ ಅವರಿಗೆ ಎಷ್ಟೇ ಹೇಳಿದರೂ ಅವರು ನಮ್ಮ ಮಾತನ್ನು ನಂಬಲು ತಯಾರಿರುವುದಿಲ್ಲ.ಅದು ಹೇಗೆ ಜನರ ಮನಸ್ಸಿನಲ್ಲಿ ಈ ಹಾವಿನ ಬಗ್ಗೆ ಅಷ್ಟು ಅಪನಂಬಿಕೆಗಳು ಹುಟ್ಟಿದವೋ ಗೊತ್ತಿಲ್ಲ ಆದರೆ ಈ ಅಪನಂಬಿಕೆಗಳಿಗೆ ಅದೆಷ್ಟೋ ಹಾವುಗಳ ಪ್ರಾಣ ಹರಣವಾಗಿದೆಯೋ
.ಇದೇ ತರಹದ ಘಟನೆಯೊಂದರ ಬಗ್ಗೆ ನಾನು ಬರೆಯಲು ಹೊರಟಿರುವುದು.ನಮ್ಮ ಮನೆಯ ಸಮೀಪದಲ್ಲೇ ತೋಟವೊಂದಕ್ಕೆ ಅಳವಡಿಸಿದ್ದ ಬೇಲಿಯ ಬಲೆಗೆ ಸಿಕ್ಕು ಹೊರಬರಲು ಪ್ರಯತ್ನಿಸುತ್ತಿತ್ತು ಈ ಹಾವು
.ಹಾವನ್ನು ನೋಡಿದ ಜನ ಯಥಾ ಪ್ರಕಾರ ಇದರ ಬಗೆಗಿನ ಅಪನಂಬಿಕೆಗಳನ್ನು ತಾವು ನೋಡಿದ್ದೇವೆ ಎಂಬ ರೀತಿಯಲ್ಲಿ ವರ್ಣಿಸಲು ಶುರು ಮಾಡಿಕೊಂಡರು. ಈ ಸಮಯದಲ್ಲಿ ಹಾವನ್ನು ಸಾಯಿಸುವ ಬಗ್ಗೆಯೂ ಧ್ವನಿ ಎದ್ದಿತು
.ಇದೆಲ್ಲದರ ನಡುವೆ ಅಲ್ಲಿದ್ದ ಪರಿಚಯದೊಬ್ಬ ವ್ಯಕ್ತಿ ನನಗೆ ಈ ವಿಷಯ ತಿಳಿಸಿದರು. ಪ್ರತೀ ಬಾರಿಯಂತೆ ಈ ಬಾರಿಯೂ ನಾನು ಅಲ್ಲಿ ತೆರಳಿ ಮೊದಲು ಅದನ್ನು ಬಲೆಯಿಂದ ಹೊರತೆಗೆಯುವ ಸಲುವಾಗಿ ಉರಗ ಪ್ರಿಯ ದಿನೇಶ್ ಗೆ ಫೋನ್ ಮಾಡಿದೆ. ನಾನು ಈ ಹಾವಿನ ಬಗ್ಗೆ ಇದ್ದ ಅಪನಂಬಿಕೆಗಳು ಸತ್ಯವಲ್ಲವೆಂದು ಹೇಳಲು ಪ್ರಯತ್ನಪಟ್ಟರೂ ಕೂಡ ಜನರು ನನ್ನ ಮಾತನ್ನು ನಂಬುವ ಮನಸ್ಥಿತಿಯಲ್ಲಿರಲಿಲ್ಲ
.ಕೊನೆಗೆ ಹಾವನ್ನು ಹಿಡಿದು ಬೇರೆಡೆಗೆ ಬಿಡುತ್ತೇವೆ ಎಂದಾಗ ಮಾತ್ರ ಹಾವನ್ನು ಕೊಲ್ಲದಿರಲು ಜನರು ಮನಸ್ಸು ಮಾಡಿದರು
.ದಿನೇಶ್ ನಿಧಾನವಾಗಿ ಹಾವನ್ನು ಬಲೆಯಿಂದ ಬಿಡಿಸಿ ಅದನ್ನು ನಮ್ಮ ಮನೆಯ ತೋಟದಲ್ಲೇ ಬಿಟ್ಟರು.ಈ ಸಮಯದಲ್ಲಿ ನನ್ನ ಅಮ್ಮ ಕೂಡ ಗಾಬರಿಯಾದರೂ ಕೂಡ ನಾನು ಹಾವಿನ ಬಗ್ಗೆ ಹೇಳಿದ ಮೇಲೆ ಅವರಿಗೆ ಧೈರ್ಯ ಬಂದಿತ್ತು.ಬದುಕಿದೆಯಾ ಬಡಜೀವ ಎನ್ನುತ್ತಾ ಹಾವು ಸರ ಸರ ಮಾರವನ್ನೇರಿ ಹೊರಟು ಹೋಯಿತು
.ಇದೇನಪ್ಪಾ ದೊಡ್ಡ ಸಾಹಸದ ಕತೆಯೆಂದು ಅಂದುಕೊಂಡಿರಾ??? ಖಂಡಿತಾ ಇದೊಂದು ತುಂಬಾ ಸಾಧಾರಣವಾದ ಕಾರ್ಯ.ಆದರೆ ಇದರ ಹಿಂದೆ ಇರುವ ಕೆಲವು ಸೂಕ್ಷ್ಮಗಳನ್ನು ಹೇಳುತ್ತೇನೆ ಕೇಳಿ
.ನಾನು ಆಗಲೇ ನಿಮಗೆ ಹೆಳಿದೆನಲ್ಲಾ ಪರಿಚಯದ ವ್ಯಕ್ತಿ ನನಗೆ ಫೋನ್ ಮಾಡಿದರೆಂದು ಅವರು ಹಿಂದೆ ಯಾವ ಹಾವು ಕಂಡರೂ ಸಹಿತ ಅದನ್ನು ಹೊಡೆದು ಹಾಕುತ್ತಿದ್ದರು. ಬಹುಷಃ ಎಲ್ಲ ಹಾವುಗಳು ವಿಷಕಾರಿ ಎಂದು ಭಾವಿಸಿದ್ದರೋ ಏನೋ.ಆದರೆ ಒಂದು ದಿನ ನಾನು ಅವರಿಗೆ ಅವರು ಮಾಡುತ್ತಿರುವುದು ತಪ್ಪು ಎಂದು ಮನವರಿಕೆ ಮಾಡಿಕೊಟ್ಟೆ. ಮೊದಲು ಅವರು ಒಪ್ಪದಿದ್ದರೂ ಕೊನೆಗೆ ಇರಬಹುದು ಎನ್ನುವ ಒಂದು ಪ್ರಜ್ಞೆ ಅವರಲ್ಲಿ ಬಂದಿತ್ತು. ಆ ಪ್ರಜ್ಞೆಯೇ ಈ ಬಾರಿ ಹಾವು ನೋಡಿದಾಗ ಅವರು ಅದನ್ನು ಕೊಲ್ಲದೆ ನನಗೆ ಕರೆ ಮಾಡಲು ಪ್ರೇರೇಪಿಸಿತು ಎಂದರೆ ತಪ್ಪಾಗಲಿಕ್ಕಿಲ್ಲ
.ಜನ ಈ ಹಾವಿನ ಬಗ್ಗೆ ಹಾಗೆ ಹೀಗೆ ಎಂದು ಹೇಳುತ್ತಾ ನಿಂತಿರಬೆಕಾದರೆ ನಾನು ಇದು ವಿಷದ ಹಾವಲ್ಲ ಇದು ಕಚ್ಚಿದರೂ ಪ್ರಾಣಾಪಾಯ ಇಲ್ಲವೆಂದು ಹೇಳಿದರೂ ನಂಬದ ಜನರಿಗೆ ದಿನೇಶ್ ಆ ಹಾವನ್ನು ಕೈಯ್ಯಲ್ಲಿ ಹಿಡಿಯುವಾಗ ಅದು ಅವರಿಗೆ ಕಚ್ಚಿದ್ದನ್ನ ತೋರಿಸಿಯೇ ವಿಷವಲ್ಲದ ಹಾವಿದು ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲಿ ಜನರಿಗೆ ಅವರ ನಂಬಿಕೆಗಳು ತಪ್ಪು ಇರುವ ಬಗ್ಗೆ ಖಾತ್ರಿಯಾಯಿತು
.ನಾವು ಒಂದು ಹಾವನ್ನು ಉಳಿಸಿದ್ದು ದೊಡ್ಡ ಕೆಲಸವಲ್ಲ ಆದರೆ ಆ ಹಾವಿನ ಬಗ್ಗೆ ಜನರ ಮನಸ್ಸಿನಲ್ಲಿ ಇದ್ದ ತಪ್ಪು ಕಲ್ಪನೆಗಳನ್ನು ಹೂಗಲಾಡಿಸಿದ್ದು ನಿಜ್ಜಕ್ಕೂ ದೊಡ್ಡ ಕೆಲಸವೇ.ಏಕೆಂದರೆ ನಾಳೆ ಈ ಜಾತಿಯ ಹಾವು ಕಂಡೊಡನೆ ಆಗ ಮತ್ತೊಂದಷ್ಟು ಜನ ಇದರ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡುತ್ತಿರುವಾಗ ಇಂದು ನಾವು ನೋಡಿದ ಜನ ಅವರಿಗೆ ಮನವರಿಕೆ ಮಾಡಿ ಹೇಳಿದರೆ ಅದು ನಿಜಕ್ಕೂ ಸಾರ್ಥಕ. ಹೀಗೆ ಒಂದು ತಪ್ಪು ಕಲ್ಪನೆ ಹರಡುವುದನ್ನು ತಡೆಯುವ ಮುಖಾಂತರ ಇಂತಹ ಮುಗ್ದ ಜೀವಿಗಳು ಬಲಿಯಾಗುವುದನ್ನು ನಾವು ತಪ್ಪಿಸಬೇಕಾಗಿದೆ
.ಹುಲಿಯೆಂದರೆ ರಕ್ತ ಕುಡಿದು ಸಾಯಿಸುವ ಪ್ರಾಣಿ,ಹಾವೆಂದರೆ ವಿಷದಿಂದ ಕೊಲ್ಲುವ ಪ್ರಾಣಿ ಇಂತಹ ಹತ್ತು ಹಲವು ಮನಸ್ಥಿತಿಯನ್ನು ನಾವಿಂದು ತೊಡೆದು ಹಾಕಬೇಕಾಗಿದೆ.ಸಕಲಚರಾಚರಗಳಲ್ಲೂ ಪ್ರೀತಿಯನ್ನು ಬೆಳೆಸಿಕೊಳ್ಳುವ ಸಂದೇಶವನ್ನು ಮಹಾತ್ಮರೇ ನಮಗೆ ನೀಡಿದ್ದಾರೆ
.ವನ್ಯ ಜೀವಿಸಂರಕ್ಷಣೆಯಂತಹ ವಿಚಾರಗಳು ಇಂದು ಯಶಸ್ಸನ್ನು ಸಾಧಿಸಬೇಕಾದರೆ ಮೊದಲು ಜನರ ಮನಸ್ಸಿನಿಂದ ಇಂತಹ ತಪ್ಪು ಕಲ್ಪನೆಗಳನ್ನು ತೆಗೆದು ಹಾಕುವುದು ತುಂಬಾ ಮುಖ್ಯವೆನ್ನುವುದು ನನ್ನ ಭಾವನೆ
great job!!!
ReplyDeleteThanks sagar
Delete