-ದಿ ಪ್ಯಾಕ್- 

 .ಇಂಗ್ಲೀಷಿನಲ್ಲಿ ಧೋಳ್ (Dhole) ಎಂದು ಕರೆಯುವ ಸೀಳು ನಾಯಿಗಳ ಕುರಿತು ಕನ್ನಡದ ಖ್ಯಾತ ವನ್ಯಜೀವಿ ಛಾಯಗ್ರಾಹಕ ಜೋಡಿ ಕೃಪಾಕರ್-ಸೇನಾನಿ ನಿರ್ಮಿಸಿರುವ ಸಾಕ್ಷ್ಯಚಿತ್ರ(ಡಾಕ್ಯುಮೆಂಟರಿ) “ದಿ ಪ್ಯಾಕ್” ೨೦೧೦ರ ಸಾಲಿನ ಗ್ರೀನ್ ಆಸ್ಕರ್ ಪಡೆದುಕೊಂಡಿತು

.ಅಂತರರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ದಕ್ಷಿಣ ಪೂರ್ವ ಏಶಿಯವನ್ನು ವಾಸಸ್ಥಾನವಾಗಿಸಿಕೊಂಡ ಧೋಳ್ ಜಾತಿಯ ಸೀಳುನಾಯಿಗಳನ್ನು ಅವಸಾನದ ಅಂಚಿನಲ್ಲಿರುವ ಪ್ರಾಣಿಗಳು ಎಂದು ಗುರುತಿಸಿದೆ. ಧೋಳ್, ತೋಳ ಎಂಬ ಪದದಿಂದ ಉತ್ಪತ್ತಿಯಾಗಿರಬಹುದು ಎನ್ನುವ ಅಂದಾಜು ಇದೆ. ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ವ್ಯಾಪಿಸಿರುವ ನೀಲಗಿರಿ ಬೆಟ್ಟದ ತಪ್ಪಲಿನ ದಟ್ಟವಾದ ಅರಣ್ಯಗಳಲ್ಲಿ ಕಂಡು ಬರುವ ಸೀಳುನಾಯಿಗಳು ಕುಗ್ಗುತ್ತಿರುವ ಅರಣ್ಯ ಪ್ರದೇಶ, ಬೇಟೆಯ ಅಭಾವ, ರೋಗ ರುಜಿನಗಳು ಅಲ್ಲದೆ ಬೇಟೆಗಾರರ ಹಾವಳಿಯಿಂದ ಅಳಿವಿನ ಅಂಚಿನಲ್ಲಿ ಜೀವನ ದೂಡುತ್ತಿವೆ


.ಸೀಳುನಾಯಿಗಳ ವರ್ತನೆ, ಸಾಮಾಜಿಕ ಜೀವನವನ್ನು ಆಧರಿಸಿ ಕೃಪಾಕರ್ ಹಾಗೂ ಸೇನಾನಿ ನಿರ್ಮಿಸಿದ ನೂರ ಐವತ್ತು ನಿಮಿಷಗಳ ಸಾಕ್ಷ್ಯಚಿತ್ರವೇ “ದಿ ಪ್ಯಾಕ್”. ನ್ಯಾಶನಲ್ ಜಿಯಾಗ್ರಫಿಕ್, ಅನಿಮಲ್ ಪ್ಲಾನೆಟ್ ಮೊದಲದಾದ ಟಿವಿ ವಾಹಿನಿಗಳಲ್ಲಿ ನೀವು ವನ್ಯಜೀವಿಗಳಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳನ್ನು ಗಮನಿಸಿರಬಹುದು. ಇಂತಹ ಸಾಕ್ಷ್ಯಚಿತ್ರಗಳು ತಮ್ಮ ಉತ್ಕೃಷ್ಟ ತಾಂತ್ರಿಕ ಗುಣಮಟ್ಟದಿಂದ ನಮ್ಮ ಗಮನ ಸೆಳೆಯುವುದು ಹೆಚ್ಚು. ಎಲ್ಲೋ ಕೆಲವು ಕೃತಿಗಳಲ್ಲಿ ತಾಂತ್ರಿಕತೆಯ ಜೊತೆ ನವಿರಾಗಿ ಕಥನವನ್ನು ಹೆಣೆಯುವ ಕೌಶಲ್ಯ ಮೇಳೈಸಿರುತ್ತದೆ. ಇಂತಹ ಅಪರೂಪದ ಚಿತ್ರಗಳ ಸಾಲಿಗೆ “ದಿ ಪ್ಯಾಕ್” ಸೇರುತ್ತದೆ


.ಮೊದಲೇ ಚಿತ್ರಕತೆ ಸಿದ್ಧ ಪಡಿಸಿಕೊಂಡು ಪಳಗಿದ “ಮನುಷ್ಯ” ನಟರನ್ನು ಬಳಸಿ ಮಾಡಿದ ಸಿನೆಮಗಳೇ ಜನಮನವನ್ನು ಗೆಲ್ಲುವುದರಲ್ಲಿ ಅನೇಕ ಬಾರಿ ಸೋಲುತ್ತವೆ. ಹೀಗಿರುವಾಗ ಚಿತ್ರೀಕರಣವೆಂಬುದೇ ಅಪಾಯಕಾರಿ ಸವಾಲು ಎನ್ನುವಂತಹ ದಟ್ಟ ಕಾಡಿನಲ್ಲಿ, ಕಾಡಿನಷ್ಟೇ ನಿರ್ದಯವಾದ ಕಾಡು ಪ್ರಾಣಿಗಳನ್ನೇ ಬಳಸಿ ಚಿತ್ರ ನಿರ್ಮಿಸುವುದು, ಆ ಚಿತ್ರದಲ್ಲಿ ಮನುಷ್ಯನ ಮನಸ್ಸು ಮಿಡಿಯುವಂತಹ ಕಥನವೊಂದನ್ನು ಹೆಣೆಯುವುದು ನಿಜಕ್ಕೂ ದೊಡ್ಡ ಸಾಧನೆ. ಈ ಕಾರಣಕ್ಕಾಗಿಯೇ ಕೃಪಾಕರ್ ಸೇನಾನಿಯವರ “ದಿ ಪ್ಯಾಕ್” ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವುದು


.the pack, documentary, krupakar senani, nilgiri hills
“ದಿ ಪ್ಯಾಕ್” ಕೆನ್ನಾಯಿ (ಕೆಂಪು ನಾಯಿ) ಎಂದೂ ಕರೆಯಲ್ಪಡುವ ಸೀಳುನಾಯಿಯೊಂದರ ಜೀವನ ಕತೆ. ದಿಟ್ಟೆಯಾದ ಒಂದು ಹೆಣ್ಣು ನಾಯಿಯ ಬದುಕು, ಅದರ ವರ್ತನೆ ಸೇನಾನಿಯವರ ಕುತೂಹಲವನ್ನು ಕೆರಳಿಸುತ್ತದೆ. ಆ ನಾಯಿಯನ್ನು ಹಿಂಬಾಲಿಸಿ, ಅದರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತ, ನಾಯಿಯ ಭಾವನೆಗಳು ವ್ಯಕ್ತವಾಗುವಂತೆ ಚಿತ್ರೀಕರಣ ನಡೆಸುತ್ತಾ ಹೋಗುತ್ತಾರೆ ಕೃಪಾಕರ್ ಹಾಗೂ ಸೇನಾನಿ


.ಚಿತ್ರದ ನಾಯಕಿ ತುಂಬಾ ಚಿಕ್ಕದಿರುವಾಗ ಹುಲಿಯೊಂದು ಅದರ ತಾಯಿಯನ್ನು ಕೊಂದು ಬಿಡುತ್ತದೆ. ಆಗ ಈಕೆ ತನ್ನ ಪಂಗಡ(ಪ್ಯಾಕ್) ತೊರೆಯುವ ನಿರ್ಧಾರ ಮಾಡುತ್ತಾಳೆ. ತಾಯಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ತನ್ನ ಭವಿಷ್ಯವನ್ನು ಅರಸಿಕೊಂಡು ಅಪಾಯಗಳಿಂದ ಕೂಡಿದ ದಟ್ಟ ಕಾಡಿನಲ್ಲಿ ಹೊರಡುತ್ತಾಳೆ.
ಹೀಗೆ ಹೊರಟ ಕೆನ್ನಾಯಿ ತಾನು ಬದುಕು ಉಳಿಯುವುದಷ್ಟೇ ಅಲ್ಲದೆ, ತನ್ನದೇ ಒಂದು ಪಂಗಡವನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿಯಾಗುವುದೇ ಚಿತ್ರದ ಕತೆ. ಯಶಸ್ಸಿನ ಹಾದಿಯಲ್ಲಿ ಆಕೆ ತನ್ನ ಪ್ರಿಯಕರರನ್ನು, ಕೆಲವು ಮರಿಗಳನ್ನು ಕಳೆದುಕೊಳ್ಳುತ್ತಾಳೆ. ಹುಲಿಯೊಂದಿಗೆ ಸೆಣಸಿ ಜೀವ ಉಳಿಸಿಕೊಳ್ಳುತ್ತಾಳೆ. ಉಳಿದ ಪಂಗಡಗಳ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾಳೆ. ಬೆಂಕಿಯೊಂದಿಗೆ ಹೋರಾಡುತ್ತಾಳೆ, ಕಡೆಗೆ ತಿರುಗಿ ಬಿದ್ದ ತನ್ನದೇ ಮಗಳೊಂದಿಗೂ ಮುಖಾಮುಖಿಯಾಗುತ್ತಾಳೆ. ಆದರೆ ಮನುಷ್ಯ ಲೋಕಕ್ಕೇ ಮಾದರಿಯಾಗಬಹುದಾದ ಅಪೂರ್ವವಾದ ತಾಳ್ಮೆಯಲ್ಲಿ, ಅದಮ್ಯ ಜೀವನೋತ್ಸಾಹದಲ್ಲಿ ಆಕೆ ಎಲ್ಲವನ್ನೂ ಸಹಿಸಿ ಜೀವಿಸುತ್ತಾಳೆ.


ಪ್ರಾಣಿಗಳ ಮನೋಲೋಕದ ಚಟುವಟಿಕೆಗಳ ಮೇಲೆ ತುಂಬಾ ಪ್ರಖರವಾದ ನೋಟವನ್ನು ಚೆಲ್ಲುವಂತಹ ಈ ಚಿತ್ರ ವನ್ಯಜೀವಿಗಳ ಕುರಿತು ಆಸಕ್ತಿಯಿರುವ ಚಿತ್ರರಸಿಕರನ್ನಷ್ಟೇ ಅಲ್ಲದೆ ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳ ಗಮನವನ್ನೂ ಸೆಳೆದಿದೆ


.ಒಂದೆಡೆ ನಮ್ಮ ಟಿವಿ ಚಾನಲುಗಳು ಉತ್ತಮವಾದ ಹಣಕಾಸು ವ್ಯವಸ್ಥೆ, ಪ್ರತಿಭಾವಂತ ಮಾನವ ಸಂಪನ್ಮೂಲ, ವಿಶಾಲವಾದ ಪ್ರೇಕ್ಷಕ ವರ್ಗ ಇವೆಲ್ಲ ಇದ್ದಾಗ್ಯೂ ಇಂಗ್ಲೀಷಿನಿಂದ, ಹಿಂದಿಗೆ ಆಮದಾಗಿ ಥರ್ಡ್ ಹ್ಯಾಂಡ್ ಎನ್ನಬಹುದಾದ ಕಾನ್ಸೆಪ್ಟುಗಳನ್ನು ಇಲ್ಲಿಗೆ ಒಗ್ಗಿಸಿ ಸುಲಭಕ್ಕೆ ತಯಾರಿಸುವ ರಿಯಾಲಿಟಿ ಶೋಗಳು, ಸಾಮಾಜಿಕ ಜವಾಬ್ದಾರಿಯಿಲ್ಲದೆ ಮೌಢ್ಯ, ವದಂತಿಯನ್ನು ಹಬ್ಬುವ ಜೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇವುಗಳ ನಡುವೆಯೇ ಕಳೆದು ಹೋದ ಪ್ರೇಕ್ಷಕ ಕನ್ನಡದ ನೆಲದಲ್ಲಿ ಉತ್ಕೃಷ್ಟವಾದ, ಅವರಿವರ ನಕಲು ಅಲ್ಲದ ಸ್ವಂತಿಕೆ ಇರುವ ಸಿನೆಮ, ಟಿವಿ ಕಾರ್ಯಕ್ರಮ ಮೂಡಿ ಬರಲು ಸಾಧ್ಯವೇ ಇಲ್ಲ ಎಂದು ಸಿನಿಕತನಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಕೃಪಾಕರ್-ಸೇನಾನಿಯಂತಹ ಕನ್ನಡಿಗರ ಪರಿಶ್ರಮ ಹೊಸ ಆಶಾಕಿರಣವಾಗಿ ಕಾಣುತ್ತದೆ. ಅವರಿಗೆ ಅಭಿನಂದನೆಗಳು! 




ಕೃಪೆ-ಚಂದ್ರು ಮಲ್ಟಿಮೀಡಿಯಾ  

-ಪ್ರಕೃತಿಯನ್ನು ಉಳಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....